ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ, ಜಂಗಮದಲ್ಲಿ ದೂಷಣ ಮಾಡುತ್ತ ಲಿಂಗವನರಿತು, ಗುರುವ ಮರೆಯಬೇಕು. ಅರಿವನರಿತು, ಜಂಗಮವ ಮರೆಯಬೇಕು. ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ, ಜಂಗಮವೆ ಅರಿವಾಗಿ ನಿಂದಲ್ಲಿ ಲಿಂಗವನರಿತು, ಗುರುವೆಂಬುದ ಮರೆಯಬೇಕು. ಗುರುವನರಿತು, ಜಂಗಮವ ಮರೆಯಬೇಕು. ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದಡೆ ಅವರರಸಿಯ ಪಾರ್ವತಿಯ ಸತಿಯೆಂದು ಕಾಣಬೇಕು. ಅಲ್ಲಿ ಅನುಸರಣೆಯ ಕೊಟ್ಟು ಬೆರಸಿ ಮಾತನಾಡುವ ನರಕಿಗಳನೇನೆಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ತನುಶೀಲವಂತರುಂಟು, ಧನಶೀಲವಂತರುಂಟು, ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು. ