ಅಥವಾ

ಒಟ್ಟು 85 ಕಡೆಗಳಲ್ಲಿ , 33 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ಪಂಜ ಹಿಡಿವಂಗೆ ಸಂದೇಹವೆಲ್ಲಿದೆ ಉರಿವ ಬೆಳಗಿಂಗೆ ಸಂದೇಹವುಂಟೆ? ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ ಹೊಂದಿ ಬೇವಂಗೆ ಲಂದಣತನವಲ್ಲದೆ ನಿಜಪ್ರಸಂಗಿಗೆ, ನಿರತಿಶಯ ಲಿಂಗಾಂಗಿಗೆ, ಪರಬ್ರಹ್ಮಪರಿಣಾಮಿಗೆ ಜಗದ ಹರದಿಗರಲ್ಲಿ ಸಿಕ್ಕಿ ಪರಿಭ್ರಮಣಕ್ಕೊಳಗಾಹನೆ? ಇಂತೀ ನಿಜವನರಿದಾತನೆ ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವು ತಾನೆಂಬೆನು.
--------------
ಶ್ರೀಗುರು ಪ್ರಭುನ್ಮುನೀಶ್ವರ
ಮಾತಿನ ಪಸರದ ವ್ಯವಹಾರದೊಳಗೆ ಸಿಕ್ಕಿ, ನೂಕು ತಾಕುಗೊಳುತ್ತಿರ್ಪವಂಗೆ ಮಹದ ಮಾತೇಕೆ? ಕೊರಳುದ್ದಕ್ಕೆ ಹೂಳಿಸಿಕೊಂಡು, ಮುಗಿಲುದ್ದಕ್ಕೆ ನೆಗೆದೆಹೆನೆಂಬವನ ಹಾಗೆ. ಶಿವನ ಜೋಕೆಯನರಿಯದೇ ಮಾತನಾಡುವ ಮಾತೆಲ್ಲವು, ಮಾತಿನಮಾಲೆಯಲ್ಲದೆ, ಅಲ್ಲಿ ನಿಜವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಅವರೆಲ್ಲ ಭೂಭಾರಕರಾದರು.
--------------
ಸ್ವತಂತ್ರ ಸಿದ್ಧಲಿಂಗ
ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು, ಬೇಡಲೇಕೆ ಭಿಕ್ಷವ? ಕಾಡಲೇಕೆ ಮತ್ರ್ಯರ? ರೂಢಿಯೊಳಗೆ ಸಿಕ್ಕಿ ಅಡುವಂಗೆ, ಆ ರೂಢಿ ಬೇಡಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಡಿಸಯ್ಯಾ, ಎನಗೆ ನಿಮ್ಮವರ ಸಂಗವ. ಮಾಡಿಸಯ್ಯಾ, ಎನಗೆ ನಿಮ್ಮವರಾನಂದವ, ಆಗಿಸಯ್ಯಾ, ನಿಮ್ಮವರಂತೆ. ನೋಡಿಸಯ್ಯಾ, ನಿಮ್ಮವರ ಕೂಡೆ ಸಂಗವ ಮಾಡಿಸಯ್ಯಾ. ಎನಗೆ ಬಚ್ಚಬರಿಯ ಭಕ್ತಿಯ ಕೂಡಿಸಯ್ಯಾ. ಎನಗೆ ಪಾದೋದಕ ಪ್ರಸಾದವನೊಚ್ಚತವ ಸಲಿಸಯ್ಯಾ. ನಿಮ್ಮವರ ಕೂಡೆ ಸಿಕ್ಕಿ ಇರಿಸಯ್ಯಾ. ನಿಮ್ಮವರ ಪಾದವ ಕೆಳಗೆ ನಿತ್ಯವಾಗಿ ಬರಿಸಯ್ಯಾ, ಎನ್ನ ಭವಭವದಲ್ಲಿ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನಿಂತು ಕೆಡಿಸಯ್ಯಾ ಎನ್ನ ಭವಭವದ ಹುಟ್ಟು.
