ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು ! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಅತ್ತಲಿತ್ತ ಸುತ್ತಿ ಬಳ ವ್ಯರ್ಥವಪ್ಪ ಮನವ ನಿಮ್ಮ ಚಿತ್ತದತ್ತ ಧ್ಯಾನಿಸಿ ಇರಿಸಯ್ಯ. ಇನ್ನು ನಿಮ್ಮತ್ತಲಲ್ಲದೆ ಅತ್ತತ್ತ ಸುತ್ತಿ ಬಂದಡೆ ವಿಚಿತ್ರಮೂಲ ನಿಮ್ಮಾಣೆಯಯ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಚಿದ್ರೂಪ ಚಿದಾನಂದ ನಿರಾಮಯ ನಿಶ್ಚಂತ ನಿರಾಕುಳ ನಿರ್ಭರಿತವಾದ ಶರಣನು, ನಿತ್ಯನಿರಾಳದಲ್ಲಿ ನಿಂದು, ನನ್ನನೂ ಅರಿಯದೆ, ನಿನ್ನನೂ ಅರಿಯದೆ, ತಾನು ತಾನೆಂಬುದನರಿಯದೆ ಅತ್ತತ್ತ ನಿರಾಮಯನೆನಿಸಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು ! ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು. ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.
--------------
ಅಮುಗೆ ರಾಯಮ್ಮ
ಆಕಾರವೆಂಬೆನೆ ನಿರಾಕಾರವಾಗಿದೆ ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ. ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಕಿನ್ನರಿ ಬ್ರಹ್ಮಯ್ಯ
ಇಪ್ಪತ್ತೆರಡು ಸಾವಿರ ಇಚ್ಛಾನಾಡಿಯಲ್ಲಿ ತಪ್ಪದೆ ರಮಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿ ಅದಂತಿಲಿ ದ್ವಾರಮೊಂಬತ್ತರಲ್ಲಿ ನಾಯಕದ್ವಾರವನರಿಯಬೇಕು. ಯೋಗಿಗಳು ಬೇರೆ ಜಪ ನಿಮಗೇಕೆ? ಹೇಳಿರೇ? ಹಂಸ ಹಂಸಾಯೆಂಬ ಜಪವು ಸಂಪೂರ್ಣವಾಗಿ ಅತ್ತತ್ತ ಇತ್ರ್ತೆರಕೆ ಕಂಪಿಸದೆ ಇದ್ದಡೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕೂರ್ತು ತತ್ವಮಸಿಯೆಂಬ ಇತ್ತಲಿದ್ದರ್ಥ ಒಯ್ಯುವನವ್ವಾ.
--------------
ಸಿದ್ಧರಾಮೇಶ್ವರ
ಭಕ್ತ ಮಹೇಶ್ವರನಲ್ಲಿ ಅಡಗಿ, ಮಹೇಶ್ವರ ಪ್ರಸಾದಿಯಲ್ಲಿ ಅಡಗಿ, ಪ್ರಸಾದಿ ಪ್ರಾಣಲಿಂಗಿಯಲ್ಲಿ ಅಡಗಿ, ಪ್ರಾಣಲಿಂಗಿ ಶರಣನಲ್ಲಿ ಅಡಗಿ, ಶರಣ ಐಕ್ಯನಲ್ಲಿ ಅಡಗಿ, ಐಕ್ಯ ನಿರಂಜನದಲ್ಲಿ ಅಡಗಿ ಅತ್ತತ್ತ ನಿರಾಕಾರ ನಿರಾಕುಳ ನಿರಂಜನ ನಿಃಶೂನ್ಯ ನಿರವಯಲಿಂಗ ತಾನೇ ನೋಡಾ. ಮನೋಲಯವಾಯಿತ್ತು, ಜ್ಞಾನ ನಿಃಶೂನ್ಯವಾಯಿತ್ತು, ಭಾವ ನಿಷ್ಪತಿಯಾಯಿತ್ತು, ನೆನಹು ನಿರವಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತಿರೂಪನು ಬಸವ, ನಿತ್ಯರೂಪನು ಬಸವ, ಮತ್ತಾನಂದಸ್ವರೂಪ ಬಸವಣ್ಣನು. ಸತ್ತುರೂಪನು ಬಸವ, ಚಿತ್ತುರೂಪನು ಬಸವ; ಎತ್ತೆತ್ತ ನೋಡಿದಡೆ ಅತ್ತತ್ತ ಪರಿಪೂರ್ಣನಾಗಿಪ್ಪ ಬಸವಣ್ಣನಿಂ ನಿತ್ಯಸುಖಿಯಾಗಿರ್ದೆನೈ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ, ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
--------------
ಬಸವಣ್ಣ
ಸ್ಫಟಿಕದ ಘಟದಂತೆ ಒಳಹೊರಗಿಲ್ಲ ನೋಡಾ ! ವಿಗಡಚರಿತ್ರಕ್ಕೆ ಬೆರಗಾದೆನು. ನೋಡುವಡೆ ಕಾಣಬರುತ್ತಿದೆ, ಮುಟ್ಟುವಡೆ ಕೈಗೆ ಸಿಲುಕದು ಹೊದ್ದುವಡೆ ಸಮೀಪ, ಸಾರಿದಡೆ ಅತ್ತತ್ತ ತೋರುತ್ತಿದೆ. ಆಕಾರ ನಿರಾಕಾರವ ನುಂಗಿ ಬಯಲ ಸಮಾಧಿಯಲ್ಲಿ ಸಿಲುಕಿತ್ತು ನೋಡಾ ! ದರ್ಶನದಿಂದ ಅಮೃತಾಹಾರವಾಯಿತ್ತು, ಬೆರಸಿದಡೆ ಇನ್ನೆಂತೊ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ. ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು. ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ. ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ. ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ. ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಶೂನ್ಯ ಮಹಾಶೂನ್ಯವಿಲ್ಲದಲ್ಲಿಂದತ್ತತ್ತ, ನಾದ ಬಿಂದು ಕಳೆಗಳಿಲ್ಲದಲ್ಲಿಂದತ್ತತ್ತ, ಸದಾಶಿವ ಈಶ್ವರ ವಿದ್ಯೇಶ್ವರರೆಂಬ ಗಣೇಶ್ವರರಿಲ್ಲದಲ್ಲಿಂದತ್ತತ್ತ, ಗಂಗಾವಾಲುಕಸಮಾರುದ್ರರುಗಳಿಲ್ಲದಲ್ಲಿಂದತ್ತತ್ತ, ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರಿಲ್ಲದಲ್ಲಿಂದತ್ತತ್ತ, ಕಾಲ ಕರ್ಮ ಪ್ರಳಯಂಗಳಿಲ್ಲದಲ್ಲಿಂದತ್ತತ್ತ ಅತ್ತತ್ತ, ಮುನ್ನ ನಿಮ್ಮ ನಿಜದಲ್ಲಿ ನೀವೇ ಇರ್ದಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
-->