ಅಥವಾ

ಒಟ್ಟು 62 ಕಡೆಗಳಲ್ಲಿ , 18 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಕ ಹಾಲ ಸವಿದಂತೆ, ಮರುಳಿನ ಮನದ ಹರ್ಷದಂತೆ, ಮೂಗರು ಕಂಡ ಕನಸಿನಂತೆ, ಬಂಜೆಯ ಮನದ ನೇಹದಂತೆ, ನೆಯಿ ಆರಿದ ನೆಳಲಂತೆ, ಮಹಾಲಿಂಗ ಗಜೇಶ್ವರನೊಲವು ನೋಡವ್ವಾ.
--------------
ಗಜೇಶ ಮಸಣಯ್ಯ
ಕಬ್ಬನಗಿದ ಗಾಣ ಬಲ್ಲುದೆ ಹಾಲ ಸವಿಯ ? ಗಗನದಲಾಡುವ ಪಕ್ಷಿ ಬಲ್ಲುದೆ ರವಿಯ ನಿಲವ ? ಹಗರಣಕ್ಕೆ ಪೂಜಿಸುವರು ಬಲ್ಲರೆ ನಮ್ಮ ಶರಣರ ಸುಳುಹ ? ನಡುಮುರಿದು ಗುಡುಗೂರಿದಡೇನು ಲಿಂಗದ ನಿಜವನರಿಯದನ್ನಕ್ಕ ? ಸಾವನ್ನಕ್ಕ ಜಪವ ಮಾಡಿದಡೇನು ಲಿಂಗದ ಪ್ರಾಣ ತನ್ನ ಪ್ರಾಣ ಒಡಗೂಡದನ್ನಕ್ಕ ? ಇಂತಿವರೆಲ್ಲರು ಅಭ್ಯಾಸಶಕ್ತಿಗರುಹಿಗರು ! ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಮಾಯಾಕೋಳಾಹಳ ಸಿದ್ಧರಾಮಯ್ಯದೇವರಿಗೆ ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ ಪ್ರಭುವೆ.
--------------
ಚನ್ನಬಸವಣ್ಣ
ಕಾಳಾಡಿನ ಹಾಲ ಕಂಬಳಿಗುರಿ ಕುಡಿಯಿತ್ತು. ಕುಡಿದು ಮೂರುಲೋಕವೆಲ್ಲವೂ ಎನ್ನ ಕಂಬಳಿಯ ಗೊಪ್ಪೆಯಲ್ಲಿ ತುಂಬಿದೆನೆಂದು ಸಂಭ್ರಮ ಮಾಡುತ್ತಿದೆ. ಅದರ ಸಂಗಸುಖವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ಎನಗೊಂದು ವ್ಯಾಧಿ ಹತ್ತಿ ಗೊಲ್ಲನ ಧ್ವನಿಮಾಡಲು, ಆ ಗೊಲ್ಲನು ಮೆಲ್ಲಮೆಲ್ಲನೆ ಬಂದು ತನ್ನ ಜೋಳಿಗೆಯೊಳಗಣ ನವಗುಳಿಗೆಯ ತೆಗೆದು, ಎಂಟು ದಿಕ್ಕಿಗೆ ಎಂಟು ಗುಳಿಗೆಯನೊಗೆದು, ಮಧ್ಯದಲ್ಲಿ ಒಂದು ಗುಳಿಗೆಯನಿಟ್ಟು, ತಣ್ಣೀರು ಕುಡಿಯಬೇಡ, ತಂಗಳನ್ನವನುಣ್ಣಬೇಡ, ಮಜ್ಜಿಗೆಯ ಕುಡಿಯಬೇಡ, ಎಮ್ಮಿಯ ಹಾಲ ಸೇವಿಬೇಡ, ಇಂತೀ ಎಲ್ಲವನು ವಿಸರ್ಜಿಸಿ, ಬಿಸಿನೀರು ಕುಡಿದು, ಬಿಸಿ ಅನ್ನವನುಂಡು, ಬಿಳಿ ಆವಿನ ಹಾಲು ಸೇವಿಸಿ, ಪಥ್ಯವ ಮಾಡೆಂದು ಗೊಲ್ಲನು ಪೇಳಿದನು. ಇಂತೀ ಕ್ರಮದಲ್ಲಿ ಪಥ್ಯವ ಮಾಡಿದವರಿಗೆ ರೋಗಾದಿಗಳ ಬಾಧೆ ಪಲಾಯನವಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ ! ಆ ತಲೆಯಾತಲೆ ನುಂಗಿತ್ತಲ್ಲಾ ! ಸತ್ತು ಹಾಲ ಸವಿಯ ಬಲ್ಲಡೆ, ರಥದ ಕೀಲ ಬಲ್ಲಡೆ_ಅದು ಯೋಗ ! ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು, ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು. ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ? ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ, ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು, ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ತನಗುಳ್ಳ ನಿಧಾನ ತನಗಿಲ್ಲದಂತೆ, ಬಂಧುಗಳೆಲ್ಲರ ನುಂಗಿ ಅಂಬುಧಿ ಬತ್ತಿತ್ತು. ಅದುಭುತ ಸತ್ತಿತ್ತು; ರಣರಂಗವತ್ತಿತ್ತು. ಇರುಳು ಮಾಣಿಕವ ನುಂಗಿ ಮರಣವಾದ ಬಳಿಕ ಅಮೃತದ ಪುತ್ಥಳಿಯ ಹಾಲ ಕುಡಿಯ ಕರೆದಡೆ ಗುಹೇಶ್ವರಲಿಂಗಕ್ಕೆ ಊಟವೆಂಬುದಿಲ್ಲ ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ ಒಂದೇ ಹೊಲದಲ್ಲಿ ಮೇದು, ಆರು ಕೆರೆಯ ನೀರ ಕುಡಿದು, ಒಂದೇ ದಾರಿಯಲ್ಲಿ ಬಂದು, ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು. ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು, ಹಾಲಿಗೆ ಏಕವರ್ಣ. ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ ಚಟ್ಟಿ ಹತ್ತದೆ, ಹಸುಕು ನಾರದೆ, ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ ಕಾಸಿ ಉಣಬಲ್ಲಡೆ ಆತನೆ ಭೋಗಿ. ಆತ ನಿರತಿಶಯಾನುಭಾವ ಶುದ್ಧಾತ್ಮನು, ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.
--------------
ಶಂಕರದಾಸಿಮಯ್ಯ
ಸಿಂಹನ ಹಾಲ ಆನೆಯಮರಿ ಉಣಬಲ್ಲುದೆ ? ಹುಲಿಯ ಹಾಲ ಹುಲ್ಲೆಯಮರಿ ಉಣಬಲ್ಲುದೆ ? ಗರುಡನಿಂದೆ ಗುಟುಕ ಹಂದಿಯಮರಿ ಕೊಳಬಲ್ಲುದೆ, ತಮ್ಮ ಮರಿಯಲ್ಲದೆ ? ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಘನಗಂಭೀರ ಗುರುಚರಲಿಂಗದ ದಯರಸವನುಣಬಲ್ಲರೆ ಮಲಭುಂಜಕರು ? ನಿಮ್ಮವರಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಲೆಯಿಲ್ಲದ ಮಲೆನಾಡ ಹೆಣ್ಣಿಂಗೆ ಮೊಲೆಯೇಳು ನೋಡಾ! ಪಂಚವರ್ಣದ ಹಾಲ ತಲೆಗುತ್ತಿ ಕುಡಿದವರು