ಅಥವಾ

ಒಟ್ಟು 14 ಕಡೆಗಳಲ್ಲಿ , 6 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಕಾರದೊಳು ವಿಕಾರ ಕಪಿವಿಕಾರ. ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ. ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ. ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು. ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು. ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು. ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು. ದೇವಲೋಕದ ದೇವಗಣ ಅಜಹರಿಸುರರ ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ. ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ. ಮನೋವಿಕಾರದಿಂದ ಪಂಚಭೂತ ಸಪ್ತಧಾತು ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ, ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ. ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ ಮೂರುಲೋಕಾರಾಧ್ಯನೆಂಬೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಸವ ಶಗಣಿಯಿಂದಾದ ಅಸಮ ಶ್ರೀಮಹಾಭಸಿತವ, ನೊಸಲಾದಿ ಪಾದಾಂತ್ಯವಾಗಿ ನಾಲ್ವತ್ತೆಂಟು ಸ್ಥಾನಂಗಳನರಿದು ಧರಿಸಿ, ಪಸರಿಸಿ ಪ್ರಜ್ವಲಿಸುವ ಪಶುಪತಿಯ ಗತಿಮತಿಯೊಳೊಪ್ಪಿ, ಎಸೆವ ಶಿವಶರಣರಂಘ್ರಿಯ ಜಲಶೇಷವನು ಸಸಿನೆಯಿಂದ ಸೇವಿಸುವ ಶಿಶುವಾಗಿರ್ದೆ ಅನುದಿನ ನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಮಾರಯ್ಯಾ, ಅಯ್ಯಾ, ನೀ ಬಂದು ಅನಾಹತಜ್ಞಾನದಲ್ಲಿ ಅನುದಿನ ಪ್ರವೇಶಿಸಾ, ಎಲೆ ಅಯ್ಯಾ, ನಿನ್ನ ಧರ್ಮ. ಅಯ್ಯಾ, ಅನ್ಯರಿಗೆ ಕೈಯಾನಲಾರೆ. ಅಯ್ಯಾ, ಅನ್ಯರಿಗೆ ಅಣ್ಣಾ ಎನಲಾರೆ. ಅಯ್ಯಾ, ನಿನ್ನವ ನಾನಿದ್ದು, ಅನ್ಯರನು ಆಶ್ರಯಿಸುವ ಅನ್ಯಾಯ ನಿನ್ನದು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವಿನಲ್ಲಿ ಸದಾಚಾರ; ಲಿಂಗದಲನುದಿನ ವೇಳೆ. ಜಂಗಮದಲ್ಲನುಭಾವ ಸಮಯಾಚಾರ; ಲಿಂಗದಲನುದಿನ ವೇಳೆ. ಈ ಉಭಯಾಚಾರದಿಂದ ತಿಳಿದ ತಿಳಿವು ಲಿಂಗದಲ್ಲಿ ಅನುದಿನ ವೇಳೆ. ಬೇರೆ ತೋರಲಿಲ್ಲ. ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ. ಇದು ಕಾರಣ ಕೂಡಲಸಂಗಮದೇವಾ. ಲಿಂಗದಲನುದಿನ ವೇಳೆ.
--------------
ಬಸವಣ್ಣ
