ಅಥವಾ

ಒಟ್ಟು 109 ಕಡೆಗಳಲ್ಲಿ , 30 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೂ ಇಲ್ಲದ ಅರಣ್ಯದ ಹುಲ್ಲತಂದು, ಮೂರು ಚಾಪೆಯ ಹೆಣೆದು, ಮುಪ್ಪುರದರಸಿಂಗೆ ಕೊಟ್ಟು, ಮೂವರ ತಲೆ ಹೊಡೆದು, ಕೈಕಾಲು ಕಡಿದು, ಕಣ್ಣು ಕಳೆದು, ಪರದ್ರವ್ಯ ಕೊಳ್ಳದೆ ಹರದ್ರವ್ಯ ಕಳೆಯದೆ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ ತಲೆವಾಗುವೆ ನಾನು ಕುಲಜರೆಂದು. ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಆರುವರ್ಣದ ಪಕ್ಷಿ ಮೂರುವರ್ಣದ ಗೂಡನಿಕ್ಕಿ, ತಲೆಯಿಲ್ಲದ ಮರಿಯನೀದು ಕಾಲಿಲ್ಲದೆ ನಡೆದಾಡುತಿರ್ಪುದ ಕಂಡೆ! ಆ ಮರಿ ಹಾಲನೊಲ್ಲದು. ಬೆಲ್ಲ ಕಹಿಯೆಂದು ಬೇವಿನ ರಸವ ಕುಡಿದು, ಮಲವ ತಿಂದು ಬದುಕೇನೆನುತಿರ್ಪುದ ಕಂಡೆ. ಆ ಮರಿಗೆ ಅಗ್ನಿವರ್ಣದ ಕೋಳಿ ಗುಟುಕನಿಕ್ಕಿ, ಗೂಗಿ ಆರೈಕೆಯ ಮಾಡಲು, ತಲೆ ಬಂದು, ಕಣ್ಣು ತೆರೆದು, ಪಕ್ಕವಿಲ್ಲದೆ ಹಾರಿಹೋಗಿ, ಕೊಂಕಣದೇಶದಲ್ಲಿ ಸತ್ತುದ ಕಂಡು ಬೆರಗಾದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನ ಮಹದಲ್ಲಿ ನೆಮ್ಮಿ ಮತ್ತೊಂದು ಜಿನುಗುವ ನೇಮವೇತಕ್ಕೆ? ತಲೆ ಪೂಣ್ಯದ ತತ್ತಿಂಗೆ ಪೂಜೆ. ಆಗಣ್ಯನನರಿವುದಕ್ಕೆ ತ್ರಿಕರಣ. ಅಣ್ಣಾ, ಇವ ತಿಳಿದು ನೋಡಿ ಪ್ರಸನ್ನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಯಸ್ಥಲ, ಕರಸ್ಥಲ, ಉರಸ್ಥಲ, ಶಿ ಸ್ಥಲ, ಪ್ರಾಣಸ್ಥಲ, ಭಾವಸ್ಥಲವೆಂದು ನುಡಿದಾಡುವರು. ಆ ಸ್ಥಲದೊಳಗಣ ಸ್ವಯಸ್ಥಲವನರಿಯರು ಕಾಣಿರೆ. ಸ್ವಯಸ್ಥಲವೆಂತಿಪ್ಪುದೆಂದರೆ, ಕಾಯಸ್ಥಲವನರಿದರೆ, ಅದು ತಾನೇ ಲಿಂಗವಾಯಿತ್ತು. ಕರಸ್ಥಲವನರಿದರೆ, ಕೈಲಾಸ ಮರ್ತ್ಯ ತನ್ನೊಳಗಾಯಿತ್ತು. ಉರಸ್ಥಲವನರಿದರೆ, ಪರವು ತನ್ನೊಳಗಾಯಿತ್ತು. ಶಿರಸ್ಥಲವನರಿದರೆ ಶಿವನೆಂಬುದಕ್ಕೆ ಇಲ್ಲ. ಪ್ರಾಣಸ್ಥಲವನರಿದರೆ, ಭಯ ಮರಣಾದಿಗಳಿಲ್ಲ. ಭಾವಸ್ಥಲವನರಿದರೆ, ಇನ್ನಾವುದೂ ನೆನಹಿಲ್ಲ. ಇದರ ಭೇದವನರಿಯದ, ಸ್ಥಲನೆಲೆಯುಂಟೆಂಬಿರಿ. ಅದರ ಭೇದವ ನೀವು ಅರಿಯಿರಿ ಕಾಣಿರೊ. ಸ್ಥಲವೆಂದರೆ ಅಂಗ, ನೆಲೆಯೆಂದರೆ ಪ್ರಾಣ. ಇದನರಿಯದೆ ತಲೆ ಕೆಳಗಾಗಿ ಹೋದರು. ಆರು? ದೇವದಾನವರು. ನಿಮ್ಮ ಪಾಡೇನೋ ನರಗುರಿಗಳಿರಾ? ಇದನರಿದು, ಇನ್ನಾದರೂ ನಮ್ಮ ಶರಣರಿಗೆರಗಿ ಬದುಕಿರೊ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ, ರುದ್ರನ ಶಿರದಲ್ಲಿ ಅದೆ. ತಲೆ ಬಾಯ ನುಂಗಿ, ಕೈ ತಲೆಯೊಳಡಗಿ, ಕಣ್ಣು ಕಾಲಾಯಿತ್ತು, ಅರ್ಕೇಶ್ವರಲಿಂಗನನರಿವ ಭೇದದಿಂದ.
