ಅಥವಾ

ಒಟ್ಟು 41 ಕಡೆಗಳಲ್ಲಿ , 22 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿತ್ತಿಯ ಮೇಲಣ ಚಿತ್ರದ ಬೊಂಬೆಯ ಕೈಯಲ್ಲಿ, ಹೊತ್ತುವ ದೀಪ ಇದ್ದಡೇನು, ಕತ್ತಲೆಯ ಬಿಡಿಸಬಲ್ಲುದೆ ? ನಿಷೆ*ಹೀನನಲ್ಲಿ ಇಷ್ಟಲಿಂಗ ಇರುತಿರಲಿಕ್ಕೆ ದೃಷ್ಟವ ಬಲ್ಲನೆ ? ಭಕ್ತಿಹೀನಂಗೆ ನಿತ್ಯಾನಿತ್ಯವ ಹೇಳಲಿಕ್ಕೆ ನಿಶ್ಚಯಿಸಬಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ರತ್ನದ ಕಾಂತಿಯ ಕಳೆಯಿಂದ, ತನ್ನಂಗದಲ್ಲಿ ಹುಟ್ಟಿದ ಜಜ್ಜರಿ ಕಾಣಿಸಿಕೊಂಬಂತೆ. ಚಂದ್ರನ ಕಳಂಕು ತನ್ನ ಪರಿಪೂರ್ಣದ ಬೆಳಗಿನ ಕಳೆಯಿಂದ, ತನ್ನಲ್ಲಿಯೆ ಕಲೆ ಕಾಳಿಕವ ಕಾಣಿಸಿಕೊಂಬಂತೆ, ಇಂತೀ ಸುವಸ್ತು ವಸ್ತುಕದಲ್ಲಿ ವಿಸ್ತರಿಸಲಾಗಿ, ಪರಮ ಜೀವನಾದುದ ತಿಳಿದು ನೋಡಿಕೊಳ್ಳಿ. ಗೆಲ್ಲಸೋಲದ ಮಾತಲ್ಲ. ಆಗಮದ ಮಾತಿನ ಮಾಲೆಯ ನೀತಿಯಲ್ಲ. ಬೆಂಕಿ ಕೆಟ್ಟಡೆ, ಉರುಹಿದಡೆ ಹೊತ್ತುವುದಲ್ಲದೆ ದೀಪ ಕೆಟ್ಟಡೆ ಮತ್ತೆ ಉರುಹಿದಡೆ ಹೊತ್ತಿದುದುಂಟೆ ? ಕ್ರೀವಂತ ಮರದಡೆ ಅರಿವನಲ್ಲದೆ, ಮರೆದರಿದವ ಮತ್ತೆ ಮರೆದಡೆ ಮತ್ತರಿಯಬಲ್ಲುದೆ ? ಬೆಳಗದ ಕಂಚು, ತೊಳೆಯದ ಕುಂಭ, ಪಕ್ವಕ್ಕಳಿಯದ ಫಲ, ನೆರೆಯನರಿಯದವನ ಸತ್ಕ್ರಿಯಾ ಮಾಟ, ಬರುಕಟೆ ವೃಥಾಹೋಯಿತ್ತು. ಇಂತೀ ಗುಣವ ತಿಳಿದು ಅರಿದವರಲ್ಲಿ, ತಾನರಿದು ಕೂಡಬೇಕು, ಕೂಡಿಕೊಳ್ಳಬೇಕು. ಕೊಂಡು ಕೊಡಬೇಕು, ಕೊಟ್ಟೆನೆಂಬ ಎಡದೆರಪಿಲ್ಲದೆ, ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವ ಕೂಡಬೇಕು.
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಕೈಯಲ್ಲಿ ಕುರುಹು ಮೈಯಲ್ಲಿ ಬೂದಿ ಬಾಯಲ್ಲಿ ದೀಪ ಸತ್ಯನಡೆವ ಸೌಭಾಗ್ಯಕ್ಕೆ ಮತ್ತೆ ಮತ್ತೆ ಶರಣೆಂದು ಬದುಕಿದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ, ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ !_ಸಯಧಾನ ನೋಡಾ ! ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !
--------------
ಅಲ್ಲಮಪ್ರಭುದೇವರು
ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ, ಕುಟಿಲದ ರಸವಾದದ ಮಾತಿನ ಮಾಲೆಯೇಕೆ ? ಆಗುಚೇಗೆಯನರಿದು ಬೋಧಿಸಲೇಕೆ, ಭೋಗಂಗಳಿಗಾಗಿ ? ಇದು ಮರುತನ ಇದಿರಿನ ದೀಪ, ಸುರಚಾಪದ ಬಣ್ಣ, ಶರೀರದ ಅಳಿವು. ಸಾಕಾರದಲ್ಲಿ ಇದ್ದು, ನಿರಾಕಾರವನರಿ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ ಲಿಂಗವೆಂದೆಂಬರು, ಅದ ನಾವರಿಯೆವಯ್ಯಾ ! ನಾವು ಬಲ್ಲುದಿಷ್ಟಲ್ಲದೆ ಕಾಮ ಕ್ರೋಧ ಲೋಭ ಮೋಹ ಮಾತ್ಸರ್ಯವಿರಹಿತರು, ನಮ್ಮ ಜಂಗಮದೇವರು ಕಾಣಿರಯ್ಯಾ ! ಇಹನಾಸ್ತಿ ಪರನಾಸ್ತಿ ಫಲಪಥಕ್ಕೆ ಹೊರಗಾಗಿ ಮಾಡುವ ಭುಕ್ತಿಯ ಕೊಟ್ಟು, ಮುಕ್ತಿಯನೀವ. ಚರಿಸಿದಡೆ ವಸಂತ, ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ. ದಗ್ಧಪಟನ್ಯಾಯ, ಯಥಾಸ್ವೇಚ್ಛ ತನ್ನ ನಿಲುವು ಅದಾರಿಗೆ ವಿಸ್ಮಯ, ಅಗೋಚರ. ಚರಾಚರಾ ಸ್ಥಾವರಾತ್ಮಕನು ನಮ್ಮ ಜಂಗಮದೇವರು ಕಾಣಿರಯ್ಯಾ. ಆ ಜಂಗಮವು ಭಕ್ತರಿಗೆ ಚರಣವ ಕರುಣಿಪನು. ಆ ಭಕ್ತರು ಪಾದಪ್ರಕ್ಷಾಲನಂ ಗೆಯ್ದು, ಗಂಧಾಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ವಿಭೂತಿ ರುದ್ರಾಕ್ಷಿಯಂ ಧರಿಸಿ, ಮೈವಾಸವಂ ಭೂಷಣ ಎರೆದಲೆಯನ ಕರದಲ್ಲಿ ಹಿಡಿದು, ಆ ಜಂಗಮದೇವರು ತೀರ್ಥವನೀವುದಯ್ಯಾ. ಆಮೇಲೆ ತಂಡ ಮೊತ್ತಕ್ಕೆ ಮಂಡೆ ಬಾಗಿ, ತಮ್ಮಿಷ್ಟಲಿಂಗಕ್ಕೆ ಮುಷ್ಟಿ ಅರ್ಪಿಸಿ, ತಾವು ಸಲಿಸುವುದಯ್ಯಾ. ಆಮೇಲೆ ಗಣಸಮೂಹವು, ತಾವು ರೋಹ ಅವರೋಹದಿಂದ ಅರ್ಪಿತವ ಮಾಡುವದು, ಆಗಮಾಚಾರವಯ್ಯಾ. ಲಿಂಗ ನಿರ್ಮಾಲ್ಯವನೆ ಲಿಂಗಕ್ಕೆ ಮತ್ತೆ ಮತ್ತೆ ಧರಿಸುವೆ,ಭಾವನಿರ್ಭಾವವನರಿದು, ಇನ್ನೊಂದು ನಿರಂತರದ ಅವಧಾನವುಂಟು. ತಾ ಪ್ರಸಾದವ ಸವಿವಾಗ, ಜಂಗಮಲಿಂಗಕ್ಕೆ ಪದಾರ್ಥವ ಸಮೀಪಸ್ಥವ ಮಾಡಲು, ಅದೇ ಹಸ್ತದಲ್ಲಿ ಸಜ್ಜಾಗೃಹಕ್ಕೆ ಸಮರ್ಪಿಸಿಕೊಂಬುವದೊಂದವಧಾನ. ಆಚೆಗೆ ತೀರ್ಥ ಸಂಬಂಧಿಸಿ, ಎಯ್ದದಿರಲ್ಲದರಲ್ಲಿ ಪಾದೋದಕವ ನೀಡುವದ ದಯಗೊಟ್ಟಡೆ ಸಂದಿಲ್ಲ. ಅವು ಮೂರು, ಇವು ಮೂರು, ಆಚೆ ಹನ್ನೊಂದು, ಈಚೆ ಹತ್ತರ ಅರುವತ್ತರಾಯ ಸಂದಿತ್ತು . ಭಾಷೆ ಪೂರೈಸಿತ್ತು, ಲೆಕ್ಕ ತುಂಬಿತ್ತು, ಬಿತ್ತಕ್ಕೆ ವಟ್ಟವಿಲ್ಲ, ಕಾಳೆಗ ಮೊಗವಿಲ್ಲ. ಕಾಳಿಂಗನ ಹಸ್ತಾಭರಣ, ನಮ್ಮ ಜಂಗಮಲಿಂಗಕ್ಕಯ್ಯಾ ! ಇಂತಪ್ಪ ಈ ನಡೆಯನರಿದಾಚರಿಸಿದ ಸಂಗನಬಸವಣ್ಣಂಗೆ ಆಯತವನಾಯತವೆಂಬ ಅನಾಚಾರಿಯನು ಎನ್ನ ಮುಖದತ್ತ ತೋರದಿರಯ್ಯಾ. ಆ ಮಹಾಮಹಿಮನ ಹೆಜ್ಜೆ ಹೆಜ್ಜೆಗಶ್ವಮೇಧಫಲ ತಪ್ಪದಯ್ಯಾ. ಆ ಸಿದ್ಧಪುರುಷಂಗೆ ನಮೋ ನಮೋ ಎಂಬೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ? ದೀಪ ಇಲ್ಲದೆ ಬೆಳಕುಂಟೆ ಅಯ್ಯಾ? ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ? ಸಕಲವಿಲ್ಲದೆ ನಿಷ್ಕಲವ ಕಾಣಬಾರದು. ಮಹಾಘನ ನಿರಾಳ ಪರಶಿವನಿಂದ ಲಿಂಗವು ತೋರಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
--------------
ಉರಿಲಿಂಗಪೆದ್ದಿ
ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ. ಅನ್ಯಾರ್ಜಿತದಲ್ಲಿ ಉದರವ ಹೊರೆಯದಿಹುದೆ ಸ್ನಾನ. ಮನದ ಮೈಲಿಗೆಯ ಕಳೆವುದೆ ಮಡಿವರ್ಗ. ಶರಣರಲ್ಲಿ ಮಂಗಳಭಾವದಿರವೆ ಭಸ್ಮಲೇಪನ. ವಿಶ್ವತೋಮುಖನ ನೋಟಕಾರುಣ್ಯ ತನ್ನ ಮೇಲಿರಲು ರುದ್ರಾಕ್ಷಧಾರಣ. ಹಿಂಸೆಯ ಮಾಡದಿಹುದೆ ಆತ್ಮಶುದ್ಧಿ. ನಿರಂಹಕಾರವೆ ಪದ್ಮಾಸನ, ಸುಚಿತ್ತವೆ ದೃಷ್ಟಿ, ಸತ್ಯವೆ ಲಿಂಗ, ಸಾಹಿತ್ಯವೆ ಅಗ್ಗವಣಿ, ದಯಾವಾಕ್ಯವೆ ಗಂಧ, ಅಕ್ಷರವಿಚಾರವೆ ಅಕ್ಷತೆ, ನಿರ್ಮಲವೆ ಪುಷ್ಪ, ನಿಸ್ಸಂದೇಹವೆ ಧೂಪ, ನಿಸ್ಸಂಕಲ್ಪವೆ ದೀಪ, ನಿಂದೆಯ ಮಾಡದಿಹುದೆ ಜಪ, ಪರಿಣಾಮವೆ ಆರೋಗಣೆ, ಅಖಂಡಿತವೆ ತಾಂಬೂಲ. ಇಂತೀ ಇಷ್ಟಲಿಂಗದ ಪೂಜೆಯ ಪರಿಯಲ್ಲಿ ಪ್ರಾಣಲಿಂಗದ ಪೂಜೆಯ ಮಾಡಲು ಅಂತರಂಗ ಬಹಿರಂಗ ಸರ್ವಾಂಗಲಿಂಗವಾಗಿರ್ಪುದು. ಇದು ಸಹಜ, ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪುಷ್ಪ ಧೂಪ ದೀಪ ನೈವೇದ್ಯ ಸೋಂಕಿದ ಸುಖವ, ಲಿಂಗಾರ್ಪಿತ ಮಾಡುವ ಪರಿಯಿನ್ನೆಂತೊ? ಅವಧಾನದೊಳಗೊಂದು ವ್ಯವಧಾನ ಬಂದಡೆ, ವ್ಯವಧಾನವ ಸುಯಿಧಾನವ ಮಾಡುವ ಪರಿಯಿನ್ನೆಂತೊ? ವ್ಯಾಪ್ತಿ ವ್ಯಾಕುಳ ವಾಕುಮನ [ವ] ರಿಯದನ್ನಕ್ಕ, ಶರಣನೆನಿಸಬಾರದು, ಸಕಳೇಶ್ವರದೇವಾ ನಿಮ್ಮಲ್ಲಿ.
--------------
ಸಕಳೇಶ ಮಾದರಸ
ಗರುಡ ಉವಾಚ:`ಅಶೇಷ ಪಾಶವಿಶ್ಲೇಷೋ, ಯದಿ ದೇವೇಶ ದೀಕ್ಷೆಯಾ| ಜಾತಾಯಾಮರ್ಥನಿಷ್ಟ್ಯತ್ಯಾ ಕಥಂ ಸ್ಯಾದ್ವಪುಷಃ ಸ್ಥಿತಿಃ || ಭಗವಾನ್ ಉವಾಚ| ಜಾತಾಯಾಂ ಘಟನಿಷ್ಪತ್ತೌ ಯಥಾ ಚಕ್ರಂ ಭ್ರಮತ್ಯಪಿ| ಪೂರ್ವಸಂಸ್ಕಾರ ಸಂಸಿದ್ಧಂ ತಥಾ ವಪುರಿದಂ ಸ್ಥಿತಂ || ಭಗ್ನೇ ಘಟೇ ಯಥಾ ದೀಪಃ ಸರ್ವತಃ ಸಂಪ್ರಕಾಶತೇ | ದೇಹಪಾತೇ ತಥಾ|| ಚಾತ್ಮಾ ಭಾತಿ ಸರ್ವತ್ರ ಸರ್ವದಾ ಇಂತೆಂದು ಪೂರ್ವೋಕ್ತವಾದ ನಿರ್ಬೀಜಾದಿ ಶಿವದೀಕ್ಷೆಗಳಿಂದಮಲವಾದಾತನೆ ಮುಕ್ತನೆನಿಸಿಕೊಂಬನು. ಆ ಶಿವದೀಕ್ಷೆಗೆ ಯೋಗ್ಯವಾದ ಸಮಯಮಂ ವಾತೂಲದೊಳು ಪೇಳ್ದಪಂ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ. ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ. ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ. ಪಂಚ ವಿಷಯಂಗಳೇ ಪುಷ್ಟ. ಅಂತಕರಣಂಗಳೇ ಧೂಪ. ಪಂಚೇಂದ್ರಿಯಂಗಳೇ ದೀಪ. ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ. ಗುಣತ್ರಯಂಗಳೇ ತಾಂಬೂಲ. ಪ್ರಾಣಸಮರ್ಪಣವೇ ನಮಸ್ಕಾರವು. ಶಾಂತಿಯೇ ಪುಷ್ಪಾಂಜಲಿಯಾಗಿ, ಈ ಪರಿಯಿಂದ, ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ. ಆತನೇ ನಿಜಾನುಭಾವಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ.
