ಅಥವಾ

ಒಟ್ಟು 13 ಕಡೆಗಳಲ್ಲಿ , 12 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾದ್ಥಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.
--------------
ಸಿದ್ಧರಾಮೇಶ್ವರ
ನಿರೂಪ ರೂಪಿನಲ್ಲಿ ಅಡಗಿ, ನಿರಾಲಂಬವಾಯಿತ್ತು ಬಸವನಲ್ಲಿ. ನಿರಾಲಂಬಮೂರ್ತಿಯಲ್ಲಿ ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ. ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚರ್ತುವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೆರಗೊಡ್ಡಿ ಬೇಡಿಕೊಂಬೆನು ಸರಿದಪ್ಪನು ಪೇಳದೆ ನೆರೆಬಲ್ಲ ಗುರುಹಿರಿಯರು ಭಕ್ತ ವಿರಕ್ತರುವೊಪ್ಪುವುದು. ಅಮ್ಮವ್ವೆ ರೆಮ್ಮವ್ವೆ ವೈಜವ್ವೆ ನಿಂಬವ್ವೆ ದುಗ್ಗಳವ್ವೆ ಮಾಂಗಾಯಕ್ಕರಸಿಗಳು ನೀಲಲೋಚನೆ ಕೋಳೂರ ಕೊಡಗೂಸು ಹೇರೂರ ಹೆಣ್ಣು ಕದಿರರೆಬ್ಬವ್ವೆ ಪಿಟ್ಟವ್ವೆ ಸತ್ಯಕ್ಕ ಇಂತೀ ತೆತ್ತೀಸಕೋಟಿ ಸತ್ಯಶರಣರು ಈ ವಚನದ ಅರ್ಥವ ಮಾಡಿ ಅನುಭವಿಸಿ ನಿಮ್ಮ ಶಿಶುವೆಂದು ಕರಿಯಬಸವನ ಎತ್ತಿಕೊಂಬುದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು. ಕೊಡುವೆಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು. ಬಡತನ ಬಂದರೆ ಅನುಭವಿಸಿ, ಬಾರದ ಬಯಸರು. ಹಿಡಿದ ವ್ರತವ ಬಿಡದೆ ನಡೆದು ಕೈವಲ್ಯವ ಪಡದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು. ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ. ಅದನು ಮಹಂತರು ಕೇಳಲಾಗದು. ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ, ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ, ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ, ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ? ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ ಅವರುಗಳು ಪ್ರೇತಗಾಮಿಗಳು. ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು ತಾವಾರೆಂದರಿಯರು. ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು. ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ, ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ, ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ, ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು, ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು, ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು. ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು. ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ ನಂದಿಕೇಶ್ವರನ ಉದಾಸೀನಂ ಮಾಡಿ, ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು. ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ, ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ, ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ. ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ, ಸೂರ್ಯನಿಂದಧಿಕವಹ ತೇಜಸ್ಸು, ಗಜ ಪಟೌಳಿ ಸೀತಾಂಗನೆಗತ್ಯಧಿಕವಹ ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು. ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ ! ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ? ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು. ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ, ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ. ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು, ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ. ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
--------------
ಹಾವಿನಹಾಳ ಕಲ್ಲಯ್ಯ
ತಾಪತ್ರಯಂಗಳಿಗೆನ್ನನು ಒಳಗುಮಾಡುವ ಕರ್ಮತ್ರಯಂಗಳು ಕೆಟ್ಟಕೇಡ ನೋಡಾ ಎಲೆ ತಂಗಿ. ಕಾಯದ ಕಳವಳಕಂಜಿ ಸಂಚನ ಮಡಗುವ ಹೊನ್ನ ಬಿಟ್ಟಲ್ಲಿಯೇ ಸಂಚಿತಕರ್ಮ ನಾಸ್ತಿಯಾಯಿತು. ಬಂದುದು ಮೊದಲಾಗಿ ಆಗಾಗಲೇ ಅನುಭವಿಸಿ ಲಬ್ಧವನುಳಿಯಲೀಯದೆ ಭೋಗವನುಂಬ ಹೆಣ್ಣ ಬಿಟ್ಟಲ್ಲಿಯೇ ಪ್ರಾರಬ್ಧಕರ್ಮ ನಾಸ್ತಿಯಾಯಿತು. ಇಂದು ಬಿತ್ತಿ ಮುಂದಕ್ಕೆ ಆಗು ಮಾಡುವ ಮಣ್ಣ ಬಿಟ್ಟಲ್ಲಿಯೇ ಆಗಾಮಿಕರ್ಮ ನಾಸ್ತಿಯಾಯಿತು. ಸಂಚಿತಕರ್ಮ ನಾಸ್ತಿಯಾದಲ್ಲಿಯೇ ಬ್ರಹ್ಮನ ಸೃಷ್ಟಿಯೆಂಬ ಸೆರೆಮನೆ ಹಾಳಾಯಿತು. ಪ್ರಾರಬ್ಧಕರ್ಮ ನಾಸ್ತಿಯಾದಲ್ಲಿಯೇ ವಿಷ್ಣುವಿನ ಸ್ಥಿತಿಯೆಂಬ ಸಂಕೋಲೆ ತಡೆಗೆಡೆಯಿತು. ಆಗಾಮಿಕರ್ಮ ನಾಸ್ತಿಯಾದಲ್ಲಿಯೇ ರುದ್ರನ ಸಂಹಾರವೆಂಬ ಪ್ರಳಯಾಗ್ನಿ ಕೆಟ್ಟಿತ್ತು. ಇಂತೀ ಮೂವರ ದಾಂಟಿದಲ್ಲಿಯೇ ತಂದೆ ತಾಯಿಗಳೆನ್ನ ಕೈವಿಡಿದೆತ್ತಿಕೊಂಡು ಬಸವಾದಿ ಪ್ರಮಥರ ಕೈ ವಶವ ಮಾಡಿದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮುನ್ನ ಮಾಡಿತ್ತನಾರು ಕಳೆಯಬಾರದು. ಅದು ಬೆನ್ನ ಹಿಂದೆ ಬರುತ್ತಿಪ್ಪುದು. ಅದನಿನ್ನು ಕಳದೆಹೆನೆಂದಡೆ ಎನ್ನಿಚ್ಚೆಯುಂಟೆ ಅಯ್ಯಾ ? ಚೆನ್ನಮಲ್ಲಿಕಾರ್ಜುನನೆನಗೆ ಕಟ್ಟಿದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವೆನು.
--------------
ಅಕ್ಕಮಹಾದೇವಿ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪಶುಗಳು ಆಹಾರ ಮೈಥುನ ನಿದ್ರೆಗಳನ್ನು ಕಂಡಲ್ಲಿ, ಬಂದಲ್ಲಿ, ಅನುಭವಿಸುತ್ತಿರ್ಪುದರಿಂ ಪರಲೋಕದಲ್ಲಿ ಸುಖದುಃಖಾನುಭಗಳಿಲ್ಲದೆ, ಕಾಮಲೇಪವಿಲ್ಲದೆ, ಮನುಷ್ಯಜನ್ಮದಲ್ಲಿ ಮಾಡಿದ ಕರ್ಮಾನುಭವನಿಮಿತ್ತಮಾಗಿ, ಮರಳಿ ಮರಳಿ ತಿರ್ಯಗ್ರೂಪಮಾಗಿ ಜನಿಸಿ, ಆ ಕರ್ಮಾನುಭವವು ತೀರಲು, ಮನುಷ್ಯಜನ್ಮವನೆತ್ತಿ. ಆಹಾರಾದಿ ಸಕಲಪದಾರ್ಥಂಗಳಂ ದೊರಕಿಲ್ಲನುಭವಿಸದೆ, ರಾಗ ಲೋಭಯುಕ್ತಗಳಾಗಿ, ತಮ್ಮ ಮಂದಿರಕ್ಕೆ ತಂದು, ಪುತ್ರ ಮಿತ್ರ ಕಳತ್ರಯುಕ್ತವಾಗನುಭವಿಸಿ, ಮಿಕ್ಕುದಂ ಕೂಡಲಿಕ್ಕುದರಿಂ ಇಹದಲ್ಲಿ ಮಾಡಿದ ಕರ್ಮವಂ ಪರದಲ್ಲನುಭವಿಸಬೇಕಾಯಿತ್ತು. ಆದುದರಿಂದಂದಿಗೆ ದೊರೆತ ಪದಾರ್ಥವನಂದೇ ಅನುಭವಿಸಿ, ಲೋಭರಾಗಾಭಿಮಾನವಿಲ್ಲದಾತಂಗೆ ಕರ್ಮಲೇಪವಿಲ್ಲ. ಮನುಷ್ಯರಲ್ಲಿ ಕರ್ಮಲೇಪವಿಲ್ಲದಾತನೇ ವಿರಕ್ತನು, ಆತನೇ ಜೀವನ್ಮುಕ್ತನು. ಅಂತಪ್ಪ ನಿರ್ಲೇಪಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನಾನಾ ಜನ್ಮಂಗಳ ತಿರುಗಿ, ಮನುಷ್ಯಜನ್ಮಕ್ಕೆ ಬಂದು, ಪಂಚೇಂದ್ರಿಯವುಳ್ಳ ಅರಿವಿನ ಪುರುಷನಾದ ಮೇಲೆ, ತಮ್ಮ ಆತ್ಮದೊಳಗಿಪ್ಪ ಜ್ಯೋತಿರ್ಲಿಂಗವನು ಕಂಡು, ಆರು ಲಿಂಗವನು ಕಂಡು, ಆರು ಲಿಂಗವನು ಅನುಭವಿಸಿ ನೋಡಿ, ಮೂವತ್ತಾರು ಲಿಂಗದ ಮುದ್ರೆಯನು ಮುಟ್ಟಿ, ಆಧ್ಯಾತ್ಮದ ನೀತಿಯನು ತಿಳಿದು, ಶುದ್ಧಾತ್ಮದೇಹಿಗಳಾದ ಮೇಲೆ ತಮ್ಮ ಜಾತಿಧರ್ಮದ ನೀತಿಶಾಸ್ತ್ರದ ನಿರ್ಣಯವನೆ ಕೇಳಿ, ತಮ್ಮ ಜಾತಿಧರ್ಮದ ವರ್ಣನೆ ಗುರುಹಿರಿಯರನು ಪೂಜೆಯ ಮಾಡಿ, ಹಸಿದು ಬಳಲಿಬಂದವರಿಗೆ ಅನ್ನವನು ನೀಡಿ, ಭಕ್ತಿಯನು ಮಾಡಿ, ಮುಕ್ತಿಯನ್ನು ಪಡೆದರೆ, ತನ್ನಷ್ಟಕ್ಕೇ ಆಯಿತು. ಆ ವಾರ್ತೆ ಕೀರ್ತಿಗಳು ಜಗಜಗಕ್ಕೆ ಕೀರ್ತಿ ಮೆರೆಯಿಪ್ಪುದು ಕಾಣಿರೊ. ಅದು ಎಂತೆಂದರೆ : ತಾನು ಹತ್ತು ಎಂಟು ಸಾವಿರ ಹಣ ಕಾಸುಗಳನು ಗಳಿಸಿ, ಹತ್ತಿರವಿಟ್ಟುಕೊಂಡು ಸತ್ತುಹೋದರೆ, ಆ ಬದುಕು ತನ್ನ ಹೆಂಡಿರು ಮಕ್ಕಳಿಗೆ ಬಾಂಧವರಿಗೆ ಆಯಿತಲ್ಲದೆ, ನೆರೆಮನೆಯವರಿಗೆ ಬಂದೀತೆ ? ಬರಲರಿಯದು. ಅದು ಎಂತೆಂದರೆ : ಇಂತೀ ತಮ್ಮ ಮನೆಯ ಹಿರಿಯರ ಸುದ್ದಿಯನು ಹಿಂದಿಟ್ಟುಕೊಂಡ ನೆರೆಮನೆಯ ಹಿರಿಯರ ಗರ್ವ, ಬಸವಣ್ಣ ದೊಡ್ಡಾತ, ಚೆನ್ನಬಸವಣ್ಣ ದೊಡ್ಡಾತ, ದೇವರ ದಾಸಿಮಯ್ಯ ದೊಡ್ಡಾತ. ಗಣಂಗಳು ದೊಡ್ಡವರೆಂದು ಬರಿಯ ಮಾತಿನ ಮಾಲೆಯ ಕೊಂಡು ಶಾಸ್ತ್ರವನು ಹಿಡಕೊಂಡು ಓದಿ ಹೇಳುವ ಮನುಜರಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತೇ ? ಆಗಲರಿಯದು. ಅದು ಎಂತೆಂದರೆ : ಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಬಸವಣ್ಣನ ಅಷ್ಟಕ್ಕೇ ಆಯಿತು. ಚೆನ್ನಬಸವಣ್ಣ ಭಕ್ಕಿಯನು ಮಾಡಿ, ಮುಕ್ತಿಯನು ಪಡೆದರೆ, ಚೆನ್ನಬಸವಣ್ಣನ ಅಷ್ಟಕ್ಕೇ ಆಯಿತು. ದೇವರದಾಸಿಮಯ್ಯ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ದೇವರದಾಸಿಮಯ್ಯನ ಅಷ್ಟಕ್ಕೆ ಆಯಿತು. ಗಣಂಗಳು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಗಣಂಗಳ ಅಷ್ಟಕ್ಕೇ ಆಯಿತು. ನಾವು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ನಮ್ಮಷ್ಟಕ್ಕೇ ಆಯಿತು. ಅದು ಎಂತೆಂದರೆ : ಬಸವಣ್ಣ ಚೆನ್ನಬಸವಣ್ಣ ದೇವರದಾಸಿಮಯ್ಯ ಗಣಂಗಳೆಲ್ಲರು ದೊಡ್ಡವರೆಂದು ಅವರನ್ನು ಹಾಡಿ ಹರಸಿದರೆ, ಅವರು ನಮಗೆ ಕೊಟ್ಟು ಕೊಂಡು ನಡಸ್ಯಾರೆ ? ನಡೆಸಲರಿಯರು. ಅವರು ದೊಡ್ಡವರೆಂದರೆ, ಅವರು ತಮ್ಮಷ್ಟಕ್ಕೇ. ಅವರು ಚಿಕ್ಕವರಾದರೂ, ಅವರು ತಮ್ಮಷ್ಟಕ್ಕೇ. ನಾವು ದೊಡ್ಡವರಾದರೆ ಅವರಿಗೆ ನಾವು ಕೊಟ್ಟು ಕೊಂಡು ನಡೆಸೇವೆ ? ನಡೆಸಲರಿಯೆವು. ನಾವು ದೊಡ್ಡವರಾದರೆ ನಮ್ಮಷ್ಟಕ್ಕೇ. ವಾನು ಚಿಕ್ಕವರಾದರೆ ನಮ್ಮಷ್ಟಕ್ಕೇ. ಎದು ಎಂತೆಂದರೆ : ಹಿಂದೆ ಹುಟ್ಟಿದ ಹಿರಿಯ ಅಣ್ಣಗಳಾದರೇನು, ಮುಂದೆ ಹುಟ್ಟಿದ ಕಿರಿಯ ತಮ್ಮನಾದರೇನು, ತನ್ನ ಸುದ್ದಿಯನು ತಾನು ಅರಿತು, ಅನ್ಯರ ಹಂಗು ಹರಿದು, ಒಂಕಾರ ಪರಬ್ರಹ್ಮದ ಧ್ಯಾನವನು ಮಾಡಿಕೊಂಡು ಇರಬಲ್ಲರೆ, ಆತನೀಗ ತನ್ನಷ್ಟಕ್ಕೇ. ಹಿರಿಯಾತಂಗೆ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತು ಕಾಣಿರೊ. ಇಂತೀ ತನ್ನ ಸುದ್ದಿಯ ತಾನು ಅರಿಯದೆ, ನೆರೆಮನೆಯ ಹಿರಿಯರು ಘನವೆಂದು ಕೊಡಾಡುವ ಮರಿ ನಾಯಿಕುನ್ನಿಗಳಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಗಲರಿಯದೆಂದು ಇಕ್ಕಿದೆನು ಮುಂಡಿಗೆಯ. ಇದನೆತ್ತುವರುಂಟೇನೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
-->