ಅಥವಾ

ಒಟ್ಟು 17 ಕಡೆಗಳಲ್ಲಿ , 11 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ !
--------------
ಬಸವಣ್ಣ
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ, ಶರಣಾರ್ಥಿ ಎಂಬ ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು. ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು. ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡಹೊಡಕೊಂಡು ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ. ದಿಟಕ್ಕೆ ಬಂದಡೆ ಅಡ್ಡ ಮುಖವನಿಕ್ಕುವೆ- ಗರುಡಂಗೆ ಘಟಸರ್ಪನ ತೋರುವಂತೆ ! ಶಿವಶರಣೆಂದಡೆ ಕಿವಿ ಕೇಳದಂತಿಹೆನು, ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ. 312
--------------
ಬಸವಣ್ಣ
ಅಡ್ಡ ತ್ರಿಪುಂಡ್ರದ, ಮಣಿಮಕುಟವೇಷದ ಶರಣರ ಕಂಡಡೆ ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ. ಇವಿಲ್ಲದವರ ಕಂಡಡೆ ನಂಬೆ ಕೂಡಲಸಂಗಮದೇವಾ. 88
--------------
ಬಸವಣ್ಣ
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ? ಹೊಲೆಯ ಹೊರಕೇರಿಯಲ್ಲಿರುವನು, ಊರೊಳಗಿಲ್ಲವೆ ಅಯ್ಯಾ, ಹೊಲೆಯರು? ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೆ ಹೊಲೆಯ, ತಂದೆಗೆ ಬೈದವನೇ ಹೊಲೆಯ, ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ, ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ, ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ, ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ, ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ, ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ, ಲಿಂಗವ ಬಿಟ್ಟು ತಿರುಗುವವನೇ ಹೊಲೆಯ, ಧರ್ಮವ ಮಾಡದವನೇ ಹೊಲೆಯ, ಬಸವನ ಕೊಂದವನೇ ಹೊಲೆಯ, ಬಸವನ ಇರಿದವನೇ ಹೊಲೆಯ, ಲಿಂಗಪೂಜೆಯ ಮಾಡದವನೇ ಹೊಲೆಯ. ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ ಹೊರಕೇರಿಯವರಿಗೆ ಹೊಲೆಯರೆನಬಹುದೆರಿ ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು, ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು. ಗುರುಗಳಿಗೆ ಚಮ್ಮಾವುಗೆಯಾಯಿತ್ತು ಹೂಡಲಿಕ್ಕೆ ಮಿಣಿಯಾಯಿತ್ತು. ಹೊಡೆಯಲಿಕ್ಕೆ ಬಾರುಕೋಲವಾಯಿತ್ತು. ಬಂಡಿಗೆ ಮಿಣಿಯಾಯಿತ್ತು. ಅರಸರಿಗೆ ಮೃದಂಗವಾಯಿತ್ತು. ತೋಲು ನಗಾರಿಯಾಯಿತ್ತು. ತುಪ್ಪ ತುಂಬಲಿಕ್ಕೆ ಸಿದ್ದಲಿಕೆ, ಎಣ್ಣೆ ತುಂಬಲಿಕೆ ಬುದ್ದಲಿಕೆನಯಾಯಿತ್ತುಫ. ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ ನಾ ಶೀಲವಂತ ತಾ ಶೀಲವಂತ ಎಂದು ಶುದ್ದೈಸಿಕೊಂಡು ತಿಂದು ಬಂದು, ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು ಕಡಿಮೆ ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ ನಮ್ಮ ದಿಟ್ಟ ಅಂಬಿಗರ Zõ್ಞಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ_ ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು. ಭವವೆಂಬ ಮಹಾರಣ್ಯದೊಳು, ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು. ಕೋಪವೆಂಬ ಪರ್ಬುಲಿ ಮೊರೆವುತ್ತಿಪ್ಪುದು. ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು. ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು. ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು. ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು. ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು. ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು. ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು. ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು ವಿಷಯವೆಂಬ ಕೂಪ_ಬಳಸಬಾರದು. ಮೋಹವೆಂಬ ಬಳ್ಳಿ_ಕಾಲ ಕುತ್ತಬಾರದು. ಲೋಭವೆಂಬ ಮಸೆದಡಾಯುಧ_ಒರೆ ಉಚ್ಚಬಾರದು. ಇಂತಪ್ಪ ಕದಳಿಯ ಹೊಗಲರಿಯದೆ ದೇವದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು. ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು. ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ, ಮುಳ್ಳು ಮಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ; ಗುಹೇಶ್ವರನೆಂಬ ಲಿಂಗದ ನಿಜಸಮಾಧಿಯಲ್ಲಿ ನಿಂದು, ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !
--------------
ಅಲ್ಲಮಪ್ರಭುದೇವರು
ಈ ಭುವನದಲ್ಲಿ ಐದು ಜೀನಸಿನ ಐದು ವೃಕ್ಷ. ಆ ಐದು ವೃಕ್ಷಕ್ಕೆ ಐದೈದು ಜೀನಸಿನ ಐದೈದು ಶಾಖೆಗಳು. ಆ ಐದೈದು ಶಾಖೆಗಳಿಗೆ ಐದೈದು ಅಡ್ಡ ಶಾಖೆಗಳು. ಆ ಅಡ್ಡ ಶಾಖೆಗಳಿಗೆ ಅನಂತ ಜೀನಸಿನ ಅನಂತ ಎಲೆಗಳು. ಇಂತಪ್ಪ ಐದು ವೃಕ್ಷಗಳ ಬುಡ ಕೊನಿ ಒಳಗ ಮಾಡಿಕೊಂಡು, ಬುಡ ಕೊನಿ ಇಲ್ಲದ ಬಳ್ಳಿ ಆ ಆ ಜೀನಸಿಗೆ ತಾನು ಆ ಆ ಜೀನಸಾಗಿ ಆ ಗಿಡಯೆಂಬ ಗುರ್ತು ತೋರಿದ ಹಾಗೆ ಮುಸುಕಿಟ್ಟಿಹುದು. ಆ ಮುಸುಕಿಟ್ಟ ಬಳ್ಳಿಯ ಚಿಗುರೆಲೆಯನು ಹರಿಯದೆ, ಆ ವೃಕ್ಷದ ಕೊನರು ಡೊಂಕಿಸದೆ ಆ ಬುಡ ಕೊನಿಯಿಲ್ಲದ ಬಳ್ಳಿಯ ಕಡೆದೆಗೆದ ನಿಮ್ಮ ನಿಜಶರಣನು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ದುಡ್ಡಿನ ಲಿಂಗವು ಮೋಕ್ಷವ ಕೊಡಬಲ್ಲಡೆ, ಅಡ್ಡ ಬೀಳುವುದೇಕಯ್ಯಾ ಗುರುವಿಗೆ? ಜಡ್ಡಳಿದ ಭಕ್ತಂಗೆ ಭಕ್ತಿಯ ಜಡ್ಡು ಏಕಯ್ಯಾ ಗುರುವೆ, ಮಡ್ಡು ಡಿಂಡಿಮನಾದಪ್ರಿಯ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ ಭೇದಮಂ ಪೇಳ್ವೆ, ಅದೆಂತೆಂದಡೆ : ಒಂದು ಎರಡಾದ ಭೇದಮಂ ತಿಳುಹುವೆ. ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು ಎರಡು ನಾಮ ಅಂಗ-ಪ್ರಾಣದ ಹಾಂಗೆ. ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು. ಈ ಎರಡು ವಸ್ತುವನೊಳಕೊಂಡು ಆಚರಿಸುವ ಜ್ಞಾನಿಜಂಗಮದ ನಿಲವೆಂತೆಂದೊಡೆ : ಆವನಾನೊಬ್ಬನು ಭಸಿತಮಂ ಪಿಡಿದು ಅಯ್ಯಾ ಶರಣಾರ್ಥಿ ಎಂದು ಕರೆಯಲು, ಒಯ್ಯನೆ ನಿರೀಕ್ಷಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ. ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ. ಸಾಕ್ಷಿ : ವರ್ಣಿ ವಕಾಪೋಸೋವಾಸಿ ಶೂದ್ರೋಪಿ ಯದಿ ಭೂತಿದಃ| ಸಾ ಭೂತಿಃ ಸರ್ವಥಾ ಗ್ರಾಹ್ಯಾ ನೋ ಚೇದ್ಧ್ರೋಹಿ ಮಮೈವ ನಃ || ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು. ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ. ಲಿಂಗದೇವನು ಮನವ ನೋಡಬೇಕೆಂದು ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು ಇದರ ವಿಶ್ವಾಸವನರಿದು ವಿಚಾರಿಸಬೇಕು. ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ? ಚಿದಗ್ನಿ ಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು, ಆವನಾದರಾಗಲಿ ಶ್ರೀ ಮಹಾದೇವನ ನೆನವನೆ ದೇವನೆಂದುದಾಗಿ, ಭವಿಯಾದರಾಗಲಿ ಹೋಗಲಮ್ಮೆನು. ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು. ಭವಿಯಾದರೆ ಕರೆದು ಒಡಂಬಡಿಸೂದು. ಭಕ್ತನಾದರೆ ಬಿನ್ನಹವ ಕೈಕೊಂಬುದು. ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ, ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು. ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು. ಭಕ್ತನಾದರೆ ಬಿನ್ನಹವ ಕೈಕೊಂಡು ಆತನ ತ್ರಿವಿಧಕ್ಕೆ ತಾ ಕರ್ತನಾಗಿ ಆತನ ತನ್ನೊಳಗೆ ಇಂಬಿಟ್ಟುಕೊಂಬುದು ಜ್ಞಾನಜಂಗಮದ ಲಕ್ಷಣ. ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ : ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು ಉದಾಹರಣೆಯಿಂದ ಬಿನ್ನವಿಸುತ್ತಿರಲ ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು. ಇದಲ್ಲದೆ ಬಾಯಿಗೆ ಬಂದಂತೆ ನುಡಿದು ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ. ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು. ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು ಒಂದು ಪದಾರ್ಥವ ಕೈಕೊಂಬುದು. ಭಾವಜಂಗಮ ಇಂತೆರಡ ಮೀರಿ ತ್ರಿವಿಧರಹಿತವಾಗಿ ತೋರ್ಪುದು. ಗೋಣಿಯ ಮರೆಯ ಕೇಟೇಶ್ವರಲಿಂಗವು ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.
