ಅಥವಾ

ಒಟ್ಟು 56 ಕಡೆಗಳಲ್ಲಿ , 22 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ ತಾಗುನಿರೋಧ ಕೊರೆತ ನೆರೆತಗಳ ಹಿಡಿವನೆ ಶಿವಶರಣನು ? ಹಿಡಿಯನು. ಅದೇನು ಕಾರಣವೆಂದೆಡೆ, ಅದೆ[ಲ್ಲವೂ] ನಿನ್ನ ಮಾಯೆಯೆಂಬುದನು ಬಲ್ಲನಾಗಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ, ನಿಮ್ಮ ಶರಣರು ನಿಜಗಲಿಗಳು.
--------------
ಹಾವಿನಹಾಳ ಕಲ್ಲಯ್ಯ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ವಿಶ್ವ ತೈಜಸ ಪ್ರಾಣನಾಗಿಪ್ಪ ಕಾರಣ, ಅಹೋರಾತ್ರಿಯಲ್ಲಿ ನಿಮ್ಮ ನೆನಹೆನಗೆ. ಚೆನ್ನಬಂಕೇಶ್ವರಲಿಂಗವೆ, ಎನ್ನ ಸಜ್ಜನಿಕೆಯ ದಿಟವ ಮಾಡೆನ್ನ ತಂದೆ.
--------------
ಸುಂಕದ ಬಂಕಣ್ಣ
ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು, ವಿಷಯಸ್ವರೂಪಮಾದ ಮನವೇ ಸ್ವಪ್ನವು, ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು. ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ, ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ, ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ, ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ. ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾರ್ಕೋದಯಮಾಗಿ, ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು, ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ, ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು, ಜೀವ ಸುಷುಪ್ತಿಭ್ರಾಂತಿಯಳಿದು, ಪರಮಜಾಗ್ರತ್ಸ್ವರೂಪನಪ್ಪ ಪರಮಾತ್ಮನಾಗಿ, ತನುವಿನ ಜಾಗ್ರ, ಮನದ ಸ್ವಪ್ನಗಳಳಿದು, ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು, ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ : ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು, ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು, ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು, ಮಹವೇ ಗುರುವು, ಚಿತ್ತವೇ ಜಂಗಮವು, ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ ತನುವೇ ಕೈಲಾಸಪರ್ವತಮಾಗಿ ಸಕಲ ಗುಣಂಗಳೇ ಶಿವಗಣಂಗಳಾಗಿ; ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ, ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ, ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ : ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ ; ಉಳಿದ ನಿಜಮಂ ತೆಗೆದು, ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ, ಎರಡನ್ನೂ ಒಂದುಮಾಡಿ, ತಾನದರೊಳಗೆ ಬೆರೆದು ಭೇದದೋರದಿರ್ಪಂತೆ, ಮನಸ್ಸು ಜೀವ ಪರಮರನೊಂದುಮಾಡಿ, ತಾನದರೊಳಗೆ ಬೆರೆದು, ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ. ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನಾನಾ ಭೇದದ ವ್ರತವ ಸಾಧಿಸಿ ಭೇದಿಸಿ ವೇಧಿಸುವಲ್ಲಿ, ಬಾಹ್ಯ ಅಂತರಂಗದಲ್ಲಿ ಉಭಯ ಏಕವಾಗಿ, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕೊಂಡ ವ್ರತಕ್ಕೆ ಭಿನ್ನಭಾವವಿಲ್ಲವೆ, ಎಲ್ಲಾ ಎಚ್ಚರಿಕೆಯಲ್ಲಿ ಬಲ್ಲವನಾಗಿ, ಅರಿದುದ ಬಿಟ್ಟು ಮರದೆನೆಂದು ಮತ್ತೆ ಅರಿದು ನಡೆದೆಹೆನೆಂಬುದು ಆ ವ್ರತಕ್ಕೆ ಅದೆ ಮರವೆಯಲ್ಲವೆ? ಜೇಡನ ಮುಂದಣ ನೇಯಿಗೆಯ ನೂಲೆ? ಸಂಪುಟದ ಲೇಖನವೆ? ಲೋಹದ ಭಾವವೆ? ಅದು ಕುಂಭದ ಭಿನ್ನದಂತೆ, ಮೌಕ್ತಿಕದ ಸಂದಿನಂತೆ. ವ್ರತ ತಪ್ಪಿದಲ್ಲಿಯೆ ತಪ್ಪನೊಪ್ಪಲಿಲ್ಲ, ಏಲೇಶ್ವರಲಿಂಗವಾದಡೂ ಧಿಕ್ಕರಿಸಿ ಬಿಡುವೆನು.