--------------
ಮಧುವಯ್ಯ
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. [ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.
--------------
ಮೋಳಿಗೆ ಮಾರಯ್ಯ
ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು, ಆರು ಕಣ್ಣು, ಏಳು ಮೊಲೆ, ಎಂಟು ಭುಜ, ಹತ್ತು ತೋಳು, ಹದಿನಾರು ಪಾದ, ಹದಿನೆಂಟು ತಲೆ, ಮೂವತ್ತಾರು ಬಾಯಿ, ಐವತ್ತೆರಡು ನಾಲಗೆ, ಅರುವತ್ತುನಾಲ್ಕು ಕೋರೆದಾಡೆ. ಈ ಪರಿಯಲ್ಲಿ ಜಗವೆಲ್ಲವನಗಿದಗಿದು ಉಗುಳುತ್ತಿರ್ದಳಯ್ಯಾ, ಸೌರಾಷ್ಟ್ರ ಸೋಮೇಶ್ವರಾ, ನೀ ಮುಟ್ಟೆ ಬಟ್ಟಬಯವಾದಳು.
--------------
ಆದಯ್ಯ
ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು ಉಂಟು ನೋಡಾ. ಉಂಟೆಂದಲ್ಲಿ `ಇಲ್ಲ' ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ `ಇಲ್ಲ'. ಆ `ಇಲ್ಲ'ದಲ್ಲಿ ಒಂದು ತಲೆ ಉದಿಸಿತ್ತು. ಆ ತಲೆಯೊಳಗೆ ಮೂರು ಲಿಪಿಯ ಕಂಡೆ. ಲಿಪಿಯೊಳಗೊಂದು ಧ್ವನಿಯ ಕಂಡೆ. ಧ್ವನಿಯ ಬಣ್ಣ ತಲೆಯೆತ್ತದ ಮುನ್ನ, ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು. ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ. ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು. ಅಡವಿಯ ಸುಟ್ಟು ಆಕಾಶವ ಹೊಕ್ಕು ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
--------------
ಅಲ್ಲಮಪ್ರಭುದೇವರು
ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು ? ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ, ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ ? ಗುಹೇಶ್ವರಾ, ನಿಮ್ಮ ಶರಣರು, ಬಾರದ ಭವದಲ್ಲಿ ಬಂದ ಕಾರಣ_ಸುಖಿಗಳಾದರಯ್ಯಾ.
--------------
ಅಲ್ಲಮಪ್ರಭುದೇವರು
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ. ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ. ಮೀನಜರಿಗೆ ಮೀನ ಪ್ರಳಯವಾದಲ್ಲಿ, ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ. ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ, ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ. ಇಂತಹ ರುದ್ರಾವತಾರ ಹಲವಳಿದಡೆ, ಗುಹೇಶ್ವರಲಿಂಗವನೆಂದೂ ಅರಿಯ !
--------------
ಅಲ್ಲಮಪ್ರಭುದೇವರು
ನೀರ ಹೊಳೆಯಲ್ಲಿ ಹೋಗುತ್ತಿರಲಾಗಿ, ಅಲ್ಲಿ ಒಬ್ಬ ಸತ್ತು, ಬೇವುತ್ತಿರ್ದ. ತಲೆ ಕಾಲು ಬೇಯದು, ಕೈ ಮುರುಟದು, ಕಪಾಲ ಸಿಡಿಯದು, ಕೂದಲು ಉಳಿಯಿತ್ತು. ಆ ಕೂದಲ ಮೊನೆಯಲ್ಲಿ ಮೂರು ಲೋಕ ಎಡೆಯಾಡುತ್ತದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->