--------------
ಬೊಕ್ಕಸದ ಚಿಕ್ಕಣ್ಣ
ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ, ನೋಡಲಾಗದು. ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು. ದೇವಭಕ್ತರಿಲ್ಲದೂರು ಸಿನೆ ಹಾಳು, ಕೂಡಲಸಂಗಮದೇವಾ. 87
--------------
ಬಸವಣ್ಣ
ಇಂತಪ್ಪ ಶಿವಪ್ರಸಾದದ ಮಹಾಘನವನರಿಯದೆ ಒಬ್ಬರುಂಡು ಮಿಕ್ಕುದ ಬೆಕ್ಕುನಾಯಿಗಳು ತಿಂದಂತೆ ಒಬ್ಬ ಹೇಸಿಮೋರಿ ಕಾಶಿನಜಂಗಮವು ತಿಂದು ಮಿಕ್ಕಿದ ರೊಟ್ಟಿ ನುಚ್ಚಿಗೆ ಪ್ರಸಾದವೆಂದು ತಪ್ಪು ಮಾಡಿದವರಂತೆ ಅಡ್ಡ ಅಡ್ಡ ಬಿದ್ದು ಅವನ ಎಂಜಲವ ತೆಗೆದು ತಮ್ಮ ಅಗಲಾಗ ನೀಡಿಕೊಂಡು, ತಿಂಬ ಮೂಳ ಹೊಲೆಮಾದಿಗರಿಗೆ ಶಿವಪ್ರಸಾದಯೆಲ್ಲಿಹುದಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಮೂರು ಬೆಟ್ಟದ ತಪ್ಪಲಿನ ಮಧ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ, ಅಡ್ಡ ಬೆಟ್ಟದಲ್ಲಿ ದೊಡ್ಡಹುಲಿ ಹುಟ್ಟಿ ಹಾಯಿತ್ತು ಹಸುವ; ಉದ್ದಿಹ ಬೆಟ್ಟದಲ್ಲಿ ಭದ್ರಗಜ ಬಂದು ಹೊಯ್ಯಿತ್ತು ಎತ್ತ; ಮಧ್ಯದ ಬೆಟ್ಟದಲ್ಲಿ ಹುಟ್ಟಿದ ತೋಳ ಹಿಡಿಯಿತ್ತು ಕರುವಿನಕೊರಳ ಹುಲಿ ಗಜ ತೋಳನ ಉಡು ನುಂಗಿತ್ತ ಕಂಡೆ ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ.
--------------
ತುರುಗಾಹಿ ರಾಮಣ್ಣ
ಅಡಿಗಡಿಗೆ ಬಂದಡರುತಿರ್ಪೆ. ಕಡುಛಲ ನಿನಗೆ ಬೇಡ ಕಂಡಾ ! ಮೃಡನೆ, ಎನ್ನೊಡನೆ ನೀ ತೊಡರಿ ಸಸಿನೆ ಹೋಗಲಿರಯೆ. ಎಂತೆಂದಡೆ ನಾನಂಜುವನಲ್ಲ. ಸಂತತ ಘಾಸಿ ಮಾಡದೆ, ಕಂತುಹರ ಅಭಯಕರ, ಎನ್ನ ನೇಮಕ್ಕೆ ಅಡ್ಡ ಬರುತ್ತಿರದಿರು. ಒಡವೆ ಸವೆದರೊಡಲನೊಡ್ಡುವೆ. ಕಡಗುವಡೊಮ್ಮೆ ಹಳಚಿ ನೋಡು. ಬಡವನ ಕೈಯ ಕಡುಹ ನೋಡೆನ್ನೊಡೆಯ ಸಂಗಪ್ರಿಯ ಚೆನ್ನಬಂಕೇಶ್ವರಾ.
