ಅಥವಾ

ಒಟ್ಟು 16 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿಪ್ಪಿನೊಳಗಣ ಮುತ್ತಿನಂತೆ, ಕಲ್ಲೊಳಗಣ ವಜ್ರದಂತೆ, ನಿರೊಳಗಣ ಪ್ರತಿಬಿಂಬದಂತೆ, ಕ್ಷೀರದೊಳಗಣ ಘೃತದಂತೆ, ಬೀಜದೊಳಗಣ ವೃಕ್ಷದಂತೆ, ಅಗ್ನಿಯೊಳಗಣ ಪ್ರಕಾಶದಂತೆ, ಭಾವದೊಳಗಣ ನಿರ್ಭಾವದಂತೆ ನಿಮ್ಮ ಶರಣ ಸಂಬಂಧವು ಝೇಂಕಾರ ನಿಜಲಿಂಗಪ್ರಭುವೆ. || 307 ||
--------------
ಜಕ್ಕಣಯ್ಯ
ಆಕಾಶದೊಳಗಣ ಆಕಾಶ, ಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆಕಾಶದೊಳಗಣ ವಾಯು, ಮನಸ್ಸು; ಅಲ್ಲಿ ಜಂಗಮಲಿಂಗ ಸ್ವಾಯತ. ಆಕಾಶದೊಳಗಣ ಅಗ್ನಿ, ಅಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆಕಾಶದೊಳಗಣ ಅಪ್ಪು, ಚಿತ್ತ; ಅಲ್ಲಿ ಗುರುಲಿಂಗ ಸ್ವಾಯತ. ಆಕಾಶದೊಳಗಣ ಪೃಥ್ವಿ, ಬುದ್ಧಿ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚಕರಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ವಾಯುವಿನೊಳಗಣ ಆಕಾಶ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ, ವಾಯುವಿನೊಳಗಣ ಅಗ್ನಿ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ. ವಾಯುವಿನೊಳಗಣ ಅಗ್ನಿ, ಉದಾನವಾಯು; ಅಲ್ಲಿ ಶಿವಲಿಂಗ ಸ್ವಾಯತ. ವಾಯುವಿನೊಳಗಣ ಅಪ್ಪು, ಅಪಾನವಾಯು; ಅಲ್ಲಿ ಗುರುಲಿಂಗ ಸ್ವಾಯತ. ವಾಯುವಿನೊಳಗಣ ಪೃಥ್ವಿ, ಪ್ರಾಣವಾಯು; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ವಾಯುಪಂಚಕದಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಅಗ್ನಿಯೊಳಗಣ ಅಪ್ಪು, ಜಿಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಬುದ್ಧೀಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಪ್ಪುವಿನೊಳಗಣ ಅಪ್ಪು, ರಸ; ಅಲ್ಲಿ ಗುರುಲಿಂಗ ಸ್ವಾಯತ. ಅಪ್ಪುವಿನೊಳಗಣ ಆಕಾಶ, ಶಬ್ದ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಪ್ಪುವಿನೊಳಗಣ ವಾಯು, ಸ್ಪರ್ಶನ; ಅಲ್ಲಿ ಜಂಗಮಲಿಂಗ ಸ್ವಾಯತ. ಅಪ್ಪುವಿನೊಳಗಣ ಅಗ್ನಿ ರೂಪು; ಅಲ್ಲಿ ಶಿವಲಿಂಗ ಸ್ವಾಯತ. ಅಪ್ಪುವಿನೊಳಗಣ ಪೃಥ್ವಿ ಗಂಧ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚವಿಷಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಪೃಥ್ವಿಯೊಳಗಣ ವಾಯು, ಪಾಣೀಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಹೀಂಗೆ ಪಂಚಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಆತ್ಮನೊಳಗಣ ಆತ್ಮ,ಶುದ್ಧಾತ್ಮ; ಅಲ್ಲಿ ಮಹಾಲಿಂಗ ಸ್ವಾಯತ. ಆತ್ಮನೊಳಗಣ ಆಕಾಶ, ಸುಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆತ್ಮನೊಳಗಣ ವಾಯು, ಸುಮನ; ಅಲ್ಲಿ ಜಂಗಮಲಿಂಗ ಸ್ವಾಯತ. ಆತ್ಮನೊಳಗಣ ಅಗ್ನಿ, ನಿರಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆತ್ಮನೊಳಗಣ ಅಪ್ಪು, ಸುಬುದ್ಧಿ; ಅಲ್ಲಿ ಗುರುಲಿಂಗ ಸ್ವಾಯತ. ಆತ್ಮನೊಳಗಣ ಪೃಥ್ವಿ, ಸುಚಿತ್ತ; ಅಲ್ಲಿ ಆಚಾರಲಿಂಗ ಸ್ವಾಯತ. ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಇಂತೀ ಅಂಗ ಪ್ರಾಣಂಗಳಲ್ಲಿಯು ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ ಸರ್ವಾಂಗಲಿಂಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗೀಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು ಅಗ್ನಿಯ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->