ಅಥವಾ

ಒಟ್ಟು 85 ಕಡೆಗಳಲ್ಲಿ , 28 ವಚನಕಾರರು , 75 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ ಸರ್ವವೆಲ್ಲವು ಲಿಂಗಾಯತಸಂಬಂಧವಾಗಿ, ಭವಿಸಂಗ, ಭವಿನಿರೀಕ್ಷಣೆ, ಭವಿ ಅಪೇಕ್ಷೆ, ಭವಿದ್ರವ್ಯಂಗಳನೊಲ್ಲದೆ, ಶಿವನನರಿವರಲ್ಲಿ, ಶಿವನ ಪೂಜೆಯ ಮಾಡುವರಲ್ಲಿ, ಶಿವಮೂರ್ತಿಧ್ಯಾನದಿಂದ ಶಿವಲಿಂಗಾರ್ಚನೆಯ ಮಾಡುವರಲ್ಲಿ, ಶಿವಪ್ರಸಾದವ ಕಾಡಿ ಬೇಡಿ ತಂದು ಒಡೆಯನಿಗಿತ್ತು ಆ ಪ್ರಸಾದವ ಏಲೇಶ್ವರಲಿಂಗಕ್ಕೆ ಕೊಟ್ಟ ಆ ವ್ರತಭಾವಿಗೆ ನಮೋ ನಮೋ ಎನುತಿದ್ದೆ.
--------------
ಏಲೇಶ್ವರ ಕೇತಯ್ಯ
ಬೇಡ ಬಿಲ್ಲ ಹಿಡಿದು, ರೂಡ್ಥಿಯಲ್ಲಿ ತಿರುಗಾಡುತ್ತಿರಲಾಗಿ, ಬೇಡನ ಬಿಲ್ಲ ಬೇಡಿ ಕಾಡಿಹರೆಲ್ಲರು. ಆ ಬಿಲ್ಲು ರೂಡ್ಥಿಯದಲ್ಲ, ಇನ್ನಾರು ಕೊಟ್ಟರೊ. ಕೊಟ್ಟವರ ಕೊಂಡು, ಕೊಡದವರ ಹಿಂಗಿ, ಬಟ್ಟೆಯ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು, ಮಾಡಿದರು ಮಾಡಿರಿ ಬೇಡಿ ಮಾಡಲಾಗದು. ಬೇಡಿ ಮಾಡಿದ ಭಕ್ತಿ ಈಡಾಗಲರಿಯದು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಹಿಂದನರಿಯದೆ, ಮುಂದನರಿಯದೆ, ಈಗನರಿಯದೆ, ಆಗಿ ಬಂದವರೆಂದು ಅರಿದು ಮರೆದು ಹರಿದು ಮಾಡುವ ಕುರಿಗಳಿಗೆತ್ತಣ ದೇವತ್ವವಯ್ಯಾ! ಬರಿಯ ಭ್ರಾಂತಿಗಳಿಗೆತ್ತಣ ಭಕ್ತತ್ವವಯ್ಯಾ! ಮಾಡಲರಿಯದೆ ಮಾಡುವರು, ನೀಡಲರಿಯದೆ ನೀಡುವರು. ಬೇಡಿ ಉಣಲರಿಯದೆ ಬೇಡಿ ಉಂಬುವ ನಾಡಮಾನವರ ನಡೆನುಡಿಗತ್ತತ್ತಲಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೂರ್ವವನಳಿದು ಪುನರ್ಜಾತನಾದೆನೆಂದು ಪೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ, ನಿಮ್ಮ ಅಂಗ, ಆ ಈಶ್ವರದೇವರು ಹುಟ್ಟಿಸಿದ ಮೂರೂವರೆ ಮೊಳದ ಸ್ಥೂಲಕಾಯವಾಗಿ ಜೀಕಿತ್ತು. ಬ್ರಹ್ಮಕಲ್ಪನೆಯ ಮಾನವನು ಜಾಜಿಯನಾಗಿಸಿ ಮರುವಾದೆ ಮನುಜರ ಕೈಯಲ್ಲಿ ಅನ್ನ ಉಣ್ಣದೆ, ಅಂಗಿಯ ಕೊಳ್ಳದೆ, ಸ್ವರ್ಗ-ಮತ್ರ್ಯ-ಪಾತಾಳ ಇವು ಮೂರು ಲೋಕವನು ಬಿಟ್ಟು, ಬೇರೊಂದು ಸ್ಥಳದಲ್ಲಿ ಇರಬಲ್ಲರೆ, ಆತನಿಗೆ ಪೂರ್ವವನಳಿದ ಮನುಜೋತ್ತಮನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗದ ಈಶ್ವರದೇವರು ಹುಟ್ಟಿಸಿದ ಮೂರುವರೆ ಮೊಳದ ಸ್ಥೂಲಕಾಯವನು ಮುಂದಿಟ್ಟುಕೊಂಡು ಹಲವು ಜಾತಿಗಳ ನೆಲೆಯನರಿಯದೆ, ಮನೆ ಮನೆಯಲ್ಲಿ ಕಾಡಿ ಬೇಡಿ ಉಂಬುವ ಪಾಷಂಡಿಗಳ ದೀಕ್ಷೆಯನು ಮಾಡಿಕೊಂಡು, ಕಾವಿಯರಿವೆಯನ್ಹೊದ್ದುಕೊಂಡು ನಾನು ಪೂರ್ವವನಳಿದು ಪುನರ್ಜಾತನಾದೆನೆಂದು ಪೂಜೆಗೊಂಬುವ ಜಾತಿಶ್ರೇಷ* ಅಜ್ಞಾನಿಗಳಿಗೆ ಜಾತಿಸೂತಕ ಉಳಿಯಿತೆ ? ಸುಜ್ಞಾನಿಗಳು ಹೋಗಿ ಅವರಿಗೆ ಶರಣಂ ಕೊಟ್ಟರೆ, ಅವರಾ ಮನೆಯಲ್ಲಿ ಅನ್ನವನುಂಡರೆ, ಅಗ್ನಿಯ ಕಂಡರೆ, ಮೊದಲೆ ತಾವೇ ಭೋಗಿಸಿ ಮೇಲೆ ಮಲಮೂತ್ರವ ಭುಂಜಿಸಿದಂತೆ ಆಯಿತ್ತು ಎಂದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಆಡಿ ದಣಿವರಿಯವಯ್ಯಾ ಎನ್ನ ಕಾಲುಗಳು, ಮಾಡಿ ದಣಿವರಿಯವಯ್ಯಾ ಎನ್ನ ಕೈಗಳು, ನೋಡಿ ದಣಿವರಿಯವಯ್ಯಾ ಎನ್ನ ಕಂಗಳು, ಹಾಡಿ ದಣಿವರಿಯದಯ್ಯಾ ಎನ್ನ ಜಿಹ್ವೆಯು. ಕೇಳಿ ದಣಿವರಿಯವಯ್ಯಾ ಎನ್ನ ಶ್ರೋತೃ, ಬೇಡಿ ದಣಿವರಿಯವಯ್ಯಾ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣರೊಲವೆ ಎನ್ನಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ, ಗುರುಮುಟ್ಟಿ ಗುರುವಾದೆವೆಂದು ಬಿಟ್ಟು ಹಿಡಿದು ಹಿಡಿದು ಬಿಟ್ಟು ಹೊಟ್ಟೆಯ ಹೊರೆಯಲೋಸುಗ ನಂಟುಬಿಚ್ಚಿ ಗಂಟಿಕ್ಕುವ ತುಂಟು ಹೊಯ್ಮಾಲಿಗಳನೆಂತು ಶರಣರೆನ್ನಬಹುದು ? ಕಾಸಿನಾಸೆಗೆ ದೇಶವ ತಿರುಗಿ, ಬೇಸರಿಲ್ಲದೆ ಬೇಡಿ ಬೇಡಿ ಘಾಸಿಯಾಗಿ, ಮುಂದಣ ಹೇಸಿಕೆ ಕಂಡು ಕಂಡು ಬೀಳುವ ಖೂಳ ಕುಟಿಲ ಕಾಳಮಾನವರನೆಂತು ಶರಣರೆನ್ನಬಹುದು ? ಬಾಳಿ ಬದುಕಲರಿಯದೆ ಕೇಳಿ ಮೇಳವ ಮಾಡಿ ಹಾಳುಗೋಷಿ*ಯಕಲಿತು, ಕಲಿಯುಪಾಧಿಯೊಳು ನಿಂದು ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವನರಿಯದೆ ಹಿರಿಯರೆನಿಸಿಕೊಂಡು, ಹೋಗಿ ಬಂದುಂಬ ಕುರಿಗಳನೆಂತು ಶರಣರೆನ್ನಬಹುದು ? ನಮ್ಮ ಗುರುನಿರಂಜನ ಚನ್ನಬಸವಲಿಂಗದಂಗವೆಂಬ ಘನಪ್ರಸಾದವ ಹಿಂಗದಿರ್ದ ತ್ರಿವಿಧಶೂನ್ಯಶರಣರಂತಲ್ಲದ ಮರುಳುಗಳನೆಂತು ಶರಣರೆನ್ನಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ? ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆ ಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಾಡಿಗ ಡಿಂಬುಗಂಗೆ ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ, ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ, ಈಡಾಡಿದ ಕೂಳಂಬಲಿಯನಾಯ್ದು ಕುರುಕುವ ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ, ಕೂಡಲಸಂಗಮದೇವರ ನೆರೆನಂಬುವುದೆಲವೊ.
--------------
