ಅಥವಾ

ಒಟ್ಟು 13 ಕಡೆಗಳಲ್ಲಿ , 10 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಎನ್ನ ಹೃದಯಕಮಲ ಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ_ ಎನ್ನ ಕ್ಷಮೆಯೆ ಅಭಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ ಎನ್ನ ಸಮಾಧಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ, ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ, ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ ಎನ್ನ ವರಿõ್ಞನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ, ಎನ್ನ ಶುದ್ಧಿಯೆ ನಮಸ್ಕಾರ, ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು_ ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ಸಾಂಗೋಪಾಂಗ ಶುದ್ಧಶರೀರಿಯಾಗಿ ಉನ್ನತಾಸನ ಗದ್ದುಗೆಯಲ್ಲಿ ಕುಳಿತು ಕಣ್ಣುಮುಚ್ಚಿ ಅಂತರಂಗದಲ್ಲಿ ಪರಮಾತ್ಮನ ಕಳೆಯ ಧ್ಯಾನಿಸಿ ಮನಸ್ಸಿನಲ್ಲಿ ಕಟ್ಟಿ ದೃಷ್ಟಿಗೆ ತಂದು, ಆ ದೃಷ್ಟಿಯಿಂದ ಪುಷ್ಪದಲ್ಲಿ ತುಂಬಿ ಮೃತ್ತಿಕೆ ಪಾಷಾಣಾದಿ ನಾನಾ ತರಹದ ಲಿಂಗಾಕಾರದ ಮೂರ್ತಿಯ ಸ್ಥಾಪಿಸಿ, ದೇವರೆಂದು ಭಾವಿಸಿ, ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಾದಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನೆ ಮಾಡಿ, ಆ ಪೂಜಾಂತ್ಯದಲ್ಲಿ ಎನ್ನ ಮಲಿನ ದೇಹದಲ್ಲಿ ನೀನು ನಿರ್ಮಲವಾದ ವಸ್ತುವು ಇರಬೇಡ ಹೋಗೆಂದು ತನ್ನ ದೇವರ ಬಾವಿ ಕೆರೆ ಹಳ್ಳ ಕೊಳ್ಳಾದಿ ಸ್ಥಾನಂಗಳಲ್ಲಿ ಹಾಕಿ ಬಿಡುವ ಶಿವದ್ರೋಹಿಗಳಿಗೆ ಕುಂಭೀಪಾತಕ ನಾಯಕ ನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಳಿಕ ನಿಷ್ಕಾಮನಾದ ಮೋಕ್ಷಾಧಿಕಾರಿಗಭ್ಯಂತರದಲ್ಲಿ ಮುಖ್ಯಮಾಗಿ ಜ್ಞಾನ ಮಯನಾದ ಪೂಜೆ ಕತ್ರ್ಯವ್ಯಮಾ ಪೂಜೋಪಚಾರಂಗಳಲ್ಲಿ ಉಪಚಾರಮಂ ಉಪಚಾರ್ಯಮಾದ ದೇವತೆಯ ಗುಣಂಗಳನಾರೋಪಿಸಿ ಮಾಡಲು ತಕ್ಕು ದದೆಂತೆಂದೊಡೆ :ಮೊದಲು ತದನಂತರದಲ್ಲಿ ಶಿವಧರ್ಮವೆ ಕಂದ, ಸುಜ್ಞಾನವೆ ನಾಳ, ಅಷ್ಟಮಹ ದೈಶ್ವರ್ಯವೆ ದಳ, ರುದ್ರೇಶ್ವರಾದಿಕವೆ ಕೇಸರ, ವೈರಾಗ್ಯವೆ ಕರ್ಣಿಕೆಗಳಾಗಿ ಚಂದ್ರಪ್ರಭಾಮಯವೆನಿಸಿ ಮೆರೆವ ಹೃದಯಕಮಲದ ಸೋಮ ಸೂರ್ಯಾಗ್ನಿ ಮಂಡಲತ್ರಯದ ಮಧ್ಯದಲ್ಲಿ ಸತ್ತೆಂಬ ದಿವ್ಯಮೂರ್ತಿಯಿಂ, ಚಿತ್ತೆಂಬ ಕಾಯ ಕಾಂತಿಯಿಂ, ಆನಂದವೆಂಬ ಲಾವಣ್ಯದಿಂ, ತತ್ವ ಪರಿಕಲ್ಪಿತಮಾ ದಾಭರಣಾಯುಧಾದಿಗಳಿಂದಲಂಕೃತ ಮಾಗಿ, ಸ್ಫಟಿಕದೊಳಗಣ ದೀಪದಂತೆ ಒಳಹೊರಗೆ ಬೆಳಗುತ್ತಿರ್ದೀಶ್ವರನಂ ಪರಿಭಾವಿಸಿ ಬಳಿಕ ಸರ್ವಾಧಾರ ನೀಶ್ವರನೆಂಬ ಬುದ್ಧಿಯೆ ಆಸನ, ಪರಮಾತ್ಮನು ಪರಿಪೂರ್ಮನೆಂಬ ಮತಿ[ಯೆ] ಆವಾಹನ, ಜಗಕೆಲ್ಲಂ ಶಿವನ ಶ್ರೀಪಾದವೆಂಬ ತಿಳಿವೆ ಪಾದ್ಯಂ, ಸುಖಾಂಬುಧಿ ಶಂಭುವೆಂಬನುಸಂಧಾನವೆ ಅಘ್ರ್ಯ, ಪರಮಪವಿತ್ರ ಸ್ವರೂಪನಭವನೆಂಬರಿವೆ ಆಚಮನೀಯ, ನಿತ್ಯನಿರ್ಮಳ ನೀಶ್ವರನೆಂಬುಪಲಬ್ದಿಯೆ ಸ್ನಾನ, ಜಗವೆಲ್ಲವನತಿ ಕ್ರಮಿಸಿರ್ಪ ಶುದ್ಧವಿದ್ಯೆಯ ವಸ್ತ್ರ, ತ್ರಿಗುಣಾಗಮಾತೀತಮಾದ ಜ್ಞಾನವೆ ಯಜ್ಞ ಸೂತ್ರ, ಚೈತನ್ಯವೆ ಜಗದಲಂಕಾರಮೆಂಬ ಪ್ರತಿಭೆಯ ಆಭರಣ, ಶುದ್ಧಚಿಚ್ಛಕ್ತಿಯೆ ಅನುಲೇಪನ, ಕಾರುಣ್ಯವೆ ಅಕ್ಷತೆ, ಪ್ರಣವಾತ್ಮಕ ಸತ್ಯವಚನವೆ ಪುಷ್ಪ, ವಿಷಯ ವಾಸನಾವಿಲಯವೆ ಧೂಪ, ಜಗದ್ವರ್ತಿ ವಿಡಿದುಜ್ವಲಿಪ ಪರಂಜ್ಯೋತಿಯೆ ದೀಪ, ಜಗವೆಲ್ಲಮಂ ಕಬಳೀಕರಿಸಿಕೊಂಡಿಪ್ಪಾತ್ಮನೆ ನಿತ್ಯತೃಪ್ತನೆಂಬ ಸಂವಿತ್ತೇ ನೈವೇದ್ಯ, ತ್ರಿಗುಣಂಗಳ ನೊಳಕೊಂಡು ನಿಂದ ಜ್ಞಪ್ತಿಯೆ ತಾಂಬೂ, ಸೋಹಂ ಭಾವದಾವೃತ್ತಿಯೆ ಪ್ರದಕ್ಷಿಣ, ಸಮಸ್ತ ತತ್ತ್ವಂಗಳನತಿಕ್ರಮಿಸಿನಿಂದ ನಿಜವೆ ನಮಸ್ಕಾರ, ಶಿವೈಕ್ಯಸ್ಥಿತಿಯೆ ವಿಸರ್ಜನವೆಂಬ ಉಪಚಾರಂಗಳಿಂದಂತಃಪೂಜೆಯಂ ರಚಿಸೆಂದೊರೆದಿರಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ನಿತ್ಯಾನಂದ ಸಂವಿದಾಕಾರ ಜ್ಯೋತಿರ್ಲಿಂಗಮೂರ್ತಿಯಾದ ಶಿವನು ಜಲ ಗಂಧ ಅಕ್ಷತೆ ಪತ್ರೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಂಗಳಿಂದ ಪೂಜೆ ಮಾಡುವ ಪೂಜಕರ ಭಾವಕ್ಕೆ ನಿಲುಕವನಲ್ಲ ನೋಡಾ. ಮತ್ತೆಂತೆಂದಡೆ: ಭಾವವ ಬಲಿದು ನೆನಹ ನೇತಿಗೊಳಿಸಿ, ಜ್ಞಾನಪೂಜೆಯ ಮಾಡುವ ಮಹಂತರಿಗೆ ಸಿಲ್ಕುವ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ, ತಾಂಬೂಲ ಪಂಚವರ್ಣದ ಪತ್ರೆ ಪುಷ್ಪದ ಪೂಜೆಯ ರಚನೆಯ ಮಾಡುವೆನಯ್ಯಾ. ಅಷ್ಟವಿಧಾರ್ಚನೆ ಷೋಡಶೋಪಚಾರ ಮುಖ್ಯವಾಗಿ ಮಾಡುವೆನಯ್ಯಾ. ಸಕಲಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ವ್ರತ ನೇಮ ಶೀಲಮಂ ಮಾಡಿಕೊಂಡು, ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ ; ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು. ಅವಾವೆಂದಡೆ ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ತ್ರ ರತ್ನಾಭರಣ ತಾಂಬೂಲ ಮೆಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ, ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು ಎಲ್ಲ ವ್ರತಂಗಳಿಗೆಯೂ ಜಂಗಮಪ್ರಸಾದವೆ ಪ್ರಾಣ; ಎಲ್ಲ ನೇಮಕ್ಕೆಯೂ ಜಂಗಮದರ್ಶನವೆ ನೇಮ; ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ; ಎಲ್ಲ ವ್ರತ ನೇಮ ಶೀಲಂಗಳೆಲ್ಲವು ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ, ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ. ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು ; ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ. ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ ಎನಗೆ ಕುಂಭೀಪಾತಕ ನಾಯಕನರಕ ತಪ್ಪದು. ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು.