--------------
ಸಿದ್ಧರಾಮೇಶ್ವರ
ಗುಂಡಿಯ ಹಳ್ಳವು ತುಳುಕಲಾಗಿ ಇಳಿಯಿತ್ತು ಮತ್ಸ್ಯ, [ಖ]ಂಡಿ[ತ]ನ ತಂಡಕಾಗಿ. ಕಂಡವ ಮೆಲುವರ ಬಾಯಲ್ಲಿ, ಮೂರು [ಹೆ]ಂಡವ ಕೂಡಿ ಭಂಡಾದರು, ಮಲತ್ರಯದ ಅಂಗದಲ್ಲಿ ಸಿಕ್ಕಿ ಘನಲಿಂಗವನರಿಯದೆ. ಆತ್ಮನ ಅಂಗದ ಲಿಂಗದ ಸಂಗವ ತೋರು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ, ತ್ರಿವಿಧದ ಆಸೆಗೆ ಸಿಕ್ಕಿ ಸಾವ ತೂತರಿಗೆಲ್ಲಿಯದೊ ಲಿಂಗ ? ಅದೇತರ ನಿರ್ವಾಣ? ಏತದ ಕೂನಿಯಂತೆ, ರಾಟಾಳದಂತೆ, ಭವಪಾಶದಲ್ಲಿ ಬಿದ್ದು ಘಾಸಿಯಾದ ಮತ್ತೆ ನಿನಗಿನ್ನೇತರ ಭಾಷೆಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ವಾಯು ಪಟವಾಡುವಲ್ಲಿ, ಹಿಡಿದವನ ಕೈಯಲ್ಲಿ ನೂಲು ಸಿಕ್ಕಿ ಆಡುವಂತೆ, ತನ್ನಯ ಅರಿವು ಕುರುಹಿನಲ್ಲಿ ಸಿಕ್ಕಿ, ಎಡೆ ಬಿಡುವಿಲ್ಲದಾಡಬೇಕು, ಐಘಟದೂರ ರಾಮೇಶ್ವರರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಸುಖವ ಮೆಚ್ಚಿದ ದೇಹ, ಸಕಲದೊಳಗೆ ಸಿಕ್ಕಿದುದಕ್ಕೆ ದೃಷ್ಟ. ಅಖಿಳರ ಬೋಧೆಗೆ ಸಿಕ್ಕಿ ಸುಖವನರಿದ ಮತ್ತೆ, ಅಕಳಂಕತನವಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಕ್ಕರ ರೂಪಾಗಿ ಲೆಕ್ಕವಟ್ಟೆಯ ಕಾಬಂತೆ, ವಸ್ತುಮಯ ರೂಪಾಗಿ, ಭಕ್ತರು ಜಂಗಮದಲ್ಲಿ ಲೆಕ್ಕಕ್ಕೆ ಸಿಕ್ಕಿದೆಯಲ್ಲಾ. ಲಕ್ಷ ಅಲಕ್ಷಂಗಳಿಂದ ನಿರೀಕ್ಷಿಸಿ ತಿಳಿದಲ್ಲಿ ಸಿಕ್ಕಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ hತ್ತು ಶಾಖೆಯಲ್ಲಿ ನಾಲ್ಕು ಹಣ್ಣಹುದ ಕಂಡೆ. ಒಂದು ಹಣ್ಣ ಸವಿದಾತ ಯೋಗಿಯಾದ, ಒಂದು ಹಣ್ಣ ಸವಿದಾತ ಭೋಗಿಯಾದ, ಒಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತನ ಕುರಹ ಕಂಡು ಹೇಳಿರೆ. ಈ ನಾಲ್ಕು ಹಣ್ಣ ಮೆದ್ದವರ ಕೊರಳಲ್ಲಿ ಬಿತ್ತು ಗಂಟಲು ಸಿಕ್ಕಿ ಕಾನನದಲ್ಲಿ ತಿರುಗುತಿದ್ದರಯ್ಯಾ. ಈ ಫಲವ ದಾಂಟಿದವರು ಸೌರಾಷ್ಟ್ರ ಸೋಮೇಶ್ವರ ಹುಟ್ಟುಗೆಟ್ಟರು.