ಬಸವಣ್ಣ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು, ಕಾವಿ ಕಾಷಾಯಾಂಬರವ ಹೊತ್ತು, ಸರ್ವಕಾರ್ಯದಲ್ಲಿ ಶ್ರೇೀಷ*ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ ತೊನ್ನ ಹೊಲೆಮಾದಿಗರ ಸಂಗಮಾಡಲಾಗದು, ಅವರ ಪ್ರಸಂಗವ ಕೇಳಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷಾ*ಪರವಾಗಿರಬೇಕು. ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ, ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಆಡಿನೊಳಗಿರುವ ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, [ಡಂ]ಬ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು, ಮಠ ಗುಡಿಯ ಕಟ್ಟಿಸಬೇಕೆಂದು, ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು, ಮದುವೆ ಅಯ್ಯಾಚಾರವ ಮಾಡಬೇಕೆಂದು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು, ಪುರಾಣಗಳ ಹಚ್ಚಿಸಬೇಕೆಂದು, ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ, ಅರಸರ ಮದದಂತೆ ಗರ್ವದಿಂದ ಹೆಚ್ಚಿ, ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ, ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು, ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು ಅನಂತ ಮಾತುಗಳನಾಡುತ್ತ, ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು, ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ, ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು, ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ. ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ದಶಕರ ಶೂನ್ಯ ಪಂಚಕರ ಭಿಕ್ಷವ ಬೇಡಿ, ಆನಂದದಲಾಡಿ, ಪಾಪಾಂಧಕ್ಷಯಮಂ ಮಾಡಿ, ಅನುಶ್ರುತವೇರಿ, ಷಡುರುತಂ ಪೆರ್ಚಿ, ಮಲಕುವಿಡಿದು, ವೀಥಿವೀಥಿಗೊಂಡು ಪೋಗಿ ತೋರುವವರ ವಂಕಮಂ ಪೊಕ್ಕು, ಆ ಉಭಯವತಿಯೆಂಬ ಶಂಕರಾನಂದರಸ ಉಕ್ಕುತ್ತಿದ್ದು , ಎಸಗೆ ಸಮನಿಸುಗೆ ನಯಸರವ ಕಿವಿಯಲಾಂತು, ನಂದಿನಂದಿಯೆಂದಾನಂದದಿಂದುಂಡು, ಕೈಯ ಮಂಡೆಗೆ ಹತ್ತಿಸಿ, ಮುಳ್ಳಕಲ್ಲು ಮುಂಜಾರಿನಲ್ಲಿರಿಸಿ, ಕರ ಹೇಸಿ, ಏಳೂರವರು ಲಾಲಿಸಿ, ಕೇಳಲಮ್ಮದೆ ಬೆಚ್ಚುತ್ತ ಬೆದರುತ್ತ ಬಿದ್ದರು. ಮುಚ್ಚುಮರೆಯ ಅಚ್ಚುಗವಿಕ್ಕು ಪ್ರ...... ......ಯಲಳಿದ ಗುರು ಗೌರವಂ ತಂದಾರಾಧಿಸಿ, ವಿರಾಜಿಸಿದ ಶಂಕರಾ ಜಂಗಮ ಶಂಕರಾನಂದರಸನಯ್ಯಾ, ತ್ರಿಲೋಚನಶಂಕರಾ.
