ಅಥವಾ

ಒಟ್ಟು 43 ಕಡೆಗಳಲ್ಲಿ , 17 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ಥಾನಮಾನವಿಲ್ಲದೆ ಶರಣರ ಹಂಗ ಹರಿದೆ. ಶರಣರ ಹಂಗ ಹರಿದು ಶಿವಸೂತ್ರಿಕಳಾದೆ ನಾನು. ಶಿವಸೂತ್ರಿಕಳಾಗಿ ಮುಖ ವಿನೆಯಾಪರತತ್ವವನೈದಿ ನಾನು ಅನುಭಾವಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಕರಣಂಗಳ ಹಂಗ ಹರಿದು ಕಾಮದ ಸೀಮೆಯ ಹರಿದು ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ದಧಿಯ ಕಡೆವಾಕೆಯ ತುದಿಗಂಡವ ಕೊಯಿದು, ಮಂತಿನ ಅಂಡಿನಲ್ಲಿ ಒಸರಿ ದಧಿ ಧರೆಗೆ ಇಳಿದು, ಅಂಡಿನವ್ವೆಯ ಹಂಗ ಬಿಟ್ಟು ಮಂತು ಮರಣವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಹುಟ್ಟಿದ ಬಟ್ಟೆಯ ಮೆಟ್ಟದ ಕಾರಣ.
--------------
ಸಗರದ ಬೊಮ್ಮಣ್ಣ
ಬಲ್ಲೆನು, ಒಲ್ಲೆ ಮರ್ತ್ಯದ ಹಂಗ, ಹಿಂದಣ ಮರವೆಯಿಂದ ಬಂದು ನೊಂದೆ, ಸಾಕು. ಇನ್ನು ಅರಿದೆ, ತ್ರಿವಿಧಪಾಶವ ಹರಿದೆ. ಗುಹೇಶ್ವರಾ, ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ.
--------------
ಅಲ್ಲಮಪ್ರಭುದೇವರು
ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ ತತ್ಪದವೆಂದಡೇನಯ್ಯ ? ತ್ವಂ ಪದವೆಂದಡೇನಯ್ಯ ? ಅಸಿಪದವೆಂದಡೇನಯ್ಯ ? ತತ್ಪದವೆಂದಡೆ ಲಿಂಗ, ತ್ವಂ ಪದವೆಂದಡೆ ಅಂಗ, ಅಸಿಪದವೆಂದಡೆ ಲಿಂಗಾಂಗಸಂಯೋಗವಯ್ಯ. ಇಂತೀ ತ್ರಿವಿಧವನು ಮೀರಿದಾತ ಸ್ವಾನುಭಾವ ಸಂಪನ್ನ, ಸ್ವಯಂಭು ತಾನೆ. ಅಖಂಡದಾಕಾರ ಆದಿವಸ್ತು ತಾನೆಂದರಿಯದೆ ತತ್ಪದವೆ ಲಿಂಗವೆಂದು ಬೆರತಿಪ್ಪರು ಆ ಲಿಂಗ ತಮಗೆಲ್ಲಿಯದು ? ಅಸಿಪದವೆ ಲಿಂಗಾಂಗಸಂಯೋಗವೆಂಬರು. ಆ ಲಿಂಗಾಂಗಸಂಯೋಗ ತಮಗೆಲ್ಲಿಯದು ? ಲಿಂಗ ತಮ್ಮದೆಂಬರು, ಪೃಥ್ವಿಯ ಹಂಗು. ಅಂಗ ತಮ್ಮದೆಂಬರು, ಅಪ್ಪುವಿನ ಹಂಗು. ಜ್ಞಾನ ತಮ್ಮದೆಂಬರು, ತೇಜದ ಹಂಗು. ಇಂತೀ ತ್ರಿವಿಧದ ಹಂಗ ಹರಿದು ಲಿಂಗವೆ ತಾನಾದ ಬಸವಣ್ಣ ಸಾಕ್ಷಿಯಾಗಿ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಾಯಿತ್ತು.