ವಿಧಿ ಮಾಧವ ವಿಷಧರಪದದೊಳಗಾದರು. ಮತ್ತೆ ಮೊದಲರಿಯದವರ ಕಂಡು ಚಪಲಗತಿ ಚೆಲುವ ಗುರುನಿರಂಜನ ಚನ್ನಬಸವಲಿಂಗದ ಬಲೆಯೊಳು ಬಿದ್ದು ಕುಲಗೆಟ್ಟು ಕುರುಹಳಿದ ಸುಖವನೇನೆಂಬೆ ಹಿಂದಣ ಕೂಟವರಿಯರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು ನಂಬಿದಲ್ಲಿ ಹೊರೆ ಹುಟ್ಟಿದ ಬಳಿಕ, ಹಾಲ ಹರವಿಯೊಳಗೆ ಹುಳಿ ಹೊಕ್ಕಂತೆ ನೋಡಯ್ಯಾ ! ಅಂಗದ ಮೇಲೆ ಲಿಂಗವುಳ್ಳುದೆಲ್ಲ ಸಂಗಮನಾಥದೇವರೆಂದು ನಂಬಿದ ನಂಬುಗೆಯು ಬಂದ ಶರಣರ ನಿಲವನರಿಯದಿದ್ದಲ್ಲಿ ತಪ್ಪಿತ್ತು ನೋಡಾ ಗುರುವೆ. ಸಂಗಮನಾಥ ಅಂಗವಿಡಿದು ಮನೆಗೆ ನಡೆದು ಬಂದಡೆ ದಿಮ್ಮನೆ ಇದಿರೆದ್ದು ವಂದಿಸಬೇಕು ನೋಡಯ್ಯಾ. ಕೂಡಲಚೆನ್ನಸಂಗನ ಶರಣ ಪ್ರಭುದೇವರು, ಸಿದ್ಧರಾಮಯ್ಯದೇವರು ಬಂದು ಬಾಗಿಲೊಳಗಿರಲು ಕಣ್ಣರಿಯದಿದ್ದರೂ ಕರುಳರಿಯಬೇಡವೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಹಾಲ ಕಂದಲು, ತುಪ್ಪದ ಮಡಕೆಯ ಬೋಡು ಮುಕ್ಕೆನಬೇಡ. ಹಾಲು ಸಿಹಿ, ತುಪ್ಪ ಕಮ್ಮನೆ :ಲಿಂಗಕ್ಕೆ ಬೋನ. ಕೂಡಲಸಂಗನ ಶರಣರ ಅಂಗಹೀನರೆಂದಡೆ ನಾಯಕನರಕ . 417
--------------
ಬಸವಣ್ಣ
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆುತ್ತೆನ್ನ ಮತಿ, ಕೂಡಲಸಂಗಮದೇವಾ. 291
--------------
ಬಸವಣ್ಣ
ಅತ್ತೆ ಅಳಿಯನ ನೆರೆದು ಮಾವ ಸೊಸೆಯ ಬೆರೆದು, ಗುರುವಿನ ಸತಿ ಶಿಷ್ಯನ ನೆರೆದು, ಶಿಷ್ಯನ ಸತಿ ಗುರುವ ಬೆರೆದು, ಊರೊಳಗೆ ಬೆಳಗಾಯಿತ್ತು. ಬೆಳಗಿನೊಳಗೆ ಸಮಗಾರನೆದ್ದು ಕಾಳಿಯಳಿದು ಅರಸನ ಸತಿಯಸಂಗವ ಮಾಡಿ, ಮೊಲೆಯುಂಡು ಹಾಲ ನಂಜೇರಿ ಸಮಗಾರ ಸತ್ತು, ಆವಲ್ಲಿ ಪೋದನೆಂಬುದ ತಿಳಿಯಬಲ್ಲರೆ ಶರಣರೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡಿನ ಹಾಲ ಹರವಿಯ ತುಂಬಿ, ಕುರಿಯ ಹಾಲ ಕೊಡವ ತುಂಬಿ, ಮರಿಯ ಹಾಲ ಮಗಿಯ ತುಂಬಿ, ಒಂದು ಕಲ್ಲಿನ ಒಲೆಯಮೇಲಿರಿಸಿ, ಐದೂರ ಬೆಂಕಿಲ್ಲದೆ, ಆರೂರ ಬೆಂಕಿಯಿಂದ ಕಾಸಲು, ಹಾಲರತು ಘಟ ಉಳಿದು, ಉಳಿದ ಘಟವ ತಲೆಯಿಂದ ಹೊತ್ತು ವೀರಬೀರೇಶ್ವರಲಿಂಗಕ್ಕೆ ಕೊಟ್ಟು ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->