ಅಥವಾ

ಒಟ್ಟು 24 ಕಡೆಗಳಲ್ಲಿ , 11 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚಪ್ರಸಾದವೆಂದು ಹುಸಿದು, ತನುಮನದ ಹವಣಿಗೆ ಗಡಣಿಸಿಕೊಂಬರು, ತನುಮನ ಮುಟ್ಟಿದ ಓಗರ ಲಿಂಗಾರ್ಪಿತಕ್ಕೆ ಸಲ್ಲದು. ಅರ್ಪಿತವನುಂಡು ಅಚ್ಚಪ್ರಸಾದಿಗಳೆಂಬವರನು ಲಿಂಗದಲ್ಲಿ ಸಮ್ಯಕ್‍ಶರಣರು ಮೆಚ್ಚರು. ಬಂದುದ ಕೂಡಲಚೆನ್ನಸಂಗಂಗರ್ಪಿಸಿ ಕೊಳಬಲ್ಲಡಾತನೆ ಅಚ್ಚಪ್ರಸಾದಿ.
--------------
ಚನ್ನಬಸವಣ್ಣ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಹುಸಿವರು ನೋಡಾ. ವಾಯು ಬೀಸುವಲ್ಲಿ, ಬಯಲು ಬೆರಸುವಲ್ಲಿ, ಭಾಜನ ಸಹಿತ ಭೋಜನವುಂಟೆ ? ಅಂಗಕ್ಕೆ ಬಂದ ಸುಖವು, ಲಿಂಗವಿರಹಿತವಾದಡೆ ಸ್ವಯವಚನ ವಿರೋಧ. ಸಕಳೇಶ್ವರದೇವನು ಆಳಿಗೊಂಡು ಕಾಡುವ.
--------------
ಸಕಳೇಶ ಮಾದರಸ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರನೇನೆಂಬೆನಯ್ಯಾ. ಜಂಗಮಪ್ರಸಾದದರಿವು ಸೋಂಕಲೊಡನೆ ಅಖಂಡಿತಪ್ರಸನ್ನಪ್ರಸಾದಿಯಪ್ಪುದು ತಪ್ಪದಯ್ಯಾ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸಬಹುದಯ್ಯಾ ? ಪ್ರಸಾದವೆ ಗುರು, ಪ್ರಸಾದವೆ ಲಿಂಗ, ಪ್ರಸಾದವೆ ಜಂಗಮ, ಪ್ರಸಾದವೆ ಜ್ಞಾನಿ, ಪ್ರಸಾದವೆ ಪರಾತ್ಪರ, ಪ್ರಸಾದವೆ ಜ್ಞಾನಾತೀತ, ಪ್ರಸಾದವೆ ಸಚ್ಚಿದಾನಂದ, ಪ್ರಸಾದವೆ ನಿತ್ಯಪರಿಪೂರ್ಣ. [ನಿಮ್ಮ ಶರಣ] ಇಂತಪ್ಪ ಪ್ರಸಾದಿ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ: ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ? ಎಂಬ ಜಗಭಂಡರು ನೀವು ಕೇಳಿರೊ: ಅಚ್ಚಪ್ರಸಾದಿ ನಿಚ್ಚಪ್ರಸಾದಿ ! ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿಗಳೆಂದು ಒಪ್ಪವಿಟ್ಟು ನಿಚ್ಚ ನಿಚ್ಚ ನುಡಿವ ಅಣ್ಣಗಳಿರ! ನೀವು ಅಚ್ಚಪ್ರಸಾದ, ನಿಚ್ಚಪ್ರಸಾದ, ಸಮಯಪ್ರಸಾದವಾದ ವಿಚಾರವ ಹೇಳಿರಣ್ಣ! ಅರಿಯದಿರ್ದಡೆ ಕೇಳಿರಣ್ಣ! ಸಮಸ್ತಪದಾರ್ಥವ ಗುರುಲಿಂಗಜಂಗಮದಿಂದ ಪವಿತ್ರವ ಮಾಡಿ ಅವರವರ ಪದಾರ್ಥವ ಅವರವರಿಗೆ ವಂಚಿಸದೆ ನಿರ್ವಂಚಕತ್ವದಿಂದ ಸಮರ್ಪಿಸುವದೆ ತ್ರಿವಿಧಪ್ರಸಾದಸ್ವರೂಪು ನೋಡ! ಕ್ರಿಯಾಮುಖದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸುವ ಪೃಥ್ವಿಸಂಬಂಧವಾದ, ಅಷ್ಟತನುಗಳಿಂದುದಯವಾದ, ಗಂಧರಸರೂಪುಸ್ಪರ್ಶನಶಬ್ದ ಮೊದಲಾದ ಸಮಸ್ತಪದಾರ್ಥಂಗಳ ಆ ಕ್ರಿಯಾಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ರೂಪುರುಚಿತೃಪ್ತಿಪ್ರಸಾದವ ಭೋಗಿಸುವಾತನೆ ತ್ರಿವಿಧಪ್ರಸಾದಿ ನೋಡ! ಜ್ಞಾನಮುಖದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸುವ ಮನಸಂಬಂಧವಾದ ಸ್ತ್ರೀಯಳೆಂಬ ರೂಪುರುಚಿತೃಪ್ತಿ ಮೊದಲಾದ ಪದಾರ್ಥಂಗಳ ಸತ್ಕ್ರೀಯಾಗುರುಲಿಂಗಜಂಗಮವನೆ ಜ್ಞಾನಗುರುಲಿಂಗಜಂಗಮವೆಂದು ಭಾವಿಸಿ ತನ್ನ ವಿವಾಹಸಮಯದಲ್ಲಿ ಗುರುಲಿಂಗಜಂಗಮಕ್ಕೆ ಭಕ್ತಗಣಸಾಕ್ಷಿಯಾಗಿ ತನ್ನ ಕೂಟದ ಶಕ್ತಿಯ ಗುರುಲಿಂಗಜಂಗಮಕ್ಕೆ ಕೊಡುವ ಭಕ್ತಿ ಮೊದಲಾಗಿ, ಆ ಶಕ್ತಿಯರ ಅಂತರಂಗದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವ ಬಹಿಷ್ಕರಿಸಿ ಸದ್ಗುರುಮುಖದಿಂ ಹಸ್ತಮಸ್ತಕಸಂಯೋಗವ ಮಾಡಿಸಿ, ಆ ಲಿಂಗಾಂಗಕ್ಕೆ ಪಾಣಿಗ್ರಹಣವ ಮಾಡಿಸಿ, ಮಂತ್ರದೀಕ್ಷೆಯ ಬೋದ್ಥಿಸಿ, ಪಾದೋದಕಪ್ರಸಾದವ ಕೊಡಿಸಿ, ಸದಾಚಾರ-ಸದ್ಭಕ್ತಿ-ಸತ್ಕ್ರೀಯಾ-ಸಮ್ಯಜ್ಞಾನವ ಬೋಧಿಸಿ, ಶಕ್ತಿಭಾರವಳಿದು ಕ್ರಿಯಾಶಕ್ತಿಯರೆಂದು ಭಾವಿಸಿ, ಪ್ರಥಮದಲ್ಲಿ ಗುರುಲಿಂಗಜಂಗಮಕ್ಕೆ ಆ ಕ್ರಿಯಾಶಕ್ತಿಯ ಭಕ್ತಗಣಸಾಕ್ಷಿಯಾಗಿ ಪ್ರಮಾಣದಿಂದ ಕಂಕಣವ ಕಟ್ಟಿ, ಶರಣಾರ್ಥಿಯೆಂದು ಒಪ್ಪದಿಂದ ಒಪ್ಪಿಸಿ, ಅದರಿಂ ಮೇಲೆ, ಆ ಗುರುಲಿಂಗಜಂಗಮದ ಕರುಣವ ಹಡೆದು, ಆ ಕ್ರಿಯಾಶಕ್ತಿಯ ಭಕ್ತಗಣಮಧ್ಯದಲ್ಲಿ ಕೂಡಿ, ಸೆರಗ ಹಿಡಿದು ಗಣಪದಕ್ಕೆ ಶರಣೆಂದು ವಂದಿಸಿ ಅವರ ಕರುಣವ ಹಾರೈಸಿ ನಿಜಭಕ್ತಿಜ್ಞಾನವೈರಾಗ್ಯವ ಬೆಸಗೊಂಡು ಸಚ್ಚಿದಾನಂದಲಿಂಗನಿಷ್ಠಾಪರತ್ವದಿಂದ ಗುರುಲಿಂಗಜಂಗಮಶಕ್ತಿ ಮೊದಲಾಗಿ ಗುರುಭಕ್ತಿಯಿಂದ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಮಹಾಜ್ಞಾನಮುಖದಲ್ಲಿ ಭಾವಲಿಂಗಕ್ಕೆ ಸಮರ್ಪಿಸುವ ಧನಸಂಬಂಧವಾದ ದ್ರವ್ಯವನ್ನು ಆ ಕ್ರಿಯಾಜ್ಞಾನಯುಕ್ತವಾದ ಗುರುಲಿಂಗಜಂಗಮವನೆ ಮಹಾಜ್ಞಾನಗುರುಲಿಂಗಜಂಗಮವೆಂದು ಭಾವಿಸಿ, ತಾ ಧರಿಸುವಂಥ ವಸ್ತ್ರಾಭರಣರಕ್ಷೆ ಮೊದಲಾಗಿ ಪ್ರತಿಪದಾರ್ಥವ ವಿಚಾರಮುಖದಲ್ಲಿ ಪಾತ್ರಾಪಾತ್ರವ ತಿಳಿದು ಸಮರ್ಪಿಸಿ, ನಿಜನೈಷ್ಠೆಯಿಂದ, ಪರದ್ರವ್ಯವ ತಂದು ಗುರುಲಿಂಗಜಂಗಮವ ಒಡಗೂಡಿ ಋಣಭಾರಕ್ಕೊಳಗಾಗದೆ ನಡೆ ನುಡಿ ಒಂದಾಗಿ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಈ ವಿಚಾರವ ಸದ್ಗುರುಮುಖದಿಂದ ಬೆಸಗೊಂಡು ಆಚರಿಸುವರೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ ನೋಡ! ಈ ವಿಚಾರವನರಿಯದೆ, ಶ್ರುತಿ-ಗುರು-ಸ್ವಾನುಭಾವವ ತಿಳಿಯದೆ, ವಾಚಾಳಕತ್ವದಿಂದ ನುಡಿದು, [ತಾವು] ಗುರುಲಿಂಗಜಂಗಮಪ್ರಸಾದಿಗಳೆಂಬ ಮೂಳರ ಬಾಯ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವಿಗೆಯ ತೆಗೆದುಕೊಂಡು ಪಟಪಟನೆ ಹೊಡೆಯೆಂದಾತನಂಬಿಗರ ಚೌಡಯ್ಯನು ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಶಿವಶರಣಗಣಾರಾಧ್ಯರು ನಿರಾಕಾರ ಚಿತ್ಪಾದೋದಕದಾಚರಣೆಯ ಮಾರ್ಗಕ್ರಿಯೆ ಮುಗಿದ ಮೇಲೆ, ಸಾಕಾರಚಿತ್ಪ್ರಸಾದವ ಆ ಪಾದತೀರ್ಥದಾಚರಣೆಯಂತೆ ತಟ್ಟಿ, ಬಟ್ಟಲಗಳೊಳ್ ಪರಿಪೂರ್ಣತೃಪ್ತಿಯನೈದುವುದು. ಆ ನಿಲುಕಡೆಯೆಂತೆಂದೊಡೆ : ನಿರಾಭಾರಿವೀರಶೈವಸಂಪನ್ನ ಸದ್ಭಕ್ತ ಜಂಗಮಮೂರ್ತಿಗಳು ಪಾದೋದಕದಿಂದ ಅವರ ಭಾಂಡಕ್ಕೆ ಹಸ್ತಸ್ಪರಿಶನವ ಮಾಡುವುದು. ಉಳಿದ ವಿಶೇಷ ವೀರಶೈವಸನ್ಮಾರ್ಗಿ ಭಕ್ತಜಂಗಮವು ತಮ್ಮ ತಮ್ಮ ತಂಬಿಗೆ ತಟ್ಟೆ ಬಟ್ಟಲಿಗೆ ಪಾದೋದಕ ಹಸ್ತಸ್ಪರಿಶನವ ಮಾಡಿ, ಕೇವಲಪರಮಾನಂದದ ಚಿದ್ಗರ್ಭೋದಯ ಶುದ್ಧಪ್ರಸಾದವೆಂದು ಭಾವಿಸಿ, ಅತಿವಿಶೇಷ ಮಹಾಸುಯ್ದಾನದಿಂದ ಸಮಸ್ತ ಜಂಗಮ ಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂತಿಣಿಯ ಪೂರ್ಣಾನಂದದ ನಿಜದೃಷ್ಟಿಯಿಂ ನೋಡಿ, ನಿರೀಕ್ಷಿಸಿ, ಶರಣಾರ್ಥಿ ಸ್ವಾಮಿ, ನಿಮ್ಮ ದಯದಿಂದುದಯವಾದ ಪರಿಪೂರ್ಣರಸಾಮೃತವ ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿ, ಪರಮಪತಿವ್ರತತ್ವದಿಂದ ಗುರುಚರವರಸ್ಥಲಕ್ಕೆ ತನುಮನಧನಂಗಳ ಸಮರ್ಪಿಸುವಲ್ಲಿ ನಿರ್ವಂಚಕವಾಗಿ, ಭಕ್ತಲಿಂಗಜಂಗಮವೆಂದು ಉಭಯ ನಾಮರೂಪ ಕ್ರಿಯಾಕಾಯವಳಿದು, ಕ್ಷೀರ ಕ್ಷೀರವ ಕೂಡಿದಂತೆ ಪರುಷ ಮುಟ್ಟಿ ಪರುಷವಾದಂತೆ, ಪರಮಾನಂದಾಬ್ಧಿ ಚಿದ್ರಸಾಮೃತ ಅಷ್ಟಾವರಣದ ಸತ್ಕ್ರಿಯಾಜ್ಞಾನಾಚಾರಂಗಳ ಅನುಭಾವದೊಳ್ ಕೂಟಸ್ಥದಿಂದೊಡಲಾಗಿ, ನಿರಾಕಾರ ನಿಃಶಬ್ದಲೀಲೆಪರ್ಯಂತರವು ಆ ಗುರುಲಿಂಗಜಂಗಮ ಚಿತ್ಪ್ರಭಾಂಗ ಭಸ್ಮಮಂತ್ರಾದಿಗಳೆ ಮುಂದಾಗಿ, ಸತ್ಯಶುದ್ಧ ನಡೆನುಡಿ ಕ್ರಿಯಾಜ್ಞಾನಾನುಭಾವ ಪಾದೋದಕ ಪ್ರಸಾದಸೇವನೆಯೆ ಹಿಂದಾಗಿ, ಸಮಸ್ತ ಕಾರಣಕ್ಕೂ ಸಾವಧಾನ ಸಪ್ತವಿಧ ಸದ್ಭಕ್ತಿಗಳಿಂದ ಮಾರ್ಗಾಚಾರವುಳ್ಳ ಕ್ರಿಯಾರ್ಪಣ, ದ್ರವ್ಯಮೀರಿದಾಚಾರವುಳ್ಳ ಜ್ಞಾನಾರ್ಪಣದ್ರವ್ಯಂಗಳಂ ಪರಿಪೂರ್ಣಾನುಭಾವದಿಂದ ನಿಜನೈಷಾ*ನುಭಾವಸಂಬಂಧಿಗಳೆ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಸೇವಿತಕ್ಕೆ ಯೋಗ್ಯರಾದ ಘನಕ್ಕೆ ಘನವೆಂದವರಾಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ; ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ]. ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ, ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ. ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ ಭಂಗ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ ನೀವು ಕೇಳಿರೊ. ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ ಎಲ್ಲಿಯದೊ ಪ್ರಸಾದ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರ ನಾನೇನೆಂಬೆನಯ್ಯಾ. ಲಿಂಗದ ಹವಣನರಿಯದೆ ತನ್ನ ಒಡಲ ಹವಣಿಂಗೆ ಗಡಣಿಸಿಕೊಂಬ ದುರಾತ್ಮರನೇನೆಂಬೆನಯ್ಯಾ ತನ್ನ ಒಡಲ ಹವಣಿಂಗೆ ಮನವು ಸಾಕೆಂದು ತೃಪ್ತಿಯಾದುದು ಲಿಂಗಾರ್ಪಿತಕ್ಕೆ ಅದು ಸಲುವುದೆ, ಹೇಳಿರೆ ? ಆ ಲಿಂಗವು ಮುಟ್ಟದ ಅನರ್ಪಿತವನುಂಡು ಅಚ್ಚಪ್ರಸಾದಿಗಳೆನಿಸಿಕೊಂಬವರ ಲಿಂಗದಲ್ಲಿ ಸಜ್ಜನ ಸನ್ನಹಿತ ಶರಣರು ಮೆಚ್ಚುವರೆ ? ಬಂದ ಬಂದ ಸಕಲ ಪದಾರ್ಥಗಳೆಲ್ಲವ ಲಿಂಗಕ್ಕೆ ಅರ್ಪಿಸಿಕೊಳ್ಳಬಲ್ಲಡೆ ಕೂಡಲಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ.