--------------
ಬಾಚಿಕಾಯಕದ ಬಸವಣ್ಣ
ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ, ವಿಷ್ಣು ಖಂಡಿಂಗೆ ಒಡೆಯನಾದಲ್ಲಿ, ರುದ್ರ ಮಂಡೆಗೆ ಒಡೆಯನಾದಲ್ಲಿ ಅಂಡು ಆಧಾರ, ಖಂಡಿ ಸ್ಥಿತಿ, ಮಂಡೆ ಮರಣ. ಇಂತೀ ಮೂವರ ಅಂದವನರಿತ ಮತ್ತೆ ಕೊಂಡಾಡಲೇತಕ್ಕೆ? ಬೇರೊಂದು ಲಿಂಗವುಂಟೆಂದು ಮೂವರ ಹಂಗ ಹರಿದಲ್ಲದೆ ಪ್ರಾಣಲಿಂಗಿಯಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅರಿಯೆನರಿಯೆ ನಾನು, ಏನುವನರಿಯೆನಯ್ಯ; ಎಲ್ಲವ ಮರದೆನಯ್ಯ, ಎಲ್ಲಾ ಪುರಾತರ ಹಂಗ ಹರಿದು ನಾನು ಸಂಗ ನಿಸ್ಸಂಗಿಯಾದೆನು. ಗುಣಕಥನದ ಮಾತ ಹರಿದು ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ.
--------------
ನೀಲಮ್ಮ
ಕೂಟದ ರಚನೆಯ ಸಂದಳಿದು ನೋಟ ನಿಮ್ಮ್ಲ ನಟ್ಟು ಸಮಕಳೆ ಎಂದಪ್ಪುದಯ್ಯಾ, ಸಮರತಿ ಎಂದಪ್ಪುದಯ್ಯಾ. ಹಂಗ ಹರಿದು, ದಂದುಗ ಉಡುಗಿ ಎನ್ನನೆಂದಿಂಗೆ ಒಳಕೊಂಬೆಯೊ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
--------------
ಸಿದ್ಧರಾಮೇಶ್ವರ
ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ. ಅವ ನಾನೊಲ್ಲದೆ ಒಂದ ಬ್ರಹ್ಮಂಗೆ ಕೊಟ್ಟೆ. ಒಂದ ವಿಷ್ಣುವಿಗೆ ಕೊಟ್ಟೆ, ಒಂದ ರುದ್ರಂಗೆ ಕೊಟ್ಟೆ. ಆ ಕೊಟ್ಟುದನು ಬ್ರಹ್ಮ ಬೆಗಡವನಿಕ್ಕಿ ಪವಣಿಸಿ ಕಟ್ಟಿದ. ಅದ ವಿಷ್ಣು ಕುಂದಣದಲ್ಲಿ ಕೀಲಿಸಿ ಮುಂಗೈಯಲ್ಲಿಕ್ಕಿದ. ಮತ್ತೊಂದವನಾ ರುದ್ರನೊಡೆದು ಬೆಳಗ ಬಯಲು ಮಾಡಿದ. ಇಂತೀ ಮೂವರು ರತ್ನದ ಹಂಗಿಗರಾದರು. ಅವರ ಹಂಗನೊಲ್ಲದೆ ಸಂದೇಹ ಬಿಡಲಾರದೆ, ಬಂದ ಬಂದ ಯೋನಿಯಲ್ಲಿ ಸಂದಿಲ್ಲದೆ ತಿರುಗಲಾರದೆ, ನೊಂದೆನಯ್ಯಾ. ಬ್ರಹ್ಮನ ಬಲೆಯಲ್ಲಿ ಸಿಲುಕಿ, ವಿಷ್ಣುವಿನ ಬಂಧನದಲ್ಲಿ ಕಟ್ಟುವಡೆದು, ರುದ್ರನ ಹಣೆಗಿಚ್ಚಿನಲ್ಲಿ ಉರಿಯಲಾರದೆ, ಹಾರಿದೆನಯ್ಯಾ ಕೇಡಿಲ್ಲದ ಪದವ. ಗುರುವಿನ ಹಂಗ ಬಿಟ್ಟೆ, ಅಡಿಗಡಿಗೆ ಏಳಲಾರದೆ. ಲಿಂಗದ ಹಂಗ ಬಿಟ್ಟೆ, ಮಜ್ಜನಕ್ಕೆರೆದ ಹಾವಸೆಗಾರದೆ. ಜಂಗಮದ ಹಂಗ ಬಿಟ್ಟೆ, ಸಂದೇಹದಲ್ಲಿ ಸಾಯಲಾರದೆ. ಇವರಂದ ಒಂದೂ ಚಂದವಿಲ್ಲ. ಅಭಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಂಗೆ.
--------------
ಮೋಳಿಗೆ ಮಾರಯ್ಯ
ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ. ಕಾಮ ನಿಃಕಾಮವಾಗಿ ಬಸವನ ಹೆಸರಲ್ಲಿ ಬಲವಂತರ ಕಂಡೆ. ಬಲವಂತರ ಬಲುಹ ಕಂಡು ಬಲುಹನಳಿದು, ಬಸವನಲ್ಲಿ ನಿರಾಲಂಬಿಯಾದೆ ನಾನು. ನಿರಾಕುಳದ ಹಂಗ ಹರಿದು ನಾನು ಸುಖಿಯಾದೆನಯ್ಯಾ, ಸಂಗಯ್ಯಾ, ಬಸವನಲ್ಲಿ.
