ಅಥವಾ

ಒಟ್ಟು 12 ಕಡೆಗಳಲ್ಲಿ , 10 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರಿಡುವ ಪೂಜೆ ವಾಗ್‍ಬ್ರಹ್ಮದ ಷಡುಸ್ಥಲದ ಸೋಪಾನ ಅಡಿಯ ಮೆಟ್ಟಿ ಅಡಿವಿಡಿವನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವುಉಭಯನಾಮವಾಗಿಪ್ಪನು.
--------------
ತುರುಗಾಹಿ ರಾಮಣ್ಣ
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ; ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು, ನಿಂದ ಬೊಂಬೆ ಮಹಾರುದ್ರ; ರುದ್ರನ ಬೆಂಬಳಿಯವೆರಡು ಸೂತ್ರಕರ್ಣ. ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ, ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ; ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
--------------
ಕದಿರರೆಮ್ಮವ್ವೆ
ಇಂತೀ ವರ್ಮಭೇದಂಗಳ ಸ್ಥಲವಿವರಂಗಳ, ತತ್ವಭೇದಂಗಳ ನಿರೀಕ್ಷಿಸಿ ನೋಡಿಹೆನೆಂದಡೆ, ಭೇದಕ್ಕೆ ವಿಭೇದವಾಗಿ ಕಾಬ ಹೊರೆಗೆ ಕಟ್ಟಣೆಯಿಲ್ಲ. ಹಿಡಿವಲ್ಲಿ ಅಡಿಯ ಕಂಡು, ಬಿಡುವಲ್ಲಿ ಬೇರ ಕಿತ್ತು, ಬಿಡುಮುಡಿಯನರಿದಲ್ಲಿ ಉಭಯಕಕ್ಷೆಯೆ ಲೋಪ ಸದ್ಯೋಜಾತಲಿಂಗವನರಿದಲ್ಲಿ.
--------------
ಅವಸರದ ರೇಕಣ್ಣ
ಅಂಗದ ಕಳೆ ಲಿಂಗದಲ್ಲಿ ಲೀಯವಾಗದು. ಲಿಂಗದ ಕಳೆ ಅಂಗದಲ್ಲಿ ಲೀಯವಾಗದು. ಮಾತಿನಮಾಲೆಯ ಬೊಮ್ಮವೇತರದೊ ? ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು. ಪ್ರಾಣ ಜಂಗಮವಾದಡೆ ಅರಿದಿರಬೇಕು. ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ. ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು, ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ, ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಕಟ್ಟಿದೆ ಘಟದಟ್ಟೆಯ ಹೊಲಿದು, ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು. ಗುಂಟದ ದ್ವಾರದಲ್ಲಿ, ಉಭಯಸಂಚದ ಬಾರ ತೆಗೆದು, ತೊಡಕು ಬಂಧವನಿಕ್ಕಿ, ಅಡಿಯ ಬಿಡದಂತೆ, ಹಿಂದಣ ಮಡ ಮುಂದಣ ಉಂಗುಷ*ಕ್ಕೆ ಒಂದನೊಂದು ಜಾರದಂತೆ ಬಂಧಿಸಿ, ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ, ಕಾಮದ ಒಡಲ ಮಾದಿಗ ಬಂದೆ, ಘಟ ತೋಕುಳು ತೊಗಲು ಹದಬಂದಿತ್ತು. ಹೊತ್ತು ಹೋದಿಹಿತಣ್ಣಾ. ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ. ಒಪ್ಪಿದರಿರಲಿ, ಒಪ್ಪದಿದ್ದಡೆ ಮೂರು ಮುಖದಪ್ಪಗೆ ಕೊಟ್ಟೆಹೆ. ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ, ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ.
--------------
ಮಾದಾರ ಧೂಳಯ್ಯ
ನಿಡಿದೊಂದು ಕೋಲುವನು ಕಡಿದು ಎರಡ ಮಾಡಿ ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ ನಡುವೆ ಹೊಸದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ? ರಾಮನಾಥ.
