ಅಥವಾ

ಒಟ್ಟು 14 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆರು ದರುಶನ ಅನಾಚಾರವ ನಡೆದವು, ಸುರೆಯ ಕುಡಿದವು, ಮಾಂಸವ ತಿಂದವು. ಆರು ದರುಶನಕ್ಕೆ ಅನಾಚಾರವಾದುದೆಂದು ನಾನು ಗುರುವಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಚಾರವ ನುಡಿವೆ, ಅನಾಚಾರವ ನಡೆವೆ. ನಮಗೆ ನಿಮಗೆ ಪ್ರಸಾದಸ್ವಾಯತ ನೋಡಾ. ನಾನು ಭಕ್ತನೆಂಬ ನುಡಿಗೆ, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಮನ ಲಿಂಗವಾಗಿ ಘನ ವೇದ್ಯವಾದೆನೆಂದು ನುಡಿವವ, ತಾ ಲಿಂಗಪ್ರಸಾದವ ಕೊಂಬಾಗ ಭವಿದೃಷ್ಟಿ ಸೋಂಕಿತ್ತೆಂದು ಬಿಡುವ ಅನಾಚಾರವ ನೋಡಾ! ಆಚಾರವನೆ ಅನಾಚಾರವ ಮಾಡಿ ಅನಾಚಾರವನೆ ಆಚಾರವೆಂದು ಸಂಬಂಧಿಸಿಕೊಂಬ ಪರಿಯ ನೋಡಾ! ಇದು ಕಾರಣ-ಸಂಕಲ್ಪಿತವ ಮಾಡಲಾಗದು. ಸಂಕಲ್ಪಿತದಲ್ಲಿ ಶಿವನಿಲ್ಲ ಪ್ರಸಾದವಿಲ್ಲ. ಲಿಂಗ ಮುಟ್ಟಿ ತಾ ಲಿಂಗವಾದ ಬಳಿಕ ಭವವಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
`ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ? ಅವಂಗೆ ತೊಟ್ಟಿಲವ ಕಟ್ಟಿದರಾರು ? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ? ಅವಂಗೆ ಅರುಹು ಮರಹು ಹುಟ್ಟಿಸಿದರಾರು ? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು ? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ; ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. ``ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕ್ರಿಯಾಚಾರವಿಲ್ಲದ ಗುರುವಿನ ಕೈಯಿಂದ ದೀಕ್ಷೆ, ಉಪದೇಶವ ಕೊಳ್ಳಲಾಗದು. ಕ್ರಿಯಾಚಾರವಿಲ್ಲದ ಶಿಲೆಯ ಲಿಂಗವೆಂದು ಪೂಜಿಸಲಾಗದು. ಕ್ರಿಯಾಚಾರವಿಲ್ಲದ ಭೂತಪ್ರಾಣಿಗಳಲ್ಲಿ ಜಂಗಮವೆಂದು ಪಾದೋದಕ ಪ್ರಸಾದವ ಕೊಳಲಾಗದು. ಇಂತಪ್ಪ ಆಚಾರವಿಲ್ಲದ, ಅನಾಚಾರವ ಬಳಸುವ ದುರಾಚಾರಿಗಳಲ್ಲಿ ಉಪದೇಶವ ಹಡೆದು, ಪಾದೋದಕಪ್ರಸಾದವ ಕೊಂಡವಂಗೆ ಅಘನಾಸ್ತಿಯಾಗದು, ಮುಂದೆ ಅಘೋರ ನರಕ ತಪ್ಪದು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಯ್ಯಾ ಪಾದಪೂಜೆಯೆಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ. ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣ ಪಾದಪೂಜೆಯಿಂದಾದ ತೀರ್ಥಪ್ರಸಾದವ `ಗಣಸಮೂಹಕ್ಕೆ ಸಲ್ಲಲಿ' ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ; ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ ಅನಾಚಾರವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ ಇಂತೆಂದುದಾಗಿ, ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ ಹಲವು ವೇಷವ ತೊಟ್ಟು ಆಡುವಾತ, ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ. ಪರ್ವತದ ಕಂಬಿ ಮಹಾಧ್ವಜವ ಹೊರುವಾತ ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ, ಅಲ್ಲವ ಅಹುದ ಮಾಡುವಾತ ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ ಭಕ್ತಗಣಂಗಳ ನಿಂದೆಯ ಮಾಡುವಾತ ಸದಾಚಾರಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ ಕ್ರಯವಿಕ್ರಯದಲ್ಲಿ ವಂಚಿಸುವಾತ ಗುರುಹಿರಿಯರಲ್ಲಿ ಹಾಸ್ಯರಹಸ್ಯವ ಮಾಡುವಾತ ಪರದೈವ ಪರಧನ ಪರಸ್ತ್ರೀ ಗಮಿಸುವಾತ ಸೂಳೆ ಬಸವಿಯರ ಗೃಹದಲ್ಲಿ ಇರುವಾತ ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ, ದುರುಳು ಮಂಕು. ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು. ಅದೆಂತೆಂದಡೆ : ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ ಜಂಗಮಾ ನಾನುಮಂತವ್ಯಾಃ ಸ್ವೀಯಲಕ್ಷಣಸಂಯುತಾಃ ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್ ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ ಮಹಾಭೋಗಿ ಮಹಾತ್ಯಾಗೀ ಲೋಲುಪೋ ವಿಷಯಾತುರಃ ಯಸ್ತ್ವಂಗವಿಹೀನಃ ಸ್ಯಾತ್ತಸ್ಯ (ಪಾದ) ತೀರ್ಥಂ[ನ]ಸೇವಯೇತ್ ಕುಷಿ*ೀ ಕರಣಹೀನಶ್ಚ ಬಧಿರಃ ಕಲಹಪ್ರಿಯಃ ವ್ಯಾಧಿಭಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್ ಇಂತೀ ದುರ್ಮಾರ್ಗ ನಡತೆಗಳಿಲ್ಲದೆ, ಅಯೋಗ್ಯವಾದ ಜಂಗಮವನುಳಿದು, ಯೋಗ್ಯಜಂಗಮವ ವಿಚಾರಿಸಿ ತನು ಮನ ಧನ ವಂಚನೆಯಿಲ್ಲದೆ ಸಮರ್ಪಿಸಿ ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ. ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
