ಅಥವಾ

ಒಟ್ಟು 92 ಕಡೆಗಳಲ್ಲಿ , 27 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂಗವ ಅಂದ ಮಾಡಿಕೊಂಡು ತಿರುಗುವ ಭಂಗಗೇಡಿಗಳು ನೀವು ಕೇಳಿರೋ. ಅಂಗಕ್ಕೆ ಅಂದವಾವುದೆಂದರೆ: ಗುರುವಿಗೆ ತನುವ ಕೊಟ್ಟಿರುವುದೆ ಚೆಂದ, ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ, ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ. ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ. ಶಿವನ ಪಾದವ ಹೊಂದುವುದೆ ಚೆಂದ. ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು, ಒಂದು ಕಾಸನಾದರೂ ಪರರಿಗೆ ಕೊಡದೆ, ತಾನೇ ತಿಂದು, ನೆಲದಲ್ಲಿ ಮಡಗಿ, ಕಡೆಗೆ ಯಮನ ಕೈಯಲಿ ಸಿಲ್ಕಿ ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ. ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ, ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಪಟ ಬಾಲಸರವು ಕೂಡಿರ್ದಡೇನು ? ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ, ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ? ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ, ಮನಮುಟ್ಟದಿರ್ದಡೇನಾಯಿತ್ತು ? ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು? ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ, ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೇಶ.
--------------
ಮೋಳಿಗೆ ಮಾರಯ್ಯ
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು ತನು, ಮನ, ಧನವ ಮೀರಿ ಮಾತಾಡಬಲ್ಲಡೆ ಆತ ನಿಸ್ಸೀಮನು, ಆತ ನಿಜೈಕ್ಯನು. ತನು, ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. 216
--------------
ಬಸವಣ್ಣ
ಗುರು ಗುರುವೆಂದೇನೊ, ಪರಕ್ಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನೊ, ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನೊ, ಧನವ ಸವೆವನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನೊ, ಉಂಡು ಕಳಚಿ ಪ್ರಳಯಕ್ಕೊಳಗಾಗುವನ್ನಕ್ಕವೆ ? ಪಾದತೀರ್ಥ ಪಾದತೀರ್ಥವೆಂದೇನೊ, ಕೊಂಡು ಕೊಂಡು ಮುಂದೆ ಜಲವ ಮಾಡುವನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ ! ನಿಂದಡೆ ನೀನು ಕೆಡುವೆ ಬಂದಡೆ ನಾನು ಕೆಡುವೆ. ಎನ್ನ ತಂದೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಪ್ರಭುದೇವರು ತೋರಿದರೀಯನುವ !
--------------
ಚನ್ನಬಸವಣ್ಣ
ಎಲಾ ಶಿವಭಕ್ತನೇ ನೀ ಕೇಳು : ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ? ಅದು ಎಂತೆಂದರೆ : ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು : ತನುವ ಕೊಡಬೇಕು ಗುರುವಿಗೆ ; ಮನವ ಕೊಡಬೇಕು ಲಿಂಗಕ್ಕೆ ; ಧನವ ಕೊಡಬೇಕು ಜಂಗಮಕ್ಕೆ]. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಭಕ್ತನಾದಮೇಲೆ ಗುರುವಿಗೆ ತನುವ ನೀಡಬೇಕು, ಲಿಂಗಕ್ಕೆ ಮನವ ನೀಡಬೇಕು, ಜಂಗಮಕ್ಕೆ ಧನವ ನೀಡಬೇಕು. ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟು ಹೊಲಗೇರಿಯ ಹೊಕ್ಕು ಕುಲಗೆಟ್ಟವನೇ ಭಕ್ತ ಕಾಣಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನುವ ಗೆಲಲರಿಯದೆ, ಮನವ ಗೆಲಲರಿಯದೆ ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು. ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ, ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ. ಗುಹೇಶ್ವರಾ_ನಿಮ್ಮ ಶರಣ ಸಂಗನಬಸವಣ್ಣಂಗೆ, ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ, ಅನುವರಿದು ಅವರವರ ಒಡವೆಯ ಅವರವರಿಗಿತ್ತು ವಿನಯ ಮುಂದುಗೊಂಡಿಪ್ಪುದೇ ಸಹಜ. ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ, ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ. ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಳಕಿನ ಕಳೆಯಲ್ಲಿ. ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷಿ*ಯ ಸುಜ್ಞಾನದ ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ. ಕೂರ್ಮವಾಯುವ ನಿಲಿಸಿದರು, ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ. ಕೃಕರ ವಾಯುವ ನಿಲಿಸಿದರು ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ. ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು, ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ ನಿಷೆ*ಯಿಂದ ಭಾಷೆಯ ನುಡಿದು ದೃಢವಿಡಿದು ಅನ್ಯವ ಜರಿವಲ್ಲಿ. ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ, ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು, ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ ! ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು. ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು. ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ. ಆತನ ಪಾದಾಂಗುಷ*ಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ ಒಂದು ಕೋಟಿ ಫಲ ಸರಿಯಲ್ಲ. ಆತನು ಸತ್ಯವೆಂಬ ವೃಕ್ಷವನೇರಿ, ನಿಷೆ*ಯೆಂಬ ಕೊನೆಯ ಹಿಡಿದು ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ, ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ; ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ; ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ; ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ, ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ, ಉರಿಯುಂಡ ಕರ್ಪುರದಂತೆ ! ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ. ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ. ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂಧಿಯ ನಿಲವು ಮಹವ ನುಂಗಿದ ಬಯಲೊ !