--------------
ತ್ರಿಲೋಚನ ಶಂಕರ
ಬೇಡದಿರು ಶಿವಭಕ್ತರಲ್ಲದವರ, ಬೇಡಿ ಬೋಡಾಗದಿರು, ಬೇಡಿದಡೆ ಹುರುಳಿಲ್ಲ. ಬೇಡಿದ ಕೈಗೆ ಕಡೆಯಿಲ್ಲದೆ ಕೊಡಬಲ್ಲರು ಕೂಡಲಸಂಗನ ಶರಣರು.
--------------
ಬಸವಣ್ಣ
ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಬೋಸರಿಸಲು. ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಸ್ತುತಿಯಿಸಲು. ಅಯ್ಯಾ, ನೀ ನಿತ್ಯನೆಂದು ಮರೆವೊಕ್ಕಡೆ ಸೀಯದಂತಿಪ್ಪರೆ? ಶಿವನೆ ನಿನ್ನ ಕಾಮ್ಯಾರ್ಥವ ಬೇಡಿ ಬಾಧೆಬಡಿಸೆ. ನಿನಗೇನುಂಟಯ್ಯಾ, ನೀನು ನಿಃಕಾಮಿ. ಅಂಜದಿರು, ಫಲಪದವ ಬೇಡೆ; ನೀನಿಹ ಲೋಕ ನಿನಗಿರ. ಕಾಡದೆ ನಿನ್ನವರೊಳಗೆ ಕೂಡಿರುವ ಪದವ ಕರುಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು. ರಾಜಂಗೆ ಯಾಚಕತನ ಹೀನ, ಅಂಗದ ಮೇಲೆ ಲಿಂಗಸನ್ನಿಹಿತನಾಗಿ ಶಿವಜ್ಞಾನ ಬೀಜ, ಭಕ್ತನ ಬಂಧುತ್ವ, ದ್ರವ್ಯತ್ರಯಲಿಂಗಾರ್ಪಣವೆಂಬ ತ್ರಿವಿಧಾಚರಣೆಸಂಪನ್ನ ವೀರಮಾಹೇಶ್ವರ ವೇಷವ ಹೊತ್ತುಕೊಂಡು, ಕಾಸು ವಿಷಯಾದಿಗಳಿಗಾಸೆಮಾಡಿ, ಜಡಸಂಸಾರದೊಳಗಿರ್ಪ ಜನರಿಗೆ ಕೈಯಾಂತು ಬೇಡಿ ಬೆಂಡಾಗಿ ತಿರುಗಿ ಹೊತ್ತುಗಳೆದರೆ ಹಳಸಿತ್ತು ವೇಷ, ಮುಳಿಸಿತ್ತು ಭಾಷೆ, ಮುಂದೆ ಕೆಡಹಿತ್ತು ಆಸೆ ದುರ್ಗತಿ ಗುರುನಿರಂಜನ ಚನ್ನಬಸವಲಿಂಗವನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->