--------------
ಸುಂಕದ ಬಂಕಣ್ಣ
ಲಿಂಗಾಂಗಿಯೆಂದು ಪೇಳುವ[ವ]ನೇ ನೀ ಕೇಳು : ಬರಿದೆ ಲಿಂಗಮಂ ಕಟ್ಟಿ, ಅಂಗದಲ್ಲಿ ಧರಿಸಿ, ಮಂಗದೈವಂಗಳಿಗೆ ಅಡ್ಡ ಬಿದ್ದ ಬಳಿಕ ನಿನಗೆ ಲಿಂಗಾಂಗದೇಹವೆಲ್ಲೈತೆಲಾ ? ಲಿಂಗಾಂಗದೇಹದ ಲಕ್ಷಣವ ಪೇಳುವೆನು ಕೇಳೆಲಾ : ಲಿಂಗಾಂಗದೇಹಿಯಾದ ಬಳಿಕ, ಲಿಂಗ ಪೋದಡೆ ಅಂಗ ಬಹಿಷೆ* ; ಅದರಿಂದ ಪೋಗಬೇಕು. ಎಲ್ಲಾ ದೇವರಿಗೊಲ್ಲಭನಾದ ದೇವರು ಲಿಂಗವು. ಅಂತಪ್ಪ ಲಿಂಗವು ನಿನ್ನ ಕರಸ್ಥಲ[ಕೆ] ಉರಸ್ಥಲಕೆ ಬಂದ ಬಳಿಕ ಪರದೈವದ ಹಂಗೇಕಲಾ ? ಮನೆಯಲ್ಲಿ ಪರುಷವ ಇಟ್ಟುಕೊಂಡು ಹೆರರ ಪದಾರ್ಥಕ್ಕೆ ಹಲ್ಲು ತೆರೆವನಂದದಿ ಗುರುವು ಕೊಟ್ಟ ಲಿಂಗವು ಅಂಗದಲ್ಲಿ ಇದ್ದ ಬಳಿಕ ಗುರುಮಂತ್ರವು ಶ್ರವಣದಲ್ಲಿ ಉಪದೇಶವಾದ ಬಳಿಕ, ಗುರುವಾಕ್ಯ ಜಿಹ್ವೆಯಲ್ಲಿ ಉದ್ಭವಿಸಿದ ಬಳಿಕ, ಗುರುಪ್ರಣುತವು ಪಣೆಗೆ ಲಿಪ್ತವಾದ ಬಳಿಕ, ಇದಂ ಮರೆದು ಮಾಯಾ ಮೋಹಕೊಳಗಾಗಿ, ಅನಂತ ಪ್ರಪಂಚದೊಳು ತೇಲಾಡಿ, ತನಗೆ ವಿಪತ್ತು ಬಂದಡೆ ಕೋಟಿ ಶೀಲವಂ ಕೇಳುವ ಹೇಳುವ ತಾಟಕ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಪಂಚಭೂತಿಕತತ್ತ್ವಂಗಳೆಂಬ ಬ್ರಹ್ಮಾಂಡದೊಳಗೆ ತನುತ್ರಯಂಗಳೆಂಬ ಅಡ್ಡ ಬೆಟ್ಟ. ಗುಣತ್ರಯಗಳೆಂಬ ಘೋರಾರಣ್ಯ. ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ತೋಹುಗಳು. ಆಗು ಹೋಗು ದೇಗೆಗಳೆಂಬ ಕುಳಿ, ತೆವರು. ಪ್ರಕೃತಿತ್ರಯಂಗಳೆಂಬ ಮೃಗ, ಮಲತ್ರಯಂಗಳೆಂಬ ಮೇಹ ಮೇದು, ವಿಷಯಗಳೆಂಬ ಜಲವ ಕುಡಿದು, ಪರಿಣಾಮಿಸುತ್ತಿದೆ ನೋಡಾ. ಜೀವವೆಂಬ ಕಾಡಬೇಡನು ತೋಹಿನೊಳಗಣ ಮೃಗದ ಬೇಂಟೆಗೆ ಹೋದರೆ ತೋಹಿನೊಳಗಣ ತಳವಾರರು ಹಿಡಿದೊಯ್ದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->