ಅಥವಾ

ಒಟ್ಟು 45 ಕಡೆಗಳಲ್ಲಿ , 13 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ. ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ ? ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು. ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ. ಅದಕ್ಕೆ ಏನಾಯಿತ್ತು ? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು. ಉಂಡರೆ ಹಂಗಿಗನೆ ಶಿವಯೋಗಿ ? ಅನುವರಿದುಣಬಲ್ಲಡೆ ಎನ್ನವನೆಂಬೆನು. ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ. ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ ಹರಿಯವನಲ್ಲದೆ ನಮ್ಮವನಲ್ಲ. ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ ರುದ್ರನವನಲ್ಲದೆ ನಮ್ಮವನಲ್ಲ. ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ದಾಸಿಯ ಸಂಗವ ಮಾಡಿದಡೆ ಸೂಕರನ ಮಾಂಸವ ತಿಂದ ಸಮಾನ, ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ, ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ, ಗಂಡನ ಬಿಟ್ಟವಳ ಸಂಗವ ಮಾಡಿದಡೆ ನರಮಾಂಸವ ತಿಂದ ಸಮಾನ, ಗಂಡನುಳ್ಳವಳ ಸಂಗವ ಮಾಡಿದಡೆ ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ, ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಇದು ಕಾರಣ ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ ದಾಶಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿಪಟ್ಟ ಪಾಣಿಗ್ರಹಣ ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ ವರ್ತಿಸುವ ಭಕ್ತಾರಾಧ್ಯರಿಗೆ_ ಗುರುವುಂಟು ಲಿಂಗವುಂಟು ಜಂಗಮವುಂಟು ಪಾದೋದಕವುಂಟು ಪ್ರಸಾದವುಂಟು; ಆತಂಗೆ ನಿಜಮೋಕ್ಷವುಂಟು. ಇಂತಲ್ಲದೆ_ ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ ಆರು ಪ್ರಕಾರದ ಸ್ತ್ರೀಯರು ಮುಂತಾದ ರಾಶಿಕೂಟದ ಸ್ತ್ರೀಯರಿಗೆ ಹೇಸದೆ ಆಸೆ ಮಾಡುವ ಪಾಠಕರಿಗೆ; ಗುರುವಿಲ್ಲ; ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ; ಅವ ಭಕ್ತನಲ್ಲ ಜಂಗಮವಲ್ಲ, ಅವರಿಗೆ ಮುಕ್ತಿಯಿಲ್ಲ, ಮುಂದೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಭಕ್ತನ ಹಾಡಿ ಬೇಡುವಾತ ಜಂಗಮವಲ್ಲ. ಭಕ್ತನ ಹೊಗಳಿ ಬೇಡುವಾತ ಜಂಗಮವಲ್ಲ. ಭಕ್ತನ ಓದಿ ಬೇಡುವಾತ ಜಂಗಮವಲ್ಲ. ಭಕ್ತನ ಕೊಂಡಾಡಿ ಬೇಡುವಾತ ಜಂಗಮವಲ್ಲ. ಭಕ್ತನ ಸ್ತುತಿಸಿ ಬೇಡುವಾತ ಜಂಗಮವಲ್ಲ. ಭಕ್ತನ ಕೈವಾರಿಸಿ ಬೇಡುವಾತ ಜಂಗಮವಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಬೇಡದೆ ಮಾಡುವನೆ ಭಕ್ತ, ಬೇಡದೆ ಮಾಡಿಸಿಕೊಂಬಾತನೆ ಜಂಗಮ.
--------------
ಚನ್ನಬಸವಣ್ಣ
ಉದಾಸೀನವ ಮಾಡದ[ಮಾಡಿದ?] ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ*ರು ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್‍ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ; ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್ ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ. ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್ ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ*ವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ರಚನೆ ರಂಜಕವ ನುಡಿವಾತ ಜಂಗಮವಲ್ಲ. ನರರ ಹೊಗಳಿ ಹಾಡಿ ಬೇಡುವಾತ ಜಂಗಮವಲ್ಲ. ನರರ ಕೈವಾರಿಸುವಾತ ಜಂಗಮವಲ್ಲ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೇ ಜಂಗಮ, ಬಸವಣ್ಣನೇ ಭಕ್ತ.
