ಅಥವಾ

ಒಟ್ಟು 52 ಕಡೆಗಳಲ್ಲಿ , 19 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನು ಈಶನೆಂಬುದನು ತಾನರಿದು, ಮಾನೀಶನೆಂಬುದನು ತಾನರಿದು. ತಾನೆ ತಾನಾಗುವ ಸಕೀಲವನರಿಯದೆ ಧ್ಯಾನಧಾರಣಸಮಾಧಿ ಯೋಗಾಂಗವೆಂಬ ಯೋಗಧ್ಯಾನದಿಂದ ಅರಿಯ[ಬ]ಹುದೆ ಸ್ವಯಂಭು[ವ] ? ಯೋಗಿ ದೇಹರಹಿತ, ಈ ದೇಹವಿಡದೇ ವಿದೇಹಿಯಾಗುವ ಸಕೀಲಸಂಜ್ಞೆಯ ಅರಿಯಬಲ್ಲಂಥ ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ? ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ? ತನ್ನ ಘನವು ಆ ಮನವು ಮದಾವಸ್ಥೆಯಲ್ಲಿ ಮಗ್ನವಹುದಲ್ಲದೆ ಮಾಣದು ನೋಡಾ. ಅದು ಮೂರುಗುಣ, ಅದು ತ್ರಿಪುಟಿ ಮಾಯಾ. ಜಾಗ್ರತದಲ್ಲಿದ್ದ ವರ್ತನೆ ಸ್ವಪ್ನದಲ್ಲಿಲ್ಲ. ಸ್ವಪ್ನದಲ್ಲಿದ್ದ ವರ್ತನೆ ಸುಷುಪ್ತಿಯಲ್ಲಿಲ್ಲ. ಈ ಮನ ತಾನು ಹುಟ್ಟುಗುರುಡು ಮೊದಲಿಂಗೆ ಹುಸಿ ವಿಲಕ್ಷಣಾದಿ ಶಿವನೆತ್ತ, ಲಕ್ಷದಿಂದ ಅರಿಯಬೇಕೆಂಬ ಮನವೆತ್ತ, ಹೋಗುತ್ತ, ನೀನತ್ತ. ಈ ಮನಸು ತಾನು ಮೊದಲಿಂಗಲ್ಲದೆ ಹುಸಿಯೆಂದರಿಯದೆ ನದಿಯ ಸುಳಿಯಲ್ಲಿ ಬಿದ್ದ ಹುಳದಂತೆ ಮುಳುಗುತ್ತ ಏಳುತ್ತ ತಿರುಗುವವರಿಗೆಲ್ಲ ತನ್ನ ನಿಜವು ತನ್ನವೆಂದರ್ಥವಾಗುವುದೆ ? ಅದು ತಮ್ಮ ಇಚ್ಫೆ. ಇದನರಿಯದೆ ಮನ ಸಮಾಧಿಯ ಮಾಡಬೇಕೆಂಬ ಮಹಾಗಣಂಗಳು ಇಂತಿವರಲ್ಲ. ಮಹಾಗಣಂಗಳು ಮಹಾಜ್ಞಾನಿಗಳು ಇಂತಿವರಲ್ಲ. ಮತ್ರ್ಯದಲ್ಲಿ ಎನ್ನದೊಂದು ವಂಶವೆಂದಾತ ನಮ್ಮ ವೀರ ಸದ್ಗುರು ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು ಪರವನರಿಯಬಲ್ಲಾತನೇ ಯೋಗಿ. ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು, ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ. ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ, ಮನವಳಿದಿರಬಲ್ಲಾತನೇ ಯೋಗಿ. ಪ್ರಯಾಗದಲ್ಲಿ ಉರಗನ ಕೊಂದು, ಘಣಾಮಣಿಯ ಸೆಳೆದುಕೊಂಡು, ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ. ಕೇದಾರದಲ್ಲಿ ಮತ್ಸ ್ಯವ ಕೊಂದು, ಮರಣವ ಗೆಲಿದು, ಪರಮ ಪದದಲ್ಲಿರಬಲ್ಲಾತನೇ ಯೋಗಿ. ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ, ನೋಡಬಾರದುದ ನೋಡಿ, ಕೇಳಬಾರದುದ ಕೇಳಿ, ಶಿವನೊಲಿಸಿ ಶಿವನೊಳಗಾದರು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಸ್ತ್ರೀಯರು ಹಲವಾದಡೇನು ಕೂಡುವನೊಬ್ಬನೆ. ಯೋಗಿ ಭಿನ್ನವಲ್ಲದೆ ಸ್ಥಾಣು ಭಿನ್ನವಲ್ಲ. ಅರಿವ ಅರಿವು ಹಲವಲ್ಲದೆ, ಅರುಹಿಸಿಕೊಂಬವ ನೀನೋಬ್ಬನೆ. ನಿನ್ನನರಿವ ಪರಿಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ ಅರಿದಿಹೆನೆಂಬ ಉಪಮೆಯಳಿದು, ಸ್ವಾನುಭವಸಿದ್ಧಿಯಿಂದ ತನ್ನ ಸ್ವರೂಪವ ತಾನರಿದು ಅರಿದೆನೆಂಬ ಅರಿವಿನ ಮರವೆಯ ಕಳೆದು, ವರ್ಣಾಶ್ರಮಂಗಳಾಚಾರಂಗಳ ಮೀರಿದ ಶಿವಯೋಗಿಯೇ ವೇದವಿತ್ತಮನು, ವೇದವಿತ್ತಮನು. ಆತನೆಲ್ಲರ ಅಜ್ಞಾನವ ತೊಳೆದು ನಿಜಮುಕ್ತರ ಮಾಡುವ ಕರುಣಾಕರನು. ಆ ಮಹಾತ್ಮನೇ ಸರ್ವಪ್ರಪಂಚಿನ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕಾರಣನಾದಾತನು. ಆ ಯೋಗಿ ಶರಣನೇ ಸಚ್ಚಿದಾನಂದ ಪರಮ ಸಾಯುಜ್ಯರೂಪನು. ಆ ಮಹಾಪುರುಷನೇ ಸಾಲೋಕ್ಯಾದಿ ಸಮಸ್ತ ಮುಕ್ತಿಯ ಕೊಡುವಾತನೂ ಆಗಿ, ಪರಿಪೂರ್ಣ ಭಾವದಿಂದ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಾಗಿ ತೋರುತ್ತಿಹನು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲಿಂಗದಲ್ಲಿ ಧ್ಯಾನನಿಷ*ನಾದ ಯೋಗಿ ಎಲ್ಲಾ ಕಡೆಯಲ್ಲಿ ಪರಿಪೂರ್ಣ ಜ್ಞಾನದೃಷ್ಟಿಯಿಂದ ನೋಡಲು ಪಶ್ಚಿಮಮುಖವಾದ ಪರತತ್ವವೆಂಬ ನಿರ್ಮಲ ದರ್ಪಣದೊಳಗೆ ತನ್ನ ಕಂಡು, ಕಂಡೆನೆಂಬ ಚಿದಹಂಭಾವವಳಿದು ನಿಂದ ನಿಲವೇ ನಿಜ ನಿರ್ವಾಣವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಿರಿದಪ್ಪ (ಆ) ಹಾರವ ಕೊಂಡು ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ? ಅಲ್ಲಲ್ಲ ನಿಲ್ಲು! ಸ್ವರವು ಸುಸ್ವರವಾಗಿ ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಎಂಬತ್ತುನಾಲ್ಕು ಲಕ್ಷ ಯೋನಿಯೊಳು ಜನಿಸುವ ಜನನವೆಲ್ಲರಿಗೆಯು. ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ. ಆ ಯೋಗಿ ಜನ್ಮಾಂತರ ಕಳೆದಹನು, ಹೇಗೆಂದಡೆ: ಶ್ರೀ ಗುರುಕರಪಲ್ಲವದಿಂದ ಬೆಸಲಾಯಿತ್ತಾಗಿ ನ ಮುಕ್ತಿರ್ನ ಚ ಧರ್ಮಶ್ಚ ನ ಪುಣ್ಯಂ ಚ ನ ಪಾಪಕಂ ನ ಕರ್ಮಜನ್ಮ ನೇಚ್ಛಾ ವೈ ಗುರೋಃ ಪಾದನಿರೀಕ್ಷಣಾತ್ ಎಂದುದಾಗಿ, ಇಂತು ಯೋನಿಜನ್ಮಾಂತರವ ಕಳೆದ ಶರಣಂಗೆ ಮತ್ತೆ ಭವಮಾಲೆಯುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು, ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ, ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ, ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ ! ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು, ಮರವಿನ ಮನೆಯೊಳಗೆ ಮೂರ್ಛೆಗೈದರೆ, ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ, ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ ಮಹಿಮನೆಂದೆನ್ನಬಹುದು ಕಾಣಿರೊ! ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು, ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು, ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ, ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು, ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ ! ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು ದೇಶವ ತಿರುಗುವ ಶಿವಯೋಗಿಗಳೆಂಬುವ ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಹಾವಾಕ್ಯಂಗಳನರಿದೆನೆಂಬ ಯೋಗಿ ಕೇಳಾ ನೀನು. ಶುದ್ಧವಾವುದು? ಸಿದ್ಧವಾವುದು? ಪ್ರಸಿದ್ಧವಾವುದು? ಹೇಳಿರೇ ಬಲ್ಲರೆ. ಪ್ರಾಣಾಯಾಮದಲಿ ಪ್ರವೇಶಿಸಬಲ್ಲಡೆ ಅದು ಶುದ್ಧ, ಪ್ರತ್ಯಾಹಾರದಲಿ ಪ್ರಕಟಿಸಬಲ್ಲಡೆ ಸಿದ್ಧ. ಪಂಚಬ್ರಹ್ಮದಲಿ ಪ್ರವೇಶಿಸಬಲ್ಲಡೆ ಪ್ರಸಿದ್ಧ. ಕೋಹಂ ತತ್ವಾರ್ಥವಂ ಮೀರಿದ, ಆಜ್ಞಾಸೀಮೆಯ ಸಮನಿಸಿದ, ಪ್ರಸಿದ್ಧಬ್ರಹ್ಮವನು ಮೀರಿದ, ಅನಾಹತವನಾನಂದವ ಮಾಡಿದ, ಆಶಕ್ತಿಯ ಸಂಯೋಗವಂ ಮಾಡಿದ, ಉರುತರ ಪರಮಸೀಮೆಯಂ ದಾಂಟಿದ. ಮಾತೆಯಿಲ್ಲದ ಜಾತನ, ಗಮನವಿಲ್ಲದ ಗಮ್ಯನ, ಆ ಯಾರೂ ಅರಿಯದ ಅನಾಥನ, ಹಮ್ಮಿನ ಸೊಮ್ಮಳಿದ ನಿತ್ಯನ, ಅನಂತ ಬ್ರಹ್ಮಾಂಡವಳಿವಲ್ಲಿ ಏನೆಂದರಿಯದ ಸತ್ಯನ, ಸಕಳ ನಿಷ್ಕಳಾತ್ಮಕದ ಪೂರ್ಣನಪ್ಪ ಮುಕ್ತನ, ಬ್ರಹ್ಮಯೋಗವನರಿವರನೇಡಿಸುವ ಶಕ್ತನ, ಅವ್ವೆಯ ಮನದ ಕೊನೆಯ ಮೊನೆಯ ಮೇಲೆ ನಿತ್ಯನಾಗಿಪ್ಪ ಒಡೆಯನ, ಪ್ರಾಣಶೂನ್ಯನಪ್ಪ ಭಕ್ತಂಗೆ ಪ್ರಾಣನಾಗಿಪ್ಪ ಲಿಂಗನ, ಷಡ್ವಿಧ ಭಕ್ತಿಯಲ್ಲಿ ಸಂಯೋಗವ ಮಾಡುವ ಶರಣನ, ಇಹಪರ ಏಕವಾಗಿಪ್ಪಾತನ ತೋರಿದನೆನ್ನ ಗುರು ಬಸವಣ್ಣನ ಕಂಡೆನಾತನ ಕೊಂಡೆ, ಆತನ ಪಾದೋದಕ ಪ್ರಸಾದವ ಹಿಂದೆ ಉಂಡ ಹಂಗೆ ಇನ್ನು ಉಂಡೆನಾಯಿತ್ತಾದೊಡೆ, ಹಿಂದೆ ಬಂದ ಹಂಗೆ ಇನ್ನು ಬಂದೆನಾಯಿತ್ತಾದೊಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮಾಣೆ.
