ಅಥವಾ

ಒಟ್ಟು 40 ಕಡೆಗಳಲ್ಲಿ , 18 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ ವ್ಯಾಧನ ಬಾಣದಲೊಂದು ಅಚ್ಚ ಆಶ್ಚರ್ಯವ ಕಂಡೆನು. ಕರಿಯ ಮುಖವೈದು, ಬಿಳಿಯ ಮುಖವೈದು, ಮುಂದೈದು ಮುಖದ ಸಂಭ್ರಮವ ಕಂಡು ಎರಳೆ ಬೆದರಿ ಬಾವಿಯ ಬೀಳುತಿರ್ದಡಿದೇನು ಚೋದ್ಯವೋ ! ಚೋದ್ಯದ ಹಗರಣವ ಕಂಡು ಅಡವಿಯ ರಕ್ಷಿ ನಗುತಿದೆ ಇದೇನೋ ನಿನ್ನ ಮಾಯದ ವಿಗಡ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಳಿಯ ಕಡೆಗಣ್ಣ ಕಿತ್ತು, ಏಡಿಯ ಸರ್ವಾಂಗವ ಸೀಳಿ, ಅಚ್ಚ ಬೆಳ್ಳಿಗೆಯ ಹಾಲ ನಿಶ್ಚಯದಲ್ಲಿ ತೆಗೆದು ತೃಪ್ತಿಯಾಗಿ ಕೊಳ್ಳಬಲ್ಲಡೆ, ಆತನೆ ಸದಾಶಿವಮೂರ್ತಿಲಿಂಗವು.
--------------
ಅರಿವಿನ ಮಾರಿತಂದೆ
ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ತುಂಬಿದ ತೊರೆಯ ಹಾಯ್ದಹೆವೆಂದು ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ. ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ. ಎಚ್ಚತ್ತು ನಡಿಸಿರೆ. ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ, ಹರುಗೋಲು ಮುಳುಗದೆ, ಏರಿದವರು ಸತ್ತರು. ಇದರೊಳಹೊರಗನರಿದಾತನಲ್ಲದೆ ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
--------------
ಅಲ್ಲಮಪ್ರಭುದೇವರು
ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ, ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ, ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ, ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ, ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಿ[ಮಾದಗಿತ್ತಿ ?]ಯ ಮಕ್ಕಳಯ್ಯಾ, ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ, ಜಂಗಮ ಬಂದ ಬರವ, ನಿಂದ ನಿಲುಕಡೆಯ ನೋಡಿ, ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್‍ಜ್ಞಾನವನರಿವವರು ಕೂಡಲಚೆನ್ನಸಂಗನ ಶರಣರಯ್ಯಾ.
--------------
ಚನ್ನಬಸವಣ್ಣ
ಮಾಡುವ ನೀಡುವ ಭಕ್ತನ ಕಂಡಡೆ ನಿದ್ಥಿ ನಿಧಾನವ ಕಂಡಂತಾಯಿತ್ತು, ಪಾದೋದಕ ಪ್ರಸಾದಜೀವಿಯ ಕಂಡಡೆ ಹೋದ ಪ್ರಾಣ ಬಂದಂತಾಯಿತ್ತು. ಅನ್ಯರ ಮನೆಗೆ ಹೋಗಿ, ತನ್ನ ಉದರವ ಹೊರೆಯದ ಅಚ್ಚ ಶರಣರ ಕಂಡಡೆ ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
--------------
ಬಸವಣ್ಣ
ತಮ್ಮಿಚ್ಛೆಗೆ ಬಂದ ಪದಾರ್ಥ ಲಿಂಗದಿಚ್ಛೆ ಎಂಬರು; ತಮ್ಮಿಚ್ಛೆಗೆ ಬರದ ಪದಾರ್ಥ ಲಿಂಗದಿಚ್ಛೆ ಇಲ್ಲವೆಂಬರು. ಹೋದ ವಾಕ್ಕು ಶಿವಾಜ್ಞೆ ಎಂಬರು. ಇದ್ದ ಮಾತು ತನ್ನಾಜ್ಞೆ ಎಂಬರು, ಅದೆಂತಯ್ಯಾ? ಇಚ್ಛೆಗೆ ಒಳಗಾಗುವನಲ್ಲಯ್ಯಾ ಲಿಂಗವು. `ಶಿವೋ ದಾತಾ ಶಿವೋ ಭೋಕ್ತಾ' ಎಂಬುದ ತಿಳಿದು, ಲಿಂಗಮುಖಂದ ಬಂದ ಪದಾರ್ಥವ ಕೈಕೊಂಬಡೆ, ಅಚ್ಚ ಲಿಂಗೈಕ್ಯನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ, ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ. ಇಂತೀ ತ್ರಿವಿಧ ಗುಣವನರಿದಾತನು ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.
