ಅಥವಾ

ಒಟ್ಟು 177 ಕಡೆಗಳಲ್ಲಿ , 24 ವಚನಕಾರರು , 173 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದರೆ, ನೆಲದ ಮರೆಯ ನಿಧಾನದಂತೆ, ತಿಲದ ಮರೆಯ ತೈಲದಂತೆ, ಮುಗಿಲ ಮರೆಯ ಮಿಂಚಿನಂತೆ, ನೀರೊಳಗಣ ಕಿಚ್ಚಿನಂತೆ, ಕಾಷ*ದೊಳಗಣ ಅಗ್ನಿಯಂತೆ, ತೃಣದೊಳಗಡಗಿದ ಚೈತನ್ಯದಂತೆ, ಈ ವಿಶ್ವದೊಳು ಇದ್ದೂ ಇಲ್ಲದಂತಿಪ್ಪ ಮಹಾಘನವ ನಿಮ್ಮ ಶರಣರು ಬಲ್ಲರಲ್ಲದೆ, ಮತ್ರ್ಯದ ಮರಣಬಾಧೆಗೊಳಗಾದ ಮನುಜರೆತ್ತಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು. ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ. ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ? ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು] ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ. ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ. ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು. ಈ ಕಷ್ಟದ ನುಡಿಯ ಕೇಳಲಾಗದು. ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ? ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ, ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ, ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ, ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ. ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಪ್ರಜೆಗಳ ಅಲೆಯ ದೊರೆಯು ಒರ್ಚುವನಲ್ಲದೆ, ದೊರೆಯ ಅಲೆಯ ಪ್ರಜೆಗಳೊರ್ಚುವರೇನಯ್ಯಾ ? ಮಕ್ಕಳಲೆಯ ತಾಯಿಯೊರ್ಚುವಳಲ್ಲದೆ, ತಾಯ ಅಲೆಯ ಮಕ್ಕಳೊರ್ಚುವರೇನಯ್ಯಾ ? ನನ್ನಲೆಯ ನೀನೊರ್ಚಬೇಕಲ್ಲದೆ, ನಿನ್ನಲೆಯ ನಾನೊರ್ಚುವುದೇನಯ್ಯಾ ? ತಮದೊಳಗಣ ಜಾಗ್ರವು ನೀನು, ಜಾಗ್ರದೊಳಗಣ ತಮವು ನಾನು. ನನಗೆ ನೀನು ಬಾಹ್ಯನೂ ನಿನಗೆ ನಾನು ಬಾಹ್ಯನೂ ಆಗಿರ್ದೊಡೆ, ನಾನೆಂತು ಸುಖಿಸುವೆ ? ನೀನೆಂತು ಪರಿಗ್ರಹಿಸುವೆ ? ನನ್ನೊಳಗೆ ನೀನೂ ನಿನ್ನೊಳಗೆ ನಾನೂ ಇರ್ದಲ್ಲದೆ, ನಿನ್ನ ನನ್ನ ಸಂಬಂಧಸಕೀಲವು ಸಂಘಟಿಸುವುದೇ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ ?
