ಅಥವಾ

ಒಟ್ಟು 64 ಕಡೆಗಳಲ್ಲಿ , 24 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಲಿಲ್ಲದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಡೆ, ತೋರಿ ಮೆರೆವ ಸಂಗಮನಾಥನು ಎದ್ದು ಹೋದನು. ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು, ಮಾಡ ಮಾಡ ಸಯದಾನವ ಮರಳಿ ನೋಡಲಿಲ್ಲ. ಇದನೇನ ಹೇಳುವೆ ಅನಿಯಮ ಚರಿತ್ರವನು ಇದೆಂತುಪಮಿಸುವೆನು ವಿಸ್ಮಯವನು ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಯ್ಯಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಬಂದ ಪದಾರ್ಥವ ಸವಿದು ಚಪ್ಪರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ ಪಂಚತತ್ವಸ್ವರೂಪವಾಯಿತ್ತು ನೋಡಾ. ಆ ಪಂಚಸ್ವರೂಪಿಂದಲೆ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಅದು ಎಂತೆಂದರೆ ಹೇಳುವೆ ಕೇಳಿರಣ್ಣಾ : ಸದ್ಯೋಜಾತಮುಖದಲ್ಲಿ ನಕಾರ ಪುಟ್ಟಿತ್ತು , ಆ ನಕಾರದಿಂದ ಪೃಥ್ವಿ ಪುಟ್ಟಿತ್ತು , ವಾಮದೇವಮುಖದಲ್ಲಿ ಮಕಾರ ಪುಟ್ಟಿತ್ತು. ಆ ಮಕಾರದಿಂದ ಅಪ್ಪು ಪುಟ್ಟಿತ್ತು , ಅಘೋರಮುಖದಲ್ಲಿ ಶಿಕಾರ ಜನನ. ಆ ಶಿಕಾರದಿಂದ ಅಗ್ನಿ ಪುಟ್ಟಿತ್ತು , ತತ್ಪುರುಷಮುಖದಲ್ಲಿ ವಕಾರ ಪುಟ್ಟಿತ್ತು , ಆ ವಕಾರದಿಂದ ವಾಯು ಪುಟ್ಟಿತ್ತು , ಈಶಾನಮುಖದಲ್ಲಿ ಯಕಾರ ಜನನ, ಆ ಯಕಾರದಿಂದ ಆಕಾಶ ಹುಟ್ಟಿತ್ತು , ಈ ಪಂಚತತ್ವಸ್ವರೂಪಿಂದ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಹೇಗೆ ನಿರ್ಮಿತವಾಯಿತ್ತೆಂದರೆ, ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದವೆ ಪಂಚವಿಂಶತಿತತ್ವಂಗಳುತ್ಪತ್ಯವಾದವು. ಆ ಪಂಚವಿಂಶತಿ ತತ್ವಂಗಳಿಂದವೆ ಶರೀರವಾಯಿತ್ತು. ನಕಾರದಿಂದ ಕರ್ಮೇಂದ್ರಿಯಂಗಳ ಜನನ. ಮಕಾರದಿಂದ ಪಂಚವಿಷಯಂಗಳುತ್ಪತ್ಯ. ಶಿಕಾರದಿಂದ ಬುದ್ಧೀಂದ್ರಿಯಗಳು ಜನನ. ವಕಾರದಿಂದ ಐದು ಪ್ರಾಣವಾಯುಗಳ ಜನನ. ಯಕಾರದಿಂದ ಅಂತಃಕರಣಚತುಷ್ಟಯಂಗಳು `ನಮಃ ಶಿವಾಯ' `ನಮಃ ಶಿವಾಯ'ವೆಂಬ ಪಂಚಾಕ್ಷರದಿಂದವೆ ಉತ್ಪತ್ಯವೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ, ಅನಲ ನುಂಗಿದ ತಿಲದಂತೆ, ವರುಣನ ಕಿರಣ ಕೊಂಡ ದ್ರವದಂತೆ, ಇನ್ನೇನನುಪಮಿಸುವೆ ? ಇನ್ನಾರಿಗೆ ಹೇಳುವೆ ? ನೋಡುವದಕ್ಕೆ ಕಣ್ಣಿಲ್ಲ, ಕೇಳುವದಕ್ಕೆ ಕಿವಿಯಿಲ್ಲ, ಕೀರ್ತಿಸುವದಕ್ಕೆ ಬಾಯಿಲ್ಲ, ಏನೂ ಎಂಬುದಕ್ಕೆ ತೆರಪಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವು.
--------------
ಮೋಳಿಗೆ ಮಾರಯ್ಯ
ಒಂದೆತ್ತಿಗೈವರು ಗೊಲ್ಲರು, ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ. ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ. ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ ಕೂಡಲಸಂಗಮದೇವಯ್ಯಾ.
