ಅಥವಾ

ಒಟ್ಟು 17 ಕಡೆಗಳಲ್ಲಿ , 7 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ ಷಟ್‍ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆರಿಱ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು `` ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆರಿ' ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರುಱಱ ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟ್‍ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕುಲದ್ಲಯೂ ಅಧಿಕ ಜ್ಞಾನದಲ್ಲಿಯೂ ಅಧಿಕನಾಗಲಾಗಿ, ಆ ಕುಲೀನ ಜ್ಞಾನವಂತನಲ್ಲಿ ಸಮರಸ ಸಲ್ಲದು ನೋಡಾ, ಗುರುವೆ. ಶಿವಶಕ್ತಿಯೆ ಸತ್ಕುಲ, ಶಿವಧ್ಯಾನವೆ ಸತ್ಕುಲ, ಶಿವಪೂಜೆಯೆ ಸತ್ಕುಲ ನೋಡಾ ಗುರುವೆ. ಶಿವಕಥಾವರ್ಣನವೆ ಸತ್ಕುಲ, ಶಿವಗೋಷಿ*ಯೆ ಸತ್ಕುಲ ನೋಡಾ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ.
--------------
ಸಿದ್ಧರಾಮೇಶ್ವರ
ಶ್ರೀಗುರುವಿನ ಶ್ರೀಚರಣದಲ್ಲಿ ಅರುವತ್ತೆಂಟು ತೀರ್ಥಗಳು ನೆಲೆಸಿಪ್ಪವಾಗಿ ಎಲ್ಲಾ ತೀರ್ಥಗಳಿಗೆಯೂ ಗುರುಪಾದತೀರ್ಥವೆ ಅಧಿಕ ನೋಡಾ. ಗುರುಕರುಣದಿಂದ ದೀಯತೇ ಎಂಬ ಸುಜ್ಞಾನವ ಹಡದು ಗುರುಪಾದೋದಕದಿಂದ ಕ್ಷೀಯತೇ ಎಂದು ಮಲತ್ರಯವ ಕ್ಷಯವ ಮಾಡುವುದು. ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನ ತೇಜಸಃ ಗುರುಪಾದೋದಕಂ ಪೀತ್ವಾ ಭವೇತ್ ಸಂಸಾರನಾಶನಂ ಇಂತೆಂದುದಾಗಿ, ಗುರುಕರುಣಾಮೃತರಸಪಾದೋದಕದಲ್ಲಿ ಸುಜ್ಞಾನಾನಂದ ರಸಮಯನಾಗಿ ಬೆರಸಿ ಬೇರಿಲ್ಲದಿರ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನಯನದಾಹಾರವ ಜಂಗಮವ ನೋಡಿಸುವೆನು, ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು, ಘ್ರಾಣದಾಹಾರವ ಜಂಗಮವ ವಾಸಿಸುವೆನು, ಜಿಹ್ವೆಯಾಹಾರವ ಜಂಗಮವನೂಡಿಸುವೆನು, ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು, ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು, ಸಕಲಪದಾರ್ಥಂಗಳ ನೀಡುವೆನು, ಕೂಡಲಸಂಗಾ ನಿಮ್ಮ ಶರಣರಿಗೆ. 430
--------------
ಬಸವಣ್ಣ
ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ ಶ್ರೀಗುರುವಿನ ಕರುಣಾಕಟಾಕ್ಷದಿಂದ ಪ್ರಾಣಲಿಂಗೋಪದೇಶವ ಪಡೆದು ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ ಆ ಲಿಂಗವನಂಗದಲ್ಲಿ ಧರಿಸಿಕೊಂಡು ಅಂಗವೇ ಲಿಂಗ ಲಿಂಗವೇ ಅಂಗ ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ ಲಿಂಗವಾದ ಬಳಿಕ ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು ಬೋರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾಗಿ ಮುಕ್ತರಾದೆವೆಂಬಿರಿ. ಶಿವಶಿವಾ, ಆತ್ಮನನು ಪರಮಾತ್ಮನನು ಶ್ರೀ ಗುರುಸ್ವಾಮಿ ಒಂದು ಮಾಡಿ ಇದೇ ನಿನ್ನ ನಿಜತತ್ತ್ವವೆಂದು ಅರುಹ ಹೇಳಿ ತೋರಿಸಿಕೊಟ್ಟ ಬಳಿಕ ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ ಲಿಂಗವನರಿಯದೆ ಲಿಂಗಬಾಹಿರರಾದ ದ್ವಿಜರನು ಯೋಗಿಯನು ಸನ್ಯಾಸಿಯನು ಗುರುವೆಂದು ಭಾವಿಸಬಹುದೆ ? ಶಿವ ಶಿವಾ, ಅದು ಗುರುದ್ರೋಹ. ಪರಶಿವಮೂರ್ತಿಯಾದ ಗುರುಸ್ವಾಮಿಯು ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ ಸಮಸ್ತಾಗಮಂಗಳಿಗೆಯೂ ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ ವಿಶೇಷವೆಂದು, ಅಧಿಕವೆಂದು ಹೇಳಿ ತೋರಿ ಕೊಟ್ಟ ಬಳಿಕ ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು ಗಾಣಪತ್ಯವೆಂದು ¸õ್ಞರವೆಂದು ಕಾಪಾಲಿಕವೆಂದು ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ, ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು, ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು, ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ ತೋರಿ ಕೊಟ್ಟ ಬಳಿಕ ಅದೆಂತೆಂದಡೆ ಶಿವಧರ್ಮೇ_ ದರ್ಶನ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ ಗಣಾಪತ್ಯಂ ಚ ¸õ್ಞರಂ ಚ ಕಾಪಾಲಿಕಮಿತಿ ಸ್ಮೃತಮ್ ಮತ್ತಂ ಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾ ಎಂಬುದಾಗಿ, ಇನ್ನು ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ, ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ, ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ ? ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ. ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ ತೋರಿ ಹೇಳಿ ಕೊಟ್ಟನಲ್ಲದೆ ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ. ಶ್ರುತಿ ``ಏಕೋ ದೇವೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು. ಶ್ರುತಿ ``ಏಕೋ ಧ್ಯೇಯಃ' ಎಂದು ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು. ಶ್ರುತಿ ``ನಿರ್ಮಾಲ್ಯಮೇವ ಭಕ್ಷಯಂತಿ' ಎಂದುದಾಗಿ ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ ? ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ: ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು: ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ ? ಕೇಳೋ: ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು. ಬ್ರಹ್ಮವಿಷ್ಣು ಮೊದಲಾದವರೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು. ಮತ್ಸ್ಯಕೇಶ್ವರ ಕೂರ್ಮೇಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ ಎಂಬ ದಶಾವತಾರಗಳಲ್ಲಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚಾನೆಯಂ ಮಾಡಿದರು. ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ. ಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್ ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂ ಮತ್ತಂ ಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್ ಮತ್ತಂ ಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃ ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ: ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ ಎಂಬ ಲಿಂಗಂಗಳಂ ಪ್ರತಿಷಿ*ಸಿ ಶಿವಲಿಂಗಾರ್ಚನೆಯಂ ಮಾಡಿದರು. ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು. ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ ? ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ. ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ, ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ. ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ, ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ, ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ, ಮೊದಲಾದ ಋಷಿಜನಂಗಳೆಲ್ಲ ಶಿವಲಿಂಗಾರ್ಚನೆಯ ಮಾಡಿದರು. ಬ್ರಹ್ಮ ವಿಷ್ಣು ಮೊದಲಾದ ದೇವಜಾತಿಗಳೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ದೃಷ್ಟವ: ಮತ್ಸ್ಯೇಶ್ವರ, ಕೂರ್ಮೇಶ್ವರ, ನಾರಸಿಂಹೇಶ್ವರ, ರಾಮೇಶ್ವರನೆಂದು ದಶಾವತಾರಂಗಳಲ್ಲಿ ವಿಷ್ಣು ಶಿವಲಿಂಗವ ಪ್ರತಿಷೆ*ಯ ಮಾಡಿದುದಕ್ಕೆ ವೇದಶಾಸ್ತ್ರಾಗಮಪುರಾಣಂಗಳ ಕೇಳಿ ನೋಡಿರೆ, ಅದೆಂತೆಂದಡೆ: ಯಂ ಯಂ ಕಾಯಯತೇ ಕಾಮ ತಂ ತಂ ಲಿಂಗಾರ್ಚನಂ ಲಭೀತ್ ನ ಲಿಂಗೇನವಿನಾ ಸಿದ್ಧ ದುರ್ಲಭಂ ಪರಮಂ ಪದಂ ಎಂಬುದಾಗಿ ಮತ್ತಂ; ಅಗ್ನಿಹೋತ್ರಶ್ಚ ವೇದಶ್ಚ ಯಜ್ಞಶ್ಚ ಬಹುದಕ್ಷಿಣಾಂ ಶಿವಲಿಂಗರ್ಚನಂ ಶ್ವೇತ ಕೋಟ್ಯೋಂಸಿನಾಪಿನೋ ಸಮಃ ಎಂಬುದಾಗಿ, ಇಂದ್ರ ಮೊದಲಾದ ದೇವಜಾತಿಗಳೆಲ್ಲರು ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರು ಮರುಳರೆ, ನೀವೇ ಬುದ್ಧಿವಂತರೆ? ಕೇಳಿರೇ, ಕೆಡದಿರಿ ಕೆಡದಿರಿ, ಶ್ರೀ ಗುರುವಾಕ್ಯವನೆ ನಂಬಿ, ಗುರು ಲಿಂಗ ಜಂಗಮವನೊಂದೆ ಎಂದು ನಿಶ್ಚೈಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಿನ್ನಾವುದು ಅಧಿಕವಿಲ್ಲ. ಗುರುಲಿಂಗಜಂಗಮದಲ್ಲಿಯ ಭಕ್ತಿಯೇ ಭಕ್ತಿ, ಅರ್ಚನೆಯೇ ಅರ್ಚನೆ, ಸಂಗವೇ ಶಿವಯೋಗ, ಇದು ಸತ್ಯ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು. ನೈಷೆ*ಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು. ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು ಶ್ರೀವಿಭೂತಿಯ ಕಾಣುತ್ತಲೆ. ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ. ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ. ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ ಅನುಷಾ*ನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ. ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ. ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ. ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು. ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ. ಸಾಕ್ಷಿ :``ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||'' ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು ಧರಿಸಿ ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ | ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||'' ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು. ವೇದಶಾಸ್ತ್ರ ಪುರಾಣಾಗಮಂಗಳನರಿದ ಸಂಬಂಧಿಗಲ್ಲದೆ ವೀರಶೈವ ಅಳವಡದು, ಅದೇನು ಕಾರಣ? ಅರಿದು ಭವಿಪಾಕವೆಂದು ಕಳೆದ ಬಳಿಕ ಜಂಗಮಕ್ಕೆ ನೀಡಿದರೆ ಅಧಿಕ ಪಾತಕ. ಅದೆಂತೆಂದರೆ:ತನ್ನ ಲಿಂಗಕ್ಕೆ ಸಲ್ಲದಾಗಿ, ಆ ಜಂಗಮಕ್ಕೆ ಸಲ್ಲದು. ಆ ಜಂಗಮಕ್ಕೆ ಸಲ್ಲದಾಗಿ, ತನ್ನ ಲಿಂಗಕ್ಕೆ ಸಲ್ಲದು. ಲಿಂಗಭೋಗೋಪಭೋಗೀ ಯೋ ಭೋಗೇ ಜಂಗಮವರ್ಜಿತಃ ಲಿಂಗಹೀನಸ್ಸ ಭೋಕ್ತಾ ತು ಶ್ವಾನಗರ್ಭೇಷು ಜಾಯತೇ ಇದು ಕಾರಣ ಕೂಡಲಚೆನ್ನಸಂಗಮದೇವಾ ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
--------------
ಚನ್ನಬಸವಣ್ಣ
ತರುಗಳ ಮುರಿದು ಗಗನಕ್ಕೀಡಾಡುವ ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ ಕೆಡಹುತಿಪ್ಪ ವ್ಯಾಧಿ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು. ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ? ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ; ಈ ಎರಡರ ಆದಿಯಿಂದತ್ತತ್ತ ಕಾಣಾ. ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.
