ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ ಎನ್ನ ಕಣ್ಣಿನಲ್ಲಿ ನೋಡೆ, ಜಿಹ್ವೆಯಲ್ಲಿ ನೆನೆಯೆ, ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ ನಾನಾ ಗುಣಂಗಳಲ್ಲಿ ಶೋದ್ಥಿಸಿಯಲ್ಲದೆ ಬೆರೆಯೆ. ಕೊಂಬಲ್ಲಿ ಕೊಡುವಲ್ಲಿ ಎನ್ನ ವ್ರತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ. ಇದಕ್ಕೆ ದೃಷ್ಟವ ನೋಡಿಹೆನೆಂದಡೆ ತೋರುವೆ. ಶ್ರುತದಲ್ಲಿ ಕೇಳಿಹೆನೆಂದಡೆ ಹೇಳುವೆ. ಅನುಮಾನದಲ್ಲಿ ಅರಿದಿಹೆನೆಂದಡೆ ಎನ್ನ ಆಚಾರದ ಆತ್ಮನ ಎನ್ನ ಕೈಯಲ್ಲಿ ಹಿಡಿದು ನಿಮ್ಮ ಕೈಯಲ್ಲಿ ಕೊಡುವೆ. ಈ ಭಾಷೆಗೆ ತಪ್ಪೆನೆಂದು ಕಟ್ಟಿದೆ ತೊಡರುವ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಎನಗೆ ಸರಿ ಇಲ್ಲ ಎಂದು ಎಲೆದೊಟ್ಟು ನುಂಗಿದೆ.
--------------
ಅಕ್ಕಮ್ಮ
ಎಂದಿದ್ದು ಶರೀರ ಹುಸಿಯೆಂಬುದನರಿದ ಮತ್ತೆ, ತ್ರಿವಿಧಕ್ಕೆ ಕೊಂಡಾಡಲೇತಕ್ಕೆ? ಇದಿರಿಟ್ಟು ಮಾಡುವ ಮಾಟದಲ್ಲಿ ಶ್ರುತ ದೃಷ್ಟ ಅನುಮಾನದಲ್ಲಿ ಅರಿದ ಮತ್ತೆ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟು ನಿರ್ಮುಕ್ತನಾಗಿರ್ಪ ಭಕ್ತನೆ ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ, ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ, ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ. ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ ಅನುಮಾನದಲ್ಲಿ ಅರಿದುದ ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ. ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 69 ||
--------------
ದಾಸೋಹದ ಸಂಗಣ್ಣ
ವ್ರತಾಚಾರವ ಅವಧರಿಸಿದ ಭಕ್ತಂಗೆ ಕತ್ತಿ ಕೋಲು ಅಂಬು ಕಠಾರಿ ಈಟಿ ಕೊಡಲಿ ಮತ್ತಾವ ಕುತ್ತುವ ಕೊರವ ಹಾಕುವ, ಗಾಣ ಮುಂತಾಗಿ ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ, ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು ಇಂತಿವ ಶ್ರುತದಲ್ಲಿ ಕೇಳಲಿಲ್ಲ, ದೃಷ್ಟದಲ್ಲಿ ಕಾಣಲಿಲ್ಲ, ಅನುಮಾನದಲ್ಲಿ ಅರಿಯಲಿಲ್ಲ. ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು.
