ಅಥವಾ

ಒಟ್ಟು 60 ಕಡೆಗಳಲ್ಲಿ , 22 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದ ನೋಡಿ, ಮುಖವ ನೋಡಿ, ಮೊಲೆಯ ನೋಡಿ, ಮುಡಿಯ ನೋಡಿ, ಕರಗಿ ಕೊರಗುವುದೆನ್ನ ಮನ, ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ. ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ. ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ, ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ
--------------
ಬಸವಣ್ಣ
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ ! ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
--------------
ಬಸವಣ್ಣ
ಲಿಂಗಪ್ರಸಾದವಂ ಚೆಲ್ಲಿ, ಜಂಗಮಪ್ರಸಾದದ ಸುಯಿಧಾನಿಯೆಂಬ ಅಂಗಹೀನ ಮೂಕೊರೆಯ ಹೊಲೆಯನ ಮುಖವ ನೋಡಲಾಗದು ! ಅದೇನು ಕಾರಣವೆಂದಡೆ : ಗುರುವಾವುದು ? ಲಿಂಗವಾವುದು ? ಜಂಗಮವಾವುದು ? ಇಂತೀ ತ್ರಿವಿಧವು ಒಂದಾದ ಕಾರಣ ಏಕಮೂರ್ತಿಸ್ತ್ರಯೋ ಭಾಗಃ ಗುರುಲಿಂಗಂತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದುದಾಗಿ, ಒಂದಬಿಟ್ಟೊಂದ ಹಿಡಿದ ಸಂದೇಹಿ ಹೊಲೆಯನ ಕಂಡರೆ ಹಂದಿ ನಾಯ ಬಸುರಲ್ಲಿ ಹಾಕದೆ ಬಿಡುವನೇ ? ನಮ್ಮ [ಉರಿಲಿಂಗಪೆದ್ದಿಪ್ರಿ]ಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ ಗೋಳಕ ಕಟಿ ಭಿನ್ನವಾದಲ್ಲಿ ಒಡನೆ ಪ್ರಾಣವಂ ಬಿಡು[ವುದ]ಲ್ಲದೆ ಬಂಧಿಸಿ ಧರಿಸಿಕೊಂಡನಾದಡೆ, ಜನ್ಮಜನ್ಮಾಂತರ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ, ಮುನ್ನಾದುದಕ್ಕೆ ನಿನ್ನ ಮನ ಬಂದಂತೆ ಮಾಡು. ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಲಿಂಗವೆ, ಪರವಧುವೆನ್ನ ಹೆತ್ತತಾಯಿ ಸಮಾನ. ಇದ್ದವರೆನ್ನ ಸಹೋದಯಸ್ತ್ರೀಯ ಸಮಾನ. ಪಣ್ಯಾಂಗನೆಯರ ಸಂಗವೆನಗೆ ನಾಯಮಾಂಸ ನರರಡಗಿನ ಸಮಾನ. ದಾನವರ ಸಂಗವೆನಗೆ ಸೂಕರನ ಮಲದ ಸಮಾನ. ಇಹಿಂಗೆಂದು ಭಾಷೆಯ ಮಾಡಿ, ತಿರುಗಿ ಆಸೆ ಮಾಡಿ ಕೂಡಿದೆನಾದಡೆ, ನಿಮ್ಮ ಪ್ರಸಾದಕ್ಕೆ ಬಾಯಿದೆರೆಯನು. ತನು ಲೋಭದಿಂದ ಕೂ[ಡಿದೆನಾದ]ಡಾ ತನುವ ದಿಗುಬಲಿಗೊಡುವೆನು, ಕೊಡದಿರ್ದಡೆ, ಧರೆ ಚಂದ್ರಾರ್ಕರುಳ್ಳನ್ನ ಬರ ಅರಸು ನರಕದಲ್ಲಿಕ್ಕು. ಸೂಕರ ನಾಯಿ ವಾಯಿಸ ಗಾರ್ದಭ ಬಸುರಲ್ಲಿ ಬರಿಸು. ಬರಿಸದಿದಡೆ ನಿಮಗೆ ನಿಮ್ಮಾಣೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು, ತಂದೆಯದು ಒಂದು ದಿನದ ಶುಕ್ಲ, ತಾಯಿಯದು ಒಂಬತ್ತು ತಿಂಗಳದ ಶೋಣಿತವು ಕೂಡಿ, ಗಟ್ಟಿಗೊಂಡು ಪಿಂಡವಾದ ಈ ಶರೀರದ ಕಷ್ಟ ಎಷ್ಟಂತ್ಹೇಳಲಿ, ಆ ತಾಯಿಯ ಉದರದಲ್ಲಿರ್ದ ಆ ಪರಿಯೆಂತೆಂದರೆ : ಕದ್ದ ಕಳ್ಳನ ಹೆಡಗುಡಿಯಕಟ್ಟಿ ಹೊಗಸಿದ ಸೆರೆಮನೆಗಿಂತ ಸಹಸ್ರ ಇಮ್ಮಡಿ ಉಪದ್ರವಾಯಿತು. ಎಡಬಲ ಮೂತ್ರದ ಹಡಕಿಯ ಬಾಧೆ, ನಡುವೆ ಕಡಿವ ಜಂತುಗಳ ಬಾಧೆ, ಕುದಿವ ಜಠರಾಗ್ನಿಯ ಬಾಧೆ, ಏರಿಳಿವ ಶ್ವಾಸಮಾರುತನ ಬಾಧೆ, ಹೆತ್ತವ್ವ ನುಂಗಿದ ತುತ್ತು ಅಳನೆತ್ತಿಗೆ ತಗಲಲು ಹತ್ತುಸಾವಿರ ಸಿಡಿಲು ಹೊಡೆದಂತಾಯಿತು. ಮೇಲೆ ಕುಡಿವ ನೀರಿನಿಂದಾದ ಸಂಕಟ ಹೇಳಲಳವಲ್ಲ. ಆ ತಾಯಿ ನಡಿವ ನುಡಿವ ಆಡುವ ಹಾಡುವ ಓಡುವ ಕೂಡ್ರುವ ಆಕಳಿಸುವ ಮಲಗುವ ಏಳುವ ಬೀಳುವ ಮೈಮುರಿಯುವ ಇಂತು ಅನಂತ ಬಾಧೆಯೊಳಗೆ ಸಾಯದ ಕಾರಣವೇನು ? ಕರ್ಮನಿವೃತ್ತಿ ಇಲ್ಲದಾಗಿ. ಇಂತು ದುಃಖದಲ್ಲಿ ಒಂಬತ್ತುತಿಂಗಳು ತುಂಬಿ ಸರ್ವ ಅವಯವಂಗಳ ಬಲಿದು ಎಚ್ಚರಹುಟ್ಟಿ ಜಾತಿಸ್ಮರತ್ವವ ತಿಳಿದು, ಕೆಟ್ಟೆ ಕೆಟ್ಟೆನೆಂದು ತನ್ನ ಮುನ್ನಿನ ಕರ್ಮಕ್ಕೆ ನಡುನಡುಗಿ ಕಡೆಗಾಣುವ ಪರಿಯೆಂತೆಂದು ಚಿಂತಿಸಿ, ಸರ್ವರಿಗೆ ಶಿವನೇ ದೈವವೆಂದು ಸರ್ವರ ಪಾಪಪೊರೆವಾತನೆಂದು ತಿಳಿದು, ಈ ಭವಬಾಧೆ ಬಿಡಿಸಿಕೊಳ್ಳುವುದಕ್ಕೆ ಶಿವಧೋ ಶಿವಧೋ ಶಿವಧೋ ಎಂದು ಮೊರೆಯಿಡುವ ಸಮಯಕ್ಕೆ ವಿಷ್ಣು ಪ್ರಸೂತಿಯ ಗಾಳಿಬೀಸಲು ತಲೆಮೇಲಾಗಿದ್ದ ಶಿಶುವು, ಅಗಸ ಅರವಿಯ ಹಿಂಡಿದಂತೆ, ಹೆಡಕ್ಹಿಡಿದು ಮುರಿದೊತ್ತಿ ತಲೆಕೆಳಗೆ ಮಾಡಿ ಯೋನಿದ್ವಾರದಾ ಹೊರಯಕ್ಕೆ ನೂಕಲು, ಅಕ್ಕಸಾಲಿಗನು ಕಂಬೆಚ್ಚಿನಲ್ಲಿಕ್ಕಿ ತೆಗೆದ ಚಿನ್ನದ ಸಲಾಕೆಯಂತಾಯಿತಲ್ಲಾ. ಮುಂದೆ ಭೂಸ್ಪರ್ಶನದಿಂದೆ ಹಿಂದಿನ ಜಾತಿಸ್ಮರತ್ವವ ಮರೆತು, ತನ್ನ ಮಲಮೂತ್ರದಲ್ಲಿ ತಾನೆ ಹೊರಳ್ಯಾಡಿ, ಅನಂತದುಃಖವಂ ಬಡೆದು, ಬಾಲತ್ವನೀಗಿ ಯವ್ವನಬರಲು, ತಾನು ಹ್ಯಾಂಗಾದೆನೆಂದು ತಿಳಿಯದೆ ತಾ ಹಿಂದೆ ಬಂದ ಮೂತ್ರದ ಕುಣಿಗೆ ಮನವಿಟ್ಟು ಬಾಯಿದೆರೆದು ಕುದಿಕುದಿದು ಕಿಸುಕುಳದ ಕೀವು ರಕ್ತವೊಸರುವ ಹಸಿ ಘಾಯಿ ಹಳದೊಗಲಿಗೆ ಸೋತು ಮುಪ್ಪಾಗಿ ಕೆಮ್ಮು ಕ್ಯಾಕರಿಕೆ ವಾತ ಪಿತ್ಥ ಶ್ಲೇಷ್ಮಾದಿ ಅನಂತ ರೋಗಾದಿಗಳಿಂದ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ, ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶ್ವಾನ ಬೊಗಳುವುದೇ ಸುಳುಹುಕಾಣದೆ ? ಅಳಿದುಳಿದು ಗುರುವಿನಿಂದುದಿಸಿಬಂದೆವೆಂದು ನುಡಿದು ಬಂದ ಬಳಿಕ ನುಡಿನಡೆಯೊಳೊಪ್ಪಿ ಕಾಣಿಸಿಕೊಳ್ಳಬೇಕಲ್ಲದೆ ತಮದ ಮರೆಯಲ್ಲಿ ಮಡುಗಿ ಇತರರ ಗುಣವನರಸಿ ತಂದು ಆಡುವರು. ಅದಲ್ಲದೆ ಕಾಣದೆ ಕಂಡೆವೆಂದು ಹುಸಿ ನೇವರಿಸಿ ನುಡಿವ ಕಸಮೂಳರ ಕೆಡಹಿ ಬಸುರಲ್ಲಿ ಮಲವ ತುಂಬುವರು ಕಾಲನವರು. ಈ ಶ್ವಾನನ ಬೊಗಳಿಕೆಗೆ ಕಡೆಯಾದ ಕರ್ಮಿಗಳ ನೆನೆಯಲಾಗದು ಕಾಲತ್ರಯದಲ್ಲಿ ಕಂಡ ಮಹಿಮರು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್ ಅನಿಂದಿತಮ£õ್ಞಪಮ್ಯಮಪ್ರಮೇಯಮನಾಮಯಮ್ ಎಂದು ವೇದಾಗಮಗಳು ಹೇಳಿದ ಹಾಗೆ ಶಿವಶಿವಾ ಹರಹರಾ ಎಂದೆನ್ನದೆ ಭೃಗು ಶಾಪದಿಂದ ಭವಕ್ಕೆ ಬಂದು ಸತ್ತು ಕೆಟ್ಟು ಹೋದ. ದಶರಥರಾಯನು ನಾಚಿಕೆಯಿಲ್ಲದೆ ರಾಮ ರಾಮ ಎಂದು ನೆನೆದರೂ, ಆ ರಾಮ, ರಾವಣನ ಕೊಂದ ಬ್ರಹ್ಮಹತ್ಯಾದೋಷಕ್ಕೆ ಅನೇಕ ಶಿವಲಿಂಗಗಳ ಪ್ರತಿಷೆ*ಯ ಮಾಡಿ ಪೂಜಿಸಿದ. ಹರಿಯು ಆ ಮಹಾಲಿಂಗವ ನೆನೆವುದಕ್ಕೆ ನಾಲಗೆ ಮೂಗ ನಂಜುತ್ತ ಇಹನು. ಕೃಷ್ಣನ ಅಂಗಾಲಕಣ್ಣ ಬೇಡನೆಚ್ಚು ಕೊಂದನೆಂದರೆ, ನಾಚದೆ ಪರಿಣಮಿಸುತ್ತಿಹರು. ನಾರಸಿಂಹನವತಾರವ ಶರಭರುದ್ರ ತೀರ್ಚಿಸಿದನೆಂದರೆ ಉರಿದೇಳುತ್ತಿಹರು. ಗೋವಳರೊಡನುಂಡಯೆಂದರೆ ಪರಿಣಮಿಸಿ ಸಂತೋಷವಹರು. ಆ ಹರಿ ರಾಮೇಶ್ವರದೇವರ ಪ್ರಸಾದವ ಕೊಂಡನೆಂದರೆ ಅವಮಾನಿಸುತ್ತಿಹರು. ಸತ್ತು ಕೆಟ್ಟು ಹುಟ್ಟಿದ ಅಜ್ಞಾನಿ ವಸುದೇವನ ಮಗ ಹರಿಯೆಂದರೆ ನಲಿದುಬ್ಬುವರು. ಆ ಹರಿ ಮಹಾದೇವನ ಮಗನೆಂದರೆ ಸಿಡಿಮಿಡಿಗೊಂಬರು. ಹಲವು ಗಂಡರ ನೆರೆದ ಕುಂತಿಯ ಕಾಲಿಗೆ ಹರಿ ಎರಗಿದನೆಂದರೆ ನಲಿದುಬ್ಬಿ ಕೊಂಡಾಡುವರು. ಆ ಹರಿ ಕಾಮಿತಫಲದಾಯ[ಕ]ನಾದ ಶಿವನ ಶ್ರೀಪಾದಕ್ಕೆ ನಯನಕಮಲಮನರ್ಪಿಸಿ ಚಕ್ರಮಂ ಪಿಡಿದನೆಂದರೆ ಚಿಂತಿಸಿ [ಕರ]ಕರಸುತ್ತಿಹರು. ದ್ವಾರವತಿ ನೀರಿಲಿ ನೆರೆದಾಗ, ಕೃಷ್ಣನ ಹದಿನಾರುಸಾವಿರ ಸ್ತ್ರೀಯರಂ ಹೊಲೆಬೇಡರು ಸೆರೆಯನೊಯ್ದುದಕ್ಕಾಗಿ ಹೀನಜಾತಿಯ ಬಸುರಲ್ಲಿ ಉತ್ತಮಸ್ತ್ರೀಯರು ಹುಟ್ಟುವರೆಂದು ನಲಿದಾಡುವರು. ಮಹಾಲಕ್ಷ್ಮಿ ಸರ್ವರೊಡೆಯ ಶಿವನ ದಾಸಿಯೆಂದರೆ ಅಲಗು ತಾಕಿದಂತೆ ನೋವುತಿಹರು. ಶಿವಲಿಂಗವ ತಪಧ್ಯಾನದಿಂದರ್ಚಿಸಿ ಪೂಜಿಸಿ ಪಡೆದರು ಏಕಾದಶರುದ್ರರಾದಿಯಾದ ರುದ್ರಗಣಂಗಳು. ಬ್ರಹ್ಮವಿಷ್ಣುರುಗಳು ಇಂದ್ರಾದಿ ದಿಕ್ಪಾಲರು ರವಿಚಂದ್ರಾದಿಗಳು ಶಿವನ ಪೂಜಿಸಿ ಕಾಮಿತಫಲಪದವಿಯ ಪಡೆದರಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಮನೆಯೆನ್ನದು ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತಜಂಗಮದೊಡನೆ ಸಹಭೋಜನವ ಮಾಡಿದಡೆ ಕುನ್ನಿ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭವಿವಿರಹಿತನಾಗಿ ಭಕ್ತನಾದ ಬಳಿಕ ತನ್ನ ಮನೆಯಲ್ಲಿ ಮಾಡಿದ ಪಾಕವ ಭವಿಗಿಕ್ಕಬಹುದೆ ? ಇಂತಪ್ಪ ಯುಕ್ತಿಶೂನ್ಯರಿಗೆ ಪ್ರಸಾದವಿಲ್ಲ; ಮುಕ್ತಿ ಎಂತಪ್ಪುದೊ ? ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ! ಕೂಡಲಚೆನ್ನಸಂಗಮದೇವಯ್ಯ ನಿಮ್ಮಾ ಪಥವನರಿಯದ ಅನಾಚಾರಿಗಿನ್ನೆಂತಯ್ಯ ?