--------------
ನೀಲಮ್ಮ
ಕಾಯದ ಹಂಗ ಹರಿದು, ಕಲ್ಪಿತದ ಗುಣವ ನಷ್ಟವಮಾಡಿ, ಮನವಿಲ್ಲದೆ ಆ ಮನಕ್ಕೆ ವಿವೇಕತೃಪ್ತಿಯನರಿಯಲು ವಿಶಿಷ್ಟದನುಜ್ಞೆಯಾಯಿತ್ತಯ್ಯಾ. ಸಂಗಯ್ಯನಲ್ಲಿ ಬಸವನಡಗಲು ಎನ್ನ ಕಾಯವೆ ತೃಣರೂಪವಯ್ಯಾ.
--------------
ನೀಲಮ್ಮ
ಗತಿಗೆಟ್ಟು, ಮತಿಯ ಹಂಗ ಮರೆದು, ಕಾಮಿಸಿ ಕಲ್ಪಿಸಿ, ಭಾವಿಸುವ ಭಂಗಹಿಂಗಿ, ಭಾವಕಲ್ಪನೆಯ ಮೀರಿ, ಭಾವಭೇದವಳಿದು ನಿರ್ಭಾವಪದದಲ್ಲಿ ನಿಂದುದು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭೇದವಳಿದು ಅವಿರಳ ಶರಣನ ಇರವು.
--------------
ಆದಯ್ಯ
ಜಿಹ್ವೆಯ ಲಂಪಟಕ್ಕಾಗಿ ಅನ್ಯರ ಬೋಧಿಸಲೇಕೆ ? ಗುಹ್ಯದ ವಿಷಯಕ್ಕಾಗಿ ಮನುಷ್ಯರೊಳು ದೈನ್ಯಬಡಲೇಕೆ ? ಅಂಗದ ಇಂದ್ರಿಯಕ್ಕಾಗಿ ನಿಜಲಿಂಗವ ಹಿಂಗಲೇಕೆ ? ಮನುಷ್ಯರ ಹಂಗ ಬಿಟ್ಟು ನಿಜಾಂಗವಾದ ಮಹಾತ್ಮಂಗೆ ಇದಿರಿಡಲಿಲ್ಲ. ಇದಿರಿಂಗೆ ತಾನಿಲ್ಲ. ಉಭಯವಳಿದ ಮತ್ತೆ ಏನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು : ನಿನ್ನ 1ಯತಿಯತ್ವ1ದ ಬಗೆ ಎಂತೆಲಾ ? ಬರಿದೆ ದ್ರವ್ಯಕ್ಕೆ ಆಶೆಮಾಡಿ, ಪರರ ಕಾರ್ಪಣ್ಯದಿಂದ ಕಾಡಿ ಬೇಡಿ, ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು ಬಡಿವಾರದಿಂದ ತಿರುಗಿದ ಬಳಿಕ, ನಿನಗೆ ಯತಿಯತ್ವವು ಎಲ್ಲೈತೆಲಾ ? ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ : ಯತಿ ನೀನಾದ ಬಳಿಕ ತನುವಿನ ಹಂಗು ಹರಿಯಬೇಕು ; ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು ; ಧನವ ಸ್ವಪ್ನದಲ್ಲಿ ಮುಟ್ಟಲಾಗದು ; ಅನ್ನದ ಆಸೆಯ ಬಿಡಬೇಕು ; ಚಿನ್ಮಯನಾಗಿ ನಡೆಯಬೇಕು ; ಚಿಂತೆಯ ಮರೆತು ವೈರಾಗ್ಯದಿಂದಿರಬೇಕು ; ಕಾಮದ ಹಂಗ ಕಳೆಯಬೇಕು ; ಕರ್ಮೇಂದ್ರಿಯಂಗಳ ಸುಡಬೇಕು ; ಲಿಂಗದಲ್ಲಿ ಕರುಣ ಇರಬೇಕು. ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ ಯತಿವರನೆಂದು ನಮೋ ಎಂಬುವೆನಯ್ಯಾ ! ಬರಿದೆ ಯತಿ ಎನಿಸಿಕೊಂಡು ಕೋಪಾಟೋಪದೊಳು ಬಿದ್ದು ಹೊರಳಾಡುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಇನ್ನಷ್ಟು ... -->