ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಲು ಮೂಲ ದ್ವಾದಶಾಂತದ ಮೇಲಣ ಚಿತ್ಕಲಾ ಸೂರ್ಯನು ನೆತ್ತಿಯ ಮಧ್ಯಮಂಡಲದಲ್ಲಿ ನಿಂದು, ಉದಯಾಸ್ತಮಯವಿಲ್ಲದೆ ಬೆಳಗಲು, ಮೂರು ಲೋಕದ ಕತ್ತಲೆ ಹರಿದು ಹೋಯಿತ್ತು ನೋಡಾ. ಆ ಮೂರು ಲೋಕದ ಕಳ್ಳರೆಲ್ಲಾ ಬೆಳ್ಳರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನ ಬೆಂಬಳಿಯಲ್ಲಿಯೆ ಲಿಂಗವನಾರಾಧಿಸುತ್ತಿರ್ದರು.
--------------
ಸ್ವತಂತ್ರ ಸಿದ್ಧಲಿಂಗ
ಒಬ್ಬರಸು ಮೋಹಿತನಾಗಿ, ಅಂದೇ ಲಗ್ನವಾಗಿ, ಅಂದೇ ರತಿಯಾಗಿ ಅಂದೇ ಪತಿ ಮೃತಿಯಾದ ದರಿದ್ರ ನಾರಿಯ ತೆರನಾಯಿತ್ತೆನ್ನ ಮನ. ಒಬ್ಬರಸು ಭೂಪ್ರದಕ್ಷಿಣೆ ಮಾಡಿ ಭೂದೇವಿಯ ಮಗನ ಜನನ ವಾರ್ತೆಯನಂದೇ ಕೇಳಿ, ಅಂದೇ ಮಗನ ಮೃತಿಯಾದರಸನ ಮನವಾದ ತೆರನಾಯಿತ್ತೆನ್ನ ಮನ. ತನ್ನ ಕೊಟ್ಟು ತಾ ಹೋದಡೆ ಗುರುಸ್ಥಲ ಹೋಯಿತ್ತು. ಲಿಂಗಸ್ಥಲ ಹೋಯಿತ್ತು, ಜಂಗಮಸ್ಥಲ ಮೊದಲೆ ಹೋಯಿತ್ತು. ಇನ್ನಾರ ಪಾದವಿಡಿವೆ? ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವ ಮಹಾಪ್ರಭುವೆ.
--------------
ಸಿದ್ಧರಾಮೇಶ್ವರ
ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ] ಗೌತಮಗೆ ಗೋವಧೆಯಾಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು. ವಿಷ್ಣುದೈವವೆಂದು ಆರಾಧಿಸಿದ ಕಾರಣ ಪಾಂಡವರಿಗೆ ದೇಶಾಂತರ ಯೋಗವಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ. ವಿಷ್ಣುದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು. ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ, ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು. ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು. ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ, ಕೇಳಿದರೆ ಗತಿಯಿಲ್ಲ ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ. ಹರ ನಿಮ್ಮ ಶರಣರ ಒಲವಿಂದ ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ ಹೊನ್ನ ಲಕ್ಷ್ಮಿಗಳು ಅರ್ಥ ಅಯುಷ್ಯವ ಕೊಡಬಲ್ಲವೆ ? ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ, ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲ ಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂ ಓಸರಿಸಿದಲ್ಲಿ ಭಾಷೆ ಹೋಯಿತ್ತು. ಕಳ್ಳನ ತಾಯ ಕಣಿಯ ಕೇಳ ಹೋದಂತೆ. ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿ ಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ ಮುಟ್ಟದೆ ಹೋಯಿುತ್ತು.