ಮಾಯಾತಮಂಧವೆಂಬ ಕತ್ತಲೆಯು ಮುಸುಕಿ ಮುಂದುಗಾಣದೆ ಅರುಹಿರಿಯರೆಲ್ಲರು, ಸಿದ್ಧಸಾಧ್ಯರೆಲ್ಲರು ಕಣ್ಗಾಣದೆ ಮರೆದೊರಗಿದರು. ಅದು ಎಂತೆಂದೊಡೆ :ವಸಂತತಿಲಕವೃತ್ತ - ``ಮಾಯಾತಮಂಧ ಮಹಾಘೋರ ಕಾಲವಿಷಂ ಜ್ಞಾನಸ್ಯ ಸೂರ್ಯ ನಚ ಸಿದ್ಧ ಸಾಧ್ಯಂ ಭೂಲೋಕ ತ್ರಿಗುಣಾಕಾರ ಮಧ್ಯ ಶಯನೇಶದೇಹಿ ಶಿವಮುಕ್ತಿರಹಿತ ಭವಯಂತ್ರ ಕ್ರೀಡಾದಿಜನಿತಂ'' (?) ಎಂದುದಾಗಿ, ಇದು ಕಾರಣ, ತನುವೆಂಬ ಉರುರಾಜ್ಯಕ್ಕೆ ಜ್ಞಾನಸೂರ್ಯನ ಮುಳುಗಿಸಿ ಅನುದಿನ ಎನ್ನ ಕಣ್ಗೆಡಿಸಿ, ಮಾಯಾತಮಂಧವೆಂಬ ಕತ್ತಲೆಗೆ ನಡೆಸಿ, ಅಜ್ಞಾನವೆಂಬ ಕೊರಡನೆಡವಿಸಿ, ತಾಪತ್ರಯವೆಂಬ ಅಗ್ನಿಗಿರಿಯನಡರಿಸಿ, ಮನವಿಕಾರಗಳೆಂಬ ಭೂತಗಳ ಹರಿಯಬಿಟ್ಟು, ಅರಿಷಡ್ವರ್ಗವೆಂಬ ಕೂರಸಿಯ ಸಿಗಿಸಿ, ಷಡ್ಭಾವವೈಕರಣಗಳೆಂಬ ಹಳ್ಳಕೊಳ್ಳ ನಡುವಿಕ್ಕಿ ಎನ್ನ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಿತ ಕೆಂಪು ಕೃಷ್ಣವೆಂಬ ಮೂರರ ಮೇಲೆ, ಅತಿಶಯವಾಗಿ ಬೆಳಗುವ ಶಿವಲಿಂಗವ, ಅನುದಿನ ಮನವಿಲ್ಲದ ಮನದಲ್ಲಿ ನೆನೆದು ಸುಖಿಯಾದೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ನೆಲಜಲಾಗ್ನಿ ಮರುತಾಕಾಶವಿಲ್ಲದ ಪಂಚವಣ್ಣಿಗೆಯ ಗರ್ದುಗೆಯ ಹಾಸಿ, ಪಶ್ಚಿಮದತ್ತ ಸ್ವಾಚ್ಛಾಲಯದ ಸ್ವಯಾನಂದ ಮೂರುತಿಯ ಎನ್ನರುವಿನಮುಖದಿಂದೆ ಕರೆತಂದು ಮೂರ್ತಿಗೊಳಿಸಿ, ಸತ್ಯೋದಕದಿಂದೆ ಪಾದಾಭೀಷೇಕವ ಮಾಡಿ ತ್ರಿಪುಟಿಯ ದಹಿಸಿ ಭಸಿತವ ಧರಿಸಿ, ಹೃದಯಕಮಲವನೆತ್ತಿ ಧರಿಸಿ, ಶ್ರದ್ಧೆಧೂಪವರ್ಪಿಸಿ, ಸೋಹಂ ಎಂಬ ಚಾಮರ ಢಾಳಿಸಿ, ಸುಜ್ಞಾನಜ್ಯೋತಿಯ ಬೆಳಗನೆತ್ತಿ ಜಯ ಜಯ ಮಂಗಳವೆಂದು ಅರ್ಚಿಸುವೆನಯ್ಯಾ ಅನುದಿನ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎನ್ನ ಪ್ರಾಣಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ! ನಿಮ್ಮ ಧರ್ಮದ ಕವಿಲೆಯಾನಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನೆಯ ಮಗ ನಾನಯ್ಯಾ. 358
--------------
ಬಸವಣ್ಣ
ನಿಮ್ಮಲ್ಲಿ ಸನ್ನಿಹಿತವಲ್ಲದ ತನುವಿನ ಭಿನ್ನ ಭಾವವನೇನ ಹೇಳುವೆನಯ್ಯಾ? ಲಿಂಗ ಭಿನ್ನಭಾವದ ಮನಸಿನ, ಲಿಂಗ ಭಿನ್ನಭಾವದ ತನುವಿನ ಅನ್ಯಾಯದಲ್ಲಿ ಅನರ್ಪಿತವಾಯಿತ್ತು. ಎನ್ನಲ್ಲಿ ಅನುದಿನ ಅಗಲದಿಪ್ಪ ಕೊಡಲಚೆನ್ನಸಂಗಯ್ಯನೆನ್ನ ಪ್ರಾಣನಾಥನಾಗಿ.
--------------
ಚನ್ನಬಸವಣ್ಣ
ಮುಟ್ಟದೆ ಮುಟ್ಟೆನಯ್ಯಾ ಅನರ್ಪಿತವೆಂದು ಮುಟ್ಟಿ ಲಿಂಗಕ್ಕೆ ಮಾಡಲಿಲ್ಲ. ತಟ್ಟದೆ ಮುಟ್ಟದೆ ಮನಸೋಂಕದೆ ಅನುದಿನ ಲಿಂಗಕ್ಕೆ ಮಾಡಬೇಕು. [ಕೊಟ್ಟು] ಕೊಂಬ ಭೇದವನು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ. ಅನುದಿನ ನಿಮ್ಮ ನೆನೆಯಲು ಭಕ್ತಿಯುಲ್ಲವಯ್ಯಾ ಎನಗೆ. ಕೂಡಲಸಂಗಮದೇವಾ, ಕರುಣಿ, ಕೃಪೆಯ ಮಾಡಯ್ಯಾ. 289
--------------
ಬಸವಣ್ಣ