--------------
ಅಕ್ಕಮ್ಮ
ಪುರುಷ ಸತ್ತಬಳಿಕ ಗಂಧ ಅಕ್ಷತೆ ಧರಿಸಿ ಒಗತನವ ಮಾಡಲಿಲ್ಲ. ಸತಿಯಳ ಕೊಂದು, ಸತ್ತಪುರಷನ ಸತಿಯಳ ಕೂಡಿ ಒಗತನವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ, ಭಾವ ಕುಸುಮ, ಸ್ವತಂತ್ರ ಧೂಪ, ನಿರಾಳ ದೀಪ, ಸ್ವಾನುಭಾವ ನೈವೇದ್ಯ, ಸಾಧನಸಾಧ್ಯ ಕರ್ಪುರವೀಳೆಯ. ಇವೆಲ್ಲವ ನಿಮ್ಮ ಪೂಜೆಗಂದನ್ನಕರಣಂಗಳು ಪಡೆದಿರಲು ಹೃದಯಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅನಾದಿ ಶರಣನ ಹೃತ್ಕಮಲ ಮಧ್ಯದ ತೇಜೋಮಯವನೇನೆಂದುಪಮಿಸಯ್ಯಾ ? ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ, ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ, ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ, ತರುಮರಾಧಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ ! ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ, ಲಿಂಗವ ಆರೋಗಣೆಯ ಮಾಡಿಸಿ ಸುಜ್ಞಾನದಲ್ಲಿ ಕೈಗೆರೆದು ಭಾವವೆಂಬ ವೀಳೆಯವ ಕೊಟ್ಟು, ಅನು ನೀನೆಂಬ ಅನುಲೇಪಗಂಧವ ಪೂಸಿ ವಾಯುವೆಂಬ ವಸ್ತ್ರವನುಡಿಸಿ, ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ, ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ. ಅನ್ಯಾರ್ಜಿತದಲ್ಲಿ ಉದರವ ಹೊರೆಯದಿಹುದೆ ಸ್ನಾನ. ಮನದ ಮೈಲಿಗೆಯ ಕಳೆವುದೆ ಮಡಿವರ್ಗ. ಶರಣರಲ್ಲಿ ಮಂಗಳಭಾವದಿರವೆ ಭಸ್ಮಲೇಪನ. ವಿಶ್ವತೋಮುಖನ ನೋಟಕಾರುಣ್ಯ ತನ್ನ ಮೇಲಿರಲು ರುದ್ರಾಕ್ಷಧಾರಣ. ಹಿಂಸೆಯ ಮಾಡದಿಹುದೆ ಆತ್ಮಶುದ್ಧಿ. ನಿರಂಹಕಾರವೆ ಪದ್ಮಾಸನ, ಸುಚಿತ್ತವೆ ದೃಷ್ಟಿ, ಸತ್ಯವೆ ಲಿಂಗ, ಸಾಹಿತ್ಯವೆ ಅಗ್ಗವಣಿ, ದಯಾವಾಕ್ಯವೆ ಗಂಧ, ಅಕ್ಷರವಿಚಾರವೆ ಅಕ್ಷತೆ, ನಿರ್ಮಲವೆ ಪುಷ್ಪ, ನಿಸ್ಸಂದೇಹವೆ ಧೂಪ, ನಿಸ್ಸಂಕಲ್ಪವೆ ದೀಪ, ನಿಂದೆಯ ಮಾಡದಿಹುದೆ ಜಪ, ಪರಿಣಾಮವೆ ಆರೋಗಣೆ, ಅಖಂಡಿತವೆ ತಾಂಬೂಲ. ಇಂತೀ ಇಷ್ಟಲಿಂಗದ ಪೂಜೆಯ ಪರಿಯಲ್ಲಿ ಪ್ರಾಣಲಿಂಗದ ಪೂಜೆಯ ಮಾಡಲು ಅಂತರಂಗ ಬಹಿರಂಗ ಸರ್ವಾಂಗಲಿಂಗವಾಗಿರ್ಪುದು. ಇದು ಸಹಜ, ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ. ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ. ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ. ಪಂಚ ವಿಷಯಂಗಳೇ ಪುಷ್ಟ. ಅಂತಕರಣಂಗಳೇ ಧೂಪ. ಪಂಚೇಂದ್ರಿಯಂಗಳೇ ದೀಪ. ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ. ಗುಣತ್ರಯಂಗಳೇ ತಾಂಬೂಲ. ಪ್ರಾಣಸಮರ್ಪಣವೇ ನಮಸ್ಕಾರವು. ಶಾಂತಿಯೇ ಪುಷ್ಪಾಂಜಲಿಯಾಗಿ, ಈ ಪರಿಯಿಂದ, ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ. ಆತನೇ ನಿಜಾನುಭಾವಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ.
