ಅಥವಾ

ಒಟ್ಟು 122 ಕಡೆಗಳಲ್ಲಿ , 34 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೇಕೆ ಬಂದೆ ಸುಖವ ಬಿಟ್ಟು ? ಬಂದುದಕ್ಕೆ ಒಂದೂ ಆದುದಿಲ್ಲ. ಸಂಸಾರದಲ್ಲಿ ಸುಖಿಯಲ್ಲ, ಪರಮಾರ್ಥದಲ್ಲಿ ಪರಿಣಾಮಿಯಲ್ಲ. ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ. ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ, ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ. ಈ ಭಾಷೆ ಇನ್ನೇಸು ಕಾಲ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸ್ವಪ್ನದ ಭಾಷೆ, ಮತ್ರ್ಯರ ಮುಟ್ಟದ ಭಕ್ತಿ ಚಿತ್ತವನರಿಯದೆ ಕಾಡುವನ ಯುಕ್ತಿ, ಮೃತ್ತಿಕೆಯ ಬೊಂಬೆಯು ಅಪ್ಪುವಿನ ಮಂದಿರಕ್ಕೆ ಹೋದಂತಾಯಿತ್ತು. ಐಘಟದೂರ ರಾಮೇಶ್ವರಲಿಂಗವನರಿ.
--------------
ಮೆರೆಮಿಂಡಯ್ಯ
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ, ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ. ಕೂಡಲಸಂಗಮದೇವಾ, ಜಂಗಮರೂಪಾಗಿ ಸಂಗಯ್ಯ ಬಂದಾನೆಂದು ಎಂದೆಂದೂ ನಾನು ಮಂಚವನೇರದ ಭಾಷೆ. 396
--------------
ಬಸವಣ್ಣ
ಬಲ್ಲಿದರೊಡನೆ ಬವರವಾದಡೆ ಗೆಲಲುಂಟು, ಸೋಲಲುಂಟು, ಕ[ಳ]ನೊಳಗೆ ಭಾಷೆ ಪೂರಾಯವಯ್ಯಾ. ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ ಧನ ಸವೆದು ಬಡವನಾದಡೆ ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು. 150
--------------
ಬಸವಣ್ಣ
ಕೇಳು ಕೇಳೆನ್ನ ಭಾಷೆ, ಅರಿದು ಕಂಡಾ ಅವ್ವಾ, ನಲ್ಲನೊಮ್ಮೆ ತೋರಿದಡೆ ಎನ್ನ ಸರಿಹರಿ ನೋಡಿದೆ ಅವ್ವಾ. ಕಪಿಲಸಿದ್ಧಮಲ್ಲಿನಾಥ ರೂಪಂಬಿಟ್ಟು ಅಗಮ್ಯನಾದಡೆ ಅಗಮ್ಯ ರೂಪಂಬಿಡಿಸಿ ಹಿಡಿವೆನೆ ಅವ್ವಾ.
--------------
ಸಿದ್ಧರಾಮೇಶ್ವರ
ಕಾಯದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಭಾವದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ನೇತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ ಶ್ರೀತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಘ್ರಾಣದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಜಿಹ್ವೆಯ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಸ್ಪರ್ಶನದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಲಿಂಗಮಧ್ಯೇ ಶರಣ, ಶರಣಮಧ್ಯೇ ಲಿಂಗ. ಅಲ್ಲಲ್ಲಿ ತಾಗಿದ ಸುಖವೆಲ್ಲ ಲಿಂಗಾರ್ಪಿತವಾಗದಿದ್ದಡೆ ಕೂಡಲಚೆನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ?
--------------
ಚನ್ನಬಸವಣ್ಣ
ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ. ಭಕ್ತಂಗೆ ಓಡದ ಭಾಷೆ, ನಿನಗೆ ಕಾಡುವ ಭಾಷೆ. ಭಕ್ತಂಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ. ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ. ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ. ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ. ಭಕ್ತ ಸೋತಡೆ, ಭಕ್ತನದೆ ಗೆಲುವು. ಭಕ್ತ ಗೆದ್ದಡಂತು ಗೆಲುವು? ಇದ ನೀನೆ ವಿಚಾರಿಸಿಕೊಳ್ಳಾ, ಭಕ್ತದೇಹಿಕದೇವ ಸಕಳೇಶ್ವರಾ.
--------------
ಸಕಳೇಶ ಮಾದರಸ
ನದೀಜಲ, ಕೂಪಜಲ, ತಟಾಕಜಲವೆಂದಂಬು ಹಿರಿದು ಕಿರಿದಾದುದನರಿಯರು. ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ ಶೀಲಸಂಬಂಧಿಗಳು ಜಾತ್ಯಂಧರು, ನಿಮ್ಮನೆತ್ತಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನ ಮಾಡುವನಯ್ಯಾ ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದಡೆ ಮೀಸಲನು ಸೊಣಗ ಮುಟ್ಟಿದಂತೆ ಕೂಡಲಸಂಗಮದೇವಾ.