--------------
ಚನ್ನಬಸವಣ್ಣ
ಸಾಕಾರವಾಗಿ ಬಂದ ಪದಾರ್ಥವನು ನಿರಾಕಾರಲಿಂಗಕೆ ಅರ್ಪಿಸಿ ಪ್ರಸಾದವ ಕೊಂಡಿಹೆವೆಂದಡೆ ಅದು ದಿಟವೆನ್ನಲರಿಯದು. ಸಾಕಾರ ಕಾಯ ನಿರಾಕಾರ ನಿಜ ಅರ್ಪಿತವನಾರ್ಪಿತ ನೋಡಾ. ಅರಿದು ಅರಿಯದರ್ಪಿಸಬಲ್ಲರೆ ಆತನ ಅಚ್ಚಪ್ರಸಾದಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚಪ್ರಸಾದಿ ಅಚ್ಚಪ್ರಸಾದಿಯೆಂದು ನಿಚ್ಚಕ್ಕೆ ಬಗುಳುವ ಕುನ್ನಿಗಳ ನೋಡಾ ! ಬರದ ನಾಡಿಂದ ಬಂದ ಬಣಗುಗ?ಂತೆ ಮತ್ತಿಕ್ಕುವರೊ ಇಕ್ಕರೊ ಎಂದು, ಒಟ್ಟಿಸಿಕೊಂಡು ತಿಂದು ಮಿಕ್ಕುದ ಬಿಸುಡುವ ಕುನ್ನಿಗಳ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವರು ?
--------------
ಚನ್ನಬಸವಣ್ಣ
ಹಂದಿ, ಮೊಲ, ಪಶುವ ತಿಂದವನೇ ಭಕ್ತ. ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ. ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ. ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ. ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು. ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ. ಇಂತೀ ಎಲ್ಲವ ಕೊಂದು ತಿಂದವನ ಕೊಂದು ಯಾರೂ ಇಲ್ಲದ ದೇಶಕ್ಕೆ ಒಯ್ದು ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು, ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು, ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ, ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ. ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ಗುರುಮೂರ್ತಿಗಳು, ಚರಮೂರ್ತಿಗಳು ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ. ಇಂತೀ ವಿಚಾರವನು ತಿಳಿಯದೆ ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು, ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು ಪಾದಪೂಜೆಯ ಮಾಡಿಸಿಕೊಂಡು ಪಾದವ ಪಾಲಿಸುವರೆಂದು ಭಕ್ತರಿಗೆ ತೀರ್ಥವೆಂದು ಕೊಡುವಂಥವರು ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ ಹೆಂಡಗಾರರು ಇವರಿಬ್ಬರು ಸರಿ ಎಂಬೆ. ಇಂತೀ ನಿರ್ಣಯವನು ತಿಳಿಯದೆ ಭಕ್ತರನಡ್ಡಗೆಡಹಿಸಿಕೊಂಡು. ಪ್ರಸಾದವೆಂದು ತಮ್ಮ ಎಡೆಯೊಳಗಿನ ಕೂಳ ತೆಗೆದು ಕೈಯೆತ್ತಿ ನೀಡುವರು. ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು ಹೋತು ಕುರಿಗಳನು ಕೊಂದು ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ ಕಟುಕರು ಇವರಿಬ್ಬರು ಸರಿ ಎಂಬೆ. ಇಂತೀ ಭೇದವ ತಿಳಿಯದೆ ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು ಕೊಡುವಂತ ಗುರುಹಿರಿಯರು ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ. ಹಳೆನಾಯಿ ಮುದಿಬೆಕ್ಕು ಸತ್ತ ಮೂರುದಿನದ ಮೇಲೆ ಆರಿಸಿಕೊಂಡು ಬಂದು ಅದರ ಜೀರ್ಣಮಾಂಸವನು ತಿಂದು ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ. ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ, ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ ಅವರ ಒಡಲಿಗೆ ಕೂಳನು ಹಾಕಿ, ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ. ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಕೊಳಬಲ್ಲರೆ ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇತ್ತಲಾಗಿ,ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ ನಿಜಗುರುಲಿಂಗಜಂಗಮಲೀಲೆಯ ಧರಿಸಿ, ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ ಕ್ರಿಯಾಚರಣದಿಂದ ಕಡಿದು ಕಂಡರಿಸಿ, ಬಿಡುಗಡೆಯನುಳ್ಳ ಹರಗಣಂಗಳಿಗೆ ನಿಜೇಷ*ಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ, ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ. ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ, ಶಿವಯೋಗಾನುಸಂಧಾನದಿಂದ ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ. ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು, ಅನ್ಯಮಣಿಮಾಲೆಗಳ ಧರಿಸಿ, ಅನ್ಯಜಪಕ್ರಿಯೆಗಳ ಮಾಡಲಾಗದು. ಅದೇನು ಕಾರಣವೆಂದಡೆ : ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು, ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ, ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು, ಆ ಪ್ರಭುಸ್ವಾಮಿಗಳು ಅವರೀರ್ವರ ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ ಸಂತೋಷಗೊಂಡು, ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ ದರುಶನ ಸ್ಪರುಶನ ಸಂಭಾಷಣೆ ಪಾದೋದಕ ಪ್ರಸಾದಾನುಭಾವವೆಂಬ ಷಡ್ರಸಾಮೃತವ ಕೊಡಿಸಬೇಕೆಂದು, ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ , ಹರುಷಾನಂದ ಹೊರಚೆಲ್ಲಿ , ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ, ಅನಾದಿ ಪ್ರಮಥಗಣಾಧೀಶ್ವರರ ಸಂದರ್ಶನವಾಗಬೇಕೆಂದು ಕರೆದಲ್ಲಿ , ಆಗ ಮಹಾದೇವಿಯಮ್ಮನು ಸಂತೋಷಂಗೊಂಡು, ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ ನಡೆನುಡಿಗಳೇನೆಂದು ಬೆಸಗೊಳಲು, ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ ಲಿಂಗಜಂಗಮದಲ್ಲಿ ಕೂಟಸ್ಥರಾಗಿ, ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ, ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು, ನಿಜಾನಂದಯೋಗತೂರ್ಯರು, ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ ಪಾವನಾರ್ಥ ಅಷ್ಟಾವರಣ ನಿಜವೀರಶೈವಮತೋದ್ಧಾರಕ ಮಹಿಮರ ಚರಣದ ದರುಶನಮಾತ್ರದಿಂದಿವೆ ಜ್ಯೋತಿರ್ಮಯ ಕೈವಲ್ಯಪದವಪ್ಪುದು ತಪ್ಪದುಯೆಂದು ಅಲ್ಲಮನುಸುರಲು, ಆಗ ಸಮ್ಯಕ್‍ಜ್ಞಾನಿ ಮಹಾದೇವಿಯರು ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು ಸಂತೋಷಗೊಂಡು, ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು, ಆ ಪ್ರಶ್ನೆಯು ಹಿರಿಯ ದಂಡನಾಥಂಗೆ ಲಿಂಗದಲ್ಲಿ ಪ್ರಸನ್ನವಾಗಲು, ಆಗ ಸಮಸ್ತಪ್ರಮಥರೊಡಗೂಡಿ, ಆ ಅಲ್ಲಮರು ಸಹಿತ ತ್ರಿವಿಧರು ಬರುವ ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ, ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು, ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ ಹಿರಿದಂಡನಾಥ ಪ್ರಮಥರೊಡಗೂಡಿ, ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ, ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು, ಆಗ ಮಹಾದೇವಿಯಮ್ಮನವರು ಒಂದು ಕಡೆಗೆ ಕೇಶಾಂಬರವ ಹೊದೆದು, ಶರಣುಶರಣಾರ್ಥಿ ನಿಜವೀರಶೈವ ಸದ್ಧರ್ಮ ದಂಡನಾಥ ಮೊದಲಾದ ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು ಸ್ತುತಿಸುವ ದನಿಯ ಕೇಳಿ, ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು, ಶರಣೆಗೆ ಶರಣೆಂದು ಬಿನ್ನಹವೆನಲು, ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ ಏನಪ್ಪಣೆ ಸ್ವಾಮಿಯೆನಲು, ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ, ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು ಅಭಿವಂದಿಸಲು, ಆಗ ಕಲಿಗಣನಾಥ ಕಲಕೇತಯ್ಯಗಳು ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ, ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ. ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು, ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು, ಆ ಕಿನ್ನರಿಯ ಬ್ರಹ್ಮಯ್ಯನು ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು, ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು, ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ, ದಯವಿಟ್ಟು ಪ್ರತಿಪಾಲರ ಮಾಡಿ ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು, ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು ? ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು, ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು , ಅದೇನು ಕಾರಣವೆಂದು ಮಹಾದೇವಿಯಮ್ಮನವರು ಪ್ರಭುವಿನೊಡನೆ ನುಡಿಯಲು, ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ ನಾವು ನುಡಿದ ನುಡಿ ದಿಟ ದಿಟವು. ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು, ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು. ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು, ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ, ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ, ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು, ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ, ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು, ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು ಅದೆಂತೆಂದೊಡೆ: ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ ವೀರಶೈವಮತ ಸದ್ಭಕ್ತಿ ಮಾರ್ಗವ ಮತ್ರ್ಯಲೋಕದ ಮಹಾಗಣಗಳಿಗೆ ತೋರಿ, ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ, ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು, ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ, ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ ಅರೆಭಕ್ತಿಸ್ಥಲವೆಂದು ನುಡಿಯಲು, ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ : ಒಮ್ಮೆ ನಿಮ್ಮ ತನು-ಮನ-ಧನ, ನಿಮ್ಮ ಸತಿಸುತರ ತನುಮನಧನಂಗಳು ಶೈವಮತದವರ ಭೂಪ್ರತಿಷಾ*ದಿಗಳಿಗೆ ನೈವೇದ್ಯವಾಗಿರ್ಪವು. ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು, ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ, ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ ನಮ್ಮ ತನುಮನಧನಂಗಳೆಂದು, ಕಾಯಾರ್ಪಣ ಕರಣಾರ್ಪಣ ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ, ನೀವು ವೀರಶೈವಸಂಪನ್ನರೆಂತಾದಿರಿ ? ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು ? ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು, ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ, ಆ ಹರಹರಾ ಅಹುದಹುದೆಂದು ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು, ಅರೆಭಕ್ತಿ ಮಾಡುವವರ ವಿಚಾರಿಸಿ, ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ, ಮುನ್ನೂರರವತ್ತು ಗಣಂಗಳಿರ್ಪರು. ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ, ನಿಮ್ಮೊಳಗಣ ಪ್ರೀತಿಯೇನೆಂದು ಮಹಾದೇವಮ್ಮನವರು ನುಡಿದು ಹಸ್ತಾಂಜುಲಿತರಾಗಿ ಬೆಸಗೊಳಲು, ಆಗ ಮುನ್ನೂರರವತ್ತು ಗಣಂಗಳು ನುಡಿವ ಪ್ರತ್ಯುತ್ತರ ಅದೆಂತೆಂದಡೆ : ಹರಹರಾ, ನಾವು ಬಂದ ಬಟ್ಟೆ ಅಹುದಹುದು, ಇಲ್ಲಿ ನಿಂದ ನಡೆ ಅಹುದಹುದು. ನಾವು ಕ್ರಿಯಾಮಾರ್ಗವ ಬಿಟ್ಟು ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು, ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ. ನಡೆಪರುಷ, ನುಡಿಪರುಷ, ನೋಟಪರುಷ, ಹಸ್ತಪರುಷ, ಭಾವಪರುಷರೆ ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು, ಆಗ ಚೆನ್ನಮಲ್ಲಾರಾಧ್ಯರು, ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು, ಆಗ್ಯೆ ಮುನ್ನೂರರವತ್ತು ಗಣಂಗಳು ನುಡಿದ ಪ್ರತ್ಯುತ್ತರವದೆಂತೆಂದೊಡೆ : ಅಯ್ಯಾ, ನಾವು ತಪ್ಪಿದ ತಪ್ಪಿಂಗೆ ಕ್ರಿಯಾಲೀಲೆಸಮಾಪ್ತಪರ್ಯಂತರವು ನಾವು ಮುನ್ನೂರರವತ್ತು ಕೂಡಿ, ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ ಆರಾಧನೆಯ ಮಾಡಿ, ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ ವಸ್ತ್ರ ಪಾವುಡ ರಕ್ಷೆ ಪಾವುಗೆಗಳ ಪರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ, ಋಣಪಾತಕರಾಗದೆ, ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು, ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ, ಶೈವಾರಾಧನೆಗಳಂ ಖಂಡಿಸಿ, ವೀರಶೈವ ಗುರುಲಿಂಗಜಂಗಮ ಭಕ್ತರೆ ಘನಕ್ಕೆ ಮಹಾಘನವೆಂದು ನುಡಿ ನಡೆ ಒಂದಾಗಿ, ಚೆನ್ನಮಲ್ಲಾರಾಧ್ಯರ ನಿರೂಪದಿಂದ ದಂಡನಾಥನ ಭಕ್ತಿಪ್ರಿಯರಾದ ಲಕ್ಷದಮೇಲೆ ತೊಂಬತ್ತಾರುಸಾವಿರ ಘನದೊಳಗೆ ಮಾರ್ಗಕ್ರಿಯೆ ಮೀರಿದ ಕ್ರಿಯಾಚರಣೆಸಂಬಂಧ ಸ್ವಸ್ವರೂಪ ಜ್ಞಾನಾಚಾರ ನಡೆನುಡಿ ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವೆ ತಮಗೆ ಅಂಗ ಮನ ಪ್ರಾಣವಾಗಿ, ಮೊದಲಾದ ಚಿತ್ಕಲಾಪ್ರಸಾದ ಸಲ್ಲದ ಗಣಂಗಳ ಕಲಿಗಣನಾಥ ಕಲಕೇತರು ಖಂಡಿಸಿ ಆ ಹನ್ನೆರಡುಸಾವಿರಮಂ ತೆಗೆದು ಚೆನ್ನಮಲ್ಲಾರಾಧ್ಯರಿಗೆ ತೋರಲು, ಅವರು ಗಣಸಮೂಹಂಗಳೆಲ್ಲ ಸಂತೋಷದಿಂದ ಸನ್ಮತಂಬಟ್ಟು ಒಪ್ಪಿದ ತದನಂತರದೊಳು, ಪ್ರಭುಸ್ವಾಮಿಗಳು ಅಯ್ಯಾ, ದಂಡನಾಥ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳೆ ಇನ್ನು ಹಿಂದಣ ಅರೆಭಕ್ತಿಸ್ಥಲವ ಮೆಟ್ಟಿದ ಪುತ್ರ ಮಿತ್ರ ಕಳತ್ರರ ಒಡಗೂಡಿ ಬಳಸಿದೊಡೆ, ಅಷ್ಟಾವರಣ ಪಂಚಾಚಾರಕ್ಕೆ ಹೊರಗೆಂದು ನಿಮ್ಮ ಗಣ ಮೆಟ್ಟಿಗೆಯಲಿ ಪಾವುಡವ ಕೊರಳಿಗೆ ಸುತ್ತಿ, ಭವದತ್ತ ನೂಂಕಿ, ಕಾಮಕಾಲರ ಪಾಶಕ್ಕೆ ಕೊಟ್ಟೆವೆಂದು ನುಡಿಯಲು, ಆ ಮಾತಿಗೆ ದಂಡನಾಥ ಮೊದಲಾದ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿಗಣಂಗಳೆಲ್ಲ ಎದ್ದು , ಹಸ್ತಾಂಜುಲಿತರಾಗಿ, ಹಸಾದ ಹಸಾದವೆಂದು ಕೈಕೊಂಡು, ಪರಮಪಾತಕಸೂತಕನಾಚರಂಗಳಂ ವಿಡಂಬಿಸಿ, ಶಿವಲಿಂಗಲಾಂಛನಯುಕ್ತರಾದ ಶಿವಜಂಗಮದ ಭಿಕ್ಷಾನ್ನದ ಶಬ್ದಮಂ ಕೇಳಿ, ಕ್ಷುಧೆಗೆ ಭಿಕ್ಷೆ, ಸೀತಕ್ಕೆ ವಸನಮಂ ಸಮರ್ಪಿಸಿ ಹಿರಿಕಿರಿದಿನ ನೂನಕೂನಂಗಳಂ ನೋಡದೆ ಶಿವರೂಪವೆಂದು ಭಾವಿಸಿ, ಅಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯ ಕಲಿಗಣನಾಥ ಕಲಕೇತರು ಖಂಡಿಸಿದ ಹನ್ನೆರಡುಸಾವಿರ ಪರಶಿವಜಂಗಮದೊಡನೆ ತೀರ್ಥಪ್ರಸಾದಾನುಭಾವ ಸಮರಸದಾಚರಣೆಯಂ ಬಳಸಿ ಬ್ರಹ್ಮಾನಂದರಾಗಿ, ಚಿತ್ಕಲಾಪ್ರಸಾದಿ ಜಂಗಮದೊಡವೆರೆದು, ಅಚ್ಚಪ್ರಸಾದಿಗಳು ಅಚ್ಚಪ್ರಸಾದಿಗಳೊಡವೆರೆದು, ನಿಚ್ಚಪ್ರಸಾದಿ ನಿಚ್ಚಪ್ರಸಾದಿಗಳೊಡವೆರೆದು, ಸಮಯಪ್ರಸಾದಿ ಸಮಯಪ್ರಸಾದಿಗಳೊಡವೆರೆದು ಒಂದೊಡಲಾಗಿ, ಚಿತ್ಕಲಾಪ್ರಸಾದಿಗಳು ತಮ್ಮಾನಂದದಿಂದ ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಬಹುಲೇಸು, ನಿಚ್ಚಪ್ರಸಾದಿ ಸಮಯಪ್ರಸಾದಿಗಳು ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಉತ್ತಮಕ್ಕುತ್ತಮ, ಅಚ್ಚಪ್ರಸಾದಿ ನಿಚ್ಚಪ್ರಸಾದಿಸ್ಥಲಕೆ ನಿಂದಡೆ ಅಯೋಗ್ಯವೆನಿಸುವುದು. ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲಕೆ ನಿಂದೊಡೆ ಅಯೋಗ್ಯರೆನಿಸುವರು. ಈ ವರ್ಮಾದಿವರ್ಮಮಂ ತ್ರಿಕರಣದಲ್ಲಿ ಅರಿದು ಮರೆಯದೆ ಸಾವಧಾನದೆಚ್ಚರದೊಡನೆ ಲಿಂಗಾಂಗಸಮರಸೈಕ್ಯದೊಡನೆ ಕೂಡಿ ಎರಡಳಿದಿರಬಲ್ಲಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯ ಪ್ರಸಾದಿಗಳ ವಿವರ: ಗುರು ಮೊದಲು `ಆಚರಿಸುವಂತಹ ಮರ್ಮವನು ತಿಳಿದು ಶಿವಸಂಸ್ಕಾರವನು ಹೊಂದಿ ನಡೆ' ಎಂದು, ಅತಿ ಮೋಹನದಿಂದ ಸಮಸ್ತ ಮರ್ಮವನು ತಿಳುಹಿ ಹಿಡಿದ ವ್ರತಾಚರಣೆಗೆ ಸಂದು ಇಲ್ಲದ ಹಾಗೆ ಅಪಮೃತ್ಯು ಬಂದು ಸೋಂಕದ ಹಾಗೆ ಪ್ರಮಥಕೃಪಾಕಟಾಕ್ಷದಿಂದ ನಡೆದು ಹೋಗುವರು; ಅವರೆ ಅಚ್ಚಪ್ರಸಾದಿಗಳು, ಮತ್ರ್ಯಲೋಕದ ಮಹಾಗಣಂಗಳೆನಿಸುವರು. ಮಿಕ್ಕಿನ ನಿಚ್ಚಪ್ರಸಾದಿಗ? ಸಮಯ ಪ್ರಸಾದಿಗಳು_ ಅವರು ನಡೆದ ಮೇಲು ಪಂಕ್ತಿ ಆಚರಣೆಯ ನೋಡಿ, ಅವರಂತಹ ಸುವಿವೇಕ ನಮಗೆ ಬಾರದೆಂಬುದ ತಿಳಿದು, ಅವರೆ ತಮ್ಮ ಇಷ್ಟಲಿಂಗವಾಗಿ, ತಾವೆ ಅವರ ಭೃತ್ಯರಾಗಿ ನಡೆಯುತ್ತ ಏಕಾರ್ಥ ಪರಮಾರ್ಥಕ್ಕೆ ಸಮಾನವಾಗಿ ಆಚರಿಸಬೇಕೆಂಬ ಅನುಸರಣೆ ಅವರಲ್ಲಿ ಹುಟ್ಟಿದ ನಿಮಿತ್ತ, ಅದೇ ಜಂಗಮ ಬಂದು ನಿಚ್ಚಪ್ರಸಾದಿಗಳಿಗೆ ಎರಡರಲ್ಲಿ ಅಶಕ್ತರೆಂದು ತಿಳಿದು ಅತಿ ಸೂಕ್ಷ್ಮವಾಗಿ ಅವರಿಬ್ಬರ ಆಚರಣೆಯ ಅವರಿಬ್ಬರಲ್ಲಿ ಹರಸಿ, ಆಯಾಯ ತತ್ಕಾಲಕ್ಕೆ ಜಂಗಮ ದೊರೆದಂತಹದೆ ಆಚರಣೆ, ಜಂಗಮ ದೊರೆಯದಂತಹದೆ ಸಂಬಂಧ ಎಂದು ಅರುಹಿಕೊಟ್ಟಲ್ಲಿ, ದೊರೆದಾಗಲಿಂತು ಆಚಾರ ಒಡಂಬಡಿಕೆ, ದೊರೆಯದಾಗ ಆಚಾರ ಒಡಂಬಡಿಕೆಯಾಗದು_ಎಂದು ಮರ್ಮವ ತಿಳಿದು, ಜಂಗಮವು ಇಲ್ಲದ ವೇಳೆಗೆ ಅತಿಸೂಕ್ಷ್ಮವಾಗಿ ಅತಿವಿಶಾಲದಿಂದ ನಿರೂಪಿಸುತಿರ್ದರು_ ಆ ಗುರು ಮೊದಲಲ್ಲಿ ಲಿಂಗವ ಕರುಣಿಸಿ ಕೊಟ್ಟಂತಹುದೆ ನಿಮ್ಮ ಕಳೆ; ನಾ ನಿಮ್ಮ ಚಿತ್ತು; ಎರಡರ ಸಮರಸವೆ ನಿಮ್ಮ ಬಿಂದು; ಆ ಬಿಂದುವೆ `ಅ'ಕಾರ ಪ್ರಣವ; ನಿಮ್ಮ ಇಷ್ಟಲಿಂಗದ ಶಕ್ತಿಪೀಠದಲ್ಲಿ ಗುರುವಾಗಿ, ಆ ಕಳೆಯೆ `ಮ'ಕಾರ ಪ್ರಣವ. ನಿಮ್ಮ ಲಿಂಗದ ಗೋಮುಖದಲ್ಲಿ ಜಂಗಮವಾಗಿ, ಆ ಎರಡರ ಕೂಟವೆ ನಾದ; ಅದೆ `ಉ'ಕಾರ ಪ್ರಣವ. ನಿಮ್ಮ ಲಿಂಗದ ಗೋಳಕದಲ್ಲಿ ಲಿಂಗವಾಗಿ, ಆ ಲಿಂಗವೆ ನಿಮ್ಮ ರಮಣನೆಂದು ಭಾವಿಸಿದ ನಿಮಿತ್ತ ನೀವೆ ಲಿಂಗವಾದ ಕಾರಣ ಆ ಲಿಂಗವೆ ನಿಮ್ಮ ಅಂಗವಾಗಿ, ಆ ಜಂಗಮವೆ ನಿಮ್ಮ ಪ್ರಾಣವಾಗಿ, ಗುರುವೆ ನಿಮ್ಮ ಆಚರಣೆಯಾಗಿರ್ದ ನಿಮಿತ್ತ, ಅದೇ ಗುರುವೆ ನಿಮ್ಮ ವಾಙ್ಮನದಲ್ಲಿ, ಅದೇ ಲಿಂಗವೆ ನಿಮ್ಮ ಕರಕಮಲದಲ್ಲಿ ಅದೇ ಜಂಗಮವೆ ನಿಮ್ಮ ವಿಗ್ರಹದಲ್ಲಿ, ನೆಲೆಗೊಂಡಿರ್ಪುದೆಂದು ಸಂಬಂಧಿಸಿಕೊಟ್ಟಲ್ಲಿ ಆ ಗುರು ಹೇಳಿದಂತಹ ಪತಿವ್ರತಾಧರ್ಮ ತಿಳಿಯದೆ ಆಚರಿಸಿದ ಕಾರಣ ಆಯಾಯ ತತ್ಕಾಲದಲ್ಲಿ ಬಂದೊದಗುವವು, ಅದೇ ಸಮರಸಾಚರಣೆಯ ಉಪಚಾರವು. ನೀವು ಯಾವಸ್ಥಲವಿಡಿದು ಆಚರಿಸಿದಡೆಯೂ, ಆಯಾಯ ಸ್ಥಲಂಗಳಲ್ಲಿ ಆರು ಸ್ಥಲಂಗಳು ಬಂದು ಸಂಬಂಧವಾಗುವುವು. ಮಿಕ್ಕಿನ ಉಪದೇಶವಿಲ್ಲದೆ ಶುದ್ಧಶೈವರಿಗೆ ಗುರು, ಅಷ್ಟಷ್ಟು ಜಪ_ಶಿವಾರ್ಚನೆಯ ಹೇಳಿ `ಹೀಗೆ ಆಚರಿಸು' ಎಂದರುಹಿಕೊಟ್ಟಲ್ಲಿ, ಅವರಿಗೆ ಒಂದೆ ಸ್ಥಲ ಸಂಬಂಧವು. ಅವರಿಗೆ ಮತ್ತೊಂದು ಸ್ಥಲದ ಮರ್ಮವ ಗುರು ಅರುಹಿ ಕೊಡಲಿಲ್ಲ. ಏನು ಕಾರಣವೆಂದಡೆ ಅವರು ಅಶಕ್ತರಾದ ನಿಮಿತ್ತ. ಅವರು ಖಂಡಿತಾಚರಣೆಯುಳ್ಳವರು. ಅವರಿಗೆ ಸಮರಸಾಚರಣೆ ಹೊಂದದ ನಿಮಿತ್ತ ಅವರು ಮೂರು ಜನ್ಮಕ್ಕೆ ಮುಕ್ತರು. ಅದರಲ್ಲಿ ತಪ್ಪಿ ನಡೆದಡೆ ನೂರು ಜನ್ಮಕ್ಕೆ ಮುಕ್ತರು. ಹಾಗಾದಡೆಯೂ ಖಂಡಿತಮುಕ್ತರಲ್ಲದೆ ನಿಜಮುಕ್ತರಲ್ಲ. ಇದನರಿತು ಶ್ರಿಗುರುನಾಥನು ಅವರಿಗೆ ತಕ್ಕಂತಹ ನಡತೆಯ ಅರುಹಿಕೊಡುವನಲ್ಲದೆ ಹೆಚ್ಚಾಗಿ ಅರುಹಿಕೊಡನು. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪ್ರಸಾದ ಪ್ರಸಾದವೆಂದು ನುಡಿಯಬಹುದಲ್ಲದೆ, ಪ್ರಸಾದದ ಘನವನಾರು ಬಲ್ಲರಯ್ಯಾ ? ಪ್ರಸಾದವೆಂಬುದು ಪರಕ್ಕೆಪರವಾಗಿರ್ಪುದು. ಪ್ರಸಾದವೆಂಬುದು ಪÀರತರ ಮುಕ್ತಿದೋರುವುದು. ಪ್ರಸಾದವೆಂಬುದು ಪರಮಪದವಿಯನೀವುದು. ಪ್ರಸಾದವೆಂಬುದು ಪರಂಜ್ಯೋತಿಸ್ವರೂಪವನುಳ್ಳುದು. ಪ್ರಸಾದವೆಂಬುದು ಪರಬ್ರಹ್ಮನಾಮವುಳ್ಳದು. ಪ್ರಸಾದವೆಂಬುದು ಮಹಾಜ್ಞಾನಪ್ರಕಾಶವನುಳ್ಳುದು. ಪ್ರಸಾದವೆಂಬುದು ಸ್ವಾನುಭಾವಸಮ್ಯಜ್ಞಾನ, ಜ್ಞಾನ, ಸುಜ್ಞಾನ, ಮಹಾಜ್ಞಾನ, ಶಿವಜ್ಞಾನವೆಂಬ ಷಡ್ವಿದಜ್ಞಾನಸ್ವರೂಪವಾದ ಕರಕಮಲದಲ್ಲಿ ಪ್ರಕಾಶಮಯವಾಗಿ ತೋರುವ ಘನಮಹಾಲಿಂಗವು. ಅಂತಪ್ಪ ಘನಮಹಾ ಇಷ್ಟಬ್ರಹ್ಮದಲ್ಲಿ ಎರಡಳಿದು ಕೂಡಿ ಬೆರೆದು ಬೇರಿಲ್ಲದೆ ಇರಬಲ್ಲಡೆ ಆತನೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ ಇಂತೀ ಚತುರ್ವಿಧಪ್ರಸಾದದೇಕಸ್ವರೂಪಾದ ಮಹಕ್ಕೆ ಮಹವಾದ, ಘನಕ್ಕೆ ಘನವಾದ ಪರಶಿವನ ಮಹಾಪ್ರಸಾದಿಯೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->