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು, ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು. ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು, ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು. ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುರ್ವೇದವು, ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು. ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು, ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು, ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು, ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು. ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು, ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು, ಬ್ರಾಹ್ಮಣರಿಗೆ ಇಂದ್ರನಧಿದೇವತೆಯು, ಕ್ಷತ್ರಿಯರಿಗೆ ಕಾಲನಧಿದೇವತೆಯು, ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ, ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು. ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು, ನಿಜವಸ್ತುವು ಉತ್ಕøಷ್ಟತ್ವವಂ ಹೊಂದಿದಲ್ಲಿ ಶ್ರೇಷ*ವಪ್ಪುದು; ಉತ್ಕøಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು. ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ, ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ, ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ, ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ, ಬ್ರಹ್ಮತ್ವಮಂ ಪಡೆದು ಅಜಾತಮಾಗಿ, ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ. ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ. ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು. ಈ ಸತಿಪತಿನ್ಯಾವಳಿದು ವರ್ಣಾತೀತನೂ ವಾಗತೀತನೂ ಆಗಿ, ತಾನುತಾನಾಗಿರ್ಪುದೇ ಐಕ್ಯವು. ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ, ಆ ಶರೀರಕ್ಕೂ ತನಗೂ ಭೇದಮೆನಿಸಿಕೊಳ್ಳಲು, ಅಲ್ಲಿ ಕರ್ಮವು ಉತ್ಪನ್ನಮಾಗಿ, ಆ ಕರ್ಮಮುಖದಿಂ ಪ್ರಪಂಚವನವಗ್ರಹಿಸಲೋಸುಗ ಸೃಷ್ಟಿಸ್ಥಿತಿಸಂಹಾರಂಗಳೆಸಗೆ, ಆ ಶರೀರವು ವ್ಯಯವನೆಯ್ದಿ, ಪೃಥ್ವಿಯ ಚರಿಸುವಂದದಲಿ ಲಿಂಗದಲ್ಲಿರ್ಪ ಶಿವನಿಂದ ತತ್ವಪ್ರಕಾಶಮಾಗಿ, ಮನಸ್ಸಿನಲ್ಲಿ ಭೇದತೋರದೆ ಕೂಡಿದಲ್ಲಿ, ಜ್ಞಾನಮುತ್ಪನ್ನಮಾಯಿತ್ತು. ಜ್ಞಾನಮುಖದಿಂ ಮನ ಮಹವನವಗ್ರಹಿಸಿ, ಸತ್ತುಚಿತ್ತಾನಂದದಿಂ ಸಾಧಿಸುತ್ತಿರಲು, ಮನವಳಿದು ಲಿಂಗಮಪ್ಪುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಕ್ಷುವಿನ ಭಾವ ತಪ್ಪಿ ಗುರುವಿನೊಳೈಕ್ಯವೆಂಬುದೊಂದು ಹುಸಿ, ಚಂದನದ ಭಾವ ತಪ್ಪಿ ಲಿಂಗದೊಳೈಕ್ಯವೆಂಬುದೊಂದು ಹುಸಿ, ಹೇಮದ ಭಾವ ತಪ್ಪಿ ಜಂಗಮದೊಳೈಕ್ಯವೆಂಬುದೊಂದು ಹುಸಿ, ಅದೆಂತೆಂದೊಡೆ, ಶುದ್ಭ ಸಿದ್ಧ ಪ್ರಸಿದ್ಧ ಸಂಬಂಧವಿಲ್ಲವಾಗಿ ಗುರುನಿರಂಜನ ಚನ್ನಬಸವಲಿಂಗವೆಂಬ ಮಹಾಘನ ಪ್ರಸಾದದೊಳೈಕ್ಯವೆಂದಿಗೂ ಇಲ್ಲ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್‍ತ್ರಿಂಶತ್ ತತ್ತ್ವ ಇಂತೀ ತತ್ತ್ವ ಂಗಳೆಲ್ಲವನೂ ಗರ್ಭೀಕರಿಸಿಕೊಂಡಿಪ್ಪ ಈ ತತ್ತ್ವಂಗಳೆಲ್ಲವಕ್ಕೆಯೂ ಅಧಿಕವಾಗಿಪ್ಪ ಮಹಾತತ್ತ್ವವೂ `ನ ಗುರೋರಧಿಕಂ ನ ಗುರೋರಧಿಕಂ' ಎಂದುದಾಗಿ `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ 'ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ' ಎಂದುದಾಗಿ `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರುತತ್ತ್ವವೇ ಪರತತ್ತ್ವವು. ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು ಅನಂತಕೋಟಿಗಳನೂ ಗರ್ಭೀಕರಿಸಿಕೊಂಡಿಪ್ಪ ಇವಕೆ ಮಾತೃಸ್ಥಾನವಾಗಿ, ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು. ಈ ಮಹಾತತ್ವ್ತವು ಏಕವಾದ ಮಹಾಲಿಂಗವು. ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು. ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ. ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು. ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು, ಆತನೇ ಆಗಮಜ್ಞನು, ಆತನೇ ಸರ್ವಜ್ಞನು. ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ ಇತರ ತತ್ತ್ವಂಗಳನೂ ಇತರ ದೇವತೆಗಳನೂ ಇತರ ದೇವದಾನವಮಾನವರುಗಳನೂ ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ ? ಶಿವ ಶಿವಾ ಸರಿ ಎಂದಡೆ ಮಹಾದೋಷವು. ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು. ಈ ಮಹಾದೇವನ ಭಕ್ತನೇ ಮಹಾದೇವನು. ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ. ಈ ಮಹಾಭಕ್ತನ ಪದವೇ ಪರಮಪದವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ. ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ, ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ, ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ. ಅದೆಂತೆನಲು : ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ, ಈ ಹದಿನೈದು ಭಕ್ತಸ್ಥಲಂಗಳು. ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಈ ಒಂಬತ್ತು ಆಚಾರಲಿಂಗಸ್ಥಲಂಗಳು. ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ, ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು. ಮಹೇಶ್ವರಸ್ಥಲ, ಲಿಂಗನಿಷಾ*ಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ, ಈ ಒಂಬತ್ತು ಮಹೇಶ್ವರಸ್ಥಲಂಗಳು. ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ, ಈ ಒಂಬತ್ತು ಗುರುಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ, ಸ್ವಾಧಿಷಾ*ನಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ, ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ, ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಈ ಏಳು ಪ್ರಸಾದಿಸ್ಥಲಂಗಳು. ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ, ಈ ಒಂಬತ್ತು ಶಿವಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ, ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ, ಶಿವಯೋಗಸಮಾಧಿಸ್ಥಲ,ಲಿಂಗನಿಜಸ್ಥಲ, ಅಂಗಲಿಂಗಸ್ಥಲ, ಈ ಐದು ಪ್ರಾಣಲಿಂಗಿಸ್ಥಲಂಗಳು, ಜೀವಾತ್ಮಸ್ಥಲ,ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಈ ಹನ್ನೆರಡು ಜಂಗಮಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ, ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು. ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶಸ್ಥಲ, ಶೀಲಸಂಪಾದನಾಸ್ಥಲ, ಈ ನಾಲ್ಕು ಶರಣಸ್ಥಲಂಗಳು. ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು. ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ, ಈ ನಾಲ್ಕು ಐಕ್ಯಸ್ಥಲಂಗಳು. ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ, ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ, ಈ ಒಂಬತ್ತು ಮಹಾಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು. ಇಂತೀ 101 ಸ್ಥಲಕುಳಂಗಳು ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ, ಆ ಆರು ಚಕ್ರಂಗಳನು ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ, ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ ಗುರುಲಿಂಗಜಂಗಮವ ಕುಳ್ಳಿರಿಸಿ, ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ, ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ಆ ಗುರುಲಿಂಗಜಂಗಮವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ ಮಹಾಶರಣರ ಪರಮಗುರು ಬಸವರಾಜದೇವರ ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆಧಾರದಲ್ಲಿ ಆಚಾರಲಿಂಗಕ್ಕೆ ಗೃಹಸ್ಥದಳವೇ ಸ್ಥಾನವು, ಸ್ವಾಧಿಷಾ*ನದಲ್ಲಿ ಗುರುಲಿಂಗಕ್ಕೆ ಅಧ್ಯಾಪನದಳವೇ ಸ್ಥಾನವು, ಮಣಿಪೂರಕದಲ್ಲಿ ಶಿವಲಿಂಗಕ್ಕೆ ನೇತ್ರದಳವೇ ಸ್ಥಾನವು. ಇದು ರೂಪನಿಷ*ಮಾಗಿರ್ಪುದರಿಂ ಅಂತಪ್ಪ ರೂಪವೇ ಸದ್ರೂಪಮಾದ ಶಕ್ತಿಯು, ಅಂತಪ್ಪ ಸದ್ರೂಪಸಂಸರ್ಗದಿಂ ತಮೋಮಧ್ಯದಲ್ಲಿದ್ದು ಗ್ರಹಿಸುವುದರಿಂ ನೇತ್ರಮಧ್ಯದಲ್ಲಿರ್ಪ ನೀಲಿಮಕ್ಕೆ ತಾರಕವೆಂದು ಹೆಸರು, ಅದೇ ಶಿವನಿರುವ ಸ್ಥಾನಮಾದುದರಿಂ ನೇತ್ರೇಂದ್ರಿಯವೇ ಪ್ರಧಾನಮಾಯಿತ್ತು. ಆ ಈಶ್ವರನ ನಿಜಸ್ಥಾನವೇ ತಾರಕವು. ಅನಾಹತದಲ್ಲಿ ಜಂಗಮಲಿಂಗಕ್ಕೆ ತನುದಳವೇ ಸ್ಥಾನವು, ವಿಶುದ್ಧದಲ್ಲಿ ಪ್ರಸಾದಲಿಂಗಕ್ಕೆ ಪ್ರಮಾಣದಳವೇ ಸ್ಥಾನವು, ಆಜ್ಞೇಯದಲ್ಲಿ ಮಹಾಲಿಂಗಕ್ಕೆ ಪ್ರಾಣದಳವೇ ಸ್ಥಾನವು. ಪ್ರಾಣದಲ್ಲಿ ಹಂಕಾರವೇ ಬೀಜವು, ಪ್ರಮಾಣದಲ್ಲಿ ಅಕಾರವೇ ಬೀಜವು, ತನುವಿನಲ್ಲಿ ಕಕಾರವೇ ಬೀಜವು, ನೇತ್ರದಲ್ಲಿ `ಣ'ಕಾರವೇ ಬೀಜವು, ಅಧ್ಯಾಪನದಲ್ಲಿ ಯಕಾರವೇ ಬೀಜವು, ಗೃಹಸ್ಥದಲ್ಲಿ ವಕಾರವೇ ಬೀಜವು. ವಿಶುದ್ಧಾಜ್ಞೇಯಗಳಲ್ಲಿರ್ಪ `ಅಹಂ'ಕಾರಗಳೇ ಕಾರಣ, ಅದು ವಿಪರೀತಿಸಿ ಅನಾಹತಮಣಿಪೂರಕಗಳಲ್ಲಿರ್ಪ `ಕಣ'ವೇ ಸೂಕ್ಷ್ಮ, ಸ್ವಾಧಿಷಾ*ನಾಧಾರಗಳಲ್ಲಿರ್ಪ `ಯಶ'ವೇ ಸ್ಥೂಲ. ಕಾರಣರೂಪಮಾದ `ಅಹಂ'ಕಾರವೇ ಜೀವನು, ಶೋಭನರೂಪಮಾಗಿ ಅವಧಿಯಿಲ್ಲದೆ ಗಮಿಸುತ್ತಿರ್ಪ `ಕಣ'ವೇ ಬಿಂದು, ಗೃಹಸ್ಥಸ್ಥಾನದಲ್ಲಿ ಆಚಾರಮುಖದಲ್ಲಿ ದೊಡ್ಡಿತ್ತಾಗಿಹುದೇ ಯಶ, ಮಹದ್ಬೀಜವೇ ಪ್ರಾಣ, ಅದಕ್ಕೆ ಪ್ರಾಣವೇ ತನು, ಆ ತನುವಿಗೆ ನೇತ್ರವೇ ಪ್ರಧಾನ, ಅದಕ್ಕುಪದೇಶವೇ ಪರಿಶುದ್ಧಿ, ಗೃಹಸ್ಥಧರ್ಮವೇ ಆ ಶರೀರಕ್ಕೆ ಪ್ರಕಾಶವು. ಅಹಂಕಾರರೂಪಮಾದ ಜೀವನಿಗೆ ಇಷ್ಟರೂಪಮಾದ `ಕ್ಷ' ಕಾರವೇ ಸಂಹಾರ, ಆ `ಹ'ಕಾರರೂಪಮಾದ ಪ್ರಾಣಕ್ಕೆ ವಿಸರ್ಗರೂಪಮಾದ ನಿಗ್ರಹಸ್ಥಾನವೇ ಸಂಹಾರ, `ಶ'ಕಾರರೂಪಮಾದ ತನುವಿಗೆ `ಠ'ಕಾರರೂಪಮಾದ ವ್ಯಯವೇ ಸಂಹಾರ, `ಣ'ಕಾರರೂಪಮಾದ ನೇತ್ರಕ್ಕೆ `ಪ'ಕಾರರೂಪಮಾದ ಗೋಪ್ಯವೇ ಸಂಹಾರ, `ಯ'ಕಾರರೂಪಮಾದ ಅಧ್ಯಾಪನೆಗೆ `ಲ'ಕಾರರೂಪಮಾದ ಪರಿಗ್ರಹವೇ ಸಂಹಾರ, `ಶ'ಕಾರರೂಪಮಾದ ಗೃಹಸ್ಥಕ್ಕೆ `ಸ'ಕಾರರೂಪಮಾದ ಸಂನ್ಯಾಸವೇ ಸಂಹಾರ. ಅಂತಪ್ಪ ಸಂನ್ಯಾಸವೇ ತೂರ್ಯ, ಅಂತಪ್ಪ ತೂರ್ಯದಲ್ಲಿ ಜೀವನ್ಮುಕ್ತಿಯಪ್ಪ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸೂಕ್ಷ್ಮದಿಂದಲೇ ಸ್ಥೂಲಮಂದಿಸಿ, ಆ ಸೂಕ್ಷ್ಮವು ಕಾಣಿಸದೇ ಸ್ಥೂಲವು ಕಾಣಿಸುತ್ತಿರ್ಪುದು. ಸ್ಥೂಲಶರೀರಯಾತನೇ ಬಿಡಿಸಿದಲ್ಲಿ, ಆ ಸ್ಥೂಲಮಂ ಬಿಟ್ಟು ಸೂಕ್ಷ್ಮ ಗೋಚರಮಾಗಿರ್ಪ ಲಯಂ ತಾನೇ ಗೋಚರಮಾಗಿ, ತಾನೇ ಪುನಃಸೃಷ್ಟಿಕಾರಣಮಾಗಿರ್ಪುದೆಂತೆಂದೊಡೆ: ಬೀಜದಿಂದಲೇ ಪೈರು ಪುಟ್ಟಿ, ಆ ಬೀಜಂ ಕಾಣಿಸದೆ ಪೈರೇ ಕಾಣಿಸಿ, ಆ ಪೈರಂ ಕೊಯ್ದು ತುಳಿದು ಒಕ್ಕಿದಲ್ಲಿ, ಆ ಪಯರಂ ಬಿಟ್ಟು, ಬೀಜವು ಪ್ರತ್ಯಕ್ಷಮಾಗಿ, ಫಲಯಾತೆನಗೊಳಗಾಗಿ, ಪುನಸ್ಸøಷ್ಟಿಕಾರಣಮಾಗಿರ್ಪಂದದಿ, ಸ್ಥೂಲದೊಳಗೆ ಸೂಕ್ಷ್ಮವು, ಸೂಕ್ಷ್ಮದೊಳಗೆ ಸ್ಥೂಲವೂ ಅಡಗಿ, ಬಂದು ಕಾಣಿಸಲೊಂದು ಕಾಣಿಸದಿರ್ಪ ಈ ದಂದುಗವಂ ಬಿಡಿಸಿ, ಸಲಹುವೆಯೋ ಎಂಬೀ ಸಂದೇಹದಿಂ ಹಿಂದುಮುಂದು ತಿಳಿಯದೆ ಮಂದಮತಿಯಾಗಿರ್ಪೆನ್ನ ಬಂಧನವಂ ಬಿಡಿಸಿ, ನಿನ್ನಡಿಕೆಂದಾವರೆಯೊಳು ಸಂಬಂಧಿಸುವುದೆಂದಿಗೆ ಹೇಳಾ, ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಡಿಮುಡಿಯಿಲ್ಲದ ಪ್ರಸಾದ, ನಡುಕಡೆಯಿಲ್ಲದ ಪ್ರಸಾದ, ಎಡೆಬಿಡುವಿಲ್ಲದ ಪ್ರಸಾದ, ಅಖಂಡೇಶ್ವರನೆಂಬ ಮಹಾಘನ ಪರಾತ್ಪರ ಪರಿಪೂರ್ಣಪ್ರಸಾದದೊಳಗೆ ಮನವಡಗಿ ನೆನಹುನಿಷ್ಪತ್ತಿಯಾಗಿ ಏನೆಂದರಿಯದಿರ್ದೆನಯ್ಯಾ.
--------------
ಷಣ್ಮುಖಸ್ವಾಮಿ
ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು, ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು, ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು, ಅಖಂಡೇಶ್ವರನೆಂಬ ಬಯಲಿನ ಬಯಲು ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು.
--------------
ಷಣ್ಮುಖಸ್ವಾಮಿ
ದಕ್ಷಿಣದಲ್ಲಿರ್ಪ ಯಮನೇ ವಿಷ್ಣುವು; ಉತ್ತರದಲ್ಲಿರ್ಪ ಕುಬೇರನೇ ಲಕ್ಷ್ಮಿಯು. ಪಶ್ಚಿಮದಲ್ಲಿರ್ಪ ವರುಣನೇ ವಿಷ್ಣುವು; ಪೂರ್ವದಲ್ಲಿರ್ಪ ಇಂದ್ರನೇ ಲಕ್ಷ್ಮಿಯು. ಈಶಾನ್ಯದಲ್ಲಿರ್ಪ ಈಶಾನನೇ ಶಿವನು; ನೈರುತ್ಯದಲ್ಲಿರ್ಪ ನೈರುತಿಯೇ ಶಕ್ತಿಯು. ಅಗ್ನೇಯಲ್ಲಿರ್ಪ ಅಗ್ನಿಯೇ ಶಿವನು; ವಾಯುವ್ಯದಲ್ಲಿರ್ಪ ವಾಯುವೇ ಶಕ್ತಿಯು. ಇವು ನಿಜನಾಮಸಂಬಂಧಗಳಾಗಿಹವು. ಅವು ಭಿನ್ನನಾಮಸಂಬಂಧಗಳಾಗಿ ಸಾಕಾರ ನಿರಾಕಾರಮೂರ್ತಿಗಳಾಗಿಹವು. ಶಿವನು ಸಾಕಾರದಲ್ಲಿ ಸಂಹರಿಸಿ, ನಿರಾಕಾರದಲ್ಲಿ ರಕ್ಷಿಸುತ್ತಿಹನು. ವಿಷ್ಣವು ಸಾಕಾರದಲ್ಲಿ ರಕ್ಷಿಸಿ, ನಿರಾಕಾರದಲ್ಲಿ ಸಂಹರಿಸುತ್ತಿಹನು. ಕೆಳಗೆ, ಬಿಂದುಮುಖದಲ್ಲಿ ಸೃಷ್ಟಿಸುವನೇ ಬ್ರಹ್ಮನು, ಮೇಲೆ, ನಾದ ಮುಖದಲ್ಲಿ ಸೃಷ್ಟಿಸುತ್ತಿರ್ಪಳೇ ಸರಸ್ವತಿಯು. ಅಷ್ಟದಳಕಮಲದ ಮೂಲವೇ ಬ್ರಹ್ಮನು, ಅದರಗ್ರದಲ್ಲಿ ತೋರುವ ವಾಸನೆಯು ಸರಸ್ವತಿಯು. ಆ ಕಮಲದ ಹೃದಯವೇ ಮೇರುವು, ಆ ಮೇರುಮಧ್ಯದಲ್ಲಿರ್ಪುದೇ ಮಹಾಲಿಂಗವು. ಅಲ್ಲಿರ್ಪ ಮಹಾಲಿಂಗವಂ ಗುರುವು ಬಾಹ್ಯಕ್ಕೆ ತಂದಿದಿರಿಟ್ಟಲ್ಲಿ, ಸ್ಫಟಿಕಭಾಂಡದಲ್ಲೊಳಗಿರ್ಪ ವಸ್ತುವೇ ಹೊರಗೆ, ಹೊರಗಿರ್ಪ ವಸ್ತುವೇ ಒಳಗೆ ತೋರಿ, ಆ ಭಾಂಡವು ತನ್ನ ನಿಜಗುಣವನಳಿದು ವಸ್ತುವು ಗುಣರೂಪಮಾಗಿ ತೋರ್ಪಂದದಿ, ಇಷ್ಟ ಪ್ರಾಣಗಳೇಕಮಾದಲ್ಲಿ, ಶರೀರವು ತನ್ನ ಮುನ್ನಿನ ಗುಣವನಳಿದು, ಅಗ್ನಿಸ್ವರೂಪಮಾದಿಷ್ಟಲಿಂಗದಲ್ಲಿ ಐಕ್ಯವಾದುದರಿಂ ದಹನಕ್ಕಯೋಗ್ಯಮಾಯಿತ್ತು. ನಿರಾಕಾರವಾದ ಪ್ರಾಣವು ಈಶಾನ್ಯಸ್ವರೂಪಮಾದ ಪ್ರಾಣಲಿಂಗದಲ್ಲಿ ಲೀನಮಾದುದರಿಂ ಕರ್ಮಸಂಸ್ಕಾರಯೋಗ್ಯಮಲ್ಲಮಾಯಿತ್ತು. ಆದುದರಿಂದಾ ಶಿವಭಕ್ತನಿಗೆ ದಹನಸಂಸ್ಕಾರಮಿಲ್ಲಮಾಯಿತ್ತು. ಇಂತಪ್ಪ ಸಾಕಾರ ನಿರಾಕಾರ ಶಿವಶಕ್ತಿಸ್ವರೂಪಗಳೆಲ್ಲವೂ ಭಾವದಲ್ಲೊಂದೇ ಆಗಿ ಪರಿಪೂರ್ಣತೃಪ್ತಿಯಲ್ಲಿ ನಿಜಸ್ವಭಾವನಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗೋಳಕಾಕಾರಮಾದ ಮಹಾಲಿಂಗವೇ ಬೀಜ, ಅದು ಸಕಲಪ್ರಪಂಚಗಳನ್ನು ತನ್ನೊಳಗಿಟ್ಟುಕೊಂಡು, ಸಕಲಕ್ಕೂ ತಾನೇ ಕಾರಣಮಾಗಿಹುದು. ಅಂತಪ್ಪ ಮಹಾಲಿಂಗವು ಗುರುತಂತ್ರದಿಂ ಭಕ್ತಕ್ಷೇತ್ರದಲ್ಲಿ ತಾನೊಂದೆರಡಾದಲ್ಲಿ, ಶಿವಶಕ್ತಿಸ್ವರೂಪಮಾದ ವರ್ಣಶಾಖೆಗಳು ಅಭೇದಮಾಗಂಕುರಿಸಿ, ಪರ್ಣದಿಂದ ಶಾಖೆಯು ಬಲಿದು, ಶಾಖೆಯಿಂದ ಪರ್ಣವು ಬಲಿದು, ಅಂತಪ್ಪ ಶಾಖಾರೂಪಮಾದ ಮುಖಂಗಳಿಂದೊಪ್ಪುತಿರ್ಪ ವೃಕ್ಷವೇ ರುದ್ರನು. ಆ ಪರ್ಣವೇ ವಿಷ್ಣು, ಫಲವೇ ಬ್ರಹ್ಮ, ಪುಷ್ಪವೇ ಪೃಥ್ವೀ, ಫಲವೇ ಜಲ, ನನೆಯೇ ಅಗ್ನಿ, ಪರ್ಣವೇ ವಾಯು, ಆ ವೃಕ್ಷವೇ ಆಕಾಶ, ಬೀಜವೇ ಆತ್ಮ. ಅಂತಪ್ಪ ಬೀಜಕ್ಕೆ ನಿಂದಲ್ಲಿ ಫಲವರ್ಣಶಾಖೆಗಳು ವರ್ಧಿಸಿ, ಸುಖವಂ ಕೊಡುತಿರ್ಪವು. ಲಿಂಗಾರ್ಚನೆಯಂ ಮಾಡಿದಲ್ಲಿ, ಸಕಲ ದೇವತೆಗಳು ತೃಪ್ತರಾಗಿ ವರ್ಧಿಸುತಿರ್ಪರಾದ ಕಾರಣ, ವೀರಶೈವಮತದಲ್ಲಿ ಆತ್ಮಸ್ವರೂಪಮಾದ ಬೀಜ ಒಂದೆರಡಾದುದೇ ಇಷ್ಟ ಪ್ರಾಣಗಳು. ಫಲಮಧ್ಯದಲ್ಲನಂತರೂಪಮಾಗಿ ಸಕಲ ಪ್ರಪಂಚವಂ ತನ್ನೊಳಗಿಟ್ಟುಕೊಂಡು ತನ್ನನು ತಿಳಿದು ಸೃಷ್ಟಿಗೆ ತಾನೇ ಕಾರಣಮಾಗಿ, ಪರಮಾನಂದಮಹೀರುಹವು ಫಲಿಸಿ ತೃಪ್ತಿರೂಪಮಾಗಿ ಆ ಪ್ರಪಂಚಕ್ಕೆ ತಾನೇ ಕಾರಣಮಾಗಿ, ಮಿಕ್ಕವೆಲ್ಲಾ ಮಿಥ್ಯವಾಗಿ ತೋರುತ್ತಿರ್ಪುದೇ ಭಾವಲಿಂಗವು. ಅಂತಪ್ಪ ಭಾವಲಿಂಗಸಂಗದಲ್ಲಿ ನಿಸ್ಸಂಗ ನಿರ್ಭಾವಮಾದ ನಿತ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನನ ಕಂಡ ತಮದಂತಾಯಿತ್ತೆನ್ನ ಗುರುವಿನುಪದೇಶ, ವಾಯುವಿನ ಕೈಯ ಸೊಡರಿನಂತಾಯಿತ್ತೆನ್ನ ಗುರುವಿನುಪದೇಶ, ಉರಿಯ ಮುಖದೊಳಗಿಪ್ಪ ಕರ್ಪುರದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸೌರಾಷ್ಟ್ರ ಸೋಮೇಶ್ವರನ ಸದ್ಗುರುವೆನ್ನ ಕರಸ್ಥಲಕ್ಕೆ ಕೃಪೆಮಾಡಿದ ಕಾರಣ ಸಕಲಪ್ರಪಂಚು ಬಿಟ್ಟೋಡಿತ್ತು.
--------------
ಅಜಗಣ್ಣ ತಂದೆ
ಇನ್ನಷ್ಟು ... -->