--------------
ಸ್ವತಂತ್ರ ಸಿದ್ಧಲಿಂಗ
ಅಷ್ಟವಿಧಾರ್ಚನೆ ಷೋಡಶೋಪಚಾರವು ಮನದೊಳಗೆ ಮಾಡುವ ಲಿಂಗಾಂಗಿಯ ನೋಡಿ. ಆತನ ಸಮತೆ ಸಜ್ಜನವೆ ಸಮ್ಮಾರ್ಜನೆ, ಅಂತರಂಗದ ಶುದ್ಧವೆ ರಂಗವಾಲಿ, ಮನವ ನಿಲಿಸಿದ್ದೆ ಮಜ್ಜನ, ತನುವ ಮರ್ದಿಸಿದ್ದೆ ಗಂಧ, ಅಹಂಕಾರವಳಿದುದೆ ಅಕ್ಷತೆ, ಪೂರ್ವವಳಿದುದೆ ಪುಷ್ಪ, ಪ್ರಪಂಚನಳಿದುದೆ ಪತ್ರೆ, ದುರ್ಗುಣವಳಿದುದೆ ಧೂಪ, ಸುಗುಣವುಳಿದುದೆ ದೀಪ, ಅಷ್ಟಮದವಳಿದುದೆ ಆರೋಗಣೆ, ಅರಿಷಡುವರ್ಗವನಳಿದುದೆ ಆ ಹಸ್ತಕ್ಕೆ ಅಗ್ಘಣೆ, ವಿಷಯವಿಕಾರವನಳಿದುದೆ ಕರ್ಪುರ ವೀಳ್ಯ, ಸಪ್ತವ್ಯಸನವನಳಿದುದೆ ಆ ಸಹಭೋಜನ, ದಶವಾಯುವ ದೆಸೆಗೆಡಿಸಿದುದೆ ದಾನ -ಧರ್ಮ, ಹಸಿವು ತೃಷೆ ನಿದ್ರೆ ನೀರಡಿಕೆ ಜಾಡ್ಯ ಸ್ತ್ರೀಸಂಯೋಗ ಕಳವಳವಿಲ್ಲದಿದ್ದುದೆ ಜಪತಪ. ಪಂಚೇಂದ್ರಿಯ ಪ್ರಪಂಚು ಹೊದ್ದದಿದ್ದುದೆ ಪಂಚಮಹಾವಾದ್ಯ, ಪ್ರಕೃತಿ ಪಲ್ಲಟವಾದುದೆ ಪಾತ್ರಭೋಗ, ಗೀತ ಪ್ರಬಂಧ ಕರಣವೆ ಸಿಂಹಾಸನ ಏರುವ ಸುಖ, ವ್ಯಸನ ಚಂಚಲತೆಯನಳಿದುದೆ ಛತ್ರಚಾಮರ, ಶೀರ್ಷಶಿವಾಲ್ಯದೊಳಿಪ್ಪ ಪರಮಗುರು ಪರಂಜ್ಯೋತಿ ಪರಶಿವ ಪರಕ್ಕೆ ಪರವಾದ ಶ್ರೀ ಪಟ್ಟುಕಂಥೆಯ ಚೆನ್ನಬಸವೇಶ್ವರದೇವರ ಶ್ರೀಪಾದಾಂಗುಲಿಗೆ ಈ ವಚನವ, ಪುಣ್ಯಪುಷ್ಪವಮಾಡಿ ಅರ್ಪಿಸುವ ಕುಷ್ಟಗಿಯ ನಿರ್ವಾಣ ಕರಿಬಸವರಾಜದೇವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
-->