--------------
ಚನ್ನಬಸವಣ್ಣ
ತದ್ದಿನವ ಮಾಡುವ ಕ್ರೂರಕರ್ಮಿಯ ಮನೆಯಲ್ಲಿ ಮದ್ಯ ಮಾಂಸವಲ್ಲದೆ ಲಿಂಗಕ್ಕೋಗರವಿಲ್ಲ. ಹರಸಿಕೊಂಡು ಮಾಡುವ ಭಕ್ತನ ಮನೆಯಲು ದಂಡಕ್ಕಿಕ್ಕುವುದಲ್ಲದೆ ಲಿಂಗಕ್ಕೋಗರವಿಲ್ಲ. ವರುಷಕ್ಕೊಂದು ತಿಥಿಯೆಂದು ಕೂಟಕ್ಕಿಕ್ಕಲು ಕೀರ್ತಿವಾರ್ತೆಗೆ ಸಲುವುದಲ್ಲದೆ ಲಿಂಗಕ್ಕೋಗರವಿಲ್ಲ. ತದ್ದಿನಂ ದಿನದೋಷಂ ಸ್ಯಾತ್ ರಕ್ತಮಾಂಸಸುರಾನ್ವಿತಂ ಸ ಸಂಕಲ್ಪಂ ವಿಕಲ್ಪಂ ಚ ನರಕೇ ಕಾಲಮಕ್ಷಯಂ ಈ ತ್ರಿವಿಧವಿಡಿದು ಮಾಡುವಾತ ಭಕ್ತನಲ್ಲ, ಅಲ್ಲಿ ಹೊಕ್ಕು ಮಾಡಿಸಿಕೊಂಬವರು ಜಂಗಮವಲ್ಲ. ಕೂಡಲಚೆನ್ನಸಂಗಯ್ಯಾ ಈ ತ್ರಿವಿಧವು ನರಕಕ್ಕೆ ಭಾಜನ.
--------------
ಚನ್ನಬಸವಣ್ಣ
ಜಿಹ್ವೆ ಗುಹ್ಯೇಂದ್ರಿಯದಿಚ್ಛೆಯುಳ್ಳನ್ನಕ್ಕ ಜಂಗಮವಲ್ಲ, ಪುತ್ರ ಮಿತ್ರ ಕಳತ್ರದಲ್ಲಿಯ ಮೋಹವುಳ್ಳನ್ನಕ್ಕ ಭಕ್ತನಲ್ಲ, ಮಾತಿನ ಮಾಲೆಯ ಹೆಚ್ಚು ಕುಂದಿನ ಹೋರಟೆಯುಳ್ಳನ್ನಕ್ಕ ಅದ್ವೈತಿಯಲ್ಲ, ಅಂಗ ಪ್ರಾಣದಾಶೆಯುಳ್ಳನ್ನಕ್ಕ ನಿಸ್ಪೃಹನಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗವನರಿಯದನ್ನಕ್ಕ ಸ್ವಯಾನುಭವಿಯಲ್ಲ.
--------------
ಆದಯ್ಯ
ಗುರುವಿದ್ದಂತೆ ಪರರಿಗೆ ನೀಡಬಹುದೆ ? ಮನೆಯ ಆಕಳು ಉಪವಾಸ ಇರಲಾಗಿ ಪರ್ವತಕ್ಕೆ ಸೊಪ್ಪೆಯ ಹೊರಬಹುದೆ ? ಎಂಬ ಪರವಾದಿ ನೀಕೇಳು. ಗುರುವು ಶಿಷ್ಯಂಗೆ ಲಿಂಗವಕೊಟ್ಟು ತಾನು ವ್ರತಗೇಡಿಯಾಗಿ ಹೋಗುವಲ್ಲಿ ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದಕಾರಣ, ್'ಪರರ ಕಂಡರೆ ತನ್ನಂತೆ ಕಾಣು' ಎಂದು ಗುರುವು ಹೇಳಿದ ವಾಕ್ಯವ ಮರೆದಿರಲ್ಲ ! ಅಳಿಯ ಒಡೆಯರು, ಮಗಳು ಮುತ್ತೈದೆ, ಮನೆದೇವರಿಗೆ ಶರಣೆಂದರೆ ಸಾಲದೆ ? ಎಂಬ ಅನಾಚಾರಿಗಳ ಮಾತು ಅದಂತಿರಲಿ. ಜಂಗಮದೇವರ ಪ್ರಾಣವೆಂಬ ಭಕ್ತರು ಲಿಂಗಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ, ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ. ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ. ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
--------------
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಅಯ್ಯಾ, ಪಿಂಡಬ್ರಹ್ಮಾಂಡದ ಮಧ್ಯದಲ್ಲಿ, ಭಕ್ತನೆಂಬ ವೃಕ್ಷವಾಗಿ ಚಿದಂಡವಿರ್ಪುದು. ಆ ಚಿದಂಡದ ಮಧ್ಯದಲ್ಲಿ ಜಂಗಮವೆಂಬ ಬೀಜವಾಗಿ ಚಿನ್ಮಯಾಂಡವಿರ್ಪುದು. ಆ ಎರಡರ ಮಧ್ಯದಲ್ಲಿ ಸತ್ಕ್ರಿಯೆ ಸಮ್ಯಕ್‍ಜ್ಞಾನ ಮಹಾಜ್ಞಾನವೆಂಬ ಚಿತ್ಸೂರ್ಯ ಚಿದಗ್ನಿ ಚಿಚ್ಚಂದ್ರಮಂಡಲವಿರ್ಪುದು. ಆ ಮಂಡಲದ ಮಧ್ಯದಲ್ಲಿ ಏಕಾದಶ ದಿಕ್ಕುಗಳಿರ್ಪುವು. ಆ ದಿಕ್ಕುಗಳ ಮಧ್ಯದಲ್ಲಿ ಲಕ್ಷದಳ ಕಮಲವಿರ್ಪುದು. ಆ ಕಮಲದಳಂಗಳಲ್ಲಿ ಲಕ್ಷ ಲಿಂಗಗಳಿರ್ಪುವು. ಆ ಲಿಂಗಂಗಳಂಗುಷಾ*ಗ್ರದಲ್ಲಿ ಲಕ್ಷ ಗಂಗೆಗಳಿರ್ಪುವು. ಆ ಗಂಗೆಗಳ ಮಧ್ಯದಲ್ಲಿ ಲಕ್ಷ ಪ್ರಣವಂಗಳಿರ್ಪುವು ನೋಡಾ. ಆ ಪ್ರಣವಂಗಳ ಮಧ್ಯದಲ್ಲಿ ಬಸವ ಮೊದಲಾದ ಮಹಾಶರಣಗಣಂಗಳು ಪರಿಪೂರ್ಣವಾಗಿ ಮೂರ್ತಗೊಂಡಿರ್ಪರು ನೋಡಾ. ಇಂತು ಪ್ರಮಥಗಣಂಗಳು ನೆರೆದಿರ್ದ ಸ್ವಸ್ವರೂಪದ ನಿಲುಕಡೆಯನರಿಯದೆ, ಕೊಟ್ಟಿದನವ ದೊಡ್ಡ ವೃಕ್ಷಕ್ಕೆ ಕಟ್ಟಿದಂತೆ, ಅಂಗದ ಮೇಲೆ ಲಿಂಗವ ಕಟ್ಟಿಕೊಂಡು ಸುಳಿವಾತ ಜಂಗಮವಲ್ಲ, ಆ ಜಂಗಮಕ್ಕೆ ತನಮನಧನಂಗಳ ಕೊಟ್ಟು ಅವರಡಿಯಿಂದ ಹುಟ್ಟಿದ ಜಲಶೇಷವ ಕೊಂಬಾತ ಭಕ್ತನಲ್ಲ. ಇಂತು, ಉಭಯಾಂಧಕ ಭಕ್ತಜಂಗಮಕುಲವಳಿದು ಪ್ರಮಥರಾಚರಿಸಿದ ಸನ್ಮಾರ್ಗದಲ್ಲಿ ಸುಳಿಯಬಲ್ಲಾತ ಜಂಗಮ. ಆ ಜಂಗಮದನುವರಿದು ಅಡಗಬಲ್ಲಾತ ಭಕ್ತ. ಇದು ಕಾರಣ, -ಕೂಡಲಚೆನ್ನಸಂಗಯ್ಯಾ ಇಂತಪ್ಪ ಭಕ್ತ ಜಂಗಮರ ಪಾದವ ತೋರಿ ಬದುಕಿಸಯ್ಯಾ ಗುರುವೆ.
