ಅಥವಾ

ಒಟ್ಟು 54 ಕಡೆಗಳಲ್ಲಿ , ವಚನಕಾರ ಚನ್ನಬಸವಣ್ಣ , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆಯ ಮೇಲೆ ಸುಳಿವ ವೇಷಲಾಂಛನಧಾರಿಗಳೆಯ್ದೆ, ಹದಿನೆಂಟು ಜಾತಿಯ ಮನೆಯ ಭಿಕ್ಷವನುಂಡು ಕೆಟ್ಟರು. ಅರೆಯ ಮೇಲಿಪ್ಪ ಅರುಹಿರಿಯರೆಯ್ದೆ ವಾಯುಭಿಕ್ಷವನುಂಡು ಕೆಟ್ಟರು. ಗಿರಿಯ ಮೇಲಿಪ್ಪ ತಪಸ್ವಿಗಳೆಯ್ದೆ ವನಭಿಕ್ಷವನುಂಡು ಕೆಟ್ಟರು. ಅರಿಯದೆ ಇಂದ್ರಿಯಂಗಳ ಕಟ್ಟಿ ಕುರುಹಿನ (ರಾಜ್ಯಕ್ಕೆ ಬಂದು) ನರಕಕ್ಕೆ ಹೋಹವರ ಹಿರಿಯರೆಂದು ಎನಗೆ ತೋರದಿರಾ. ಸರ್ವ ಭ್ರಾಂತಳಿದ ಮಹಂತರನೆನಗೆ ತೋರಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುಹಸ್ತದೊಳು ಪುನರ್ಜಾತನಾದ ಭಕ್ತನಲ್ಲಿ ಆವ ಜನ್ಮಜಾತಿಯ ಬೆದಕಲಪ್ಪುದು ? ಅವೆಲ್ಲ ಪ್ರಾಕೃತರಿಗಲ್ಲದೆ ಅಪ್ರಾಕೃತರಿಗುಂಟೆ ಹೇಳಾ ? ``ಅಪ್ರಾಕೃತಸ್ಯ ಭಕ್ತಸ್ಯ ಗುರುಹಸ್ತಾಮಲಾಂಬುಜಾತ್ ಪುನರ್ಜಾತಸ್ಯಾತ್ಮಜನ್ಮ ಜಾತ್ಯಾದೀನ್ನ ಚ ಕಲ್ಪಯೇತ್ ' ಎಂಬ ಆಗಮವನರಿಯದೆ, ನಿಮ್ಮ ಶರಣರಲ್ಲಿ ಜಾತಿಯ ಹುಡುಕುವ ಕಡುಪಾತಕಿಗ? ಎನ್ನತ್ತ ತೋರದಿರಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶಿವಮಂತ್ರ ಸಂಸ್ಕಾರವಿಲ್ಲದ ತನುಭವಿಗಳು ತನ್ನಲಿಂಗಕ್ಕೆ ಮಾಡುವನ್ನಕ್ಕ ಭವಿಮಿಶ್ರವ ಕಳೆದೆವೆಂದೆಂತೆನಬಹುದು? ಶಿವಸಂಸ್ಕಾರವಾಗಿ ಜಾತಿಸೂತಕ [ಜನನಸೂತಕ] ಪ್ರೇತಸೂತಕ ರಜಸ್ಸೂತಕ ಎಂಜಲುಸೂತಕವೆಂಬ ಪಂಚಸೂತಕವುಳ್ಳ ಭವಿಗಳು ತನ್ನ ಲಿಂಗಕ್ಕೆ ಮಾಡುವನ್ನಕ್ಕ ಭವಿಮಿಶ್ರವ ಕಳೆದೆವೆಂದೆಂತೆನಬಹುದು? ತನುಭವಿಯ ಹಸ್ತವೆ ಪಂಚ ಮಹಾಪಾತಕ ಮನಭವಿಯ ಹಸ್ತವೆ ಅಘೋರನರಕ. ಭವಿನಾಂ ಪಾಪದೃಷ್ಟೀನಾಂ ನ ಕಿಂಚಿತ್ಪರಮಂ ಪದಂ ಎಂಬುದನರಿದು ಇಂತಪ್ಪ ಭವಿಗಳನೊಳಗಿಟ್ಟುಕೊಂಡು ಎನಗೆ ಭವಿಮಿಶ್ರವಿಲ್ಲೆಂಬ ಲಜ್ಜೆಗೆಟ್ಟ ದುರಾಚಾರಿಗಳ ಸಜ್ಜನಸದ್ಭಕ್ತರು ಮೆಚ್ಚರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು ಶಿವಾಕಾರವಾದ ಶಿವಭಕ್ತನು ದೇವ ದಾನವ ಮಾನವಾದಿಗಳಲ್ಲಿರ್ದಡೇನು ? ಆತನು ಹುಟ್ಟುಗೆಟ್ಟನಾಗಿ. ಆವ ಕುಲ ಜಾತಿಗಳಲ್ಲಿ ಹುಟ್ಟಿದಡೇನು ? ಶಿವಜ್ಞಾನಸಿದ್ಧನಾದ ಶಿವಭಕ್ತನು ಸಾಧಕರಂತೆ ವರ್ಣಾಶ್ರಮದ ಅಭಿಮಾನಕ್ಕೊಳಗಪ್ಪನೆ ? ಇಲ್ಲಿಲ್ಲ. ಶಿವಭಕ್ತಾ ಮಹಾತ್ಮಾನಸ್ಸಂತಿ ದೇವೇಷು ಕೇಚನ ದೈತ್ಯೇಷು ಯಾತುಧಾನೇಷು ಯಕ್ಷಗಂಧರ್ವಭೋಗಿಷು ಮುನೀಶ್ವರೇಷು ಮೂರ್ತೇಷು ಬ್ರಾಹ್ಮಣೇಷು ನೃಪೇಷು ಚ ಊರುಜೇಷು ಚ ಶೂದ್ರೇಷು ಸಂಕರೇಷ್ವಪಿ ಸರ್ವಶಃ ವರ್ಣಾಶ್ರಮವ್ಯವಸ್ಥಾಶ್ಚ ನೈಷಾಂ ಸಂತಿ ಮುನೀಶ್ವರಾಃ ಕೇವಲಂ ಶಿವರೂಪಾಸ್ತೇ ಸರ್ವೇ ಮಾಹೇಶ್ವರಾಃ ಸ್ಮೃತಾಃ ಎಂದುದಾಗಿ, ಹೇಯವಾದ ಮಾಯೆಯ ನಾಯಿಯಂತೆ ಅಳಿದುಳಿದು ಭಕ್ತನು ಮಾಹೇಶ್ವರನೆನಿಸಿಕೊಂಬನಾಗಿ, ಜಡ ಮಾಯಾಧರ್ಮವ ಹೊದ್ದಲಮ್ಮನು ಕಾಣಾ. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
`ಎನ್ನ ಮನೆ' ಎಂಬವಂಗೆ ಬ್ರಹ್ಮನಿಕ್ಕಿದ ಕೋ?ವಾಯಿತ್ತು, `ಎನ್ನ ಸ್ತ್ರೀ' ಎಂಬವಂಗೆ ವಿಷ್ಣುವಿಕ್ಕಿದ ಸಂಕಲೆ ಹೂಡಿತ್ತು, `ಎನ್ನ ಧನ' ಎಂಬವಂಗೆ ರುದ್ರನಿಕ್ಕಿದ ಆಸೆ ರೋಷದ ಜಿಂಜಿರಿ ಹೂಡಿತ್ತು, `ಎನ್ನ ಕುಲ' ಎಂಬವಂಗೆ ಈಶ್ವರನಿಕ್ಕಿದ ಸೆರೆಸಾಲೆಯ, ಬಂದೀಕಾನದೊಳಗೆ ಬಿದ್ದ ನೋಡಾ. ಇಂತು ಕೊರಳುದ್ದಕೆ ಹೂಳಿಸಿಕೊಂಡು ಮುಗಿಲುದ್ದಕೆ ಹಾರಿ `ನಾನು ಭಕ್ತ' `ನಾನು ಮಾಹೇಶ್ವರ' ಎಂಬ ನುಡಿಗೆ ನಾಚರು ನೋಡಾ. ಆ ಭಕ್ತನ ವಠಕ್ಕೆ ಜಂಗಮ ನಿರಂತರ ಬರುತ್ತಿರಲು ಬ್ರಹ್ಮನಿಕ್ಕಿದ ಕೋಳ ಕಡಿಯಿತ್ತು. ಆ ಭಕ್ತನ ಸ್ತ್ರೀ ಜಂಗಮದಾಸೋಹವ ನಿರಂತರ ಮಾಡುತ್ತಿರಲು, ವಿಷ್ಣುವಿಕ್ಕಿದ ಸಂಕಲೆ ಕಡಿಯಿತ್ತು. ಆ ಭಕ್ತನ ಧನ ಜಂಗಮಕ್ಕೆ ನಿರಂತರ ನಿರುಪಾಧಿಯಲ್ಲಿ ಸಲ್ಲುತ್ತಿರಲು ಆ ರುದ್ರನಿಕ್ಕಿದ ಆಸೆರೋಷದ ಜಿಂಜಿರಿ ಕಡಿಯಿತ್ತು. ಆ ಭಕ್ತನು ಜಾತಿಸೂತಕವಳಿದು ಶಿವಭಕ್ತರ ಕುಲವ ವಿಚಾರಿಸದೆ ಶಿವಕುಲವೆಂದರಿದು