ಅಥವಾ

ಒಟ್ಟು 13 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಭಾವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಕರ್ತಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ? ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತೃಣವತಿಶುಷ್ಕವಾದ ಪರ್ಣ ತರುವ ಹಿಡಿದ ಅನಲನ ನಡುವೆ ಎಡಗೈಯ ಬಲ್ಲದೆ ? ನಿರ್ಮಲ ಸುಚಿತ್ತನ ಪರಮವಿರಕ್ತನ ಭಾವ, ವಸ್ತುವ ಮುಟ್ಟಿದಲ್ಲಿ, ತ್ರಿವಿಧಮಲಕ್ಕೆ ಸಿಕ್ಕುವನೆ ? ಅವು ತನ್ನೊಳಗಿರ್ದಡೂ ತಾನವರೊಳಗಿರ್ದಡೂ ಗಾಜಿನ ಕುಪ್ಪಿಗೆಯ ನೀರೆಣ್ಣೆಯಂತೆ, ಸ್ಫಟಿಕದ ಮಧ್ಯದಲ್ಲಿ ಬಹುವರ್ಣವಾದ ಹೊರೆಯ ತೋರಿ ಹಿಡಿವವನಂತೆ, ಅದು ಸ್ವಯವಲ್ಲ, ಇದು ಸ್ವಯವಲ್ಲದಿಪ್ಪ ಬಾಹ್ಯಕ್ರಿಯಾವರ್ತಕನ ಲಕ್ಷಣದ ಬ್ಥಿತ್ತಿಯ ತೆರ ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು ಮುಂತಾದ ಫಲಾಹಾರಮಂ ಕೊಂಡು, ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು, ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ. ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ, ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು, ಇವರಿಗೆ ಅರಿಕೆಯಿಲ್ಲವೆಂದೆ. ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ. ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ ಮಳೆಯ ಗಳು ಬೀಸಿ, ಕೆಂಡದ ಹಂಜರಗಟ್ಟು ಕಟ್ಟಿ, ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು. ಅನಿಲನ ಹುಲ್ಲು ಹೊದಿಸಿ ಮನೆ ಹೊಲಬಾಯಿತ್ತು. ನೆಲಗಟ್ಟು ಶುದ್ಧವಿಲ್ಲಾಯೆಂದು ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು ಆ ಮನೆಗೆ ಒಕ್ಕಲು ಬಾರ.
--------------
ಗೋರಕ್ಷ / ಗೋರಖನಾಥ
ಅನಲನ ಬಣ್ಣದ ಉಲುಹಿನ ರೂಹಿನ ತೋರಿಕೆ ನಿಶ್ಚಯ ದಿಟವೆಂದು ಎಳೆಯ ಕತ್ತಲೆ ಹಳೆಯ ಬಣ್ಣದ ಬಳಿ ವಿಡಿದಾಡುವಿರಲ್ಲಾ! ಭವಲೇಪ ಲೋಪವಿಲ್ಲವಾಗಿ ಪುಣ್ಯಪಾಪ ಜನಿತರು ಹಿರಿಯರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಹೆಸರಲ್ಲಿ ಸಂತುಷ್ಟರಿವರು.
--------------
ಚಂದಿಮರಸ
ರಜ್ಜು ರಸ ಕೂಡಿ ಅಗ್ನಿ ಮುಟ್ಟಿ ಉರಿದಲ್ಲಿ, ಅದೇತರ ಹೊದ್ದಿಗೆಯ ಬೆಳಗು ? ರಜ್ಜು, ರಸದಿಂದವೋ ? ಅಗ್ನಿಯ ಭಾವದಿಂದವೋ ? ಈ ಮೂರರ ಹೊಲಬಿನ ಹೊದ್ದಿಕೆಯಲ್ಲಿ ಬೆಳಗುವ ಪ್ರಜ್ವಲಿತ ಅನಲನ ಕೂಡುವಿನೊಳಗಾಯಿತ್ತು. ಕಾಯದ ಕರ್ಮದ ಜ್ಞಾನದಿಂದ ಕಂಡೆಹೆನೆಂದಡೆ, ನಾಮವಿಲ್ಲದ ರೂಪು, ಭಾವದಿಂದ ಅರಿವ ಠಾವಾವುದು ? ಒಂದರಿಂದ ಒಂದ ಕಂಡೆಹೆನೆಂಬ ಸಂದೇಹ, ಇನ್ನೆಂದಿಗೆ ಹರಿಗು ? ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ. ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ. ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ. ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಆನಿಲನ ಗುಣವಿಲ್ಲ ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ, ಮುಕ್ತಿಯ ಕಂಡೆಹೆನೆಂಬ ನಿಷೆ* ನಿನಗೆಲ್ಲಿಯದೊ? ಹೊಯ್ದಿರಿಸಿದ ಹೊಯ್ಗಲದಂತೆ ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ. ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ. ಐದರ ಗುಣವಡಗಿ, ಮೂರರ ಗುಣ ಮುಗಿದು, ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ, ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ, ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ, ಮೂರು ಮಾಟದ ಬೆಡಗನರಿದು ವಿಚಾರಿಸದೆ, ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ. ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ. ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ: ಪೂಜೆಯ ಮಾಡುವ ಭಕ್ತಂಗೆ, ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು. ಜಲವ ನಂಬಿದ ಜಲಚರದಂತಿರಬೇಕು, ಆಡುವ ಪಶುವಿನ ಲಾಗಿನಂತಿರಬೇಕು. ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆರಗು ನಿಬ್ಬೆರಗು ಮಹಾಬೆರಗು ಹೊಡೆದಂತೆ, ಸ್ವಪ್ನದಲ್ಲಿ ಸಿಂಹವ ಕಂಡ ಮದಹಸ್ತಿಯಂತೆ, ಮುನಿದು ಮಲಗಿದ ಮಿಥುನದಂತೆ, ಆವಿ ಅನಿಲದುಲಿವ ಅನಲನ ಅರನಂತೆ, ಆಸೆ ಹಿಂಗಿದ ಮಹೇಶ್ವರನಂತೆ, ಒಡಬಾಗ್ನಿ ಸತ್ತ ವಾರುಧಿಯಂತೆ, ಮರುತನಡಗಿದ ಆಕಾಶದಂತೆ, ಉಭಯದೊಲುಮೆಯ ಪುರುಷ ಸ್ತ್ರೀಯನಗಲಿದಂತೆ, ಪಾಶವಿಲ್ಲದೆ ಹರಿವ ನದಿಯಂತೆ, ದರ್ಪಣದೊಳಗಣ ಪ್ರತಿಬಿಂಬದಂತೆ, ಸೊಡ್ಡಳನ ಶರಣ ಸಂಗಮೇಶ್ವರ ಅಪ್ಪಣ್ಣನ ನಿಲವ ಬಲ್ಲ ಮಡಿವಾಳ ಮಾಚಯ್ಯಂಗೆ ನಮೋ ನಮೋ ಎಂಬೆ.
--------------
ಸೊಡ್ಡಳ ಬಾಚರಸ
ಸುರೆಯ ಮಡಕೆಯ ಮೇಲೆ ವಿಭೂತಿಯ ಪೂಸಿ ಕುಸುಮದಲ್ಲಿ ಪೂಜಿಸಿ, ದೇವರೆಂದು ಅರ್ಚಿಸಿ, ಪೂಜಿಸಿ ಕುಡಿಯುತ್ತಿರ್ಪ ನರರಂತಾದಿರಯ್ಯಾ. ಈದ ಎಮ್ಮೆಯ ಕೊರಳಿನಲ್ಲಿ ಬೀಜವ ಕಟ್ಟಿದಾತ ಗುರುವೆ ? ಕಟ್ಟಿಸಿಕೊಂಡ ಪಶುವಿಗೆತ್ತಣ ಮುಕ್ತಿಯೋ ? ಬಟ್ಟೆಯನರಿಯದ ಗುರು, ಸೃಷ್ಟಿಯನರಿಯದ ಶಿಷ್ಯ, ವ್ಯರ್ಥವಾಯಿತ್ತಲ್ಲಾ ಕಟ್ಟಿದ ಲಿಂಗ. ನೆಟ್ಟನೆ ಗುರುವಾದಡೆ ಮತ್ತೆ ಬಟ್ಟೆಯ ಮೆಟ್ಟಲೇಕೊ ? ತೊಟ್ಟು ಬಿಟ್ಟ ಹಣ್ಣಿಂಗೆ ಕಟ್ಟಿಗೆಯ ಹಂಗೇಕೊ ? ದ್ರವ್ಯವನರಿವುದಕ್ಕೆ ಆಯಸ್ಕಾಂತದ ಶಿಲೆಯ ತೆರದಂತೆ, ಲೋಹದ ವಿನಯದಂತೆ, ಅನಲನ ತೃಣಸಂಗದಂತೆ, ಅನಿಲ ಗಂಧ ಕೂಟದಂತೆ, ನಿಃಕಳಂಕ ಮಲ್ಲಿಕಾರ್ಜುನನ ಕೂಟದ ಕುಟಿಲ.
--------------
ಮೋಳಿಗೆ ಮಾರಯ್ಯ
ಅಪ್ಪುಮಯವೆಲ್ಲವು ಶಕ್ತಿರೂಪು; ಅಸ್ಥಿಮಯವೆಲ್ಲವು ವಸ್ತುರೂಪೆಂಬರು. ಆ ಅಪ್ಪುಮಯದಲ್ಲಿ ಅಸ್ಥಿ ಬಲಿದು ಗಟ್ಟಿಗೊಂಡ ಮತ್ತೆ, ವಸ್ತುಮಯ ಏತರಿಂದಾಯಿತ್ತು? ಇದರ ಬಿನ್ನಾಣದ ಬೆಡಗ ಅಹುದೆನಬಾರದು, ಅಲ್ಲಾಯೆಂದೆನಬಾರದು. ಉದಕದ ಬಹುವರ್ಣದಂತೆ, ಮಾರುತನ ಜೀವದಂತೆ, ಅನಲನ ಕಾಲು ನಾಲಗೆಯಂತೆ, ಹೆರೆಹಿಂಗದ ಮಾಯೆ ಭಾವಿಸಿದಲ್ಲಿಯೆ ನಿಂದಿತ್ತು. ಕಾಲಾಂತಕ ಭೀಮೇಶ್ವರಲಿಂಗವೆಂದಲ್ಲಿ ಹೆರೆಹಿಂಗಿತ್ತು ಮಾಯೆ.
--------------
ಡಕ್ಕೆಯ ಬೊಮ್ಮಣ್ಣ
-->