ಅಥವಾ

ಒಟ್ಟು 58 ಕಡೆಗಳಲ್ಲಿ , 22 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಿಗೆ ಭವವಿಲ್ಲ, ಭಕ್ತಂಗೆ ಭವಿಯನೊಲ್ಲೆನೆಂಬುದು ದುರಾಚಾರ. ದೇವಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆಂದೆ, ಲಿಂಗಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆ ? ಭವಿಗೆ ಮಾಡುವ ಪದಾರ್ಥವನತಿ ಸುಯಿದಾನದಲ್ಲಿ ಮಾಡಬೇಕು. ಭಕ್ತಕಂಡಡೆ ಮುಟ್ಟಪಡವಾಯಿತಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯ, ಭಕ್ತನಾಗಿ ಭವಿಯಾಗದಿರ್ದಡೆ ಅವರನೆಂತು ಭಕ್ತರೆಂಬೆ ?
--------------
ಚನ್ನಬಸವಣ್ಣ
ಪ್ರಪಂಚದಿಂದ ಪಾರಮಾರ್ಥವ ಕಂಡೆನೆಂಬುದು ದುರ್ಲಭ. ಶಿಷ್ಯನಾಗಿ ಗುರುವ ಕಾಣಬೇಕು; ಭಕ್ತನಾಗಿ ಜಂಗಮವ ಕಾಣಬೇಕು. ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಗುರುವ ಕಂಡುದು ಸುಕೃತ; ಪ್ರಭುವಿನ ಪೂರ್ಣಕೃಪೆ ಕೇಳಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಜಂಗಮವಾಗಿ ಜಂಗಮನ ಕೊಂದಾಗಲೆ ತನ್ನ ದೈವ ತನಗಿಲ್ಲ. ಭಕ್ತನಾಗಿ ಭಕ್ತರ ಸ್ತುತಿ ನಿಂದ್ಯವ ಮಾಡಲಾಗಿಯೆ ಸತ್ಯ ಸದಾಚಾರ ತನಗಿಲ್ಲ. ದೇಹದ ವಿಹಂಗ ಮೃಗಗಳಂತೆ ಕೊಡಲಿಯ ಕಾವು ಕುಲಕ್ಕೆ ಮಿತ್ತಾದಂತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಮೂಲ ಜ್ಞಾನೋದಯವಾದುದೊಂದು, ಆ ಸಂಬಂಧವನಳಿದುಳಿದುದೊಂದು, ಗುರುಕಾರುಣ್ಯವಾಗಿ ಬಂದುದೊಂದು, ಭಕ್ತನಾಗಿ ಬಹುವಿಧದಲ್ಲಿ ಆಚರಿಸಿ ಅವಿರಳಸುಖ ಪ್ರಸನ್ನತ್ವವನು ಪಡೆದುದೊಂದು. ಈ ಚತುರ್ವಿಧದಂಗಸಂಗಸಂಪನ್ನ ನಮ್ಮ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು, ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು. ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು, ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು. ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುರ್ವೇದವು, ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು. ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು, ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು, ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು, ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು. ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು, ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು, ಬ್ರಾಹ್ಮಣರಿಗೆ ಇಂದ್ರನಧಿದೇವತೆಯು, ಕ್ಷತ್ರಿಯರಿಗೆ ಕಾಲನಧಿದೇವತೆಯು, ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ, ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು. ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು, ನಿಜವಸ್ತುವು ಉತ್ಕøಷ್ಟತ್ವವಂ ಹೊಂದಿದಲ್ಲಿ ಶ್ರೇಷ*ವಪ್ಪುದು; ಉತ್ಕøಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು. ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ, ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ, ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ, ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ, ಬ್ರಹ್ಮತ್ವಮಂ ಪಡೆದು ಅಜಾತಮಾಗಿ, ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ. ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ. ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು. ಈ ಸತಿಪತಿನ್ಯಾವಳಿದು ವರ್ಣಾತೀತನೂ ವಾಗತೀತನೂ ಆಗಿ, ತಾನುತಾನಾಗಿರ್ಪುದೇ ಐಕ್ಯವು. ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಆರಾಧನೆಯ ಮಾಡಿ ಫಲವೇನಯ್ಯಾ, ಸಂತೃಪ್ತಿವಡೆಯದನ್ನಕ್ಕ? ಮದುವೆಯಾಗಿ ಫಲವೇನಯ್ಯಾ, ಮೋಹದ ವಿಘ್ನಂಗಳಾಗದನ್ನಕ್ಕ? ಭಕ್ತನಾಗಿ ಫಲವೇನಯ್ಯಾ ಲಿಂಗಪೂಜೆಯ ಮಾಡದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯಾ, ಮೋಕ್ಷವ ಹಡೆಯದನ್ನಕ್ಕ? ಮೋಕ್ಷಮಾದ ಫಲವೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮಧೇಯವಳಿಯದನ್ನಕ್ಕ, ಕೇದಾರ ಗುರುವೆ.