--------------
ಬಸವಣ್ಣ
ಅಚ್ಚ ಮತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು ನಿಮ್ಮಾದಿ ಶಿಶುವಾದಕಾರಣ. ನಚ್ಚಿ ಮಾಡಿದಡಿಗೆಯು ಅಚ್ಚಳಿಯದಿದ್ದಿತ್ತು ಆಡುತ ಬನ್ನಿ ಮೂವರೊಂದಾಗಿ. ಬೇಡಿಕೊಂಬುವನಲ್ಲ, ನೀಡಿ ನೂಕಿ ನಿಲ್ಲುವೆ ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ. ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು, ಬಚ್ಚ ಬರಿಯ ಮಾತನಾಡುವೆನು. ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ. ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ.
--------------
ಬಸವಣ್ಣ
ಸತ್ಕ್ರೀಯಿಂದ ಸಕಲಪದಾರ್ಥಂಗಳ ಭಾಜನ ತೀವಿ, ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ ಅಚ್ಚ ಪ್ರಸಾದಿಗಳಿಗೆ ಹುಸಿ ಹೊದ್ದಿತಲ್ಲಾ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕತ್ತಲೆ ಬಿಸಿಲು ಬೆಳದಿಂಗಳು ಮುಂತಾದ ಪದಾರ್ಥಂಗಳು ತನ್ನಂಗವ ಸೋಂಕಿ ಅಲ್ಲಿ ಅರ್ಪಿತವೆಂದು ಕೊಳ್ಳಬಾರದು, ಅನರ್ಪಿತವೆಂದು ಕಳೆಯಬಾರದು. ಇದು ಕಾರಣವದಂತಿರಲಿ, ಆವ ವೇಳೆಯಲ್ಲಿ ಆವಠಾವಿನಲ್ಲಿ ತನಗೆ ಬೇಕಾದ ಪದಾರ್ಥಂಗಳನು, ತನ್ನ ಪ್ರಾಣಲಿಂಗವಿರಹಿತವಾಗಿ ಉಂಡಡೆ ಭವದುಃಖವನುಂಬುದು ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ; ಮಟ್ಟ ಮಧ್ಯಾಹ್ನ ಸಂಕ್ರಾಂತಿ; ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ; ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ನಾರುಳಿಯ ಹಣಿದವನಾರಾದಡೆಯೂ ಆಡರೆ ನಾರುಳಿದಡೆ ಮುಂದೆ ಅಂಕುರಿತ ಫಲ ತಪ್ಪದು. ಮಾಡುವನ್ನಕ್ಕ ಫಲದಾಯಕ ! ಮಾಟವರತು ನಿಮ್ಮಲ್ಲಿ ಸಯವಾದಡೆ ಆತನೆ ಅಚ್ಚ ಶರಣನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಸೀಮೆಯುಳ್ಳನ್ನಬರ ತಾನು ತನ್ನಂಗವಾಗಿರಬೇಕು, ಅನ್ಯಂಗವಾಗದೆ. ಅನ್ಯಂಗ ಅನ್ಯಂಗವೆ? ಗುರುಕರುಣಂದ ತನ್ನಂಗ ಅನ್ಯಂಗವಾದಡೆ ಸೀಮೆಯ ಸಂಬಂಧಿ ತಾನಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಅಚ್ಚ ಶರಣನು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->