ಹರಹರ ಶಿವಶಿವ ಜಯಜಯ ಕರುಣಾಕರ 'ಮತ್ಪ್ರಾಣನಾಥ ಮಹಾಪ್ರಭು ಚಿದ್ಘನ ಶ್ರೀಗುರುಲಿಂಗಜಂಗಮವೆ, ನಿಮ್ಮ ಶರಣಗಣಂಗಳೆಲ್ಲ ನಿರವಯಸಮಾಧಿಯಲ್ಲಿ ಹೋದ ಮಾರ್ಗವ ನಿಮ್ಮ ಕರುಣಕಟಾಕ್ಷೆಯಿಂದ ದಯವಿಟ್ಟು ರಕ್ಷಿಸಯ್ಯ ತಂದೆ, ಕೇಳಯ್ಯ ವರಕುಮಾರದೇಶಿಕೇಂದ್ರನೆ ಶಿವಗಣಂಗಳೆಲ್ಲ ಪರಶಿವಲಿಂಗಕ್ಕು ತಮಗು ಭಿನ್ನವಿಲ್ಲದೆ ಅಭಿನ್ನಸ್ವರೂಪದಿಂದ ಎರಡಳಿದು ಏಕರಸವಾಗಿ ಪುಷ್ಪ ಪರಿಮಳದಂತೆ, ಬಾವನ್ನಕೋಶ ಬಂಗಾರದ ತೆರದಿ, ಪಂಚಾಗ್ನಿಗಳ ಮೂಲ ಚಿತ್ಸ್ವರೂಪವಾದ ಚಿದಗ್ನಿಯಲ್ಲಿ ಸಮರಸವ ಮಾಡಿ, ಸರ್ವಾಚಾರಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯೆ ದ್ವಿತೀಯ ಕೈಲಾಸವೆಂದು, ಸತ್ಯ ನಡೆನುಡಿಯೆ ನಿಜಶಿವಮಂದಿರವೆಂದು, ತನ್ನ ದೀಕ್ಷಾಕರ್ತುವಾದ ಗುರು ಮೊದಲಾಗಿ ಸಮಸ್ತರೆಲ್ಲ ಶಿವಪಥಕ್ಕೆ ಯೋಗ್ಯವಾಗಿ ಬಂದಡೆ ಒಡಗೂಡಿ ಕೊಂಡು, ಶಿವಪಥಕ್ಕೆ ಅಯೋಗ್ಯವಾದಡೆ ತ್ಯಜಿಸಿ, ಪರಿಪೂರ್ಣ ಪರಂಜ್ಯೋತಿ ಸ್ತಂಭಾಕಾರವೆಂಬ ನಿಷ್ಕಲ ಪರಶಿವಬಿಂದುಸ್ವರೂಪವಾದ ಷೋಡಶವರ್ಣದ ಚಿದ್ಬೆಳಗಿನೊಳಗೆ ಉರಿ-ಕರ್ಪೂರಂದತೆ ನಿಜಶಿವಸಮಾಧಿಯಲ್ಲಿ ಬೆರೆದು ಹೋದರು ನೋಡ. ಇಂತೀ ಪ್ರಕಾರದಿಂದ ರಾಜಹಂಸನೋಪಾಯದಿಯಲ್ಲಿ ಒಳಗು ಹೊರಗು ಅನಾಚಾರವ ತ್ಯಜಿಸಿ, ಶಿವಾಚಾರಸಮರತಿಯಿಂದ ಕೂಡಿದರು ನೋಡ. ಆಚಾರವೆಪ್ರಾಣವಾಗಿ ಸಕಲಪ್ರಮಥಗಣವೆಲ್ಲ ಚಿದ್ಘನಮಹಾಲಿಂಗದಲ್ಲಿ ಕೂಟಸ್ಥರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ. ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ. ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ, ಭಕ್ತರೊಳು ಕ್ರೋಧ, ಭ್ರಷ್ಟರೊಳು ಮೇಳ ಇವರು ನರಕಕ್ಕೆ ಯೋಗ್ಯರು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯನೆಂಬ ಭೇದ ಸಂದಿಲ್ಲದೊಂದಾಗಿ ಹೇಳುವೆನು: ಭಕ್ತನೆಂಬಾತ ತನುಗುಣನಾಸ್ತಿಯಾಗಿ ಕಾಯದ ಕ[ರ]ಂಗಳಿಂದ ಬಂದ ಪದಾರ್ಥವ ಸುಕ್ಷ್ಮಕರದಲ್ಲಿ ರೂಪಿಂಗರ್ಪಿಸಿ ರುಚಿಯ ನಿರೂಪಿಂಗರ್ಪಿಸುವ ಭೇದ ಅಂಗಾನಾಂ ಲಿಂಗಸಂಬಂಧೋ ಅಂಗಭಾವವಿಮುಕ್ತಯೇ ಅಂಗಲಿಂಗಸಮಾಯುಕ್ತೋ ಜೀವೋ ಲಿಂಗಂ ಸದಾಶಿವಃ ಲಿಂಗಸಂಗಸ್ಯ ಮಾತ್ರೇಣ ಮನಃಪ್ರಾಪ್ನೋತಿ ಲಿಂಗತಾಂ ಲಿಂಗಾರ್ಪಣಮಿದಂ ದೇವಿ ಪ್ರಾಣಲಿಂಗಾರ್ಚನಂ ಸದಾ ಲಿಂಗಪ್ರಸಾದಂ ಭುಂಜೀಯಾತ್ ಕೇವಲಂ ಜ್ಯೋತಿರೂಪವತ್ ಅಸಂಸ್ಕಾರಿಕೃತಾ ಪೂಜಾ ಪ್ರಸಾದೋ ನಿಷ್ಫಲೋ ಭವೇತ್ ಎಂದುದಾಗಿ, ಇಂತು