--------------
ಆದಯ್ಯ
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ, ಸತ್ಯವೇ ಭಕ್ತ, ಜ್ಞಾನವೇ ಗುರು, ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು, ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ, ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ, ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು, ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ, ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ, ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ, ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ, ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ, ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ, ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು, ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು, ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ, ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ. ನಿಜವಂ ಮರತು ನಿಜಾವಸ್ಥೆಯಂ ತೊರೆದು, ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ, ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ, ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ, ಆ ಲಹರಿಯೊಳಗೆ ಕೂಡಿ, ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ, ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ, ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ, ಪರಮಾನಂದಿಸುತ್ತಿಪುನು. ಇಂತಪ್ಪ ಭ್ರಮೆಯಂ ಕಳೆದು, ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ, ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ, ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ, ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ, ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ, ಅಂತಃಕರಣದಲ್ಲಿರ್ಪ ವಿಷ್ಣುವಿನ, ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ ತಾನೇ ದಯೆಯಿಂ ಗುರುರೂಪನಾಗಿ ಬಂದು, ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ, ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು, ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು, ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ, ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ ಪರರಿಗೆ ದುಃಖಮಂ ಮಾಡುವಂದದಿ, ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ, ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ, ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು. ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ, ಅವೇ ನಾಲ್ಕುಮುಖಂಗಳಾಗಿ, ಜ್ಞಾನವು ಮಧ್ಯಮುಖಮಾಗಿ, ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ, ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು, ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು ಸಂಹಾರರೂಪಮಾದ ಜ್ಞಾನಮುಖದಲ್ಲಿ ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು. ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ : ಆಕಾಶವೂ ವಾಯುರೂಪು. ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು. ವಾಯುವಡಗಲಾಕಾಶವೂ ಕೂಡ ಅಡಗುವಂದದಿ, ಅಂತಪ್ಪ ವಾಯುವೇ ಜೀವನು, ಆ ಜೀವನಿಗವಸಾನಸ್ಥಾನವೇ ಆತ್ಮನು, ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು. ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ : ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ! ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ? ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ? ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಹೊನ್ನೆಂಬ ಕಾರ್ಮಿಕವ ಜರಿದು ಹರಿದು, ಮಣ್ಣೆಂಬ ಭವದ ಭವದ ಹರಿದು, ಹೆಣ್ಣೆಂಬ ರಾಕ್ಷಸಿಯ ಅಣಲೊಳಗೆ ಸಿಕ್ಕಿ ಅಗಿದಗಿದು ತಿನಿಸಿಕೊಂಬ ಜಡಜೀವಿಗಳ ಸಂಗದಿಂದಾದ ಸಕಲ ಸುಖಭೋಗಂಗಳ ಬಿಟ್ಟು; ಲಿಂಗರತಿ ಪರಮಸುಖದ ಚಿದಮೃತದ ನಿತ್ಯ ತೃಪ್ತಿ ಸಂತೋಷ ಇಂಬುಗೊಂಡು, ವೇಷದ ಭ್ರಾಂತಿನ ಭ್ರಾಮಕದ ಸಮಯ ಕುಲಪಾಷಂಡಿಗಳ ತತ್ಸಂಗವ ಬಿಟ್ಟು ನಿರಾಶಾ ಪಥದ ಸುಜ್ಞಾನವೆ ಅನುಕೂಲವಾಗಿ ಘೃತ ಫಳ ಮಧುರರಸ ಮೃಷ್ಟಾನ್ನಂಗಳಲ್ಲಿ ಮನಮಗ್ನವಾದ ಪರಮ ಪ್ರಸಾದದಲ್ಲಿ ಪರಿಣಾಮಿಯಾದ ಪರಮಲಿಂಗೈಕ್ಯ ವಿರಕ್ತಂಗೆ ಲಿಂಗಾರ್ಪಿತವಲ್ಲದೆ_ ಇಂತೀ ಕ್ರಮವನರಿದು ಸಕಲಭ್ರಾಂತನಳಿಯದೆ ಮನ್ಮಥವೇಷಧಾರಿಗಳು ಪಂಚಲೋಹ ಕಾರ್ಮಿಕವ ಧರಿಸಿಕೊಂಡು ಲಿಂಗಾರ್ಪಿತ ಭಿಕ್ಷೆಯೆಂದು ಭುಂಜಿಸುವ ಭುಂಜನೆಯೆಲ್ಲವು ವರಾಹ ಕುಕ್ಕುಟದ ಮೇಧ್ಯವು, ಅವರಿಗೆ ಪ್ರಸಾದವೆಂಬುದು ಸ್ವಪ್ನದಲ್ಲಿಯೂ .... .......ಕೊಂಬುದೆಲ್ಲವು ಕತ್ತೆಯ ಮಾಂಸ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ. ಮೂರ ಮರೆದು ಬೇರೊಂದ ಕಂಡೆಹೆನೆಂಬುದೆ ಮಾಯೆ. ನುಡಿಯ ನುಡಿವವರಲ್ಲಿ ಎಡೆ ಮಾತನಾಡಿ ಬೇರೊಂದೆಡೆವುಂಟೆಂಬುದೆ ಮಾಯೆ. ಘಟಮಟವೆಂಬ ಮನೆಯಲ್ಲಿ ಮರವೆಯೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಡಾವರಕ್ಕೆ ಸಿಕ್ಕಿ ನೊಂದೆನು. ಇದರಚ್ಚುಗವ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ಗಾಜಿನ ಮನೆಯ ಮಾಡಿಕೊಂಡು ವಿರಾಜಿಸುವ ಗೀಜಿಗನು ಓಜನ ಕೈಯಲ್ಲಿ ಸಿಕ್ಕಿ ಗಾಜು ಗೋಜಾಗುತ್ತಿದೆ. ತನ್ನೋಜೆಯ ಮರೆಯಿತ್ತಲ್ಲಯ್ಯ. ಗಾಜಿನ ಮನೆಯ ಮುರಿದು, ಓಜನ ಕೊಂದು ಗಾಜು ಗೋಜು ಬಿಟ್ಟು ತನ್ನೋಜೆಯನರಿದಲ್ಲದೆ ಒಳ್ಳಿತ್ತಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->