--------------
ಕರುಳ ಕೇತಯ್ಯ
ಹೊರಗೆ ನೋಡಿದರೆ ಬಯಲು, ಒಳಗೆ ನೋಡಿದರೆ ಬಯಲು, ಊರೊಳಗೆ ಆವು ಇಲ್ಲ, ಕೇರಿಯೊಳಗೆ ಕರುವು ಇಲ್ಲ. ಊರು ಕೇರಿಗಳ ನುಂಗಿತ್ತು ಒಂದು ಇರುಹೆ. ಇರುಹೆ ಹೋಯಿತ್ತು ತಾನು ತಾನಾದಲ್ಲಿಗೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಾಹ್ಮಣನೆ ದೈವನೆಂದು ನಂಬಿದ ಕಾರಣ ಗೌತಮಮುನಿಗೆ ಗೋವೇಧೆಯಾಯಿತ್ತು. ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಬಲಿಗೆ ಬಂಧನವಾಯಿತ್ತು. ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಕರ್ಣನ ಕವಚ ಹೋಯಿತ್ತು ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಪರಶುರಾಮ ಸಮುದ್ರಕ್ಕೆ ಗುರಿಯಾದನು. ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ದೇವಾ, ಭಕ್ತನೆಂದು ನಂಬಿದ ಕಾರಣ ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
--------------
ಬಸವಣ್ಣ
ನಿಂದೆ, ಎಂಬುದು ಬಂದ ಭವದಲ್ಲಿಯೆ ಹೋಯಿತ್ತು. ಮುಂದೆ ಗುರುಕಾರುಣ್ಯವಾದಲ್ಲಿಯೇ `ಹಿಂದು' ಹರಿಯಿತ್ತು. ಮರ್ತ್ಯಲೋಕದ ಮಹಾಗಣಂಗಳು ಮೆಚ್ಚೆ, ದಾಸೋಹವ ಮಾಡಿದಲ್ಲಿಯೆ ಪ್ರಮಥಗಣಂಗಳು ತಮ್ಮೊಳಗೆ ನಿಮ್ಮನು ಇಂಬಿಟ್ಟುಕೊಂಡು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದು, ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಹಿತವಾದಲ್ಲಿಯೆ ಪ್ರಾಣಲಿಂಗಸಂಬಂಧವಳವಟ್ಟಿತ್ತು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಪ್ರಮಥರಿಗೆ ಮಾಡಿದ ಸಯದಾನವ ನಿಮ್ಮ ಲಿಂಗಕ್ಕೆ ಆರೋಗಿಸಲಿತ್ತು ತೃಪ್ತಿಪಡಿಸಿದಲ್ಲಿಯೆ ನಿನ್ನ ತನು ಮನ ಪ್ರಾಣಗಳು ಅರ್ಪಿತವಾದಲ್ಲಿ ಮಹಾಪ್ರಸಾದ ಸಾಧ್ಯವಾಯಿತ್ತು. ಆದಿಯ ಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ ಹಿಂದಣ ಸಂಕಲ್ಪವಳಿಯಿತ್ತು. ಸರ್ವಾಚಾರಸಂಪತ್ತು ನಿನ್ನಲ್ಲಿ ಸಯವಾದಲ್ಲಿ ಸರ್ವಸೂತಕ ತೊಡೆಯಿತ್ತು. ಗುಹೇಶ್ವರಲಿಂಗವು ನಿನ್ನ ಹೃದಯಕಮಲದಲ್ಲಿ ನೆಲೆಗೊಂಡು ನಿನ್ನ ಕರಸ್ಥಲದೊಳಗೆ ತೊಳಗೆ ಬೆಳಗುತ್ತೈದಾನೆ. ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಸಮಯ ಸಮಯೋಚಿತ ಭಾವ ಭಾವನಷ್ಟವಾಗಿ ಕಾಲಕರ್ಮವಿಲ್ಲದೆ ಹೋಯಿತ್ತು; ತತ್ವಜ್ಞಾನ ಪ್ರಕಾಶಿಕೆಯಡಗಿತ್ತು; ಆಧಾರಾಧೇಯವಡಗಿತ್ತಯ್ಯಾ; ನಿರಾಧಾರ ಸಮಯವಾಯಿತ್ತಯ್ಯಾ. ಬಸವ ಬಸವಾ ಬಸವಾ ಎಂಬ ಅನುಭಾವ ಬಯಲಾಯಿತ್ತಯ್ಯಾ. ಎಸಳೆಂಟರ ಹಸನಳಿಯಿತ್ತಯ್ಯಾ ಬಸವಾ ನಿಮ್ಮಲ್ಲಿ ನಿಜಯೋಗ ಸಮಾಧಿಯಾಯಿತ್ತಯ್ಯಾ ಬಸವಾ ನಿಮ್ಮಲ್ಲಿ, ಕಪಿಲಸಿದ್ಧಮಲ್ಲಿನಾಥಯ್ಯಾ, ಬದುಕಿದೆನು ನಾನಿಂದು.