--------------
ಜೇಡರ ದಾಸಿಮಯ್ಯ
ಓಗರ ಮೇಲೋಗರವನುಂಬನ್ನಕ್ಕ ಗಡಿತಡಿಯ ಕಾಯಿಸಿ, ಮತ್ತೊಡೆಯರ ಕರೆಯೆಂದು, ಮತ್ತೊಡೆಯರು ಬಂದಲ್ಲಿ ಮಡದಿಯರ ಮನೆಯೊಳಗವಿಸಿ, ತನ್ನ ಬಿಡುಗಡೆಯ ಸ್ತ್ರೀಯರ ಕೈಯಲ್ಲಿ ಒಡೆಯರು ಪಾದವೆಂದು ಅಡಿಯ ತೊಳೆವುತ್ತ, ಆ ತೊಳೆದ ನೀರ ತಾ ಕುಡಿವುತ್ತ, ಲಿಂಗಮಜ್ಜನವೆಂದು ಎರೆವುತ್ತ, ಅವರು ಉಂಡು ಮಿಕ್ಕ ಓಗರವ ಪ್ರಸಾದವೆಂದು ಲಿಂಗಕ್ಕೆ ತೋರಿ ತಾವು ಭುಂಜಿಸುತ್ತ, ಇಂತಿವರು ತಮ್ಮ ವ್ರತವ ತಾವರಿಯದೆ, ತಮ್ಮ ಭಾವವ ತಾವರಿಯದೆ, ಸುರೆಯ ಕುಡಿದವರಂತೆ, ಮರುಳು ಗ್ರಹ ಹೊಡೆದವರಂತೆ! ಇಂತೀ ತ್ರಿವಿಧ ಗುಡಿಹಿಯ ಭಕ್ತಿ ಅಸಗ ನೀರಡಿಸಿ ಸತ್ತಂತಾಯಿತ್ತು. ಆ ಗುಣಕಟ್ಟಳೆ ಏಲೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಏಲೇಶ್ವರ ಕೇತಯ್ಯ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಸಪ್ತಪಾತಾಳದಿಂದ ಅತ್ತತ್ತವಿತ್ತು, ಮುಂದೆ ಭುವನದ ಮೂಲವ ತಿಳಿದು ಗುಪ್ತಮಂಡಲವೆಂಬ ಹುತ್ತದೊಳಗೆ ಇರ್ದ ಘಟಸರ್ಪದ ಅಡಿಯ ಮೇಲಕ್ಕೆ ಮಾಡಿ, ಒಡನೆ ನಿಲಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮಂದಿರದ ಮನೆಯೊಳಗೆ ಇದ್ದುಕೊಂಬ, ತನ್ನ ತಲೆಕೆಳಗಾಗಿ ಪಾದ ಮೇಲಾಗಿ ಉಧೋ ಎಂದು ಅರ್ತು ಗುರ್ತವಿಟ್ಟು ಆಳಬಲ್ಲರೆ ಆತನಿಗೆ ಮಹಾಶಿವಜ್ಞಾನಿ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಸ್ವರ್ಗ ಮತ್ರ್ಯ ಪಾತಾಳ, ಈರೇಳು ಭುವನ, ಹದಿನಾಲ್ಕುಲೋಕ, ಪಂಚಶತಕೋಟಿ ಭುವನದ ವಿಸ್ತಾರವನ್ನೆಲ್ಲ ತನ್ನ ಅಂತರಂಗದೊಳಗೆ ನೋಡಿಕೊಂಡು, ಹೊರಗೆ ಶಿವಶಾಸ್ತ್ರ ಆಗಮ ಪುರಾಣಂಗಳ ನಿರ್ಮಿತವ ಮಾಡಿ, ಇರಬಲ್ಲರೆ ಆತನಿಗೆ ಉತ್ತಮ ಶಿವಕವೀಶ್ವರ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ನಾಲ್ಕು ದಿಕ್ಕಿನ ಮೂಲವ ತಿಳಿದು ಘಟಿಕಾಸ್ಥಾನವೆಂಬ ಒಂದಾಸನವ ಬರೆದು, ಎಂಬತ್ನಾಲ್ಕು ಆಸನದ ಭೇದದ ಗುಣಾವಗುಣಗಳೆಲ್ಲಾ ಒಂದೇ ಆಸನದಲ್ಲಿ ತಿಳಿದು, ಸತ್ಯವ ಹಿಡಿದು, ನಿತ್ಯನಾಗಿರಬಲ್ಲರೆ ಆತ ತನಗೆ ಬಂದಂತಹ ಮೂನ್ನೂರರವತ್ತು ಕಂಟಕಗಳನ್ನೆಲ್ಲ ಬಡಬಾಗ್ನಿಯ ಕಿಚ್ಚಿನಲ್ಲಿ ಸುಟ್ಟು, ಬೂದಿಯನು ಗಂಗೆಯ ಕೂಡಿಸಿ, ಲಿಂಗಾಂಗಿಯಾಗಿರಬಲ್ಲರೆ ಆತನಿಗೆ ಸ್ನಾನ ನೇಮ ಸಂಧ್ಯಾವಂದನ ಜಪ ಗಾಯತ್ರಿ ಸಪ್ತಗಾಯತ್ರಿಗಳ ಸ್ಥಾನಸ್ಥಾನದಲ್ಲಿ ನುಡಿದು ಪ್ರಾಣಲಿಂಗದ ದರುಶನವಾಗಿರಬಲ್ಲರೆ, ಆತನಿಗೆ ಅನಂತಕಾಲ ಚಕ್ರವ ಗೆಲಿದಂತಹ ಅಖಂಡಪರಿಪೂರ್ಣ ಮಹಾಮಹಾದೇವರೆಂದೆನ್ನಬಹುದು ಕಾಣಿರೋ. ಇಂತು ತಮ್ಮ ಅಂತರಂಗದೊಳಗಿದ್ದ ಕುಲಭಕ್ತನ ಭೇದವನರಿಯದೆ, ನರಕವಿ ವರಕವಿಗಳು ಹಲವು ಶಾಸ್ತ್ರ ಆಗಮ ಪುರಾಣಗಳ ಓದಿ, ಬಹುಮಾತುಗಳ ಕಲಿತು, ಬಂದ ಬರವು ನಿಂದ ನಿಲವು ತಡಿಯನರಿಯದೆ, ಒಂದೊಂದನೆ ಪದ ಪದ್ಯವನು ಮಾಡಿ, ಆಸ್ಥಾನದ ಸಭೆಯೊಳಗೆ ಕುಳಿತುಕೊಂಡು ಹಾಡಿ ಪಾಡುವಂತಹ ಕವಿಗಳೆಂಬ ಕತ್ತೆಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಬಂಧಿಸಿ ಘಟವ ಬಿಟ್ಟಿಹೆನೆಂದಡೆ ಅಭಿಸಂಧಿಯಲ್ಲಿ ನೋವುದು ಜೀವ. ಕಂದದೆ ಕುಂದದೆ ನಿಜದಲ್ಲಿ ಹೊಂದಿಹೆನೆಂದಡೆ ಸರ್ವೇಂದ್ರಿಯ ಬಂಧುವಿನೊಳಗಿದೆ ಜೀವ. ಒಂದ ಮರೆದು ಒಂದನರಿದು ಮುಂದಣ ಅಡಿಯ ಮೆಟ್ಟಿಹೆನೆಂದಡೆ ಸಂದೇಹದ ಸಂದಣಿಗೊಳಗಿದೆ ಜೀವ. ಗುರುವಿಂದ ಕಂಡೆಹೆನೆಂದಡೆ ಅದು ಧರ್ಮಬೀಜ, ನಾನು ಕರ್ಮಬೀಜ. ಲಿಂಗದಿಂದ ಕಂಡೆಹೆನೆಂದಡೆ ಚತುರ್ವಿಧಫಲ ಭವಬೀಜ. ಜ್ಞಾನದಿಂದ ಕಂಡೆಹೆನೆಂದಡೆ ನಾನು ಸಾವಯ, ಅದು ನಿರವಯ. ಎನಗಿನ್ನೇತರಿಂದ ಕೂಟರಿ ಈ ಭಕ್ತಿಜಗದಾಟದ ಕಾಟ. ನಿನ್ನ ಕೂಟವ ಕೂಡಿಹೆನೆಂಬ ಕೋಟಲೆಯ ಬಿಡಿಸಿ ಎನ್ನಲ್ಲಿ ನೀನು ಅಲೇಖನಾಗು. ಭಿನ್ನಭಾವವಿಲ್ಲದಂತೆ, ಅನ್ಯ ಅನನ್ಯವೆಂಬುದ ನಿನ್ನ ಭಾವದಲ್ಲಿಯೆ ಮರೆಸಿ ನಾನುಗೂಡಿ ನೀನು ಬಟ್ಟಬಯಲು, ಸದ್ಯೋಜಾತಲಿಂಗವೆ.
--------------
ಅವಸರದ ರೇಕಣ್ಣ
-->