--------------
ಸಿದ್ಧರಾಮೇಶ್ವರ
ಗುರುವೇ ಪರಶಿವನು. ಗುರುವೇ ಸಕಲಾಗಮಮೂರ್ತಿ. ಗುರುವೇ ಸಕಲ ವಿದ್ಯಾಸ್ವರೂಪನು. ಗುರುವೇ ಸಕಲ ಮಂತ್ರಸ್ವರೂಪನು. ಗುರುವೇ ಕಲ್ಪವೃಕ್ಷವು, ಕಾಮಧೇನುವು. ಗುರುವೇ ಪರುಷದ ಖಣಿ, ತವನಿಧಿ. ಗುರುವೇ ಕರುಣರಸಾಬ್ಧಿ. ಗುರುವಿನಿಂದಧಿಕ ದೈವವಿಲ್ಲ. ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ. ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ. ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ. ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ. ಸಾಕ್ಷಿ : ''ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ | ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ||'' ಎಂಬುದಾಗಿ, ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ ಎನ್ನ ಅಱುಹಿನಲ್ಲಿ ಗುರು ಎನ್ನ ಪ್ರಾಣದಲ್ಲಿ ಲಿಂಗ ಎನ್ನ ಜ್ಞಾನದಲ್ಲಿ ಜಂಗಮ ಎನ್ನ ಜಿಹ್ವೆಯಲ್ಲಿ ಪಾದೋದಕ ಎನ್ನ ನಾಸಿಕದಲ್ಲಿ ಪ್ರಸಾದ ಎನ್ನ ತ್ವಕ್ಕಿನಲ್ಲಿ ವಿಭೂತಿ ಎನ್ನ ನೇತ್ರದಲ್ಲಿ ರುದ್ರಾಕ್ಷಿ ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ ಇಂತಿವು ಅಷ್ಟಾವರಣಸ್ವರೂಪವಾಗಿ ಎನ್ನೊಳು ತನ್ನ ಕರುಣಕೃಪೆಯ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಜನ್ಮಾಂತರಸಹಸ್ರೇಷು ತಪೋಧ್ಯಾನಸಮಾಧಿಭಿಃ ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ ಇಂತೆಂದುದಾಗಿ, ಅನೇಕ ಜನ್ಮದ ಪಾಪಂಗಳು ಸವೆದು, ಶ್ರೀಗುರುಕಾರುಣ್ಯಮಂ ಪಡೆದು ಶಿವಭಕ್ತನಾಗಿ ಶಿವಲಿಂಗವಂ ಧರಿಸಿ, ಶಿವಲಿಂಗದರ್ಶನಸ್ಪರ್ಶನಂ ಮಾಡಿ ಇಷ್ಟಲಿಂಗ ಪ್ರಾಣಲಿಂಗಸಂಬಂಧ, ಅಂತರಂಗ ಬಹಿರಂಗ ಸರ್ವಾಂಗವಾದ ಬಳಿಕ ಮರಳಿ ಆತ್ಮತತ್ತ್ವವ ವಿಚಾರಿಸಿ, ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾದೆವೆಂಬಿರಿ. ಅದೇನು ಕಾರಣ, ಆತ್ಮನೇ ಪ್ರಾಣ, ಪರಮಾತ್ಮನೇ ಶಿವಲಿಂಗ. ಇಂತೀ ಪ್ರಾಣಾತ್ಮನನೂ ಪರಮಾತ್ಮನಪ್ಪ ಶಿವಲಿಂಗವನೂ ಶ್ರೀಗುರು ಯೋಗವ ಮಾಡಿ ತೋರಿಕೊಟ್ಟು, ಕರುಣಿಸಿದ ಬಳಿಕ ಗುರ್ವಾಜ್ಞೆಯಂ ಮೀರಿ, ದ್ವಿಜರನು ಸನ್ಯಾಸಿಯನು ಶ್ರೀಗುರ್ವಾಜ್ಞೆಯನರಿಯದ, ಶಿವನ ಮಹಾತ್ಮೆಯನರಿಯದ ಶಿವಲಿಂಗವೇ ಪರಮಾತ್ಮನೆಂಬ ತಾತ್ಪರ್ಯವನರಿಯದ ಈ ಭ್ರಷ್ಟರ ಮರಳಿ ಮರಳಿ ಗುರುವೆಂದು ಮಾಡಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ! ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರು ಸರ್ವಧರ್ಮಂಗಳಿಗೆಯೂ ಅಧಿಕಾಧಿಕವೆಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಆತ್ಮಯೋಗವೆಂದು ವೈದಿಕವೆಂದು ಸಕಲವೆಂದು ನಿಷ್ಕಲವೆಂದು ವೈಷ್ಣವವೆಂದು ಮಾಯಾವಾದಿಗಳೆಂದು ಚಾರ್ವಾಕರೆಂದು ಬೌದ್ಧರೆಂದು ಇತ್ಯಾದಿ ಭಿನ್ನದರ್ಶನಂಗಳಲ್ಲಿ ಧರ್ಮಶಾಸ್ತ್ರಂಗಳ ಕೇಳಿ ಮರಳಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರುವೇ ಪರಶಿವನಾಗಿ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂದುದಾಗಿ, `ಶಿವ ಏಕೋ ಧ್ಯೇಯಃ ಎಂದುದಾಗಿ, ಶಿವನನೇ ಪೂಜಿಸಿ ಶಿವನನೇ ಧ್ಯಾನಿಸಿ _ಎಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಶಿವನಿರ್ಮಾಲ್ಯಕಂ ಶುದ್ಧಂ ಭುಂಜೀಯಾತ್ ಸರ್ವತೋ ದ್ವಿಜ ಅನ್ಯದೈವಸ್ಯ ನಿರ್ಮಾಲ್ಯಂ ಭುಕ್ತ್ಯಾಚಾಂದ್ರಾಯಣಂ ಚರೇತ್ ಇಂತೆಂದುದಾಗಿ, ಪ್ರಸಾದವ ಕರುಣಿಸಿದನು ಶ್ರೀಗುರು. ಆ ಶ್ರೀಗುರುವ ಭ್ರಷ್ಟನ ಮಾಡುವಿರಿ, ಗುರು ನಿಮ್ಮಿಚ್ಛೆಗೆ ಬಾರನಾಗಿ, ಪೂರ್ವಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ದೂರ್ವಾಸ, ಅಗಸ್ತ್ಯ. ಭೃಗು, ದಧೀಚಿ, ಮಾರ್ಕಂಡೇಯ ಮೊದಲಾದ ಋಷಿಜನಂಗಳೆಲ್ಲರೂ ಶಿವಲಿಂಗಪ್ರತಿಷೆ*ಯ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರು ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಮತ್ತೆ ವಿಷ್ಣು ಬ್ರಹ್ಮ ಇಂದ್ರ ಮೊದಲಾಗಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಮತ್ಸ್ಯಕೇಶ್ವರ, ಕೂರ್ಮೇಶ್ವರ, ಮಾಹೇಶ್ವರ, ರಾಮೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರುಗಳೆಲ್ಲರು ಮರಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳು ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಕಾಶೀಪುರದಲ್ಲಿ ಇಂದ್ರೇಶ್ವರ, ಬ್ರಹ್ಮೇಶ್ವರ, ಯಕ್ಷಸಿದ್ಧೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು, ಕೆಡದಿರು. ತಾರಕಾಸುರ ರಾವಣಾದಿಗಳೆಲ್ಲರೂ ಶಿವಲಿಂಗಪ್ರತಿಷೆ*ಯಂ ಮಾಡಿ, ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಇದು ಕಾರಣ, ಶ್ರೀಗುರುವೆ ಅಧಿಕ, ಶಿವಲಿಂಗವೇ ಅಧಿಕ ಶಿವಲಿಂಗಾರ್ಚನೆಯೇ ಅಧಿಕ, ಆ ಸಂಗವೇ ಸಂಗ, ಶ್ರೀಗುರುಲಿಂಗಜಂಗಮದ ಪೂಜೆಯೇ ಪೂಜೆ, ಅರ್ಚನೆಯೇ ಅರ್ಚನೆ, ಆ ಸಂಗವೇ ಸಂಗ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->