--------------
ಸಿದ್ಧರಾಮೇಶ್ವರ
ಸರವಿ ಮಚ್ಚಿದ ವಾಯಪೋಷನ ಇರವಿನಂತೆ, ಗುಮತಿಯಲ್ಲಿದ್ದ ಅಸಿಯ ಮರೆಯಂತೆ, ಬೇರಿನ ಮರೆಯಲ್ಲಿದ್ದ ವಿಷನಾಭಿಯಂತೆ, ನೋಡಿದಡೆ ಭಕ್ತನಾಗಿ, ಒಳಹೊಕ್ಕು ವಿಚಾರಿಸಿದಲ್ಲಿ ಭರಿಯಾಗಿ, ಸುಣ್ಣದ ಮಣ್ಣಿನಂತೆ, ಅಹಿ ಫಳದ ರೇಖೆಯಂತೆ, ಕಪಟಕ್ಕೊಳಗಾಗಿ ಇಪ್ಪುದು ಭಕ್ತಿಸ್ಥಲವೆ? ಮಧುರ ಚೂರ್ಣದಂತೆ ತನ್ಮಯವಾಗಿಪ್ಪುದೆ ಸದ್ಭಕ್ತನಿರವು, ಕಾಲಾಂತಕ ಭೀಮೇಶ್ವರಲಿಂಗದ ನಿಜ ತತ್ವವಾಸ.
--------------
ಡಕ್ಕೆಯ ಬೊಮ್ಮಣ್ಣ
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು, ಉದ್ಧರಿಸುವನೊಬ್ಬ, ಶಿವಶರಣ ಸಾಲದೆ ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ, ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ. ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ, ಕೊಟ್ಟ ದಾಸ ತವನಿಧಿಯ ಪಡೆದ. ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ, ಕೊಟ್ಟ ಕರ್ಣ ಕಳದಲ್ಲಿ ಮಡಿದ. ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ, ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ. ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ, ಕೊಟ್ಟ ನಾಗಾರ್ಜುನನ ಶಿರಹೋಯಿತ್ತು. ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ, ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ. ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು; ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
--------------
ಬಸವಣ್ಣ