--------------
ಬಸವಣ್ಣ
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ ಸಟೆಯೆಂಬ ವಿಪ್ರ ನೀ ಕೇಳಾ. ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ, ಒಂದರಳು ಕುಂದಿದರೆ ನಯನಕಮಲವನೇರಿಸಿ, ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ ? ಹುಸಿಯಲ್ಲ. ಮತ್ತೆ ಹೇಳುವೆ ಕೇಳು ದ್ವಿಜ. ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು ವರಗೃಧ್ರಗಳಾದುದು ಸಟೆಯೇ ? ಸಾಕ್ಷಿ :``ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ ರಾಜಸಬದ್ಧ ವರಗೃಧ್ರ |'' (?) ಎಂದುದಾಗಿ, ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ ತೊಳಲಿ ಬಳಲುತಿರಲು, ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ, ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೀಳು ಮೇಲನರಸುವುದಕ್ಕೆ ಕೋಳಿಯ ಕಾಳಗವೆ ? ಆ[ಳು] ಮೇಳದಲ್ಲಿ ಲೋಲಿತನಾಗಿಹಾಗ, ಸೂಳೆಯ ಮನೆಯ ಆಳೆ ? ಬಾಲರಾಳಿಯ ಜೂಜಿನ ಸೋಲುವೆಯೆ ? ಅವರ ಗಾಣದಲ್ಲಿ ಬಪ್ಪ ಸಾಲಿನ ಹೆಜ್ಜೆಯಂತೆ ಇನ್ನಾರಿಗೆ ಹೇಳುವೆ ? ಮೆಟ್ಟಿದ ಹೆಜ್ಜೆಯ ಮೆಟ್ಟುವ ಕಷ್ಟಜೀವಿಗಳಿಗೆ ಇನ್ನೆತ್ತಣ ಗತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬಾಯಿಲ್ಲದ ಪಶು ಬತ್ತದ ಹೊಲನ ಹೊಕ್ಕು, ಹುಟ್ಟದ ಸಸಿಯ ಮೆಯ್ದು, ಒಡೆಯನಿಲ್ಲದ ಪರವ ತೊಂಡ ಕೂಡಿದ, ತೊಂಡಿನ ಹಟ್ಟಿಯ ಬಾಗಿಲೊಂದು, ಬೀಗ ಒಂಬತ್ತು. ಮೂರೆಸಳಿನ ಬೀಗ ಮೂರು, ಆರೆಸಳಿನ ಬೀಗ ಮೂರು, ಇಪ್ಪತ್ತೈದೆಸಳಿನ ಬೀಗ ಮೂರು ತೆಗೆವ ಕೈಗೆ ನಾಭಿಯಿಲ್ಲ, ಸಿಕ್ಕಿತ್ತು ಹಸು ಹಟ್ಟಿಯಲ್ಲಿ, ಇನ್ನಾರಿಗೆ ಹೇಳುವೆ ? ಅಲೇಖನಾದ ಶೂನ್ಯ ಕಲ್ಲಿನೊಳಗಾದವನ ಬಲ್ಲವರಾರೊ ?
--------------
ವಚನಭಂಡಾರಿ ಶಾಂತರಸ
ಗುರುವೆ ಹೆಂಡತಿಯಾಗಿ, ಹೆಂಡತಿಯೆ ತಾಯಾಗಿ; ತಾಯೆ ಹೆಂಡತಿಯಾಗಿ; ಶಿಷ್ಯನೆ ಗಂಡನಾಗಿ_ ಏನೆಂದು ಹೇಳುವೆ, ಏನೆಂದುಪಮಿಸುವೆ, ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ.
--------------
ಚನ್ನಬಸವಣ್ಣ
ನಮ್ಮ ಗಣಂಗಳ ಸಹವಾಸದಿಂದೆ ಏನೇನು ಫಲಪದವಿಯಾಯಿತ್ತೆಂದಡೆ, ಅಷ್ಟಾವರಣಂಗಳು ಸಾಧ್ಯವಾದವು. ಸಾಧ್ಯವಾದ ಕಾರಣ, ಶ್ರೀಗುರುವು ಎನ್ನ ಕರಸ್ಥಲಕ್ಕೆ ಲಿಂಗವ ಕೊಟ್ಟ, ಎಂದೆಂದಿಗೂ ಸತಿ-ಪತಿ ಭಾವ ತಪ್ಪಬೇಡವೆಂದು ಗಣಂಗಳ ಸಾಕ್ಷಿಯ ಮಾಡಿ, ನೀನು ಅಂಗವಾಗಿ ಲಿಂಗವೇ ಪ್ರಾಣವಾಗಿರಿಯೆಂದು ಇಬ್ಬರಿಗೂ ಆಜ್ಞೆಯ ಮಾಡಿದ ಕಾರಣ ಎನ್ನಂಗವೇ ನಿನ್ನಂಗ, ಎನ್ನ ಪ್ರಾಣವೇ ನಿನ್ನ ಪ್ರಾಣ. ನಿನ್ನ ಪ್ರಾಣವೇ ಎನ್ನ ಪ್ರಾಣವಾದ ಮೇಲೆ ಎನ್ನ ಮಾನಾಪಮಾನ ನಿಮ್ಮದಯ್ಯಾ, ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ. ನೀವು