ಅಥವಾ

ಒಟ್ಟು 22 ಕಡೆಗಳಲ್ಲಿ , 14 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರಹರ ಶಿವಶಿವ ಜಯಜ ಕರುಣಾಕರ ಮತ್ಪ್ರಾಣಕಳಾಚೈತನ್ಯಸ್ವರೂಪ ಮಹಾಪ್ರಭು ಶ್ರೀಗುರುಲಿಂಗಜಂಗಮದ ಮಹಾಪ್ರಸಾದವೆ ಪರಬ್ರಹ್ಮ ಪರಮಕಳಾಚೈತನ್ಯ ಚಿತ್ಸ್ವರೂಪ ಅನಾದಿ ನಿಷ್ಕಲ ಪರಶಿವಲಿಂಗಸ್ವರೂಪ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಚೈತನ್ಯಸ್ವರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಶಿವಾನುಭಾವದ ಶುದ್ಧಿನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರುಪಮ ನಿರಾಲಂಬ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿತ್ಯ ಚಿದೈಶ್ವರ್ಯ ಚಿತ್ಕಾಂತಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಮೋಕ್ಷದ ಕಣಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಭವರೋಗವೈದ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಗುಣ ನಿಷ್ಕಳಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಪ್ರಮಾಣ ಅಗೋಚರ ನಿಜಚಿನ್ಮಯರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಗಣಿತ ನಿರಾತಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರಾವಯ ನಿಶ್ಶೂನ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಮಾಯ ನಿಷ್ಕಾಮ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಬೆಳಗು ತಾನೆ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಘನಮಹಾಲಿಂಗ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ, ಚಿಕ್ಕದಂಡನಾಯಕ ಮುಖವಚನದಿಂದೆ ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ, ನವರತ್ನ ಖಚಿತ ಮಂಟಪವ ರಚಿಸಿ, ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ, ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ ಬೋದ್ಥಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ, ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ ಶೋಬ್ಥಿಸುವಂಥ ಚಿದಂಗ-ಚಿದ್ಘನಲಿಂಗವ ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ, ಮಾರ್ಗಾಚರಣೆಯ ಕುರುಹ ತೋರಿ, ಅಂತರಂಗದಲ್ಲಿ ಶೋಬ್ಥಿಸುವ ಲೋಮವಿಲೋಮದಳಂಗಳೆ ನೂರೆಂಟು ತೆರದ ಚಿದಂಗಂಗಳಾಗಿ, ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ, ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ ಮೀರಿದ ಕ್ರಿಯಾಚರಣೆಯ ಕುರುಹ ತೋರಿ ಅನಾದ್ಥಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ, ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ, ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಬ್ಥಿಧಾನದಿಂದ ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ. ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಬ್ಥಿಸುವ ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ನಿಜಕ್ರಿಯಾಸುಜ್ಞಾನ ಸುವಿಲಾಸನೊಮ್ಮೆ ಜಡಕ್ರಿಯಾ ತೊಡರೊಳು ಬೀಳ, ಅಡಿಯಿಡನೊಮ್ಮೆ ಅಗಣಿತ ಕಟ್ಟುವ್ರತ ಕಾವಳಿಗೆ, ಅರಿಯನೊಮ್ಮೆ ನಿಸ್ಸೀಮ ಬರಿ ನಿಯಮಬದ್ಧ ಬಣತೆಯ, ಹುಡಿ ನುಡಿಯನೊಮ್ಮೆ, ಹಸನವಿಡಲರಿಯ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಾಮಸುಖಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಿವನ ಷಟ್‍ಕಾಯದೊಳಗೆ ತೋರಿದಾ ಆರಾರು ಆರು ಹನ್ನೆರಡು ನೂರಾಯೆಂಟು ತತ್ವವಾಯಿತು. ಈ ನೂರಾಯೆಂಟರೊಳಗೆ ಸಹಸ್ರ ಲಕ್ಷ ಕೋಟಿ ಶಂಖ ಪದ್ಮ ಅರ್ಬುದ ಅನಂತ ಅಗಣಿತ ಅಗಮ್ಯ ಅಗೋಚರ ಅಪ್ರಮಾಣಿತ ಅತೀತ ಅಣೋರಣೀಯಾನ್ ಮಹತೋ ಮಹೀಯಾನ್ ಏನೋ ಎನೋ ಎನಿಸಿದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಾವಯವ ನಿರವಯವನಲ್ಲ ನೋಡಾ ಲಿಂಗೈಕ್ಯನು. ಗಮನಿಯಲ್ಲ ನಿರ್ಗಮನಿಯಲ್ಲ ನೋಡಾ ಲಿಂಗೈಕ್ಯನು. ಸುಮನಸಾರಾಯ ಸುಜ್ಞಾನಭರಿತನು ನೋಡಾ ಲಿಂಗೈಕ್ಯನು. ಅಮಲಬ್ರಹ್ಮದ ಕೂಟದ ಅಚಲಿತ ಅಭೇದ್ಯನು ನೋಡಾ ಲಿಂಗೈಕ್ಯನು. ಅದ್ವಯಭಾವ ಅಗಣಿತ ಮಹಿಮನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.
--------------
ಷಣ್ಮುಖಸ್ವಾಮಿ
ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು ಮೂವತ್ತಾರುಲಕ್ಷ ಖಂಡುಗ, ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ ಐವತ್ತುಲಕ್ಷ ಖಂಡುಗ. ಹೊಸಸುಗ್ಗಿಯ ವೇಳೆಗೆ ಬಹ ಭತ್ತ ಅಗಣಿತ. ಮಹಾದಾನಿ ಸೊಡ್ಡಳನ ಆರೋಗಣೆಯ ಅವಸರಕ್ಕೆ ಅಳವಟ್ಟ ಸಯದಾನ ಇನಿತನವಧರಿಸಯ್ಯಾ, ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಸ್ವಾಂತಪರಿಪೂರ್ಣಜ್ಞಾನಮಹಿಮ ಶರಣನ ನಿಜದನುವಿಂಗಿತ್ತು, ನಿರ್ಮಲ ತನು ಮನ ಪ್ರಾಣವನೀಕ್ಷಿಸಲು ಸುತ್ತುಚಿತ್ತಾನಂದ ಲಿಂಗವಾಗಿರ್ದುದಲ್ಲದೆ ಮತ್ತೇನು ಕಾಣದು ನೋಡಾ, ಅಗಣಿತ ಸುಖಮಯ ಶರಣನ ನಡೆಯೇ ಪಾವನ, ನುಡಿಯೇ ಮಹಾನುಭಾವ, ಆತ ಸೋಂಕಿದ ಜಲವೆಲ್ಲ ಪುಣ್ಯತೀರ್ಥ, ಆತ ನಿಂತ ನೆಲವೆಲ್ಲ ಕಾಶೀಕ್ಷೇತ್ರ. ನೋಡಿ ಶರಣೆಂದವರೆಲ್ಲ ಭವನಾಶರು. ಆತಂಗೆ ಸೇವೆಯನಿತ್ತು ಕೊಂಡವರೆಲ್ಲ ನಿಜಮುಕ್ತರು ಕಾಣಾ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು._ ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು !
--------------
ಅಲ್ಲಮಪ್ರಭುದೇವರು
ಗುಣದಿಂದ ಹಾರುವನಲ್ಲದೆ, ಅಗಣಿತ ವಿದ್ಯಾಭ್ಯಾಸದಿಂದ ಹಾರುವನಲ್ಲ. ಹಾರುಬೇಕು ಮಲತ್ರಯಂಗಳ; ಹಾರಬೇಕು ಸೃಷ್ಟಿ-ಸ್ಥಿತಿ ಲಯವ; ಹಾರಬೇಕು, ಸರ್ಪಹಾರ ಕಪಿಲಸಿದ್ಧಮಲ್ಲಿಕಾರ್ಜುನನ ಆ ಹಾರದಲಿ
--------------
ಸಿದ್ಧರಾಮೇಶ್ವರ
ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ ಜಗಂಜ್ಯೋತಿಯ ಕಂಡೆನಯ್ಯ. ಅದು ಹಗಲಿರುಳನರಿಯದೆ ಜಗಜಗಿಸುತ್ತಿದ್ದುದು ನೋಡಾ. ಜಗಂಜ್ಯೋತಿಯ ಬೆಳಗಿನೊಳಗೆ ಅಗಣಿತ ಮಹಿಮನಿದ್ದಾನೆ ನೋಡಾ. ಆ ಅಪ್ರಮಾಣಲಿಂಗದೊಳಗೆ ನಾನಿರ್ದೆನು ಕಾಣಾ. ಅನುಪಮ ಮಹಿಮ ಮಹಾಲಿಂಗಗುರು ಶಿವಸಿದ್ಧೇಶ್ವರಾಯೆಂಬುದಕ್ಕೆ ತೆರಹಿಲ್ಲ ನೋಡಿರೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ? ಈರಾರು ಸುಖಗಳನು ಮೇಲಾದ ಮಧುರವನು ಓರಂತೆ ಉಂಡುದಕೆ ಪ್ರಳಯವುಂಟೆ? ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ ಮೂರಾರು ಈರಾರು ತೋರಿರ್ಪ ನಿಶ್ಚಯದ ಆರರಿಂದಂ ಮೇಲೆ ಸಂಯೋಗವು ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು ಹೇಳದೆ ಹೋದನಾ ಇರ್ದ ಮನೆಗೆ ಮೂರನು ಮುಟ್ಟದೆ ಆರನು ತಟ್ಟದೆ ಮೀರಿ ಉರವಣಿಸಿದನು ಸಾಯುಜ್ಯದಾ ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುವ ನೆಮ್ಮಿ ಕಾಬ ಮನವಿಲ್ಲ. ಮನವ ನೆಮ್ಮಿ ಕಾಬ ಅರಿವಿಲ್ಲ. ಅರಿವ ನೆಮ್ಮಿ ಕಾಬ ಕುರುಹಿಲ್ಲ. ಬರುದೊರೆ ಹೋಯಿತ್ತಲ್ಲ ಎನ್ನ ಬಾಲಲೀಲೆ. ಅಗಣಿತ ಅಗೋಚರವ ನೆರೆಯರಿವುದಕ್ಕೆ ಕುರುಹ ತೋರುವರ [ನಾ] ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಾಣಲಿಂಗ ಪರಾಪರವೆಂದರಿದು, ಅಣು ರೇಣು ತೃಣ ಕಾಷ*ದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು, ಇಂತು_ಕ್ಷಣವೇದಿ ಅಂತರಂಗವ ವೇಧಿಸಲ್ಕೆ ಅಗಣಿತ ಅಕ್ಷೇಶ್ವರ ತಾನೆಂದರಿದು ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ, ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
--------------
ಅಲ್ಲಮಪ್ರಭುದೇವರು
ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು, ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂದು ಅಣುರೇಣು ತೃಣಕಾಷ*ದೊಳ್ಕೂಡಿ, ``ತೇನ ವಿನಾ ತೃಣಾಗ್ರಮಪಿ ನ ಚಲತಿ''_ ಎಂದು ಪರಿಪೂರ್ಣ ಸದಾಶಿವನೆಂದರಿದು_ ಇಂತು ಕ್ಷಣವೇದಿ ಅಂತರಂಗವ ವೇದಿಸಲ್ಕೆ, ಅಗಣಿತ ಅಕ್ಷೇಶ್ವರ ತಾನೆಂದು ಪ್ರಣಮಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ ಗುಹೇಶ್ವರಾ ನಿಮ್ಮ ಶರಣನುಪಾಮಾತೀತನು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->