--------------
ಸ್ವತಂತ್ರ ಸಿದ್ಧಲಿಂಗ
ಅನ್ಯವಿಲ್ಲದ ಅರ್ಚನವೆಂತೆಂದಡೆ : ``ನಿಷ್ಕಲಂ ನಿಗಮಾತೀತಂ ನಿಶ್ಶೂನ್ಯಂ ಶೂನ್ಯಮೇವ ಚ | ನಿರಂಜನಂ ನಿರಾಕಾರಂ ಸಾಕಾರಂ ಪರದರ್ಶನಂ || ನೀರೂಪಂ ಸ್ವರೂಪಂ ಚೈವ ನಿರ್ಗುಣಂ ಸಗುಣಂ ತತಃ | ಅದೃಶ್ಯ ದೃಶ್ಯಮಹಾಂತ ಸ್ವಯಂಭೂ ಫ್ರಭುವೇ ನಮಃ || ಮತ್ಕಲಾಂ ಚಿತ್ಕಲಾಂ ಚೈವ ಚಿದ್ರೂಪಂ ಚಿನ್ಮಯಂ ತತಃ | ಚಿತ್‍ಪ್ರಕಾಶಂ ಅಖಂಡೇಶಂ ಇಷ್ಟಲಿಂಗಾಕರಂ ದ್ವಯಂ || ಪಾದ್ಯಮಘ್ರ್ಯಂ ಆಚಮನಂ ಸರ್ವದೇವಸಮಾಹಿತಃ | ತದ್ರೂಪಂ ಸಲಿಲಂ ಸ್ವಾಹಾ ಮದೇವಸ್ನಾನಮಾಚರೇತ್ || ಏಕಮೇವಭವೇನ್ಮಾತ್ರಂ ಏಕಮಾತ್ರಂ ಭವೇನ್ಮನುಃ | ಏಕಮಂತ್ರಂ ಷಡಕ್ಷರಂ ಷಡಕ್ಷರಂ ಷಡಾನನಃ || ಷಡಾನನಃ ಭವೇತ್ತತ್ತ್ವಂ ತತ್ತಾ ್ವತೀತಂ ಅಸಂಖ್ಯಕಂ | ಯಥಾಚಿತ್ತಂ ತಥಾಕಾರಂ ತತ್ಫಲಂ ಸ್ವಶಿವಾರ್ಪಿತಂ ||'' ಇಂತೀ ಪರಿಯಲಿ ಜಲ ಗಂಧ ಪುಷ್ಪ ದೀಪ ಧೂಪ ನೈವೇದ್ಯ ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರ ಸರ್ವವು ತಾ ಮುಂತಾಗಿ ತನ್ನ ನಿಜದಲ್ಲಿ ನಿವೇದಿಸಲದೇ ಸದಾಚಾರ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಮ್ಮ ಶರಣ ಅಂತರಂಗದ ಅಷ್ಟವಿಧಾರ್ಚನೆಯ ಮಾಡಿ ಸುಜ್ಞಾನದೃಷ್ಟಿಯಿಂದ ನೋಡಲು ಆ ಜ್ಯೋತಿರ್ಲಿಂಗ ಒಂದೆರಡಾಯಿತ್ತು ಎರಡು ಮೂರಾಯಿತ್ತು; ಮೂರಾರಾಯಿತ್ತು; ಆರೊಂಬತ್ತಾಯಿತ್ತು, ಒಂಬತ್ತು ಹದಿನೆಂಟಾಯಿತ್ತು; ಹದಿನೆಂಟು ಮೂವತ್ತಾರಾಯಿತ್ತು; ಆ ಮೂವತ್ತಾರೆ ಇನ್ನೂರ ಹದಿನಾರಾಯಿತ್ತು. ಇನ್ನೂರ ಹದಿನಾರೆ ಸಾವಿರದೇಳನೂರಿಪ್ಪತ್ತೆಂಟಾಯಿತ್ತು. ಆ ಲಿಂಗಂಗಳೆ ಶರಣನ ರೋಮದ ಕುಳಿಯಲ್ಲಿ ನಿಂದು ಸರ್ವಾಂಗ ಲಿಂಗವಾಯಿತ್ತು. ಆ ಲಿಂಗ ಶರಣಂಗೆ ಚೈತನ್ಯವಾಯಿತ್ತು. ಆ ಶರಣನೆ ಲಿಂಗಕ್ಕೆ ಚೈತನ್ಯವಾಗಲು, ಶರಣಸತಿ ಲಿಂಗಪತಿಯೆಂಬೆರಡಳಿದು ಒಬ್ಬ ಶರಣನೆ ಉಳಿಯಲು ಆ ಶರಣನ ಪಾದೋದಕವೆ ಲಿಂಗಕ್ಕೆ ಅಭಿಷೇಕವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಕುಸುಮವೆ ಪ್ರಸಾದಪುಷ್ಫವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಗಂಧಾಕ್ಷತೆಯೆ, ತಾಂಬೂಲವೆ ಲಿಂಗಪ್ರಸಾದಗಳಾದವು. ಆ ಶರಣನ ಸನ್ನಿಧಿಯಲ್ಲಿ ಪ್ರಕಾಶವಾದ ಧೂಪದೀಪಂಗಳೆ ಲಿಂಗದ್ರವ್ಯಂಗಳಾಗಿ ಆ ಶರಣನ ಪಾದಪೂಜಾದ್ರವ್ಯವೆ ಲಿಂಗಪೂಜಾದ್ರವ್ಯವಾಗಿ ಆಚರಿಸುತಿರ್ದಲ್ಲಿ ಶರಣಸತಿ ಲಿಂಗಪತಿ ಎಂಬ ನ್ಯಾಯ ಒಂದಾಯಿತ್ತು. ಲಿಂಗ ಹಿರಿದು ಅಂಗ ಕಿರಿದು ಎಂಬ ನ್ಯಾಯ ಇಲ್ಲದೆ ಹೋಯಿತ್ತು_ ಅದೆಂತೆಂದಡೆ; ದೀಪದಿಂದ ದೀಪ ಹುಟ್ಟಿದಲ್ಲಿ, ಆವ ಆವ ದೀಪ ಮೊದಲೆಂಬುದು ಕಾಣದಂತೆ; ಸರ್ಪ ಕಚ್ಚಿದ ಮನುಷ್ಯನ ಅಂಗವಿಷ, ಒಂದರ ಠಾವಿನಲ್ಲಿದೆಯೆಂದು ಕುರುಹಿಡಬಾರದಂತೆ, ಲಿಂಗ ಪ್ರಾಣವಾದ ಶರಣಂಗೆ, ಶರಣ ಪ್ರಾಣವಾದ ಲಿಂಗಕ್ಕೆ ಭೇದವಿಲ್ಲ_ ಹರಗುರು ವಾಕ್ಯದಲ್ಲಿ ಶರಣ_ ಲಿಂಗಾದಾಚರಣೆ ಇಂತಿಹುದು. ಈ ಶರಣ_ ಲಿಂಗದೂಷಣೆಯ ಮಾಡುವ ದ್ರೋಹಿಗಳಿಗೆ ನಾಯಕನರಕ ತಪ್ಪದು, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ : ಸದ್ಯೋಜಾತಮುಖದಿಂದಾದ ಪೃಥ್ವಿ ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು ಅನಂತ ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಿಹುದು. ವಾಮದೇವಮುಖದಿಂದಾದಪ್ಪು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ, ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ, ಮಜ್ಜನ ನೀಡಿಸುತ್ತಿಹುದು. ಅಘೋರಮುಖದಿಂದಾದ ಅಗ್ನಿ ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು, ಕಾಷ*ದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು. ತತ್ಪುರುಷಮುಖದಿಂದಾದ ವಾಯು ಲಿಂಗಕ್ಕೆ ಜಪವ ಮಾಡುತ್ತಿಹುದು. ಈಶಾನ್ಯ ಮುಖದಿಂದಾದ ಆಕಾಶ ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು. ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿರ್ಪುದು. ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು. ಇಂತಪ್ಪ ಘನವಸ್ತು ಎರಡಾಗಿ ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ, ಅರ್ಪಿಸುವಾತನು ತಾನೇ. ಇಂತಪ್ಪ ಘನಲಿಂಗವು ಕರಸ್ಥಲದೊಳಗೆ ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವು ಮನದೊಳಗೆ ಮಾಡುವ ಲಿಂಗಾಂಗಿಯ ನೋಡಿ. ಆತನ ಸಮತೆ ಸಜ್ಜನವೆ ಸಮ್ಮಾರ್ಜನೆ, ಅಂತರಂಗದ ಶುದ್ಧವೆ ರಂಗವಾಲಿ, ಮನವ ನಿಲಿಸಿದ್ದೆ ಮಜ್ಜನ, ತನುವ ಮರ್ದಿಸಿದ್ದೆ ಗಂಧ, ಅಹಂಕಾರವಳಿದುದೆ ಅಕ್ಷತೆ, ಪೂರ್ವವಳಿದುದೆ ಪುಷ್ಪ, ಪ್ರಪಂಚನಳಿದುದೆ ಪತ್ರೆ, ದುರ್ಗುಣವಳಿದುದೆ ಧೂಪ, ಸುಗುಣವುಳಿದುದೆ ದೀಪ, ಅಷ್ಟಮದವಳಿದುದೆ ಆರೋಗಣೆ, ಅರಿಷಡುವರ್ಗವನಳಿದುದೆ ಆ ಹಸ್ತಕ್ಕೆ ಅಗ್ಘಣೆ, ವಿಷಯವಿಕಾರವನಳಿದುದೆ ಕರ್ಪುರ ವೀಳ್ಯ, ಸಪ್ತವ್ಯಸನವನಳಿದುದೆ ಆ ಸಹಭೋಜನ, ದಶವಾಯುವ ದೆಸೆಗೆಡಿಸಿದುದೆ ದಾನ -ಧರ್ಮ, ಹಸಿವು ತೃಷೆ ನಿದ್ರೆ ನೀರಡಿಕೆ ಜಾಡ್ಯ ಸ್ತ್ರೀಸಂಯೋಗ ಕಳವಳವಿಲ್ಲದಿದ್ದುದೆ ಜಪತಪ. ಪಂಚೇಂದ್ರಿಯ ಪ್ರಪಂಚು ಹೊದ್ದದಿದ್ದುದೆ ಪಂಚಮಹಾವಾದ್ಯ, ಪ್ರಕೃತಿ ಪಲ್ಲಟವಾದುದೆ ಪಾತ್ರಭೋಗ, ಗೀತ ಪ್ರಬಂಧ ಕರಣವೆ ಸಿಂಹಾಸನ ಏರುವ ಸುಖ, ವ್ಯಸನ ಚಂಚಲತೆಯನಳಿದುದೆ ಛತ್ರಚಾಮರ, ಶೀರ್ಷಶಿವಾಲ್ಯದೊಳಿಪ್ಪ ಪರಮಗುರು ಪರಂಜ್ಯೋತಿ ಪರಶಿವ ಪರಕ್ಕೆ ಪರವಾದ ಶ್ರೀ ಪಟ್ಟುಕಂಥೆಯ ಚೆನ್ನಬಸವೇಶ್ವರದೇವರ ಶ್ರೀಪಾದಾಂಗುಲಿಗೆ ಈ ವಚನವ, ಪುಣ್ಯಪುಷ್ಪವಮಾಡಿ ಅರ್ಪಿಸುವ ಕುಷ್ಟಗಿಯ ನಿರ್ವಾಣ ಕರಿಬಸವರಾಜದೇವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಇನ್ನಷ್ಟು ... -->