--------------
ಬಸವಣ್ಣ
ಹಣ ಬಂಗಾರ ವಸ್ತ್ರ ಕಪ್ಪಡ ಬಟ್ಟೆಯಲ್ಲಿ ನೆಟ್ಟನೆ ಬಿದ್ದಿರಲು ಕಂಡು ಕಾತರಿಸಿ ಕೈಮುಟ್ಟಿ ಎತ್ತದ ಭಾಷೆ, ಕೊಟ್ಟಡೆ ಮುಟ್ಟದ ಭಾಷೆ, ರಧನ ಪರಸತಿಗೆ ಅಳುಪದ ಭಾಷೆ, ಇಂತಿದಕಳುಪಿದೆನಾದಡೆ ಸೌರಾಷ್ಟ್ರ ಸೋಮೇಶ್ವರಾ ನಿಮ್ಮಾಣೆ ನಿಮ್ಮ ಪ್ರಮಥರಾಣೆ.
--------------
ಆದಯ್ಯ
ಎಂಟುದಿಕ್ಕು ನಾಲ್ಕು ಬಾಗಿಲೊಳಗೆ, ಸಕಲ ಪದಾರ್ಥವೆಂಬ ಮಂಟಪವ ಮಾಡಿ, ನಾನಾ ಕೇರಿ ಬೀದಿವಾಗಿಲೊಳು ಅನಂತ ಬಣ್ಣಬಣ್ಣದ ಚೈತನ್ಯಗಳನನುಮಾಡಿ, ಅನಂತ ವೀರರನು ಅನಂತ ಲಾಳಮೇಳಿಗಳನು ಅನಂತ ಸೋಹಂ ಘನ ಮುಟ್ಟಿಕೊಂಡಿರ್ಪವರನು ತಂದಿರಿಸಿ ಆ ಮಂಟಪದೊಳಗೆ ಬಿಜಯ ಮಾಡೆಂದು_ ಭಕ್ತ್ಯಂಗನೆಯ ಕರೆಸಿ ಪರಿಪೂರ್ಣವಾಗಿರಿಸಿ ಜ್ಞಾನಾಂಗನೆಯ ಕರೆಸಿ ನಾಲ್ಕು ಬಾಗಿಲುಗಳಿಗೆ ಕಾಹ ಕೊಟ್ಟು ನುಡಿಯದಂತೆ ಗಂಡನು ಶಿವನಲ್ಲದೆ ಮತ್ತಿಲ್ಲವೆಂದಾತನ ಮಂಟಪದ ವಾರ್ತೆಯ ಅನ್ಯ ಮಿಶ್ರಂಗಳ ಹೊಗಲೀಸೆನೆಂಬ ಭಾಷೆ ! ಕಾಲ ಕರ್ಮ ಪ್ರಳಯವಿರಹಿತನೆಂದಾತನ ಹೆಸರು. ಮಹಾಪ್ರಳಯದಲ್ಲಿ ಅನಂತಮೂರ್ತಿಗಳು ಮಡಿವಲ್ಲಿ ಮಡಿಯದೆ ಉಳಿದ ನಿತ್ಯಸ್ವರೂಪನು. ಆತನ ಶ್ರೀಚರಣದೊಳಚ್ಚೊತ್ತಿದಂತಿರ್ಪಾತನೆ ಅನಾದಿ ಸಿದ್ಧನೆ, ಅನಾದಿ ಕುಳಜ್ಞನೆ, ಅನಾದಿ ಮಡಿವಾಳನೆ, ಶಿವನ ಮದಹಸ್ತಿಯೆ, ಹಸ್ತದೊಳು ಮದಂಗಳ ತೃಣವ ಮಾಡಿದ Zõ್ಞದಂತನೆ, ಭಕ್ತಿಸಾರಾಯ ಪ್ರಸಾದಪರಿಪೂರ್ಣನೆ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಅನಾದಿಗಣೇಶ್ವರನು ಮಡಿವಾಳನು.
--------------
ಚನ್ನಬಸವಣ್ಣ
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವಿಂಗೆ ಕ್ರೀ, ಆತ್ಮಂಗೆ ವ್ರತ. ಆ ವ್ರತಕ್ಕೆ ನಿಶ್ಚಯ ಕರಿಗೊಂಡು ಬಾಹ್ಯದ ಕ್ರೀ, ಅರಿವಿನ ಆಚರಣೆ, ಭಾಷೆ ಓಸರಿಸದೆ ನಿಂದಾತನೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಆಳವರಿಯದ ಭಾಷೆ, ಬಹುಕುಳವಾದ ನುಡಿ_ ಇಂತೆರಡರ ನುಡಿ ಹುಸಿಯಯ್ಯಾ. ಬಹು ಭಾಷಿತರು; ಸುಭಾಷಿತ ವರ್ಜಿತರು. `ಶರಣಸತಿ ಲಿಂಗಪತಿ' ಎಂಬರು ಹುಸಿಯಯ್ಯಾ. ಇಂತಪ್ಪವರ ಕಂಡು ನಾನು ನಾಚಿದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ, ಶೈವರು ನಟ್ಟ ಲಿಂಗವ ಪೂಜಿಸದ ಭಾಷೆಯ ವಿವರವನೆನಗೆ ಪಾಲಿಸಯ್ಯಾ ! ದೇಹದ ದೇವಾಲಯದ ಮಧ್ಯದಲ್ಲಿ ಭಾವಿಸುತಿಪ್ಪ ಶಿವಲಿಂಗದ ಗೊತ್ತಿನ ಸುಖದ ಪರಿಣಾಮದ ಭಕ್ತಿಯ ನಿರಾವಲಂಬವನೆನಗೆ ಕೃಪೆಮಾಡಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->