ಅಥವಾ

ಒಟ್ಟು 14 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದೊಂದು ನಾಡಿ ಮೂಲಾಧಾರ ಮೊದಲಾಗಿ ಬ್ರಹ್ಮರಂಧ್ರ ಕಡೆಯಾಗಿ ಲತೆಯ ಹಾಗೆ ಕೆಳಗೆ ಮೇಲೆ ಸುತ್ತಿಕೊಂಡಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ. ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ. ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ, ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ.
--------------
ಬಿಬ್ಬಿ ಬಾಚಯ್ಯ
ಕಲ್ಲುದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು. ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು. ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ. ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ, ಮಣ್ಣ ದೇವರು ಎಂದು ಪೂಜಿಸಿ, ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು. ಆದಂತಿರಲಿ, ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು. ಅದೊಂದು ವ್ಯಾಪಾರಕ್ಕೊಳಗಾಗಿ, ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು. ಸಲ್ಲದು ಶಿವನಲ್ಲಿ. ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ. ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ, ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ, ಅನೇಕ ಪೂಜೆಯಲ್ಲಿ. ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ. ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ. ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು. ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು. ಆ ಹಾದಿಗೊಂಡು ಹೋಗಿ ಅವರ ಪಾದವಕಂಡು, ಕೆಟ್ಟು ಬಟ್ಟಬಯಲಾದೆ ನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ ಸಂದೇಹ ಮುಂದುಗೊಂಡಿಪ್ಪುದು ನೋಡ! ಅಂದೊಂದು ಪರಿ, ಇಂದೊಂದು ಪರಿಯೆ? ಗುರುಲಿಂಗಜಂಗಮ ಅಂದೊಂದು ಪರಿ, ಇಂದೊಂದು ಪರಿಯೆ? ಪಾದೋದಕ ಪ್ರಸಾದ ಅಂದೊಂದು ಪರಿ, ಇಂದೊಂದು ಪರಿಯೆ? ಶರಣಲಿಂಗಸಂಬಂಧ ಅಂದೊಂದು ಪರಿ, ಇಂದೊಂದು ಪರಿಯೆ? ಅರಿವು ಆಚರಣೆ ಅಂದೊಂದು ಪರಿ, ಇಂದೊಂದು ಪರಿಯೆ? ಸ್ಥಲಕುಲಂಗಳು ಅಂದೊಂದು ಪರಿ, ಇಂದೊಂದು ಪರಿಯೆ? ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ, ಇಂದೊಂದು ಪರಿಯೆ?
--------------
ಆದಯ್ಯ
-->