ಈರೇಳು ಲೋಕದ ಒಡೆಯರೆಂಬುದ ನಾನು ಬಲ್ಲೆನಯ್ಯಾ. ಬಲ್ಲೆನಾಗಿ, ಪುರುಷರ ದೊರೆತನ ಹೆಂಡರಿಗಲ್ಲದೆ ಬೇರುಂಟೆ? ಎನ್ನ ಸುಖದುಃಖವೆ ನಿನ್ನದಯ್ಯ, ನಿನ್ನ ಸುಖದುಃಖವೆ ಎನ್ನದಯ್ಯ, ಅದಕ್ಕೆ ಎನ್ನ ತನುಮನಧನವ ಸೂಸಲೀಯದೆ ನಿಮ್ಮೊಡವೆ ನೀವು ಜೋಕೆಯ ಮಾಡಿಕೊಳ್ಳಿರಿ. ಜೋಕೆಯ ಮಾಡದಿದ್ದಡೆ ಗಣಂಗಳಿಗೆ ಹೇಳುವೆ, ಏಕೆಂದರೆ ಗಣಂಗಳು ಸಾಕ್ಷಿಯಾಗಿದ್ದ ಕಾರಣ. ಆಗ ಆ[ಣೆ]ಯ ಮಾತು ಹೇಳಬಹುದೆಯೆಂದಡೆ ಆಗ ಎನಗೆ ಪ್ರತ್ಯುತ್ತರವಿಲ್ಲ ಸ್ವಾಮಿ. ನಿಮ್ಮ ಒಡವೆ ನಿಮಗೆ ಒಪ್ಪಿಸುವೆನೆಂದರುಹಿದನು ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ. ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ. ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ ಪೂಜಿಸಿಕೊಂಬುದು ವೀರಶೈವಲಿಂಗ ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ ಹೋದರಲ್ಲಾ ಹೊಲಬುದಪ್ಪಿ ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ
--------------
ಘಟ್ಟಿವಾಳಯ್ಯ
ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ. ಪೂರ್ವವನಳಿದುದಕ್ಕೆ ಭವ ಹಿಂಗಬೇಕು. ಪುನರ್ಜಾತನಾದ ಮತ್ತೆ ಪುನರಪಿ ಇಲ್ಲದಿರಬೇಕು. ಹೀಂಗಲ್ಲದೆ ಗುರುಕರಜಾತನಾಗಬಾರದು. ತಾನರಿದು ಸರ್ವೇಂದ್ರಿಯವ ಮರೆದು, ಅಳಿವು ಉಳಿವು ಉಭಯವ ಪರಿದ ಸುಖನಿಶ್ಚಯ ಜ್ಯೋತಿರ್ಮಯ ಪ್ರಕಾಶಂಗೆ, ಪಿಂಡದ ಜನ್ಮವ ಕಳೆದುಳಿಯಬೇಕು. ಹೀಂಗಲ್ಲದೆ ಗುರುಸ್ಥಲ ಇಲ್ಲ. [ತ್ರಿವಿಧಕ್ಕೋಲು], ಅದಾರಿಗೆ ದೃಷ್ಟ ? ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಂಚಿತ ಆಗಾಮಿ ಪ್ರಾರಬ್ಧವೆಂಬ ಕರ್ಮಕಲ್ಪಿತಕ್ಕೆ ಹೊರಗಾಗಿಯಲ್ಲದೆ ಲಿಂಗವನರಿಯಬಾರದು. ಆ ಲಿಂಗ ಸಾಕಾರವ ತಾಳಿ, ಜಗದ್ಧಿತಾರ್ಥವಾಗಿ ಬಂದಿರ್ದಲ್ಲಿ ನಿರಾಕಾರದಿಂದ ಕಾಬ ಕಾಣಿಕೆ ಇನ್ನಾವುದೊ ? ಇನ್ನಾರಿಗೆ ಹೇಳುವೆ ? ಕಣಿತಿಯ ಕೈಯ ಕೊಟ್ಟ ಕಲ್ಲಿನಂತೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು. ಶ್ರೋತ್ರನಾಶದಲ್ಲಿ ಜಯಸ್ವರದ ಪಾಡಿದಂತಾಯಿತ್ತು. [ಬೆಳ್ಳ], ಹಣ್ಣಿಂಗೆ ತಾಳಿದ ದೃ[ಷ್ಟದಂ] ತಾಯಿತ್ತು. ನಾ ಬಂದ ಲೀಲೆಯನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಗದ್ದಿಗೆಯ ಏರಿದಲ್ಲಿ ಭೇದವಿಲ್ಲೆಂಬರಿವು ಅಚ್ಚೊತ್ತಿದಡೆ, ಹೇಳುವೆ ಕೇಳಯ್ಯಾ; ಗುರುಗದ್ದಿಗೆಯಲ್ಲಿ ಹರಿವ ಮಶಕ ತಿಗುಣಿಗಳಿಗೆ ಅಭೇದವೊ ಭೇದವೊ? ಅಲ್ಲಿ ಭೇದಾಭೇದವೆಂಬ ಜ್ಞಾನವಿಲ್ಲ. ಇದು ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ಮನಕ್ಕೆ ಸೊಗಸದು, ಕೇಳಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->