ಭಕ್ತನಾಗಿ ಭಕ್ತಿಯ ಮಾಡುವುದದು ಲೇಸಯ್ಯಾ; ಶಕ್ತಿಯಿಲ್ಲದಿರೆ ತಮ್ಮ ಪಾದಕೃಪೆ ಇಷ್ಟವೆಂಬುದದು ಬಹು ಲೇಸಯ್ಯಾ. ಮಹೇಶನ ಮಲತ್ರಯವಳಿವುದು ದುರ್ಲಭ ಕಂಡಯ್ಯಾ, ಚರಿಸಿ ಚರಿಸಿ ಜಗವನ್ನುದ್ಧರಿಸುವುದು ಬಹು ದುರ್ಲಭ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತಾನು ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ, ಭವಿಯಾಗಿದ್ದ ತಾಯಿ ತಂದೆ ಒಡಹುಟ್ಟಿದವರ ಬಂಧುಬಳಗವೆಂದು ಬೆರಸಿದರೆ ಕೊಂಡ ಮಾರಿಂಗೆ ಹೋಹುದು ತಪ್ಪದು. ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ, ಅಗ್ನಿಯ ಮುಖದಲ್ಲಿ ಶುದ್ಧವಾದ ಬಳಿಕ ಅದು ತನ್ನ ಪೂರ್ವಕುಲವ ಕೂಡದು ನೋಡಾ, ಅದೆಂತೆಂದಡೆ: ಅಗ್ನಿದಗ್ಧಘಟಃ ಪ್ರಾಹುರ್ನ ಭೂಯೋ ಮೃತ್ತಿಕಾಯತೇ ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್ ಎಂದುದಾಗಿ, ಭಕ್ತನಾಗಿ, ಭವಿಯ ನಂಟನೆಂದು ಪಂತಿಯಲ್ಲಿ ಕುಳ್ಳಿರಿಸಿಕೊಂಡು ಉಂಡನಾದರೆ; ಪಂಚಮಹಾಪಾತಕ, ಅವಂಗೆ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಭಕ್ತನಾಗಿ ಭಕ್ತಿಯಿಲ್ಲದವ ಶಿವದ್ರೋಹಿ ನೋಡಾ, ಮನವೆ. ``ಯೋ ಭಕ್ತೋ ಭಕ್ತಿಮಾನ್ ಲೋಕೇ ಭೇದಂ ಮೋಹಾತ್ಕರೋತಿ ಹಿ| ಶಿವದ್ರೋಹೀ ಸ ವಿಜ್ಞೇಯಸ್ಸರ್ವಕರ್ಮಬಹಿಷ್ಕøತಃ||' ಎಂಬ ವಾಕ್ಯ ಪಾಲಿಸಿದೆ ನೋಡಾ, ಮನವೆ. ಎನ್ನ ಗುರು ಚೆನ್ನಬಸವ ಕಪಿಲಸಿದ್ಧಮಲ್ಲಿಕಾರ್ಜುನನಿಂದೆ, ಮನವೆ.
--------------
ಸಿದ್ಧರಾಮೇಶ್ವರ
ದೇವದೇಹಿಕ ಭಕ್ತನಾಗಿ ಶ್ರೋತ್ರವ ಲಿಂಗಕ್ಕೆ ಕೇಳಲಿತ್ತು ಪ್ರಸಾದಶ್ರೋತ್ರದಲ್ಲಿ ಕೇಳುವನಾ ಶರಣನು. ತ್ವಕ್ಕು ಲಿಂಗಕ್ಕೆ ಸೋಂಕಲಿತ್ತು ಪ್ರಸಾದತ್ವಕ್ಕಿನಲ್ಲಿ ಸೋಂಕುವನಾ ಶರಣನು. ನೇತ್ರವ ಲಿಂಗಕ್ಕೆ ನೋಡಲಿತ್ತು ಪ್ರಸಾದನೇತ್ರದಲ್ಲಿ ನೋಡುವನಾ ಶರಣನು. ಜಿಹ್ವೆಯ ಲಿಂಗಕ್ಕೆ ರುಚಿಸಲಿತ್ತು ಪ್ರಸಾದಜಿಹ್ವೆಯಲ್ಲಿ ರುಚಿಸುವನಾ ಶರಣನು. ಪ್ರಾಣವ ಲಿಂಗಕ್ಕೆ ಘ್ರಾಣಿಸಲಿತ್ತು ಪ್ರಸಾದಘ್ರಾಣದಲ್ಲಿ ವಾಸಿಸುವನಾ ಶರಣನು. ಮನವ ಲಿಂಗಕ್ಕೆ ನೆನೆಯಲಿತ್ತು ಪ್ರಸಾದಮನದಲ್ಲಿ ನೆನೆವನಾ ಶರಣನು. ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣಂಗೆ ಪ್ರಸಾದವಲ್ಲದಿಲ್ಲವಯ್ಯಾ.
