ಅಥವಾ

ಒಟ್ಟು 83 ಕಡೆಗಳಲ್ಲಿ , 26 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವಿಂದ ಕಂಡೆಹೆನೆಂದಡೆ, ಅರಿವಿಂಗೆ ಮರಹು ಹಿಡಿಯಬೇಕು. ಕುರುಹಿನಿಂದ ಕಂಡೆಹೆನೆಂದಡೆ, ಆ ಕುರುಹಿನಲ್ಲಿ ಅರಿವು ಕರಿಗೊಳ್ಳಬೇಕು. ಉಭಯವನರಿದ ಮತ್ತೆ ಅರಿವಿನಿಂದ ಅರಿದೆಹೆನಂದಡೆ ಆ ಅರಿವು ನಾನಾ ಯೋನಿಯಲ್ಲಿ ಒಳಗಾಯಿತ್ತು. ಕುರುಹಿನಿಂದ ಅರಿದೆಹೆನೆಂದಡೆ, ಆ ಕುರುಹು ಪುನರಪಿಗೊಳಗಾಯಿತ್ತು. [ಆ] ಅರಿವನರಿ [ವ] ಅರಿವೇನೋ? ಕುರುಹನರಿವ ಅರಿವದೇನೋ? ಅರಿವನರಿದಲ್ಲಿಯೂ ಕುರುಹನರಿದಲ್ಲಿಯೂ ಅರಿವಿಂಗೆ ತೆರಹಿಲ್ಲ. ಬರಿದೆ ಅರಿದೆನೆಂಬ ಬರುಬರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಎಲಾ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ ಮತ್ತೊಂದು ನೋಡುವೆ. ಮತ್ತೊಂದು ಮತ್ತೊಂದು [ಎಂದು] ನೋಡುವರೆ ದಿವಸ ಸಮೀಪಿಸಿತ್ತು. ಸಮೀಪಿಸಿದ ಬಳಿಕ ಯಮದೂತರು ಬಂದು ವಿಪ್ಲವ[ವ] ಮಾಡುವರು. ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ ! ಅದು ಎಂತೆಂದಡೆ, ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ ಎಲ್ಲರ ಮನ್ನಣೆಯುಂಟು. ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ. ಇದರಂತೆ, ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಬಿಳಿಯ ವಸ್ತ್ರವು ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ, ಅದಕ್ಕೆ ಅಧಿಕವುಂಟೇ ? ಇದರಂತೆ ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ. ಅದೇನು ಕಾರಣವೆಂದಡೆ, ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ ! ಕಂಬಳಿಗೆ ಮನ್ನಣೆಯುಂಟೆ ? ಹಾಸಿದರೆ ಮಾಸುವುದೆ ? ಹೊದ್ದರೆ ಚಳಿಯ ತೋರುವುದೆ ? ರಜಕನ ಮನೆಯ ಕಂಡುಬಲ್ಲುದೆ ? ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ (?) ದೇವರಿಗೆ ಜೇಷ್ಮು(?) ಎಲ್ಲಾ ಬರವಾಗಿ ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ? ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ. ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ, ಬರಿದೆ ಶಾಸ್ತ್ರವನೋದಿ, ಕಂಡಕಂಡವರಲ್ಲಿ ಬಗುಳಿ, ಕಾಲಕ್ಷೇಪವ ಕಳೆವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ರುದ್ರಪಿಂಡದಲ್ಲಿ ಉತ್ಪತ್ತಿ ರುದ್ರವಾಹನನ ಮುಖದಲ್ಲಿ ಸ್ತುತಿ ನಂದಿಮುಖದಿಂದ ಶುಚಿ ಪಂಚಶಿಖಿ ಉದ್ಧೂಳಿತ ಅಗ್ನಿಕಾರ್ಯನೆವದಿಂದ ವಿಭೂತಿಯ ಧರಿಸಿದಿರಿ, ಇದ್ದಿದ್ದೇನ ನೆನೆದಿರಿ. ಎಡೆಯಂತರದಲ್ಲಿ ಮಲಿನವ ಧರಿಸಿ ಹೆಡ್ಡರಾದಿರಿ, ಅರಿದು ಬರಿದೆ ಬರಿದೊರೆವೋದಿರಿ, ಶ್ವಾನಜ್ಞಾನಿಗಳಾದಿರಿ, ಕೆಟ್ಟಿರಯ್ಯೋ ದ್ವಿಜರು. ತದ್ಧಿನಂಗಳ ಮಾಡುವಲ್ಲಿ ಪಿತೃಗಳನ್ನುದ್ಧರಿಸುವಲ್ಲಿ `ಶ್ರೀ ರುದ್ರಪಾದೇ ದತ್ತಮಸ್ತು' ಎಂಬಿರಿ `ಏಕ ಏವ ರುದ್ರಃ' ಎಂದು ಅಧ್ಯಾಯಂಗಳಲ್ಲಿ ಹೇಳುವಿರಿ ನಿಮಗಿಂದ ನಾವು ಬುದ್ಧಿವಂತರೇ ? ದಧೀಚಿ ಗೌತಮಾದಿಗಳ ಶಾಪವ ಹೊತ್ತಿರಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿದು ಅರಿದವನಲ್ಲ ಅರಿದುಕೊಳ್ಳಿ, ಮರೆದು ಮರೆದವನಲ್ಲ ಕರೆದುಕೊಳ್ಳಿ. ಬರಿದೆ ಬಂದವನಲ್ಲ ಬಂದುಕೊಳ್ಳಿ. ನಾಳೆಂಬ ಬಾಳುವೆಯನರಿಯದಿರ್ದೆ, ಸುಳಿದುಬಂದೆನ್ನ ಸುಖವ ಕೊಳ್ಳಿ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಒಕ್ಕುದ ಕೊಡಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ನಿರ್ವಾಣವಾದಡೇನೋ, ಆಶೆ ನಿರ್ವಾಣವಾಗದನ್ನಕ್ಕ! ಮಂಡೆ ಬೋಳಾದಡೇನೋ, ಹುಟ್ಟು ಬೋಳಾಗದನ್ನಕ್ಕ! ಇಂದ್ರಿಯ ನಿಗ್ರಹವಾದಡೇನೋ, ಷಡುಸ್ಥಲಾನುಗ್ರಹವಾಗದನ್ನಕ್ಕ ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೇ!
--------------
ಆದಯ್ಯ
ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ, ಬರಿದೆ ಬಹುದೆ ಶಿವಜ್ಞಾನ? ಷಡುವರ್ಣ(ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ? ಅಷ್ಟಮದವಳಿಯದನ್ನಕ್ಕ ನಬರಿದೆ ಬಹುದೆ? ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ, ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ.
--------------
ಅಲ್ಲಮಪ್ರಭುದೇವರು
ಕೇಳುವ ಸಂಗೀತ, ನೋಡುವ ಸುರೂಪುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ವಾಸಿಸುವ ಸುಗಂಧ, ರುಚಿಸುವ ಸುರಸಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ತಟ್ಟು ಮುಟ್ಟು ತಾಗು ನಿರೋಧ ಸೋಂಕು ಸಂಬಂಧಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಹಲ್ಲುಕಡ್ಡಿ ದರ್ಪಣ ಮೊದಲಾದ ಪದಾರ್ಥಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಚಳಿ ಮಳೆ ಗಾಳಿ ಬಿಸಿಲು ಸಿಡಿಲು ಮಿಂಚು ನೀರು ನೆಳಲುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಪೃಥ್ವಿ ಗಗನ ತತ್ತ್ವತೋರಿಕೆ ಸೂರ್ಯ ಚಂದ್ರ ಅಗ್ನಿ ತಾರೆ ಪ್ರಕಾಶಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಇಂತೀ ಲಿಂಗಾರ್ಪಿತ ಸಕೀಲವನರಿಯದೆ ಬರಿದೆ ಪ್ರಸಾದಿಗಳೆಂದು ನುಡಿವ ನುಡಿಜಾಣರ ಕಂಡು ನಾಚಿದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತರ ಹೆಚ್ಚು ಕುಂದು ಜಂಗಮದ ಹೆಚ್ಚು ಕುಂದೆಂಬುದನರಿಯಾ ಪ್ರಭುವೆ ? ನಿಮ್ಮ ಪ್ರಾಣವೆ ಬಸವಣ್ಣನ ಪ್ರಾಣ, ಬಸವಣ್ಣನ ಪ್ರಾಣವೆ ನಿಮ್ಮ ಪ್ರಾಣ ನಿಮ್ಮ ಕಾಯವೆ ಬಸವಣ್ಣನ ಕಾಯ, ಬಸವಣ್ಣನ ಕಾಯವೆ ನಿಮ್ಮ ಕಾಯ. ನೀವಿಲ್ಲದಿರೆ ಬಸವಣ್ಣನಿಲ್ಲ, ಬಸವಣ್ಣನಿಲ್ಲದಿರೆ ನೀವಿಲ್ಲ. ಇಂತಿದನೊಂದು ಬಿಚ್ಚಿ ಬೇರೆ ಮಾಡಬಾರದೆಂಬುದನರಿದು ಮತ್ತೆ ಬರಿದೆ ಮುನಿವರೆ ಬಲ್ಲವರು ? ನಡೆವ ವಾರುವ ಮುಗ್ಗಿದಡೆ ನಡೆಸಿಕೊಂಬುದಲ್ಲದೆ ಮಿಡಿ ಹರಿಯೆ ಹೊಯ್ದವರುಂಟೆ ಲೋಕದೊಳಗೆ ? ಮರಹಿಂದ ಬಂದ ಅವಗುಣವ ಸಂಪಾದಿಸದೆ ಜಿಜಯಂಗೈಯ್ವುದಯ್ಯಾ ನಿಮ್ಮ ಗೃಹಕ್ಕೆ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಬಸವಣ್ಣನಾರೆಂಬುದ ನೀನೊಮ್ಮೆ ತಿಳಿದು ನೋಡಾ ಪ್ರಭುವೆ.
--------------
ಚನ್ನಬಸವಣ್ಣ
ಕಣ್ಗಾಣದೆ ಲೋಕ ಮಾಯಾತಮಂಧವೆಂಬ ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು. ಪದ : ತನುಮದ ಹುತ್ತದೊಳು ಮನವಿಕಾರದ ಸರ್ಪ ಜನರನೆಲ್ಲರ ಕಚ್ಚಿ ವಿಷವೇರಿಸಿ ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. | 1 | ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ ಷಡ್ಭ್ರಮೆಗಳೆಂದೆಂಬುದ ಷಡು ಅಂಗ ಕತ್ತಲೆಗೆ ನಡೆದು ಮೈಮರೆದು ಬರಿದೆ. | 2 | ಅಸಿಯ ಜವ್ವನೆಯರ ವಿಷಯರಸವೆಂದೆಂಬ ಪ್ರಸರದೊಳು ಲೋಕವನು ಗುರಿಮಾಡಿಯೆ ; ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು ಬೆಸುಗೆಯೊಳು ಸಿಲ್ಕಿ ಬರಿದೆ. | 3 | ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು ಬರುತಲಿ ಅಜ್ಞಾನವೆಂದೆಂಬುವ ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ ಮರೆಗೊಂಡು ಮುಂದುಗಾಣದೆ ಮೂಲೋಕ | 4 | ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ ಹಿರಿದು ಚೇಷ್ಟೆಯ ತೆರದಿ ಮಾಯಾಮದದ ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. | 5 |
--------------
ಹೇಮಗಲ್ಲ ಹಂಪ
ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು, ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ! ಗಂಡನ ಕೂಡೆ ಸಮಾಧಿಯ ಕೊಂಬ ಹೆಂಡತಿ ಅಪೂರ್ವ! ಹೆಂಡಿರ ಕೂಡೆ ಸಮಾಧಿಯ ಕೊಂಬ ಗಂಡರುಂಟೆ ಲೋಕದೊಳು ? ಛೀ ಛೀ ಹಂದಿಮೂಳರಿರ! ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ ? ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ, ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ ? ನೀವು ಗಳಿಸಿದ ಅರ್ಥವನುಂಡುಂಡು, ನಿಮ್ಮ ಭವದೊಳಗೆ ನೂಂಕಿದ ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ, ಮರಳಿ ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಕರಸ್ಥಲದ ಲಿಂಗವನು ಮನಸ್ಥಲದಲ್ಲಿ ಕುಳ್ಳಿರಿಸಿ, ಘ್ರಾಣವೆಂಬ ಭಾಜನದಲ್ಲಿ ಸುಗಂಧ ಪದಾರ್ಥವ ಗಡಣಿಸಿ ಸುಚಿತ್ತವೆಂಬ ಹಸ್ತದಿಂದರ್ಪಿಸಿ, ಆ ಸುಗಂಧ ಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಜಿಹ್ವೆಯೆಂಬ ಭಾಜನದಲ್ಲಿ ಸುರಸಪದಾರ್ಥವ ಗಡಣಿಸಿ ಸುಬುದ್ಧಿಯೆಂಬ ಹಸ್ತದಿಂದರ್ಪಿಸಿ, ಆ ಸುರಸಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ನೇತ್ರವೆಂಬ ಭಾಜನದಲ್ಲಿ ಸುರೂಪುಪದಾರ್ಥವ ಗಡಣಿಸಿ, ನಿರಹಂಕಾರವೆಂಬ ಹಸ್ತದಿಂದರ್ಪಿಸಿ, ಆ ಸುರೂಪುಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ತ್ವಕ್ಕೆಂಬ ಭಾಜನದಲ್ಲಿ ಸುಸ್ಪರ್ಶನ ಪದಾರ್ಥವ ಗಡಣಿಸಿ, ಸುಮನವೆಂಬ ಹಸ್ತದಿಂದರ್ಪಿಸಿ, ಆ ಸುಸ್ಪರ್ಶನಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಶ್ರೋತ್ರವೆಂಬ ಭಾಜನದಲ್ಲಿ ಸುಶಬ್ದಪದಾರ್ಥವ ಗಡಣಿಸಿ, ಸುಜ್ಞಾನವೆಂಬ ಹಸ್ತದಿಂದರ್ಪಿಸಿ, ಆ ಸುಶಬ್ದಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಹೃದಯವೆಂಬ ಭಾಜನದಲ್ಲಿ ಸುತೃಪ್ತಿ ಪದಾರ್ಥವ ಗಡಣಿಸಿ, ಸದ್ಭಾವವೆಂಬ ಹಸ್ತದಿಂದರ್ಪಿಸಿ, ಆ ಸುತೃಪ್ತಿಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಇಂತೀ ಷಡಿಂದ್ರಿಯಂಗಳೆಂಬ ಷಡ್ವಿಧ ಭಾಜನದಲ್ಲಿ ಷಡ್ವಿಧ ಪದಾರ್ಥವ ಗಡಣಿಸಿ ಷಡ್ವಿಧ ಹಸ್ತದಿಂದರ್ಪಿಸಿ, ಷಡ್ವಿಧ ಪ್ರಸಾದವ ಗ್ರಹಿಸಲರಿಯದೆ ಬರಿದೆ ಪ್ರಸಾದಿಗಳೆಂದಡೆ ನಗುವನಯ್ಯಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಬರಿದೆ ಶಿವಶಿವಯೆಂದಡೆ ಭವಹಿಂಗಿತೆಂಬುವ ಅರಿವುಗೇಡಿಯ ಮಾತ ಕೇಳಲಾಗದು. ಅದೇನು ಕಾರಣವೆಂದಡೆ : ಕತ್ತಲಮನೆಯಲ್ಲಿ ಜ್ಯೋತಿಯ ನೆನೆದರೆ ಪ್ರಕಾಶವಾಗಬಲ್ಲುದೆ? ಕಾಮಜ್ವರದವರು ರಂಭೆಯ ನೆನದರೆ ಕಾಮಜ್ವರ ತಂಬಿಸಬಲ್ಲುದೆ? ಇಂತೀ ನರಗುರಿಗಳಾಡಿದುದ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಎಲಾ, ಸೂಳೆಮಗನೇನ ಬಲ್ಲನಯ್ಯಾ ಕುದುರೆಯಾ ಕುರುಹನು ? ಶೀಲವಂತನೇನ ಬಲ್ಲನಯ್ಯಾ ಗುರುಲಿಂಗ ಜಂಗಮದ ಕುರುಹನು ? ಗುರುಲಿಂಗ ಜಂಗಮವು ಮನೆಗೆ ಬಂದು ಬೀಯೆಂಬೋ ಪಾಪವು ಕ್ಷಯವಾಗಲೆಂದು 'ಭಿಕ್ಷಾ'ಎಂದು ನಿಂದಡೆ 'ಅಯ್ಯಾ ನಮ್ಮ ಹಿರಿಯರು ಬಂದಿಲ್ಲಾ' 'ನಮ್ಮ ಕಟ್ಟುಬಿನ್ನದ ಜಂಗಮವು ಬಂದಿಲ್ಲಾ' 'ಇನ್ನೂ ಶೀಲವು ತೀರಿಲ್ಲಾ, ತಿರುಗಿ ಬಾ' ಎಂದು ಹಿಂದಕ್ಕೆ ಕಳುಹಿದಡೆ ಜಂಗಮದ ನೆಲೆ ಯಾವುದೆಲಾ ? ಶೀಲವಂತನಿಗೆ ಶೀಲ ಯಾವುದೆಂದಡೆ, ಅದಂ ಪೇಳ್ವೆ ಕೇಳು : ಪರಕ್ರೂರತ್ವವ ಮರೆದು, ಪರಭೋಗದಭಿಲಾಷೆಯ ಬಿಟ್ಟು, ಪರಮ ವಿರಕ್ತಿಯಂ ಅಂಗೀಕರಿಸಿ, ಪಾಪಮಂ ಮುಟ್ಟಿನೋಡದೆ ಕಾಣದೆ ಕೇಳದೆ ನಿರ್ಲಿಪ್ತನಾಗಿ ನಿಜವಸ್ತುವಾದಾ ಶಿವಲಿಂಗ ಜಂಗಮವು ಮನೆಗೆ ಬಂದಡೆ ಅನ್ನ ಅಗ್ಗಣಿಯ ಕೊಟ್ಟು ತೃಪ್ತಿಯ ಬಡಿಸಿ ನಿತ್ಯತ್ವನಾಗಿ ಮೋಕ್ಷವ ಕಂಡಡೆ, ಶೀಲವಂತನೆಂದು ನಮೋ ಎಂಬುವೆನಯ್ಯಾ. ಬರಿದೆ, 'ನಾ ಶೀಲವಂತ' 'ನೀ ಶೀಲವಂತ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಲೋಕದೊಳಗಿಪ್ಪವರು, ಲೋಕದೊಳು ಸುಳಿವವರು, ಲೋಕದ ಹಂಗಿಗರು, ಲಿಂಗದ ಶುದ್ಧಿಯ ತಾವೆತ್ತಬಲ್ಲರು? ಬರಿದೆ ಹೋರುವ ಭ್ರಮಿತರು. ಇವರು, ತ್ರಿವಿಧಕ್ಕೆ ವಿರಹಿತರೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇಷ್ಟಲಿಂಗದಲ್ಲಿ ನೈಷೆ* ಬಲಿಯರು. ಪ್ರಾಣಲಿಂಗದಲ್ಲಿ ಪ್ರತಿಷೆ*ಯನರಿಯರು. ಬರಿದೆ ಇಷ್ಟಲಿಂಗಸಂಬಂಧವ ಪ್ರಾಣಲಿಂಗದ ನಿರ್ದೇಶವ ಬಲ್ಲೆವೆಂಬ ಭ್ರಷ್ಟರನೇನೆಂಬೆನಯ್ಯ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->