ಕಣ್ಗಾಣದೆ ಲೋಕ ಮಾಯಾತಮಂಧವೆಂಬ ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು. ಪದ : ತನುಮದ ಹುತ್ತದೊಳು ಮನವಿಕಾರದ ಸರ್ಪ ಜನರನೆಲ್ಲರ ಕಚ್ಚಿ ವಿಷವೇರಿಸಿ ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. | 1 | ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ ಷಡ್ಭ್ರಮೆಗಳೆಂದೆಂಬುದ ಷಡು ಅಂಗ ಕತ್ತಲೆಗೆ ನಡೆದು ಮೈಮರೆದು ಬರಿದೆ. | 2 | ಅಸಿಯ ಜವ್ವನೆಯರ ವಿಷಯರಸವೆಂದೆಂಬ ಪ್ರಸರದೊಳು ಲೋಕವನು ಗುರಿಮಾಡಿಯೆ ; ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು ಬೆಸುಗೆಯೊಳು ಸಿಲ್ಕಿ ಬರಿದೆ. | 3 | ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು ಬರುತಲಿ ಅಜ್ಞಾನವೆಂದೆಂಬುವ ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ ಮರೆಗೊಂಡು ಮುಂದುಗಾಣದೆ ಮೂಲೋಕ | 4 | ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ ಹಿರಿದು ಚೇಷ್ಟೆಯ ತೆರದಿ ಮಾಯಾಮದದ ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. | 5 |
--------------
ಹೇಮಗಲ್ಲ ಹಂಪ
ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ ಒಪ್ಪಿಸಿಕೊಟ್ಟು ನೀನಗಲಬೇಡವೊ ಗುರುವೆ. ಪದ : ಉರಿಗೆ ಕೊಟ್ಟ ಅರಗಿನಂದದಿ, ಕಿರಾತನ ಕೈಯ ಲಿರುವ ಎರಳೆಯ ಮರಿಯಂತೆ, ಪಂಜರದೊಳಗ ಣರಗಿಣಿಯ ಮಾರ್ಜಾಲಗೆ ಸೆರೆಗೊಡುವಂತೆ, ಪರಿಯಲೆನ್ನನು ಮನಭ್ರಮೆಯ ಸಪ್ತವ್ಯಸನಕ್ಕೆ ಗುರಿಮಾಡಿ ನೀ ಎನ್ನ ಅಗಲಿಹೋಗದೆ ಕರುಣಾ ಕರ ರಕ್ಷಿಸಯ್ಯಾ ಕೃಪೆಯಿಂದ ರಕ್ಷಿಸು ಸದ್ಗುರುರಾಯ. | 1 | ತನು ಮನ ವ್ಯಸನ ಸಮಸ್ಸಂಧಕಾರದ ಧನವ್ಯಸನದ ಬಯಕೆಯ ರಾಜ್ಯವ್ಯಸನದ ವಿನಯದುತ್ಸಾಹ ವ್ಯಸನವಿಶ್ವಾಸದಿಂದ ಪರರ ಅನುದಿನ ಆಶ್ರಯಿಸುವ ಸೇವಕ ವ್ಯ ಸನಗುಣವ ಕೊಟ್ಟು ಸಪ್ತವ್ಯಸನಕ್ಕೆ ಗುರಿ ಮಾಡಿ ತ್ರಿಣಯ ಸದ್ಗುರುರಾಯ ಅಗಲದಿರಯ್ಯ. | 2 | ಓಡಿನಲ್ಲುಂಟೆ ಕನ್ನಡಿಯ ನೋಟವು ? ಭವ ಕಾಡೊಳು ತಿರುಗಿಯೆ ಸತ್ತು ಹುಟ್ಟುತಿಹೆ ; ಮೂಢನಪಾಯವ ಕಾಯೋ ದೇವ, ನಿಮ್ಮೊ ಳಾಡಲು ಹುರುಳಿಲ್ಲ, ಎನ್ನ ಗುಣವನು ನೋಡಿ ಕಾಡದೆ ಬಿಡಬೀಸದೆ ಕುಮಾರನ ಕೂಡಿಕೊ ಗುರು ಪಡುವಿಡಿ ಸಿದ್ಧಮಲ್ಲೇಶ. | 3 |
--------------
ಹೇಮಗಲ್ಲ ಹಂಪ
ಸ್ಥೂಲ ಸೂಕ್ಷ ್ಮ ಕಾರಣವೆಂಬ ತನುತ್ರಯವ ವಿಭಾಗಿಸಿ ಕಳೆದು ಆ ತನುತ್ರಯದಿಂದ ಜೀವತ್ರಯವನು ಹಿಂಗಿಸಿ ಒಂದು ಮಾಡಿ ನಿಜಾಂಗರೂಪನಾದ ಪರಮಾತ್ಮನಲ್ಲಿ ಕೂಡಿ ಅಂಗ ಲಿಂಗ ಸಂಗರೂಪಾದ ಪರಮಾತ್ಮನೆ ಪರವೆಂದರಿದು ಪರಮಾತ್ಮನೆ ಘನವೆಂದರಿದು, ಪರಮಾತ್ಮನೆ ತಾನೆಂದರಿದು ಲಿಂಗಾಂಗಸಂಗವಾದ ಷಡುಸ್ಥಲವನಂಗೀಕರಿಸಿ ಅನುದಿನ ಎಡೆಬಿಡುವಿಲ್ಲದೆ ಶಿವಾನುಭಾವಿಯಾಗಿ ಶಿವಲಿಂಗನ ಭಜಿಸುವವನೆ ಮುಕ್ತನು. ಉಳಿದವರೆಲ್ಲಾ ಬದ್ಧರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
-->