ವರ್ಮಸಕೀಲಂಗಳನರಿದು ತಾತ್ಪರ್ಯವರ್ಮ ಕಳೆಗಳನರಿದು ಶಿವಲಿಂಗಾರ್ಚನೆಯಂ ಮಾಡಲಾಗಿ ಆತನೀಗ ಲಿಂಗಭಕ್ತ. ಇನ್ನು ಮಾಹೇಶ್ವರಾದಿಭೇದಂಗಳಂ ಪೇಳ್ವೆ: ಕಂಗಳು ಭಕ್ತ, ಎನ್ನ ಕಿವಿಗಳು ಭಕ್ತ ಎನ್ನ ನಾಸಿಕ ಭಕ್ತ, ಎನ್ನ ಇವು ಮೊದಲಾದ ಕರಚರಣಾದ್ಯವಯವಂಗಳೆಲ್ಲವನೂ ಸದ್ಗುರುಸ್ವಾಮಿ ಭಕ್ತನ ಮಾಡಿದನಾಗಿ ಮನವ ಬಯಲನೈದಿಸಿದನಾಗಿ ಬಾಹ್ಯಕರದರ್ಪಣೆಯಂ ತ್ಯಜಿಸಿ ಸುಕ್ಷ್ಮಮನದ ಕರದಿಂದ ಬಂದ ಪದಾರ್ಥದ ಪೂರ್ವಾಶ್ರಯವ ಕಳದು ರುಚಿಪದಾರ್ಥದ ನಿರೂಪ ಲಿಂಗಕ್ಕೆ ಅನಾಹತಕಾಯದ ಕರದಿಂದ ನಿರಂತರ ಅರ್ಪಿಸಿ ಮನ ಆನಂದವನೈದಲಾಗಿ ಮಾಹೇಶ್ವರ. ಪ್ರಾಣೀ ತು ಲಿಂಗಸಂಬಂಧೀ ಪ್ರಾಣಲಿಂಗೀ ಪ್ರಕೀರ್ತಿತಃ ಸದಾಚಾರಮಿದಜ್ಞೇಯಂ ಪ್ರಾಣಲಿಂಗಪ್ರಸಾದತಃ ಪ್ರಾಣ ಪರಿಣಾಮ ಈ ಗುಣ ಅಳವಟ್ಟುದಾಗಿ ಪ್ರಸಾದಿ [ಪ್ರಾಣಲಿಂಗಿ]ಸ್ಥಲಃ ಆಚಾರಲಿಂಗಸಂಬಂಧಂ ಪ್ರಾಣಮೇವ ಪ್ರಕೀರ್ತಿತಂ ಇದಂ ಜ್ಞಾನಂ ತು ಭುಂಜೀಯಾತ್ ಪದಮೇವ ಪದಂ ಶ್ರುಣು ದ್ವಯಮೇವಮಿದಂ ದೇವಿ ವಿಶೇಷಂ ಭಕ್ತಿಬುದ್ಧಿಮಾನ್ ಶರಣಸ್ಥಲ[ವೈ]ಕ್ಯಮಂ ಪೇಳ್ವೆ : ಅರಿವರಿತು ಮರಹು ನಷ್ಟವಾದಲ್ಲಿ ? ಆಚಾರಪ್ರಾಣ ಭಕ್ತ ಆಚಾರವರಿತು ಅನಾಚಾರವ ನಷ್ಟವಾದಲ್ಲಿ ಮಾಹೇಶ್ವರ, ಕ್ರಿಯಾಕಾರವರಿತು ನಿಷ್ಕಳ ನೆಲೆಗೊಂಡಲ್ಲಿ ಪ್ರಸಾದಿ, ಸಕಲಶೂನ್ಯವಾಗಿ ನಿಷ್ಕಳ ನೆಲೆಗೊಂಡಲ್ಲಿ ಪ್ರಾಣಲಿಂಗಿ, ಸ್ವಾನುಭಾವ ಸಂಬಂಧಿಸಿ ಅವಧಾನ ತಾನೆ ಗುರುವಾದಲ್ಲಿ ಶರಣ, ಆಚಾರಪ್ರಾಣವಾಗಿ ಬಾಹ್ಯಪೂಜೆಯನರಿದು ಮನದ ಕರದಲ್ಲಿ ಇಷ್ಟಲಿಂಗಾರ್ಚನೆಯಂ ಮಾಡಬಲ್ಲಡೆ ಐಕ್ಯ. ಷಡುಸ್ಥಲಾಧಿಕಾರಮಂ ಪೇಳ್ವೆ : ಲಿಂಗಾರ್ಚನಮಿದಂ ದೇವಿ ನ ಕುರ್ಯಾದ್ವರ್ಣಮೋಹಿತಃ ಅಸಂಸ್ಕಾರಿಕೃತಾ ಪೂಜಾ ಸಾ ಪೂಜಾ ನಿಷ್ಫಲಾ ಭವೇತ್ ಅಂಗಾಂಗಲಿಂಗಸಂಬಂಧಿಯಾದ ಶರಣರು, ಅನಾಹತಶೂನ್ಯರಾದವರಲ್ಲದೆ, ಬದ್ಧದ್ವೇಷಿಗಳು, ಬಧಿರಹೃದಯರು, ಅಜ್ಞಾನವರ್ಧನರು ಕೇವಲ ತಾತ್ಪರ್ಯವರ್ಮ ಕಳೆಗಳ ಸುಧಾಸುಚಿತ್ತ ಸದಾಸ್ವಾನುಭಾವ ಸಂಬಂಧಿಗಳ ಮಹಾನಿಲವನೆತ್ತಬಲ್ಲರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹಗಲ ಇರುಳ ಮಾಡಿ, ಇರುಳ ಹಗಲ ಮಾಡಿ, ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ, ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ ನುಡಿವವರ ಮಾತ ಕೇಳಲಾಗದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->