--------------
ಸಿದ್ಧರಾಮೇಶ್ವರ
ಭಕ್ತಂಗೆ ಬೀಜರೂಪು, ಮಾಹೇಶ್ವರಂಗೆ ಅಂಕುರರೂಪು, ಪ್ರಸಾದಿಗೆ ಸಸಿರೂಪು, ಪ್ರಾಣಲಿಂಗಿಗೆ ಫಲರೂಪು, ಶರಣಂಗೆ ಆ ಕೆಯ್ಯ ಕೊಯ್ವರೂಪು, ಐಕ್ಯಂಗೆ ಆ ಹುಲ್ಲ ಒಕ್ಕಿ, ಮೆಟ್ಟಿಸಿ ತೂರುವಾಗ, ಹೊಟ್ಟ ಕಳೆದು, ಭತ್ತ ನಿಂದು, ಹುಲ್ಲು ಹೊರೆಗಟ್ಟಿತ್ತು. ಒಕ್ಕಿದ ಮೇಟಿ ಕಿತ್ತಿತ್ತು. ಹುಲ್ಲು ಮೆದೆಗೆ ಹೋಯಿತ್ತು, ಹೊಳ್ಳುಗೋಡು ಬಿದ್ದಿತ್ತು. ನಿಂದ ಭತ್ತ ಪುನರಪಿ ಬೀಜವಹುದಕ್ಕೆ ಮುನ್ನವೆ, ನಿಃಕಳಂಕ ಮಲ್ಲಿಕಾರ್ಜುನನೆಂಬ ಹಗೆಯದಲ್ಲಿ ಹೋಯಿತ್ತು.
--------------
ಮೋಳಿಗೆ ಮಾರಯ್ಯ
ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ, ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ, ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ? ಗುಹೇಶ್ವರನ ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ
--------------
ಅಲ್ಲಮಪ್ರಭುದೇವರು
ಕ್ರೀಯ ಮರೆದಲ್ಲಿ, ಅರಿವು ಹೀನವಾಗಿಪ್ಪುದು. ಅರಿವ ಮರೆದಲ್ಲಿ, ಜ್ಞಾನ ಹೀನವಾಗಿಪ್ಪುದು. ಜ್ಞಾನವ ಮರೆದಲ್ಲಿ, ಬೆಳಗಿನ ಕಳೆ ಹೋಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಿಗೆ ಮರೆಯಾಗಿ ತೊಲಗಿದ.
--------------
ಶಿವಲೆಂಕ ಮಂಚಣ್ಣ
ಬಣ್ಣ ನುಂಗಿದ ಬಂಗಾರದಂತಾಯಿತ್ತು, ಈ ಅಂಗ. ಶಿಥಿಲವನವಗವಿಸಿದ ಸುರಾಳದಂತಾಯಿತ್ತು, ಈ ಅಂಗ. ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ. ಸರಸಮಾಧಾನವನೆಯ್ದೆ ಬೆರೆದು ನೆರೆದಂತಾಯಿತ್ತು, ಈ ಅಂಗ. ಬಯಲು ಬಯಲೊಳಗಡಗಿ, ವಸ್ತು ವಸ್ತುವ ಕೂಡಿ, ಅರ್ಕೇಶ್ವರಲಿಂಗದಲ್ಲಿ ಒಪ್ಪಿ ಹೋಯಿತ್ತು, ಈ ಅಂಗ.
--------------
ಮಧುವಯ್ಯ
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು. ಬಲ್ಲೆನೆಂಬ ಅರುಹಿರಿಯರೆಲ್ಲಾ ಅಲ್ಲಿಯೇ ಮರುಳಾದರು. ನೂಲ ಮಾರಿ ಹತ್ತಿಯ ಬಿಲಿಯ ಹೋದರೆ, ಅದು ಅತ್ತಲೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು. ಮಾಯಾ ಪ್ರಪಂಚು ಬಿಟ್ಟಿತ್ತು. ಮುಂದಣ ಹುಟ್ಟರತು ಹೋಯಿತ್ತು. ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು. ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು. ಅದೇನೇನೆಂಬೆನೇನೆಂಬೆನು, ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ. ಉಭಯಲಿಂಗ ನಾಮ ನಷ್ಟವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->