ನಿರಂತರ ಬೆರಸಿಕೊಂಡಿರುತ್ತಿರಲು ಈಶ್ವರನಿಕ್ಕಿದ ಕುಲದ ಸೆರಸಾಲೆಯ ಬಂದೀಕಾನದಿಂದ ಹೊರಹೊಂಟ ನೋಡಾ_ ಇಂತು ಇದ್ದೂ ಇಲ್ಲದ ಸಹಜರ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜಾತಿಸೂತಕ ಬಿಡದು, ಜನನಸೂತಕ ಬಿಡದು, ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು, ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು, ಇವರೆಂತು ಭಕ್ತರಹರು? ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ? ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ. ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ. ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ ನಿಮ್ಮ ಶರಣಂಗಲ್ಲದೆ ಅಳವಡದು.
--------------
ಚನ್ನಬಸವಣ್ಣ
ಧರೆಗೆ ಸೂತಕವುಂಟೆ ? ವಾರಿಧಿಗೆ ಹೊಲೆಯುಂಟೆ ? ಉರಿವ ಅನಲಂಗೆ ಜಾತಿಭೇದವುಂಟೆ ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ ? ಆಕಾಶಕ್ಕೆ ದಾರಿ ಮೇರೆಯುಂಟೆ ? [ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು ? ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಭಕ್ತರಾದೆವೆಂದು ಯುಕ್ತಿಗೆಟ್ಟು ನುಡಿವರು; ಭಕ್ತಜನ್ಮವೆಲ್ಲರಿಗೆಲ್ಲಿಯದೊ ? ಗುರುವಿನಲ್ಲಿ ತನುವಂಚನೆ, ಲಿಂಗದಲ್ಲಿ ಮನವಂಚನೆ, ಜಂಗಮದಲ್ಲಿ ಧನವಂಚನೆವುಳ್ಳನ್ನಕ್ಕ ಭಕ್ತನೆ ? ಗುರುವಿನಲ್ಲಿ ಚಾರಿತ್ರವ ಲಿಂಗದಲ್ಲಿ ಲಕ್ಷಣವ, ಜಂಗಮದಲ್ಲಿ ಜಾತಿಯನರಸುವನ್ನಕ್ಕ ಭಕ್ತನೆ ? ಅಲ್ಲ, ಅವನು ದೋಷಾರ್ಥಿ. ``ಭಕ್ತಶ್ಚ ಪ್ರತಿಪಕ್ಷಶ್ಚ ಸದಾಚಾರೇಣ ವರ್ಜಿತಃ ಗುರುಲಿಂಗಜಂಗಮದ್ವೇಷೀ ಯೋ ನರಸ್ಸದುರಾತ್ಮಕಃ' ಇದು ಕಾರಣ ಕೂಡಲಚೆನ್ನಸಂಗಮದೇವಾ ಭಕ್ತಜನ್ಮವೆಲ್ಲರಿಗೆಲ್ಲಿಯದು ?