--------------
ಏಲೇಶ್ವರ ಕೇತಯ್ಯ
ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ ಸುಷಪ್ತಿಯಲ್ಲಿ ಉಭಯಭ್ರಾಂತಿಲ್ಲದೆ ದೃಷ್ಟದಲ್ಲಿ ಕಂಡುದಕ್ಕೆ ಆ ಜ್ಞಾನದಲ್ಲಿ ಭಾವಿಸುವುದಕ್ಕೆ ಆ ಜ್ಞಾನ ಉಭಯದೋರದೆ ಸ್ವಯವಾದುದು. ಉಭಯಗುಣ ನಾಸ್ತಿ ಪ್ರಾಣಲಿಂಗಸಂಬಂಧ ಕಾಲಾಂತಕ ಭೀಮೇಶ್ವರಲಿಂಗದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
ಶುದ್ದನಪ್ಪನಯ್ಯಾ ಜಾಗ್ರಸ್ವಪ್ನ ಸುಷುಪ್ತಿಯಲ್ಲಿ ಪರಸ್ತ್ರೀ ಅನ್ಯದೈವಭಕ್ತಿಯ ಬಯಸದವ. ಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಅನ್ಯಧನಕಾಂಕ್ಷೆ ಅವ್ಯಕ್ತಚಿಂತೆಯ ಮಾಡದವ. ಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಷಡುವರ್ಗ ಭಾವವಿಲ್ಲದವ. ಅಶುದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ನಿಜೋಪಾಧಿಯ ಭಕ್ತಿಯುಳ್ಳಡೆ. ಅಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸುಪ್ರಸನ್ನಭಕ್ತಿಯುಳ್ಳಡೆ. ಅಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸಮಯಭಕ್ತಿಯುಳ್ಳಡೆ. ಇದು ಕಾರಣ, ಅಲ್ಲಿಯೇ ಇರಲೊಲ್ಲದಿರ್ದನು ಇಲ್ಲಿಯೆ ಚಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ, ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ. ಆದಿ ಸದಾಶಿವತತ್ವ, ಆದಿ ಈಶ್ವರತತ್ವ, ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ. ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ, ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ, ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ, ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು ವೃಷಭವಾಹನರು ಪಂಚಮುಖರುದ್ರರು, ಶೂನ್ಯಕಾಯನೆಂಬ ಮಹಾರುದ್ರ, ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ, ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ. ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್ಪುರುಷನು ತಾನಲ್ಲ. ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ. ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ. ಪತಿ-ಪಶು-ಪಾಶಂಗಳೆಂಬ ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ. ತ್ವಂ ಪದ ತತ್‍ಪದ ಅಸಿಪದವೆಂಬ ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ. ಜೀವಹಂಸ ಪರಮಹಂಸ ಪರಾಪರಹಂಸನೆಂಬ ಹಂಸತ್ರಯಂಗಳು ತಾನಲ್ಲ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿಗಳು ತಾನಲ್ಲ. ಆ ಸದಾಶಿವತತ್ವದಲ್ಲುತ್ಪತ್ಯವಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ ಅಷ್ಟತನುಮೂರ್ತಿಗಳು ತಾನಲ್ಲ. ಅಸ್ಥಿ ಮಾಂಸ ಚರ್ಮ ನರ ರೋಮ -ಈ ಐದು ಪೃಥ್ವಿಯಿಂದಾದವು. ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ -ಈ ಐದು ಅಪ್ಪುವಿನಿಂದಾದವು. ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ -ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಕೂಡುವ ಅಗಲುವ -ಈ ಐದು ವಾಯುವಿನಿಂದಾದವು. ವಿರೋಧಿಸುವ ಅಂಜಿಸುವ ನಾಚುವ ಮೋಹಿಸುವ ಅಹುದಾಗದೆನುವ -ಈ ಐದು ಆಕಾಶದಿಂದಾದವು. ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ. ವಾಕು ಪಾದ ಪಾಣಿ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚವಿಷಯಂಗಳು ತಾನಲ್ಲ, ವಚನ ಗಮನ ದಾನ ವಿಸರ್ಗ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ, ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ. ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು, ಆನಂದತನು, ಚಿನ್ಮಯತನು, ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ. ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ ಅಷ್ಟ ಆತ್ಮಂಗಳು ತಾನಲ್ಲ. ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳು ತಾನಲ್ಲ. ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ ಬಹಿರಂಗ ಅಷ್ಟಮದಂಗಳು ತಾನಲ್ಲ. ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳು ತಾನಲ್ಲ. ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಷಟ್‍ಭ್ರಮೆಗಳು ತಾನಲ್ಲ. ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ ಷಡ್ಭಾವವಿಕಾರಂಗಳು ತಾನಲ್ಲ. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ. ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ. ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳು ತಾನಲ್ಲ. ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ. ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ. ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಲ್ಲ. ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ. ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ, ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ ಜಾಗ್ರಪಂಚಾವಸ್ಥೆಗಳು ತಾನಲ್ಲ. ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ, ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ ಸ್ವಪ್ನಪಂಚಾವಸ್ಥೆಗಳು ತಾನಲ್ಲ. ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ, ಸುಷುಪ್ತಿಯಲ್ಲಿಯ ಸುಷುಪ್ತಿ , ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ. ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ, ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ ತೂರ್ಯಪಂಚಾವಸ್ಥೆಗಳು ತಾನಲ್ಲ. ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ , ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ, ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ. ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ. ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ ಸಕಲತ್ರಿಯಾವಸ್ಥೆಗಳು ತಾನಲ್ಲ. ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ ಶುದ್ಧತ್ರಿಯಾವಸ್ಥೆಗಳು ತಾನಲ್ಲ. ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ, ಕೇವಲದಲ್ಲಿಯ ಕೇವಲವೆಂಬ ಕೇವಲತ್ರಿಯಾವಸ್ಥೆಗಳು ತಾನಲ್ಲ. ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ. ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ ಚತುರ್ವಿಧ ಪುರುಷಾರ್ಥಂಗಳು ತಾನಲ್ಲ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳು ತಾನಲ್ಲ. ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ. ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ ಅಹಂಕಾರತ್ರಯಂಗಳು ತಾನಲ್ಲ. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ, ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ. ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ. ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ. ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ. ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು, ಅಚಲಾತೀತವೇ ತನ್ನ ಹಣೆ ನೋಡಾ. ನಿರಾಕುಳಪದವೇ ತನ್ನ ನಾಸಿಕ, ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ. ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ. ಅಮಲ ನಿರ್ಮಲವೇ ತನ್ನ ಗಲ್ಲ, ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ. ನಾದಬಿಂದುಕಳಾತೀತವೆ ತನ್ನ ತಾಳೋಷ*ಸಂಪುಟ ನೋಡಾ. ಅಕಾರ, ಉಕಾರ, ಮಕಾರ, ನಾದ ಬಿಂದು ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ ತನ್ನ ಷೋಡಶ ದಂತಂಗಳು ನೋಡಾ. ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ. ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ. ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ. ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ. ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ. ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ. ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ. ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು, ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ, ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ. ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಳವಾಗಿಹ ನಿರ್ವಾಣಪದ ನೋಡಾ. ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ. ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ. ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ ತನ್ನ ಪಾದಾಂಗುಷಾ*ಂಗುಲಿಗಳೆಂಬ ಸಾಯುಜ್ಯಪದ ನೋಡಾ. ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗವೆ ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ. ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ, ದಶದಿಶಾಶೂನ್ಯ ನಿರಾಕಾರವಾಗಿಹ ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ, ತಾನೆ ಪರಮಪಾದೋದಕಪ್ರಸಾದ ನೋಡಾ. ತಾನೆ ನಾದಬಿಂದುಕಳಾತೀತ ನೋಡಾ. ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ. ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ ತಾನೆ ನಿರಾಳ ನಿರಾಲಂಬ ನೋಡಾ. ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು, ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥಸನ್ಯಾಸಿಯಾದಡೇನಯ್ಯಾ, ಆವಂಗದಿಂದ ಬಂದಡೂ ಕೊಳದಿರಬೇಕು. ರುಚಿಸನ್ಯಾಸಿಯಾದಡೇನಯ್ಯಾ, ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು. ಸ್ತ್ರೀ ಸನ್ಯಾಸಿಯಾದಡೇನಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು. ದಿಗಂಬರಿಯಾದಡೇನಯ್ಯಾ, ಮನ ಬತ್ತಲೆ ಇರಬೇಕು. ಇಂತೀ ಚತುರ್ವಿಧದ ಹೊಲಬರಿಯದೆ ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಸಂಸಾರವೆಂಬ ಶರಿಧಿ ಅಡ್ಡಗಟ್ಟಲು, ಅನುವನರಿದವಂಗೆ ಅಂಗವೆ ಹಡಗು, ಮನವೆ ಕೂಕಂಬಿಕಾರ. ಜ್ಞಾನ_ಸುಜ್ಞಾನವೆಂಬ ಗಾಳಿ ತೀಡಲು, ಸುಲಕ್ಷಣದಿಂದ ಸಂಚರಿಸುತ್ತಿರಲು ಬರ್ಪವು ಮೀನು, ಮೊಸಳೆ, ಅಷ್ಟಗಿರಿ,_ಜತನ. ಮೊತ್ತದ ಸಂಚಾರದ ಹಡಗು ತಾಗುತ್ತಿದೆ, ಎಚ್ಚತ್ತಿರು, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಮೈಮರೆಯದೆ. ಕತ್ತಲೆ ದೆಸೆ ಅತ್ತಲೆ ಪೋಗು; ಉತ್ತರನಕ್ಷತ್ರದ ಪ್ರಭೆಯಿದೆ ! ಸೆಟ್ಟಿ ಜತನ ! ಪಟ್ಟಣವಿದೆ,_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಾಗಿ ಚಿತ್ರದ ಪ್ರತಿಮೆಯ ಅವಯವಂಗಳ ಶೃಂಗಾರದಂತೆ ಆಕಾರವೆಂಬಂತಿರ್ದೆನಯ್ಯ. ಚಿತ್ತೆಂಬ ಲಿಂಗದೊಳಗೆ ಮನವಡಗಿ ನವನಾಳದ ಸುಳುಹು ಕೆಟ್ಟು ಸುಷುಪ್ತಿಯನೆಯ್ದಿದ್ದೆನಯ್ಯ. ಇದು ಕಾರಣ: ಎನ್ನ ಜಾಗ್ರ ಸ್ವಪ್ನ ಸುಷುಪ್ತಿಯೆಂತಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ. ಆನಂದವೆಂಬ ಜಂಗಮದಲ್ಲಿ ಅರುಹು ಏಕತ್ವವಾಗಿ ಅತ್ಮೋಹಂಯೆಂಬುದನರಿಯೆನು ನೋಡಾ, ನಾನು ಪರಮಾತ್ಮನಾದ ಕಾರಣ. ನಿತ್ಯವೆಂಬ ಪ್ರಸಾದದಲ್ಲಿ ಪ್ರಾಣವಡಗಿ ನಿತ್ಯಾನಿತ್ಯವನರಿಯದೆ ಸಚ್ಚಿದಾನಂದ ನಿತ್ಯ ಪರಿಪೂರ್ಣವಾಗಿ ಅನಾದಿ ಭಕ್ತನಾದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುಗಿಲ ಬಣ್ಣದ ಪಕ್ಷಿ ಮಗನ ಕೈಯ ಅರಗಿಳಿ, ಗಗನನ[ದ] ಕೋಲಂಬಿನಲ್ಲಿ ಸ್ವಪ್ನದ ನಿಲವನು ತೆಗೆದೆಚ್ಚವನಾರೊ ? ಉಪಮಿಸಬಾರದು ! ಜಾಗ್ರ ಸ್ವಪ್ನ ಸುಷುಪ್ತಿಯ ನಡುವೆ ತ್ರಿಜಗವಾಯಿತ್ತು. ಜಗಜ್ಯೋತಿ, ನಿನ್ನ ಮಾಯೆಯನೇನೆಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ ನಿರಂಜನಲಿಂಗವ ಪಡೆದ ಅಗಣಿತಪ್ರಸಾದಿಯು ತಾನು ತನ್ನಾನಂದಕ್ಕೆ ಅಡಿಯಿಟ್ಟು ನಡೆವಲ್ಲಿ, ತನ್ನ ಪದದನುವನರಿದು ಸಾಕಾರ, ನಿರಾಕಾರ, ನಿರ್ಮಾಯಕ್ಕಿತ್ತು, ಅರಿದರಿದುಕೊಂಡಾನಂದಿಸುವನಲ್ಲದೆ, ಅಘಭರಿತ ಜಗಭಂಡ ಜಂಗುಳಿಗಳಂತೆ, ಮಣ್ಣಿನ ಕರ್ಮದಲ್ಲಿ ನಿಂದು, ಹೆಣ್ಣಿನ ಮೋಹದಲ್ಲಿ ಸಿಲ್ಕಿ, ಹೊನ್ನಿನಾಸೆಯಲ್ಲಿ ಮುಳುಗಿ ಚನ್ನಗುರುಲಿಂಗ ಜಂಗಮಕ್ಕಿತ್ತು ಕೊಂಬ ಉನ್ನತಪ್ರಸಾದಿಗಳೆಂದು, ಕುನ್ನಿಗಳ ಧ್ವನಿ ಸಹಜದಂತಿರುವರಲ್ಲಾ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಶಿವಾ, ಈ ಮರುಳಮಾನವರು ಸಟೆಯ ಸಂಸಾರದಲ್ಲಿ ಸಿಲ್ಕಿ, ತಾವಾರೆಂಬುದನರಿಯದೆ, ತಮ್ಮ ನಿಜಸ್ವರೂಪವ ಮರದು ಕೆಟ್ಟ ಕೇಡ ಹೇಳುವೆನು ಕೇಳಿರಯ್ಯ. ಹುಲಿಯ ಬಾಯ ಕುರಿಯ ಹಾಗೆ, ತೋಳನ ಬಾಯ ಮರಿಯ ಹಾಗೆ, ಸರ್ಪನ ಬಾಯ ಕಪ್ಪೆಯ ಹಾಗೆ, ಬೆಕ್ಕಿನ ಬಾಯ ಇಲಿಯ ಹಾಗೆ, ಕಟುಕನ ಕೈಯ ಹೋತಿನ ಹಾಗೆ, ರಾಜನ ಕೈಯ ಚೋರನ ಹಾಗೆ, ಇಂತೀ ದೃಷ್ಟಾಂತದಂತೆ- ಮಾಯಾಕಾಳರಕ್ಕಸಿಯ ಮೂರು ಮುಖದಲ್ಲಿ- ಆ ಮೂರು ಮುಖ ಆವಾವೆಂದಡೆ: ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿಮುಖದೊಳಗೆ ಗೋಪ್ಯಮುಖ, ಸಂದ ಮುಖಗಳುಂಟು, ಪೇಳ್ವೆ. ಜಾಗ್ರಾವಸ್ಥೆಯೇ ವಕ್ತ್ರವಾಗುಳ್ಳ ಮಣ್ಣಿನಲ್ಲಿ ಕಾಮ ಕ್ರೋಧ ಲೋಭವೆಂಬ ತ್ರಿವಿಧಮುಖವು. ಸ್ವಪ್ನಾವಸ್ಥೆಯೇ ವಕ್ತ್ರವಾಗುಳ್ಳ ಹೆಣ್ಣಿನಲ್ಲಿ ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ತ್ವಕ್ಕುಯೆಂಬ ಪಂಚಮುಖವು. ಸುಷುಪ್ತಾವಸ್ಥೆಯೇ ವಕ್ತ್ರವಾಗುಳ್ಳ ಹೊನ್ನಿನಲ್ಲಿ ಪ್ರಾಣಾದಿ ಧನಂಜಯಾಂತ್ಯಮಾದ ದಶವಾಯುಗಳೇ ದಶಮುಖವಾಗಿರ್ಪವು. ಇಂತೀ ತ್ರಿವಿಧಮುಖ ಮೊದಲುಮಾಡಿಕೊಂಡು ಹಲವು ಮುಖದಿಂದ ಹರಿಹರಿದುಕೊಂಡು ತಿಂದು ಹಿಂಡಿ ಹಿಪ್ಪಿಯ ಮಾಡುವಾಗ ಹಿಂದೆ ಹೇಳಿದ ದೃಷ್ಟಾಂತದಂತೆ ಮಾಯೆಯೆಂಬ ಹೊಲೆಯಲ್ಲಿ ಶಿಲ್ಕಿ ಈರೇಳುಲೋಕವೆಲ್ಲ, ಆಳುತ್ತ, ಮುಳುಗುತ್ತ ಆಲಪರಿದು, ಚಾಲಿವರಿದು ಎಂಬತ್ತುನಾಲ್ಕುಲಕ್ಷ ಭವಮಾಲೆಯಲ್ಲಿ ಸತ್ತುಹೋದ ಪ್ರಾಣಿಗಳಿಗೆ ಇನ್ನೆತ್ತಣ ಮುಕ್ತಿಯಯ್ಯಾ. ಇಂತೀ ಮರುಳಮಾನವರ ಕಂಡು ಬೆಕ್ಕನೆ ಬೆರಗಾಗಿ ಹೊಟ್ಟೆಹುಣ್ಣಾಗುವನ್ನಕ್ಕರ ನಕ್ಕು ಶಬ್ದಮುಗ್ಧನಾಗಿ ಸುಮ್ಮನಿರ್ದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಂಬಳಿಯಲ್ಲಿ ಕೂಳ ಕಟ್ಟಿ, ಕೂದಲ ಸೋದಿಸಬಹುದೆ ಅಯ್ಯಾ ? ಸಂಸಾರಕ್ಕಂಗವನಿತ್ತು, ಮೋಹಕ್ಕೆ ಮನವವಿತ್ತು, ಮನುಜರ ಗುಣ ತಮಗೊಂದೂ ಬಿಡದೆ, ಘನವನರಿತೆಹೆನೆಂಬ ಬಿನುಗಾಟದ ಮಾತೇಕೆ ? ಹಸಿವು ತೃಷೆ ವ್ಯಸನ ವ್ಯಾಪ್ತಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಯವಾಗುತ್ತಿರ್ದು, ದ್ವೈತಾದ್ವೈತದ ಮಾತಿನ ಬಣಬೆಯ ವೇಷಗಳ್ಳಗೇಕೆ ಪರದೇಶಿಗನ ಸುದ್ದಿ ? ಅರಿದವನ ಅಂಗ ದಗ್ಧಪಟದಂತೆ, ಬೆಂದ ನುಲಿಯಂತೆ, ಬೆಳಗಿನ ರೂಪಿನಂತೆ, ಉದಕದ ಪ್ರತಿಬಿಂಬದಂತೆ, ಅದು ತೋರಲಿಲ್ಲವಾಗಿ, ಅದು ಅಂಗಲಿಂಗಪ್ರಾಣಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->