--------------
ಸಿದ್ಧರಾಮೇಶ್ವರ
ಗಾರಪ್ಪ ವರ್ಗವನು ತೋರಬಲ್ಲಡೆ ಯೋಗಿ ತೋರಿ ತೋರಿಯೆ ಮೀರಿ ಸಾದಾಖ್ಯದ ದೇಹ ಪ್ರಪಂಚುವಯೆಯ್ದಿಯೆಯ್ದದ ಆತ ಆನಂದ ಶಿವಯೋಗಿ ಕಪಿಲಸಿದ್ಧ ಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ ? ಅಲ್ಲ, ನಿಲ್ಲು. ಶುಕ್ಲ ಶೋಣಿತಮಲದೇಹಿಯಲ್ಲ_ ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ ! ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ, ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ ಸಿದ್ಧರಾಮಯ್ಯದೇವರು ತಾನೆ.
--------------
ಅಲ್ಲಮಪ್ರಭುದೇವರು
ಯೋಗಿ ಜೋಗಿ ಶ್ರವಣ ಸನ್ಯಾಸಿ ಕಾಳಾಮುಖ ಪಾಶುಪತಿಯೆಂಬ ಷಡ್ದರುಶನಕ್ಕೆ ಶಿವಾಚಾರವೆ ಮಿಗಿಲು ನೋಡಾ. ಶಿವಾಚಾರವಿಡಿದು ಪರಬ್ರಹ್ಮಲಿಂಗವನಾಚರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜಲದ ಸಿಂಹಾಸನದ ಕೆಲದಲಷ್ಟಮ ಬೆಟ್ಟ ಕುಲಗಿರಿಗಳೆರಡು ಮತ್ತಿಕ್ಕೆಲದ. ನೆಲೆಯನರಿಯರು ಬ್ರಹ್ಮಕುಲವನರಿಯರು ಯೋಗ ಹೊಲಬುಗೆಟ್ಟರು ಯೋಗಸಿದ್ಧರೆಲ್ಲ. ಈರಾರನೊಂದೆಂದು ಹಿಡಿದಾತ ನಿಷ್ಕಲ ಯೋಗಿ ತಾ ಕಪಿಲಸಿದ್ಧಮಲ್ಲಿನಾಥ.
--------------
ಸಿದ್ಧರಾಮೇಶ್ವರ
ಪರುಷರಸ ಸೋಂಕಿದಲ್ಲಿ ಲೋಹಕ್ಕಿದಿರೆಡೆ ಉಂಟೆ ? ಸಿಂಧುವೊಳಕೊಂಡ ದ್ರವ್ಯಕ್ಕೆ ಋತುಕಾಲ ವೈಶಾಖಮಾಸಂಗಳಲ್ಲಿ ಜಲವಿಂಗಲು ಮತ್ತೆ ಕಂಡೆಹೆವೆನಲುಂಟೆ ? ಸರ್ವಸಂಗಪರಿತ್ಯಾಗವ ಮಾಡಿದ ಯೋಗಿ ತಂದೆ ತಾಯಿ ಸಹೋದರ ಬಂಧುಗಳೆಂದು ಪಕ್ಷವ ಅಂಗೀಕರಿಸಿದಡೆ ತ್ರಿಭಂಗಿಯ ಭುಂಜಿಸಿದವ ಮರವೆಯ ಸುರಾಪಾನವ ಅಂಗೀಕರಿಸಿದವ, ಆತ ಲಿಂಗಾಂಗಿಯಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಸಲ್ಲ.
--------------
ಪ್ರಸಾದಿ ಭೋಗಣ್ಣ
ಯೋಗಿ, ಜೋಗಿ, ತಪಸಿ, ಸನ್ಯಾಸಿ, ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ. ತೋರಿ, ಮಾರಿಯುಂಬು ಬೆವಹಾರಗಳು! ನಿರ್ಣಯ ನಿರ್ಲೇಪಭಕ್ತಿ ಯುಳ್ಳವರನಲ್ಲದೊಲ್ಲ, ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಇನ್ನಷ್ಟು ... -->