--------------
ಆದಯ್ಯ
ತಾ ಭಕ್ತನಾಗಿ ಭವಿಯ ನಿರೀಕ್ಷಣೆಯ ಮಾಡಿದರೆ ಒಂದನೆಯ ಪಾತಕ. ಕೊಡುಕೊಳ್ಳುವ ವ್ಯವಹಾರ ಮಾಡಿದರೆ ಎರಡನೆಯ ಪಾತಕ. ತಂದೆ, ಮಗ, ಸಹೋದರ, ನೆಂಟನೆಂದು ನಡೆದರೆ ಮೂರನೆಯ ಪಾತಕ. ಶಿವಪ್ರಸಂಗವ ಮಾಡಿದರೆ ನಾಲ್ಕನೆಯ ಪಾತಕ. ಸಂಗಸಮರಸವ ಮಾಡಿದರೆ ಐದನೆಯ ಪಾತಕ. ಇಂತು ಪಂಚಮಹಾಪಾತಕರಿಗೆ ಭಕ್ತನೆಂದರೆ ಭವತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು ಮತ್ರ್ಯಲೋಕಕ್ಕೆ ಎನ್ನ ಕಳುಹಿದಿರಾಗಿ, ನೀನೇ ಕರ್ತನು ನಾನೇ ಭೃತ್ಯನು ; ನೀನೇ ಒಡೆಯನು ನಾನೇ ಬಂಟನು ; ನೀನೇ ಆಳ್ದನು ನಾನೇ ಆಳು ; ನೀನೇ ದೇವನು ನಾನೇ ಭಕ್ತನಾಗಿ, ನೀನು ಮಾಡೆಂದ ಮಣಿಹವ ಮಾಡುತಿರ್ಪೆನು ; ನೀನು ಬೇಡೆಂದ ಮಣಿಹವ ಬಿಡುತಿರ್ಪೆನು; ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಯ ಸಂಗದಿಂದ ಆದವನಲ್ಲ, ಅನಾದಿಯ ಸಂಗದಿಂದ ಆದವನಲ್ಲ, ಆದಿ ಅನಾದಿಯನೊಳಗೊಂಡು ತಾನು ತಾನಾಗಿರ್ದನಯ್ಯ ಆ ಶರಣನು. ಆಧಾರವಿಡಿದು ಭಕ್ತನಾಗಿ, ಆಚಾರಲಿಂಗವ ನೆಲೆಯಂಗೊಂಡುದೆ ಆಚಾರಲಿಂಗವೆಂಬೆನಯ್ಯ. ಸ್ವಾಧಿಷಾ*ನವಿಡಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಮಣಿಪೂರಕವಿಡಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಅನಾಹತವಿಡಿದು ಪ್ರಾಣಲಿಂಗಿಯಾಗಿ ಜಂಗಮಲಿಂಗವ ನೆಲೆಯಂಗೊಂಡುದೆ ಜಂಗಮಲಿಂಗವೆಂಬೆನಯ್ಯ. ವಿಶುದ್ಧಿವಿಡಿದು ಶರಣನಾಗಿ ಪ್ರಸಾದಲಿಂಗವ ನೆಲೆಯಂಗೊಂಡುದೆ ಪ್ರಸಾದಲಿಂಗವೆಂಬೆನಯ್ಯ. ಆಜ್ಞೇಯವಿಡಿದು ಐಕ್ಯನಾಗಿ ಮಹಾಲಿಂಗವ ನೆಲೆಯಂಗೊಂಡುದೆ ಮಹಾಲಿಂಗವೆಂಬೆನಯ್ಯ. ಬ್ರಹ್ಮರಂಧ್ರವಿಡಿದು ಮಹಾಜ್ಞಾನಿಯಾಗಿ ಚಿಲ್ಲಿಂಗವ ನೆಲೆಯಂಗೊಂಡುದೆ ಚಿಲ್ಲಿಂಗವೆಂಬೆನಯ್ಯ. ಶಿಖಾವಿಡಿದು ಸ್ವಯಜ್ಞಾನಿಯಾಗಿ ಚಿದಾನಂದಲಿಂಗವ ನೆಲೆಯಂಗೊಂಡುದೆ ಚಿದಾನಂದಲಿಂಗವೆಂಬೆನಯ್ಯ. ಪಶ್ಚಿಮವಿಡಿದು ನಿರಂಜನನಾಗಿ ಚಿನ್ಮಯಲಿಂಗವ ನೆಲೆಯಂಗೊಂಡುದೆ ಚಿನ್ಮಯಲಿಂಗವೆಂಬೆನಯ್ಯ. ಅಣುಚಕ್ರವಿಡಿದು ಪರಿಪೂರ್ಣನಾಗಿ ಓಂಕಾರಲಿಂಗವ ನೆಲೆಯಂಗೊಂಡುದೆ ಓಂಕಾರಲಿಂಗವೆಂಬೆನಯ್ಯ. ನಿಷ್ಪತಿವಿಡಿದು ನಿಃಕಲನಾಗಿ ನಿರವಯಲಿಂಗವ ನೆಲೆಯಂಗೊಂಡುದೆ ನಿರವಯಲಿಂಗವೆಂದೆಂಬೆನಯ್ಯ. ಇಂತಪ್ಪ ಸುಖವ ನಿಮ್ಮಮಹಾಶರಣರೆ ಬಲ್ಲರಲ್ಲದೆ ಉಳಿದಾದವರು ಇವರೆತ್ತ ಬಲ್ಲರಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->