--------------
ಅಕ್ಕಮ್ಮ
ಇದು ಅರಿಬಿರಿದು ಇದಾರಿಗೂ ಅಸಂಗ. ಹಾವು ಹದ್ದಿನಂತೆ ಹುಲಿ ಹುಲ್ಲೆಯಂತೆ ಹಾವು ಹರಿಯ ಕೂಟದಂತೆ ಅರಿ ಬಿರಿದಿನ ಸಂಗ. ತೆರಹಿಲ್ಲದ ಆಲಯ, ಭಟರಿಲ್ಲದ ಕಟಕ, ದಿಟಪುಟವಿಲ್ಲದ ಜಾವಟಿ, ಎಸಕವಿಲ್ಲದ ಒಲುಮೆ, ರಸಿಕರಿಲ್ಲದ ರಾಜನಗರ ಇಂತಿವರ ಉಪಸಾಕ್ಷಿ ಸಂತೈಸುವದಕ್ಕೆ, ಭ್ರಾಂತನಳಿವುದಕ್ಕೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಆಮ್ನೆಯ ಅನುಮಾನದಲ್ಲಿ ಅರಿದು ಅಭಿನ್ನವಿಲ್ಲದೆ ಅವಿರಳನಾಗಾ, ಮನಸಿಜಪಿತಪ್ರಿಯ ಶ್ರುತಿ ನಾಮ ದೂರ ಗತಿ ಮತಿ ಈವ ರಾಮೇಶ್ವರ ಲಿಂಗದಲ್ಲಿ ಪ್ರತಿಭಿನ್ನವಿಲ್ಲದ ಶರಣಂಗೆ.
--------------
ಗುಪ್ತ ಮಂಚಣ್ಣ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿದು ಮತ್ತೆ ಉಪದೃಷ್ಟದಲ್ಲಿ ಅನ್ಯಭಿನ್ನವ ಮಾಡಿ ಕೇಳಲೇತಕ್ಕೆ? ತಾನರಿದ ಕಲೆಯ ಇದಿರಲ್ಲಿ ದೃಷ್ಟವ ಕೇಳಲೇತಕ್ಕೆ? ಇದು ಪರಿಪೂರ್ಣಭಾವ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದಕೂಟ.
--------------
ತುರುಗಾಹಿ ರಾಮಣ್ಣ
ಸ್ಥೂಲದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಸೂಕ್ಷ್ಮದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಕಾರಣದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ದೃಷ್ಟಕ್ಕೆ ದೃಷ್ಟವ ಕಂಡಲ್ಲದೆ ಮನ ನಿಶ್ಚಯಿಸದು. ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು, ಭಾವ ನಿರ್ಭಾವವಾಗಿಯಲ್ಲದೆ ನಿಶ್ಚಯವಿಲ್ಲ. ನಿಶ್ಚಯಕ್ಕೆ ಒಳಗಾಹನ್ನಬರ ಅಂಗಕ್ಕೆ ಆಚಾರ, ಮನಕ್ಕೆ ಅರಿವು. ಅರಿವಿಂಗೆ ನಿರಾಳವಹನ್ನಕ್ಕ, ಸ್ಥೂಲದಲ್ಲಿ ಮುಟ್ಟಿ, ಸೂಕ್ಷ್ಮದಲ್ಲಿ ಅರಿದು, ಕಾರಣದಲ್ಲಿ ಕೂಡಿ, ಕೂಟ ಏಕಸ್ಥವಾದಲ್ಲಿ, ತ್ರಿವಿಧಲಿಂಗ ತ್ರಿವಿಧ ಲಿಂಗಾರ್ಪಣವಾಯಿತ್ತು. ಆದಲ್ಲಿ ಭಾವವಿಲ್ಲದಿಪ್ಪುದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ, ಎನ್ನ ಅಂಗದೊಳಗಾಗು. ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು. ಆಗೆಂಬುದಕ್ಕೆ ಮುನ್ನವೆ ಆ ಗುಂಡು ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ, ಕಾಯವಡಗಿ, ಭಾವವೆಂಬ ಬಯಲಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
--------------
ಘಟ್ಟಿವಾಳಯ್ಯ
ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೇಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷೆ* ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋಱÂ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರ ಕೂಡುವಾಗ ಗೆಲ್ಲ ಸೋಲದ ಕಾಳಗವೆ ? ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು, ಸಂದೇಹವ ಬಿಟ್ಟು ಕಂಡ ಮತ್ತೆ ಆತನಂಗವ ಕಂಡಡೆ, ಸಂಗದಲ್ಲಿ ನುಡಿದಡೆ, ಈ ಗುಣಕ್ಕೆ ಹಿಂಗದಿದ್ದನಾದಡೆ ಲಿಂಗಕ್ಕೆ ಸಲ್ಲ, ಜಂಗಮಕ್ಕೆ ದೂರ, ಅದು ಕುಂಭೀನರಕ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಬೀಜ ಹುಟ್ಟುವಲ್ಲಿ ಒಂದೆ ಗುಣ. ನಿಂದಲ್ಲಿ ನಾನಾ ಪ್ರಕಾರಗಳಿಂದ ಭೂಮಿಯಲ್ಲಿ ಪ್ರವೇಶಿಸಿಕೊಂಡಿಪ್ಪ ತೆರದಂತೆ, ಆ ಮೂಲ ಮೇಲಂಕುರಿಸಿದ ಮತ್ತೆ ಐದುಗುಣದಲ್ಲಿ ಶಾಖೆವಡೆಯಿತ್ತು, ಮೂರುಗುಣದಲ್ಲಿ ಎಲೆಯಂಕುರಿಸಿತ್ತು, ಎಂಟುಗುಣದಲ್ಲಿ ಕುಸುಮ ಬಲಿಯಿತ್ತು, ಉದುರಿ ಹರಳು ನಿಂದಿತ್ತು. ನವಗುಣದಲ್ಲಿ ಆ ರಸ ಬಲಿಯಿತ್ತು, ಷೋಡಶದಲ್ಲಿ ತೊಟ್ಟು ಬಿಟ್ಟಿತ್ತು. ಪಂಚವಿಂಶತಿಯಲ್ಲಿ ಸವಿದ ರುಚಿ ನಿಂದಿತ್ತು, ಶತಕದಲ್ಲಿ ಮರ[ನಾ]ಯಿತ್ತು. ವೃಕ್ಷದ ಬೇರು ಕಡಿಯಿತ್ತು, ಮರ ಬಿದ್ದಿತ್ತು, ಕೊಂಬು ಹಂಗ ಬಿಟ್ಟಿತ್ತು, ಕೊಂಬಿನೊಳಗಣ ಕೋಡಗ ಬಂಧುಗಳನೊಡಗೂಡಿ, ಸಂದೇಹವಿಲ್ಲವಾಗಿ, ಶ್ರುತ ದೃಷ್ಟ ಅನುಮಾನದಲ್ಲಿ ತಿಳಿಯಿರಣ್ಣಾ. ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ. ಇಂತೀ ಮೂವರ ಹಂಗಿಂದ ಬಂದ ದೇಹಕ್ಕೆ ಕಟ್ಟುವ ದೃಷ್ಟವ ನೋಡಾ. ಒಮ್ಮೆಗೆ ಕಾರುಕನಲ್ಲಿ, ಇಮ್ಮೆಗೆ ಹರದಿಗನಲ್ಲಿ, ತ್ರಿವಿಧಕ್ಕೆ ಮಮ್ಮಾರಿನಲ್ಲಿ ಆದಿಯ ಹೆಣ್ಣಿನ ತೆರದಂತೆ, ಅವರ ಕಂಡು ಆಹಾ ಅ[ದ]ಲ್ಲವೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಚಿತವ ಕಂಡು, ತತ್ಕಾಲವನರಿತು ರಿತುಕಾಲಂಗಳಲ್ಲಿ ಭೇದಿಸಿ ವೇಧಿಸುವದು ಮರ್ಕಟ ವಿಹಂಗ ಪಿಪೀಲಕ ಭೇದ. ಕರ ಕಾಲು ಬಾಯಿಂದ ಕೊಲುವ ಜೀವದ ಹೊಲಬಿನಂತೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿತು ನಡೆವುದು ಲಕ್ಷಣಜ್ಞನ ಯುಕ್ತಿ. ಆ ಯುಕ್ತಿಯಿಂದ ಭಕ್ತಿ ನೆಲೆಗೊಂಡು, ಆ ಭಕ್ತಿಯಿಂದ ಸತ್ಯ ನೆಲೆಗೊಂಡು ಸತ್ಯದೊಡಲು ಲಿಂಗದಂಗವಾಗಿ ಇಪ್ಪಾತನೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.