--------------
ಮಾರುಡಿಗೆಯ ನಾಚಯ್ಯ
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ, ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ, ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ. ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸು ಕೂಡಲಸಂಗಮದೇವಾ. 432
--------------
ಬಸವಣ್ಣ
ತನುವ ಗುರುವಿಂಗಿತ್ತು ಗುರುವಾದನಯ್ಯಾ ಬಸವಣ್ಣನು ಮನವ ಲಿಂಗಕ್ಕಿತ್ತು ಲಿಂಗವಾದನಯ್ಯಾ ಬಸವಣ್ಣನು ಧನವ ಜಂಗಮಕ್ಕಿತ್ತು ಜಂಗಮವಾದನಯ್ಯಾ ಬಸವಣ್ಣನು ಇಂತೀ ತ್ರಿವಿಧವ ತ್ರಿವಿಧಕ್ಕಿತ್ತು ಸದ್ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಎಲ್ಲರಿಗೆ ಗುರುವಾದನಯ್ಯಾ ಬಸವಣ್ಣನು.
--------------
ಸಿದ್ಧರಾಮೇಶ್ವರ
ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ ಕರ್ತುಗಳಿಗೆ ಅರ್ಥವ ಸವೆಯದೆ ಸಟೆವೆರೆದು ಬಾಳುವ ಕುಟಿಲಗಳ್ಳರಿಗೆಂತಪ್ಪುದಯ್ಯಾ ಭಕ್ತಿ ? ಸತ್ಯ ಧನವ ನಿತ್ಯ ನಿತ್ಯವರಿದು ಮರೆದಿತ್ತಡೆ ಕರ್ತುವೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧನವ ಕೊಟ್ಟರೆ ದಾನಿಯಾದ, ತನುವ ಕೊಟ್ಟರೆ ವೀರನಾದ, ಮನವ ಕೊಟ್ಟರೆ ವಶಿಯಾದ. ಈ ತ್ರಿವಿಧದಿಂದ ಹೊರಗೆ ಕೊಡಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ. ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು ತನುವ ಗುರುವಿಗೆ ಅರ್ಪಿಸಬೇಕು, ಮನವ ಲಿಂಗಕ್ಕೆ ಅರ್ಪಿಸಬೇಕು, ಧನವ ಜಂಗಮಕ್ಕೆ ಅರ್ಪಿಸಬೇಕು. ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ ಶಿಷ್ಯ ಸುಬುದ್ಧಿಯಿಂದ 'ಗುರುವೇ ನೀನು ಅಧಿಕಾರನು ನಿನ್ನ ಪಾದ ಸೋಂಕಿತೆಂದು' ನುಡಿಯಲಾಗಿ, ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋಧಿಸಿ ಆತಂಗೆ ಕಟ್ಟಳೆಯ ಮಾಡಿ ಹೆಣ್ಣು ಹೊನ್ನು ಮಣ್ಣು ಮೂರು ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ, ಅವನು ವಿಕಾರಿಯಾಗಿ 'ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ ಸಮರ್ಪಣವೆಂದು' ನುಡಿಯಲಾಗಿ, ಬೋಧಿಸುವ ಆ ಗುರುವಿಂಗೆ ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು ಅನಾಚಾರಿಯಾಗಿ ಕಚ್ಚಡಕನಾಗಿ ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ ವೇಷಡಂಭಕರ ತೋರದಿರಯ್ಯಾ. ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ ಎತ್ತಣ ಸ್ವಯಂಭು ಎತ್ತಣ ನಿಜವು. ತೊತ್ತು ದೊರೆಯಾಗುವುದೇನಯ್ಯಾ ? ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು ? ಬ್ರಹ್ಮವೆತ್ತ, ತಾನೆತ್ತ, ಹೋಗತ್ತ. ಇಂಥ ಭ್ರಾಂತುಯೋಗಿಗಳು ಕೆಟ್ಟ ಕೇಡಿಂಗೆ ಕಡೆಯಿಲ್ಲ. ವಿದೇಹಿ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಇನ್ನಷ್ಟು ... -->