ಅಥವಾ

ಒಟ್ಟು 40 ಕಡೆಗಳಲ್ಲಿ , 16 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ.
--------------
ಜೇಡರ ದಾಸಿಮಯ್ಯ
ಗೊಲ್ಲನ ಕೊಳಲಧ್ವನಿ ಕೇಳಿ ಹಂದಿ ನಾಯಿ ಎಮ್ಮೆ ಕೋಣ ಸರಳ ಕೊಂಬಿನಪಶುಗಳು ಸಾಯದೇ ಇರ್ಪವು. ಕೊಂಬಿಲ್ಲದ ಪಶುವು ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಸತ್ತಿರ್ಪರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗದ ಮೇಲೆ ಲಿಂಗವ ಬಿಜಯಂಗೈಸಿಕೊಂಡು, ಲಿಂಗವಿಲ್ಲದಂಗನೆಯರನಪ್ಪಿದಡೆ, ಸುರಾಭಾಂಡವನಪ್ಪಿದಂತೆ ಕೇಳಿರಣ್ಣ. ಲಿಂಗಸಾಹಿತ್ಯವಾಗಿರ್ದು, ಲಿಂಗವಿಲ್ಲದ ಸತಿಯರ ಕೂಡಿಕೊಂಡಿಹ ಪರಿಯೆಂತಯ್ಯ ! ಲಿಂಗವುಳ್ಳ ತನು ಲಿಂಗವಿಲ್ಲದ ತನುವಿನೊಡನೆ ಸಂಯೋಗಮಂ ಮಾಡಿದಡೆಂತಕ್ಕು, ಹಾಲಗಡಿಗೆಯ ಹಂದಿ ಮುಟ್ಟಿದಂತಕ್ಕು ! ಅದೆಂತೆಂದಡೆ : ಲಿಂಗೇನ ಸಹಿತೋ ದೇಹೀ ಲಿಂಗಹೀನಾಂ ತು ಯಃ ಸತೀಮ್ | ಸಹವಾಸೇ ಸಹತೇ ನಿತ್ಯಂ ಕಿಂ ಫಲಂ ಕಿಂ ಕೃತಂ ಭವೇತ್ || ಕಿಂ ತೇನ ಕ್ಷೀರಭಾಂಡೇನ ಸೂಕರೈ ಃ ಸಹ ವರ್ತಿನಾ | ಎಂದುದಾಗಿ, ಲಿಂಗವುಳ್ಳ ಲಿಂಗಾರ್ಚಕರು ಲಿಂಗೈಕ್ಯರು, ಲಿಂಗವಿಲ್ಲದೆ ಭವಿಯಾಗಿರ್ದ ಸತಿಯರ ಆಲಿಂಗನ, ಚುಂಬನವ ಮಾಡಿದಡೆ, ಗುರುಕಾರುಣ್ಯ ಉಂಟೆಂದು ಸಾಧಾರಣಪಕ್ಷದಲ್ಲಿ ಮಾಡಿಕೊಂಡಿರ್ದಡೆ, ಮಾಡಿದ ಲಿಂಗಾರ್ಚನೆ ನಿಷ್ಫಲಂ. ಶತಜನ್ಮ ಪರಿಯಂತರ ಹೊಲೆಯರಲ್ಲಿಕ್ಕದೆ ಮಾಣ್ಬನೆ, ನಮ್ಮ ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಅರ್ಥದ ಮೇಲಣ ಆಶೆಯುಳ್ಳನ್ನಕ್ಕರ, ಮತ್ರ್ಯಲೋಕದ ಮಹಾಜಂಜರಿ ಬಿಡದಯ್ಯ. ನಾನು ಮತ್ರ್ಯಲೋಕದ ಹಂಬಲ ಹರಿದು, ನಿನ್ನ ನಂಬಿ ನಚ್ಚಿದೆನೆಂಬುದಕ್ಕೆ ಪ್ರತ್ಯಕ್ಷಮಂ ತೋರುತಿರ್ಪೆ ನೋಡಯ್ಯ ಲಿಂಗವೆ. ಅನಘ್ರ್ಯವಾದ ಮುತ್ತು ರತ್ನಂಗಳು ಹೊಂಗೊಡದಲ್ಲಿ ತುಂಬಿ, ನಾನಿರ್ದ ಏಕಾಂತವಾಸಕ್ಕೆ ಉರುಳಿ ಬರಲು, ಹಾವ ಕಂಡ ಮರ್ಕಟನಂತೆ, ನಾನು ಅಡ್ಡಮೊಗವನಿಕ್ಕಿದೆನೆನೆ, ನಿನಗೊಲಿದ ಶರಣನೆಂದು ಭಾವಿಸಿ, ಎನ್ನ ಮತ್ರ್ಯಲೋಕದ ಸಂಕಲೆಯಂ ತರಿದು, ನಿನ್ನ ಗಣಂಗಳ ಒಳಗುಮಾಡು. ಅದಲ್ಲದೆ, ಅದರ ಮೇಲೆ ಕಿಂಚಿತ್ತು ಆಶೆಯಂ ಮಾಡಲೊಡನೆ, ಚಂದ್ರಸೂರ್ಯಾದಿಗಳುಳ್ಳನ್ನಕ, ಎನ್ನ ಹಂದಿ ನಾಯಿ ಬಸುರಲ್ಲಿ ಹಾಕದಿದ್ದೆಯಾದರೆ, ನಿನಗೆ ಅಲ್ಲಮಪ್ರಭುವಿನಾಣೆ ಆಳಿನಪಮಾನ ಆಳ್ದಂಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ವೀರಮಾಹೇಶ್ವರರುಗಳೆಂಬ ಪೋರಜಂಗುಳಿಗಳನೇನೆಂಬೆನಯ್ಯಾ ? ಮಣ್ಣವಿಡಿದು ಬಣ್ಣಗೆಟ್ಟು ಬರಿಯ ಬಸಿರ ಹೊರೆಯಲಿಕ್ಕೆಂದು, ಕಾಸು ವಿಷಯಾದಿ ಗೃಹ ಕ್ಷೇತ್ರಕ್ಕೆ ಮೆಚ್ಚಿ ಗುರುಹಿರಿಯನರಿಯದೆ ಹೋರಾಡಿ ಹೊಲಬುಗೆಟ್ಟು ಹೋಗುವ ಮಲಬದ್ಧ ಮೂಢರು ವೀರಮಾಹೇಶ್ವರರಪ್ಪರೆ ? ಕನ್ಯೆಯರೊಲವಿಂಗೆ ಕಲೆತು ಮನ್ನಣೆಮರ್ಯಾದೆಗಳ ಹರಿದು, ಚುನ್ನಾಟದ ಕುನ್ನಿಗಳಂತೆ ಬೆನ್ನಹತ್ತಿ ತಿರುಗುವ ಶುನಿಸಂಬಂಧಿಗಳನೆಂತು ಮಾಹೇಶ್ವರರೆಂಬೆನಯ್ಯಾ ? ಹೊನ್ನ ಹಿಡಿದು ಅನ್ಯರಿಗೆ ಬಡ್ಡಿಯ ಕೊಟ್ಟು, ಬಂಧನವ ಮಾಡಿ ತಂದು ಕೂಡಹಾಕಿ, ಬಂದ ಜಂಗಮಕ್ಕೊಂದು ಕಾಸನೀಯದೆ ಬೆಂದವೊಡಲಿಗೆ ಸಂದಿಸದೆ, ಹಂದಿ ನಾಯಿಯಂತೆ ಸಾವ, ಹೆಂದ ಮೂಢರು ಮಾಹೇಶ್ವರರಪ್ಪರೆ ? ಇಂತು ತ್ರಿವಿಧದೊಳಗಿರ್ದ ತ್ರಿವಿಧವನರಿಯದ ತ್ರಿವಿಧ ಮಲಭುಂಜಕರನೆಂತು ಮಾಹೇಶ್ವರರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ ಅದ ಮರೆದು, ಹಲವು ದೇವರ ಪೂಜೆಮಾಡಿ, ಹಲವು ದೇವರ ಬಳಿಯಲ್ಲಿ ನೀರ ಕುಡಿದು, ಹಲವು ದೇವರ ನೈವೇದ್ಯವ ತಿಂಬ ಹೊಲೆಯನ ಶಿವಭಕ್ತನೆನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ : ``ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ | ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||'' ಎಂಬುದನರಿಯದೆ, ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ : ಸಾಕ್ಷಿ :``ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ | ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||'' ಎಂಬುದನರಿಯದೆ, ಮತ್ತೆ ಮೇಣ್, ಸಾಕ್ಷಿ :``ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ | ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||'' ಹೀಗೆಂಬುದನರಿಯದೆ, ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು. ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ : ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ, ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ, ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ತನುವು ನಿಮ್ಮ ಚರಣವ ಪೂಜಿಸಲೊಲ್ಲದೆ ಹಸಿವು ತೃಷೆ ವಿಷಯದಲ್ಲಿ ಹತವಾಗುತಿರ್ಪುದು ನೋಡಾ! ಎನ್ನ ಮನವು ನಿಮ್ಮ ದಿವ್ಯನಾಮವ ನೆನೆಯಲೊಲ್ಲದೆ ಬಿನುಗು ವಿಷಯಕ್ಕೆ ಹರಿಯುತಿರ್ಪುದು ನೋಡಾ! ಶಿವಶಿವಾ, ಈ ತನುಮನದ ದುರ್ಗುಣದ ವರ್ತನೆಯನೇನೆಂಬೆನಯ್ಯ? ಹಂದಿ ಹಡಿಕೆಯ ನೆನೆಸಿ ಹಾಳಗೇರಿಗೆ ಹೋಗುವಂತೆ ಪ್ರಪಂಚಿನತ್ತ ಓಡಾಡುತಿರ್ಪುವಯ್ಯ ಎನ್ನ ದುರ್ಗುಣಂಗಳು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ. ಆಡು ಆನೆಯ ನುಂಗಿದ ಕಂಡೆ. ಗುಂಗಾಡಿ ಹುಲಿಯ ನುಂಗಿದ ಕಂಡೆ. ಹಂದಿ ಶುನಿಗಳ ಕಚ್ಚಿ ಹರಿದಾಡುವದ ಕಂಡೆ. ಗಗನದೊಳಗಣ ಚಂದ್ರನ ಭೂಮಿಯೊಳಗಣ ಸರ್ಪ ನುಂಗಿದ್ದ ಕಂಡೆ. ಕೋತಿ ಕುದುರೆಯನೇರಿ ಹರಿದಾಡುವದ ಕಂಡೆ. ಅರಸಿನ ಮಗ ಹೊಲತಿಯ ಸಂಗ ಮಾಡುವದ ಕಂಡೆ. ಅಷ್ಟರಲ್ಲಿಯೇ ಒಂದು ಇರುವೆ ಹುಟ್ಟಿ, ಅರಸಿನ ಮಗನ ನುಂಗಿ, ಹೊಲತಿಯ ಕೊಂದು, ಆನೆ ಆಡಿಗೆ ಕಚ್ಚಿ, ಹುಲಿ ಗುಂಗಾಡಿಯ ನುಂಗಿ, ಗಗನದ ಚಂದ್ರನವಗ್ರಹಿಸಿ, ಸರ್ಪನ ಕೊಂದು, ಹಂದಿ, ನಾಯಿ ಕುದುರೆ, ಕೋತಿಯ ಹತಮಾಡಿ, ಮೃತ್ಯುವೆಂಬ ಪಟ್ಟಣವ ಸುಟ್ಟು, ಇರುವೆಯ ಗರ್ಭದಲ್ಲಿ ಇಬ್ಬರು ಹತವಾದರು. ಇಬ್ಬರು ಹತವಾದಲ್ಲಿ ಹಲಬರು ಹತವಾದರು. ಈ ಭೇದವ ತಿಳಿಯಬಲ್ಲರೆ ಅಂಗಲಿಂಗಿ ಪ್ರಾಣಲಿಂಗಿ ಸರ್ವಾಂಗಲಿಂಗಿ ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಂದಿ, ಮೊಲ, ಪಶುವ ತಿಂದವನೇ ಭಕ್ತ. ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ. ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ. ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ. ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು. ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ. ಇಂತೀ ಎಲ್ಲವ ಕೊಂದು ತಿಂದವನ ಕೊಂದು ಯಾರೂ ಇಲ್ಲದ ದೇಶಕ್ಕೆ ಒಯ್ದು ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು, ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು, ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ, ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ. ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ಗುರುಮೂರ್ತಿಗಳು, ಚರಮೂರ್ತಿಗಳು ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ. ಇಂತೀ ವಿಚಾರವನು ತಿಳಿಯದೆ ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು, ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು ಪಾದಪೂಜೆಯ ಮಾಡಿಸಿಕೊಂಡು ಪಾದವ ಪಾಲಿಸುವರೆಂದು ಭಕ್ತರಿಗೆ ತೀರ್ಥವೆಂದು ಕೊಡುವಂಥವರು ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ ಹೆಂಡಗಾರರು ಇವರಿಬ್ಬರು ಸರಿ ಎಂಬೆ. ಇಂತೀ ನಿರ್ಣಯವನು ತಿಳಿಯದೆ ಭಕ್ತರನಡ್ಡಗೆಡಹಿಸಿಕೊಂಡು. ಪ್ರಸಾದವೆಂದು ತಮ್ಮ ಎಡೆಯೊಳಗಿನ ಕೂಳ ತೆಗೆದು ಕೈಯೆತ್ತಿ ನೀಡುವರು. ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು ಹೋತು ಕುರಿಗಳನು ಕೊಂದು ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ ಕಟುಕರು ಇವರಿಬ್ಬರು ಸರಿ ಎಂಬೆ. ಇಂತೀ ಭೇದವ ತಿಳಿಯದೆ ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು ಕೊಡುವಂತ ಗುರುಹಿರಿಯರು ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ. ಹಳೆನಾಯಿ ಮುದಿಬೆಕ್ಕು ಸತ್ತ ಮೂರುದಿನದ ಮೇಲೆ ಆರಿಸಿಕೊಂಡು ಬಂದು ಅದರ ಜೀರ್ಣಮಾಂಸವನು ತಿಂದು ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ. ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ, ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ ಅವರ ಒಡಲಿಗೆ ಕೂಳನು ಹಾಕಿ, ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ. ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಕೊಳಬಲ್ಲರೆ ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂವರು ಮುಟ್ಟದ ದೇವ ದೇವರದೇವನ, ಭಾವದಿಂ ತೆಗೆದುಕೊಟ್ಟ ಗುರುವಿನ ಮಗನೆಂದು ನುಡಿದು ನಡೆವಲ್ಲಿ ಇದನಳಿದು ಅಧೋದ್ವಾರದಿಂದೆ ಬಂದೆನೆಂಬ ಭಾವ ದಿಟವಾಗಿ, ಮಾಯೋಚ್ಫಿಷ್ಟ ಮದಮೋಹಿತನಾಗಿ ತಂದೆ ತಾಯಿ ಬಂಧು ಬಳಗ ನನ್ನದೆಂದು ನುಡಿದು, ಹಂದಿ ನಾಯಿಯ ಜನ್ಮಕ್ಕೆ ಬಂದು ಬಿದ್ದು ಹೋಗುವ ಮಂದಮತಿ ಮಾದಿಗರನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಶಿವಾ, ಈ ಲೋಕದೊಳಗೆ ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು ದೀಕ್ಷೋಪದೇಶ ಅಯ್ಯತನವ ಮಾಡುವೆವೆಂದು ಹೇಳಿಕೊಂಬರಯ್ಯ. ಅದೆಂತೆಂದೊಡೆ: ಭಕ್ತರ ದೀಕ್ಷೋಪದೇಶವ ಮಾಡುವ ಕಾಲಕ್ಕೆ ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ, ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ, ಗೃಹವನೆಲ್ಲ ಸಾರಣೆಯ ಮಾಡಿಸಿ, ಹೊಸ ಮಡಕೆಯ ತರಿಸಿ, ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ, ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ, ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು, ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ ಅವರಂಗದ ಮೇಲೆ ಲಿಂಗವ ಧರಿಸಿ ಮಾಂಸಪಿಂಡವಳಿದು ಮಂತ್ರಪಿಂಡವಾಯಿತು, ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು ಅವರಂಗದ ಮೇಲೆ ಲಿಂಗಧಾರಣ ಮಾಡಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ ಇವರು ಸದ್ಭಕ್ತರ ಮಾಡಲರಿಯರು. ಸದ್ಭಕ್ತರ ಮಾಡುವ ಪರಿಯ ಪೇಳ್ವೆ. ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವುಳ್ಳ ಚಿದ್ಘಟವ ತಂದು, ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು, ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ, ನಿರ್ಮಾಯ ನಿರ್ಮೋಹವೆಂಬ ವಸ್ತ್ರವನುಡಿಸಿ ತೊಡಿಸಿ, ಆಶೆ ಎಂಬ ಕೇಶವ ಬೋಳಿಸಿ, ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು, ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ, ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು, ಹಂದಿ ನಾಯಿಯ ಕೊಂದು ಕಂಡವ ತಿನಿಸಿ, ಕಪ್ಪೆಯ ಉಚ್ಚಿಯ ಕುಡಿಸಿ, ಇಂತೀ ಪರಿಯಲ್ಲಿ ದೀಕ್ಷೋಪದೇಶವ ಮಾಡಿ ಲಿಂಗವ ಕೊಡಬಲ್ಲರೆ ಗುರುವೆಂಬೆ. ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ. ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ. ಇಲ್ಲದಿದ್ದರೆ ಬದ್ಧಭವಿಗಳೆಂಬೆ. ಇಂತೀ ತರುವಾಯದಲ್ಲಿ ಅಯ್ಯತನವ ಮಾಡಬಲ್ಲರೆ ಚರಂತಿಹಿರಿಯರು ಎಂಬೆ. ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ. ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದುಕೊಳ್ಳಬೇಕಲ್ಲದೆ, ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು. ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು, ಇನ್ನೊಬ್ಬರಿಗೆ ಏನು ಹೇಳುವರಯ್ಯ? ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ, ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ, ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು, ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ, ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಮೂಗ ಕೊಯಿದು ಕನ್ನಡಿಯ ತೋರಿ ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ ಪಾದರಕ್ಷೆಯಲ್ಲಿ ಘಟ್ಟಿಸಿ, ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಂದಿ ಶ್ರೀಗಂಧವನೆಂದೂ ಒಲ್ಲದು. ಕುಂದದೆ ಹರಿವುದು ಅಮೇಧ್ಯಕ್ಕೆ. ಶಿವಭಕ್ತನಾಗಿರ್ದು ಹಿಂದ ಬೆರಸಿದಡೆ ಆ ಹಂದಿಗಿಂದವು ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮಸಿ ಕಪ್ಪಾಯಿತ್ತೆಂದು ಹಾವುಮೆಕ್ಕೆಯ ಹಣ್ಣು ಕಹಿಯಾಯಿತ್ತೆಂದು ತಿಪ್ಪೆಯ ಹಳ್ಳ ಕದಡಿತ್ತೆಂದು ಹಂದಿ ಹುಡು ಹುಡುಗುಟ್ಟಿತ್ತೆಂದು ನಾಯಿ ಬಗುಳಿತ್ತೆಂದು ಸಂದೇಹಿಸಿದವರುಂಟೆ? ಇದು ಕಾರಣ, ಅರಿಯದ ಅಜ್ಞಾನಿಗಳು ನುಡಿದರೆ ಅರುಹಿಂಗೆ ಭ್ರಮೆಯುಂಟೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಂದಿ ಶ್ರೀಗಂಧವ ಹೂಸಿದಡೇನು? ಗಂಧರಾಜನಾಗಬಲ್ಲುದೆ? ನವಿಲು ನಲಿಯಿತ್ತೆಂದಡೆ ಕಾಕೋಳಿ ಪುಕ್ಕವ ತರಕೊಂಡಂತೆ ಕರ್ಮಿಗಳ ಭಕ್ತಿ! ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು ತೆರನನರಿದು ಮರವೆಯ ಕಳದು ಮಾತಿನಂತೆ ನೀತಿಯುಳ್ಳಡೆ ಅವರ ಅಜಾತರೆಂಬೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ. ವಿಷ್ಣುಪದವ ಪಡೆದೆನೆಂಬುದು ತೃಷ್ಣೆ ಕಾಣಿರೋ. ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ ಮರುಳು ಮಾನವರಿರಾ. ದೇವಾತಾದಿಭೋಗಂಗಳ ಪಡೆದಿಹೆನೆಂದು ಪರಿಣಾಮಿಸುವ ಗಾವಿಲರನೇನೆಂಬೆನಯ್ಯ? ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ. ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ. ಅದೇನು ಕಾರಣವೆಂದರೆ: ಇವೆಲ್ಲವೂ ಅನಿತ್ಯಪದವಾದ ಕಾರಣ. ಇವೆಲ್ಲ ಪದಂಗಳಿಗೂ ಮೇಲಾದ ಮಹಾಲಿಂಗ ಪದವೇ ನಿತ್ಯತ್ವಪದ. ಆ ಮಹಾಲಿಂಗ ಪದದೊಳಗೆ ಸಂಯೋಗವಾದ ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ ಒಂದು ವಸ್ತುವ ಬಲ್ಲನೇ ಅನನ್ಯ ಶರಣನು? ಇದು ಕಾರಣ, ತನುವ ಬಳಲಿಸಿ ತಪವಮಾಡಿ ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ ಹಂದಿ ತಪವಮಾಡಿ ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ. ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->