--------------
ಚನ್ನಬಸವಣ್ಣ
ಆಚಾರವಡಗಿತ್ತು ಅನಾಚಾರವೆದ್ದಿತ್ತು. ಅಲ್ಲದ ನಡೆಯ ನಡದಾರು ಸಲ್ಲದಚ್ಚುಗಳ ಮರಳಿವೊತ್ತಿಯಾರು. ಭಕ್ತನೆ ಹೊಲೆಯನಾದಾನು ಜಂಗಮವೆ ಅನಾಚಾರಿಯಾದಾನು. ಲಂಡ ಭಕ್ತನಾದಾನು ಪುಂಡ ಜಂಗಮವಾದೀತು. ಲಂಡ ಪುಂಡ ಕೂಡಿ ಜಗಭಂಡರಾಗಿ ಕೆಟ್ಟಾರು. ಮನದ ಹಿರಿಯರ ಬಿಟ್ಟಾರು ಕುಲದ ಹಿರಿಯರ ಪೂಜಿಸಿಯಾರು. ಹದಿನೆಂಟು ಜಾತಿಯೆಲ್ಲ ಕೂಡಿ ಒಂದೆ ತಳಿಗೆಯಲ್ಲಿ ಉಂಡಾರು. ಮತ್ತೆ ಕುಲಕ್ಕೆ ಹೋರಿಯಾಡಿಯಾರು, ಗುರುವ ನರನೆಂದಾರು. ಲಿಂಗವ ಶಿಲೆಯೆಂದಾರು, ಜಂಗಮವ ಜಾತಿವಿಡಿದು ನುಡಿದಾರು. ಭಕ್ತ ಜಂಗಮ ಪ್ರಸಾದವನೆಂಜಲೆಂದತಿಗಳೆದಾರು, ತೊತ್ತು ಸೂಳೆಯರೆಂಜಲ ತಿಂದಾರು. ಮತ್ತೆ ನಾ ಘನ ತಾ ಘನವೆಂದಾರು, ಒತ್ತಿದಚ್ಚುಗಳು ಹುತ್ತೇರಿ ಹುಳಿತಾವು, ಅಷ್ಟರೊಳಗೆ ಶರಣರು ಪುಟ್ಟಿ ಸಂಹಾರವ ಮಾಡಿಯಾರು, ಹೊಟ್ಟು ಹಾರೀತು, ಘಟ್ಟಿಯುಳಿದೀತು. ಮಿಕ್ಕಿದ್ದು ಪಲ್ಲವಿಸೀತು ಮತ್ರ್ಯವೇ ಕೈಲಾಸವಾದೀತು. ಭಕ್ತಿಯ ಬೆಳೆ ಬೆಳೆದೀತು ಘನಪ್ರಸಾದವುದ್ಧರಿಸೀತು. ಕೂಡಲಚೆನ್ನಸಂಗಯ್ಯನ ಶ್ರೀಪಾದವೆ ಸಾಕ್ಷಿಯಾಗಿ ಬಸವಣ್ಣನೊಬ್ಬನೆ ಕರ್ತನಾದನು.
--------------
ಚನ್ನಬಸವಣ್ಣ
ಲಿಂಗದಲ್ಲಿ ಕಠಿಣವಾರ್ತೆ, ಜಂಗಮದಲ್ಲಿ ಜಾತಿವಾರ್ತೆ, ಪ್ರಸಾದದಲ್ಲಿ ಅಪವಿತ್ರವಾರ್ತೆಯ ಕೇಳಲಾಗದು ಶಿವ, ಶಿವ ಕೂಡಲಚೆನ್ನಸಂಗಮದೇವನು ಅಘೋರನರಕದಲಿಕ್ಕುವ
--------------
ಚನ್ನಬಸವಣ್ಣ
ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ. ಜಂಗಮದಲ್ಲಿ ಜಾತಿಯನರಸುವಾತನೆ ಗುರುದ್ರೋಹಿ. ಪಾದೋದಕದಲ್ಲಿ ಸೂತಕವ ಪಿಡಿವಾತನೆ ಲಿಂಗದ್ರೋಹಿ. ಪ್ರಸಾದದಲ್ಲಿ ರುಚಿಯನರಸುವಾತನೆ ಜಂಗಮದ್ರೋಹಿ. ಇಂತೀ ಚತುರ್ವಿಧದೊಳಗೆ ಸನ್ನಿಹಿತನಾದಾತನೆ ಭಕ್ತ, ಇಂತೀ ಚತುರ್ವಿಧದೊಳಗೆ ಕಲಿಯಾದಾತನೆ ಮಾಹೇಶ್ವರ, ಇಂತೀ ಚತುರ್ವಿಧದೊಳಗೆ ಅವಧಾನಿಯಾದಾತನೆ ಪ್ರಸಾದಿ, ಇಂತೀ ಚತುರ್ವಿಧದೊಳಗೆ ತದ್ಗತನಾದಾತನೆ ಪ್ರಾಣಲಿಂಗಿ, ಇಂತೀ ಚತುರ್ವಿಧದೊಳಗೆ ಲವಲವಿಕೆಯುಳ್ಳಾತನೆ ಶರಣ, ಇಂತೀ ಚತುರ್ವಿಧದೊಳಗೆ ಅಡಗಿದಡೆ ಐಕ್ಯ. ಇಂತಿಪ್ಪ ಷಡುಸ್ಥಲವು ಸಾಧ್ಯವಾದಡೆ ಲಿಂಗದೇಹಿ. ಆತ ನಡೆಯಿತ್ತೇ ಬಟ್ಟೆ ಆತ ನುಡಿಯಿತ್ತೇ [ಸಿದ್ಧಾಂತ]. ಕೂಡಲಚೆನ್ನಸಂಗಯ್ಯನಲ್ಲಿ ಆತನೇ ಸರ್ವಾಂಗಲಿಂಗಿ, ಆತನೆ ನಿರ್ದೇಹಿ
--------------
ಚನ್ನಬಸವಣ್ಣ
ಓಲೆಯಕಾರ ಭಕ್ತನಾದರೆ ಮನದ ಕ್ರೋಧ ಬಿಡದು. ಒಕ್ಕಲಿಗ ಭಕ್ತನಾದರೆ ಅವನ ಪೂರ್ವಾಶ್ರಯ ಬಿಡದು. ಹಾರುವ ಭಕ್ತನಾದರೆ ಜಾತಿ ಸೂತಕ ಬಿಡದು. ಬೆವಹಾರಿಯ ಭಕ್ತಿಯೊಂದು ಶಬ್ದದಲ್ಲಿ ಹೋಯಿತ್ತು. ಅರಸಿನ ಭಕ್ತಿ ಅರಸಿ ನೋಡಲಿಲ್ಲ. ಸೂಳೆಯ ಭಕ್ತಿ ಹದಿನೆಂಟು ಜಾತಿಯ ಎಂಜಲ ತಿಂದಿತ್ತು. ಕೂಡಲಚೆನ್ನಸಂಗಯ್ಯ ಮಜ್ಜನಕ್ಕೆರೆವ ಭವಿಗಳನೇನೆಂಬೆ?
--------------
ಚನ್ನಬಸವಣ್ಣ
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕೆಸರಲ್ಲಿ ತಾವರೆ ಹುಟ್ಟಿ ದೇವರ ಮಂಡೆಯಲ್ಲಿರದೆ ? ಉಚ್ಛಿಷ್ಟದಲ್ಲಿ, ಜಲಮಲಾದಿಗಳಲ್ಲಿ, ಸಮಸ್ತಜಗದಲ್ಲಿ, ಸೂರ್ಯನ ಪ್ರಭೆ ಇದ್ದಡೇನು ಅಲ್ಲಿ ಅದು ಸಿಕ್ಕಿಹುದೆ ? ಹೊಲೆಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಶರಣನು ಹುಟ್ಟಿದಡೆ, ಆ ಜಾತಿ-ಕುಲದಂತಿರಬಲ್ಲನೆ ? ಸಾಕ್ಷಾತ್ ಪರಬ್ರಹ್ಮವೆ ಇಹ [ಲೋಕದಲ್ಲಿ] ಸಂಸಾರಿಯಾಗಿ ಬಂದನೆಂದರಿವುದು. ಬಹಿರಂಗದಲ್ಲಿ ಕ್ರಿಯಾರಚನೆ, ಅಂತರಂಗದಲ್ಲಿ ಅರುಹಿನ ಸ್ವಾನುಭಾವಸಿದ್ಧಾಂತ ಪರಿಪೂರ್ಣ ಶರಣನ, ಈ ಮತ್ರ್ಯದ ನರಕಿ ಪ್ರಾಣಿಗಳು ಜರಿವರು. ಕ್ರಿಯಾಚಾರವಿಲ್ಲದೆ, ಅರುಹಿನ ನೆಲೆಯನರಿಯದೆ, ನಾನೇ ದೇವರೆಂದು ಅಹಂಕರಿಸಿಕೊಂಡಿಪ್ಪ ಅನಾಚಾರಿ ಹೊಲೆಯರಿಗೆ ಅಘೋರನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವರಲ್ಲಿ ಬಸವೇಶ್ವರದೇವರು ಸಾಕ್ಷಿಯಾಗಿ.
--------------
ಚನ್ನಬಸವಣ್ಣ
ಗುರುವಿನಲ್ಲಿ ಗುಣಸಂಪಾದನೆಯ ಮಾಡುವನ್ನಕ್ಕ ಗುರುಸಂಬಂಧಿಯಲ್ಲ. ಲಿಂಗದಲ್ಲಿ ಸ್ಥಲಸಂಪಾದನೆಯ ಮಾಡುವನ್ನಕ್ಕ ಲಿಂಗಸಂಬಂಧಿಯಲ್ಲ. ಜಂಗಮದಲ್ಲಿ ಜಾತಿಸಂಪಾದನೆಯ ಮಾಡುವನ್ನಕ್ಕ ಜಂಗಮಸಂಬಂಧಿಯಲ್ಲ. ಪ್ರಸಾದದಲ್ಲಿ ರುಚಿಸಂಪಾದನೆಯ ಮಾಡುವನ್ನಕ್ಕ ಪ್ರಸಾದಸಂಬಂಧಿಯಲ್ಲ. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಮಜ್ಜನಕ್ಕೆರೆವ ಭವಿಗಳನೇನೆಂಬೆ ?
--------------
ಚನ್ನಬಸವಣ್ಣ
ಇನ್ನಷ್ಟು ... -->