--------------
ಪ್ರಸಾದಿ ಭೋಗಣ್ಣ
ಸಂದೇಹವುಂಟಾದಲ್ಲಿ ಆ ವ್ರತವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಾಣಿಸಿಕೊಂಡು ಅನುಮಾನದಲ್ಲಿ ಅರಿದು ವಿಚಾರಿಸಿ, ಮರವೆ ಅಹಂಕಾರದಿಂದ ಬಂದ ಉಭಯವ ತಿಳಿದು ದೋಷವಿಲ್ಲದಂತೆ ಪರಿದೋಷವ ಕಂಡು, ಶರಣತತಿ ಮುಂತಾಗಿ ಪ್ರಾಯಶ್ಚಿತ್ತವೆಂಬುದು ವರ್ತಕ ವ್ರತ. ಇಂತಿವನರಿದು ಅಲ್ಲ-ಅಹುದೆನ್ನದೆ, ಎಲ್ಲರ ಮನಕ್ಕೆ ವಿರೋಧವ ತಾರದೆ, ಅಲ್ಲಿ ಆತ್ಮನ ಬೆರೆಯದೆ, ಕಲ್ಲಿಯ ಮಧ್ಯದಲ್ಲಿ ಜಾರಿದ ಅಪ್ಪುವಿನಂತೆ ಉಭಯದಲ್ಲಿಗೆ ಕಾಣಿಸಿಕೊಳ್ಳದ ವ್ರತಾಂಗಿ [ಎ]ಲ್ಲಿಯೂ ನಿಸ್ಸೀಮ. ಅದು ಅರುವತ್ತಮೂರನೆಯ ಶೀಲ, ಅರಿಬಿರಿದಿನ ಭಾವ ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಕಾಯಬಂಧನ ಭಾವ, ಭಾವಬಂಧನ ಜ್ಞಾನ, ಜ್ಞಾನಬಂಧನ ಸಕಲೇಂದ್ರಿಯ. ಇಂತೀ ಸ್ವರೂಪಂಗಳ ಕಲ್ಪಿಸುವಲ್ಲಿ, ಕಾಯಕ್ಕೆ ಬಂಧವಲ್ಲದೆ ಜೀವಕ್ಕೆ ಬಂಧವುಂಟೆ ಎಂದೆಂಬರು. ಭೇರಿಗೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ ಎಂಬರು. ಉಭಯದ ಭೇದವ ತಿಳಿದಲ್ಲಿ, ಕಾಯಕ್ಕೆ ಬಂಧವುಂಟೆ, ಜೀವಕ್ಕಲ್ಲದೆ ? ಭೇರಿಗೆ ಬಂಧವುಂಟೆ, ನಾದಕ್ಕಲ್ಲದೆ? ಇಂತೀ ಅಳಿವುಳಿವ ಎರಡ ವಿಚಾರಿಸುವಲ್ಲಿ, ಜೀವ ನಾನಾ ಭವಂಗಳಳ್ಲಿ ಬಪ್ಪುದ ಕಂಡು, ಮತ್ತಿನ್ನಾರನೂ ಕೇಳಲೇತಕ್ಕೆ? ನಾದ ಸ್ಥೂಲ ಸೂಕ್ಷ್ಮಂಗಳಳ್ಲಿ ಹೊರಳಿ ಮರಳುತ್ತಿಹುದ ಕಂಡು, ಆರಡಿಗೊಳಲೇಕೆ ? ಇಂತಿವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದ ಮತ್ತೆ, ಲಿಂಗಕ್ಕೆ ಪ್ರಾಣವೋ, ಪ್ರಾಣಕ್ಕೆ ಲಿಂಗವೋ ಎಂಬುದ ಪ್ರಮಾಣಿಸಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->