--------------
ಚನ್ನಬಸವಣ್ಣ
ಭಕ್ತಿಗೆ ತೋಲಾಗಿ ಓಡುವಾತ ಜಂಗಮವಲ್ಲ. ಮಂತ್ರ ತಂತ್ರ ವಶೀಕರಣ ಕಲಿತು ಮೆರೆದಾಡುವಾತ ಜಂಗಮವಲ್ಲ. ವೇಷದ ಗುಣವನರಿಯದ ಹಾಸ್ಯಗಾರನ ಹಾಗೆ ವಿಭೂತಿ ರುದ್ರಾಕ್ಷಿ ಕಾವಿಲಾಂಛನವ ಧರಿಸಿ ತಿರುಗುವರೆಲ್ಲ ಜಂಗಮರಲ್ಲ. ಬೇಟೆಯ ನಾಯಿಯಂತೆ ವಿಷಯದಾಶೆಗೆ ಮುಂದುವರೆದು ತಿರುಗುವಾತ ಜಂಗಮವಲ್ಲ. ಇವರು ಜಂಗಮವೆಂದಡೆ ನಗುವರಯ್ಯ ನಿಮ್ಮ ಶರಣರು. ಅದೇನು ಕಾರಣವೆಂದಡೆ: ಇಂತಿವರೆಲ್ಲರು ಪರಮಜಂಗಮದ ನಿಲುಕಡೆಯನರಿಯರಾಗಿ, ಮುಂದೆ ಭವಜಾಲದಲ್ಲಿ ರಾಟಾಳ ತಿರುಗಿದಂತೆ ತಿರುಗುವದೇ ಪ್ರಾಪ್ತಿ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗ ಲಿಂಗವೆಂಬನ್ನಕ್ಕ ಜಂಗಮವಲ್ಲ, ಪ್ರಸಾದ ಪ್ರಸಾದವೆಂಬನ್ನಕ್ಕ ಶರಣನಲ್ಲ, ಗುರು ಲಿಂಗವೆಂಬುದಕ್ಕೆ ಅಂಗವಿಸಲಾರೆ, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಮಂತ್ರಸಂಸ್ಕಾರವಾದುದೆ ಲಿಂಗ, ಭಿನ್ನವಾದಡೆ ಲಿಂಗವಲ್ಲ. ವ್ರತಭ್ರಷ್ಟನಾಗಿ ಜಂಗಮವಾದಡೆ ಜಂಗಮವಲ್ಲ. ಅದೆಂತೆಂದಡೆ : ಸ್ಥಾವರಂ ಭಿನ್ನದೋಷೇಣ ವ್ರತಭ್ರಷ್ಟೇನ ಜಂಗಮಃ ಉಭಯೋಭಿನ್ನಭಾವೇನ ನಾರ್ಚನಂ ನ ಚ ವಂದನಮ್ || ಎಂದುದಾಗಿ, ಇದು ಕಾರಣ, ಉಭಯಕ್ಕೆ ಅರ್ಚನೆ ವಂದನೆಯಂ ಮಾಡಲಾಗದು, ಅವಕ್ಕೆ ಪ್ರಾಯಶ್ಚಿತ್ತವಿಲ್ಲದ ಕಾರಣ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ. ತನು ತಲೆ ಬತ್ತಲೆಯಾಗಿ, ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ. ಇಂತೀ ಗುಣವ ಸಂಪಾದಿಸುವನ್ನಕ್ಕ, ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ. ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಕ್ತ-ಜಂಗಮದ ಸಕೀಲಸಂಬಂಧವನು ಆರು ಬಲ್ಲರು ಹೇಳಾ ? ಅರ್ಥವನೊಪ್ಪಿಸಿದಾತ ಭಕ್ತನಲ್ಲ, ಪ್ರಾಣವನೊಪ್ಪಿಸಿದಾತ ಭಕ್ತನಲ್ಲ, ಅಭಿಮಾನವನೊಪ್ಪಿಸಿದಾತ ಭಕ್ತನಲ್ಲ. ಅದೇನು ಕಾರಣವೆಂದಡೆ_ಸತ್ಯಸದಾಚಾರಕ್ಕೆ ಸಲ್ಲನಾಗಿ. ಆ ಭಕ್ತನ ಮನೆಯ ಹೊಕ್ಕು_ಪಾದಾರ್ಚನೆಯ ಮಾಡಿಸಿಕೊಂಡು ಒಡಲ ಕುಕ್ಕಲತೆಗೆ ಅಶನವನುಂಡು, ವ್ಯಸನದ ಕಕ್ಕುಲತೆಗೆ ಹಣವ ಬೇಡಿ, ಕೊಟ್ಟಡೆ ಕೊಂಡಾಡಿ ಕೊಡದಿರ್ದಡೆ ದೂರಿಕೊಂಡು ಹೋಹಾತ ಜಂಗಮವಲ್ಲ. ಆದಿ ಅನಾದಿಯಿಂದಲತ್ತತ್ತ ಮುನ್ನಲಾದ, ಮಹಾಘನವ ಭೇದಿಸಿ ಕಂಡು ಅರಿದು ಕಾಯದ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ, ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ. ಸುಳುಹಿನ ಸೂತಕ ಮೈದೋರದೆ, ಒಡಲ ಕಳವಳದ ರುಚಿಗೆ ಹಾರೈಸದೆ, ಅರಿವೆ ಅಂಗವಾಗಿ ಆಪ್ಯಾಯನವೆ ಭಕ್ತಿಯಾಗಿ, ಕಿಂಕುರ್ವಾಣವೆಂಬ ಶಿವಮಂತ್ರಕ್ಕೆ ನಮೋ ನಮೋ ಎನಬಲ್ಲಡೆ ಆತ ಜಂಗಮ. ಆ ಜಂಗಮದ ಆ ಭಕ್ತನ ಸಮ್ಮೇಳವೆ ಸಮ್ಮೇಳ. ಮಿಕ್ಕಿನ ಅರೆಭಕ್ತರ ಒಡತಣ ಸಂಗ ನಮ್ಮ ಗುಹೇಶ್ವರಲಿಂಗಕ್ಕೆ ಸೊಗಸದು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->