--------------
ಚನ್ನಬಸವಣ್ಣ
ನಂಜು ಅಮೃತವಾದುದ ಕಂಡೆ. ಮಂಜೂರ ಸುಟ್ಟುದ ಕಂಡೆ. ಮಂಜಿನ ಮನೆ ಕರಗಿ ಕುರುಹಿಲ್ಲದೆ ನಿಷ್ಪತ್ತಿಯಾದುದ ಕಂಡೆ. ಬಂಜೆಯ ಬಸುರಲ್ಲಿ ನಂಜುಗೊರಳನೆಂಬ ಶಿಶುಹುಟ್ಟಿ ಅಂಜದೆ, ಅರುವತ್ತಾರು ಕೋಟಿ ದೈತ್ಯರ ಕೊಂದುದ ಕಂಡೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ! ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು! ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ, ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ ನಿರ್ದೋಷಿಯಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಿಂಡಬ್ರಹ್ಮಾಂಡವ ಗರ್ಭೀಕರಿಸಿಕೊಂಡು ಒಳಹೊರಗೆ ಪರಿಪೂರ್ಣವಾಗಿ, ಅಖಂಡತೇಜೋಮಯವಾಗಿಪ್ಪ ನೋಡಾ. ತನ್ನೊಡನೆ ಒಬ್ಬ ಭಾಮಿನಿಯು ಪುಟ್ಟಿದಳು. ಆ ಭಾಮಿನಿಯ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ, ಅವರ ಸಂಗವ ಮಾಡಿ, ನಿಶ್ಚಿಂತ ನಿರಾಕುಳದಲ್ಲಿ ನಿಂದು, ನಿರ್ವಯಲಲಿಂಗವನಾಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ. ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ, ಎಮ್ಮಪ್ಪಗೆ ಮದುವೆಯ ಮಾಡಿದರು. ಎನ್ನ ಗಂಡನ ಮನೆಯೊಡವೆಯನೆನ್ನ ಉಗುರುಕಣ್ಣಿನಲ್ಲೆತ್ತಿ ಒಗತನವ ಮಾಡುವೆನು. ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು. ಎನ್ನ ಗಂಡ ಆಳಲಿ ಆಳದೆ ಹೋಗಲಿ ಪತಿಭಕ್ತಿಯ ಬಿಡೆ ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹಿಂದಣ ಜನ್ಮದಲ್ಲಿ ಹಲು ಸುಕೃತಂಗಳಂ ಮಾಡಿಕೊಂಡ ದೆಸೆಯಿಂದ ನೀವು ಹುಟ್ಟಿದಿರಯ್ಯ. ನೀವು ಮುಂದಕ್ಕೆ ಶಿವಭಕ್ತಿ ದೊಡ್ಡಿತ್ತೆಂದು ನಂಬಲರಿಯದೆ ಭ್ರಮಿತರಾಗಿ ಘನತರಸುಖವಂ ನೀಗಿ ಭಕ್ತಿಪಾಶದೆಶೆಯೊಳು ಇರಲೊಲ್ಲದೆ ಹಿಂದಣ ಅರಿಕೆಯಂ ಮರೆದು ಮುಂದಣ ಅರಿಕೆಯಂ ತೊರೆದು ಕಂಡ ಕಂಡ ಹಂದಿಯೊಳಾಡಿ ನರಕವ ತಿಂಬಂತೆ ಬೆಂದ ಸಂಸಾರವೆಂಬ ಹೃದಯಕೂಪದೊಳು ಮುಳುಗಾಡುವ ಲೋಕದ ಮಂದಿಯಂತೆ ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದೆಂಬ ಭಿನ್ನಭಾವದೊಳು ಮನಸಂದು, ಹೆಂಡರಿಗಾಗಬೇಕು ಮಕ್ಕಳಿಗಾಗಬೇಕೆಂಬ ಭಂಡ ಮೂಕೊರೆಯ ಮೂಳಹೊಲೆಯರಿರಾ, ನೀವು ಕೇಳಿರೋ. ನೀವು ಶಿವಭಕ್ತರ ಬಸುರಲ್ಲಿ ಹುಟ್ಟಿ ಫಲವೇನು? ಮಾತಿಂಗೆ ಲಿಂಗವ ಕಟ್ಟಿದಿರಿ, ವರ್ತನೆಗೊಬ್ಬ ಗುರುವೆಂಬಿರಿ. ಆ ಗುರು ತೋರಿದ ಚರಲಿಂಗಕ್ಕೆ ಬೋನವಿಲ್ಲ, ಆಚಾರವಿಲ್ಲ. ಕೀಳು ದೈವದ ಬೆನ್ನೊಳು ಹರಿದಾಡುವ ನರಕಿಯ ಯಮನವರು ಕೊಂಡೊಯ್ದು ನಡುವಿಂಗೆ ಗಿರಿಕಿಯನಿಕ್ಕಿ ಮೆಟ್ಟಿ ಮೆಟ್ಟಿ ಬಿಗುವಾಗ ಹಲುಗಿರಿಕೊಂಡು ಹೋಗುವ ಮಾನವರು ಜಗದರಿಕೆಯಲ್ಲಿ, ನರಕದಲ್ಲಿ ಬೀಳುವದ ಕಂಡು ನಗುತಿರ್ದ ಎನ್ನೊಡೆಯನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->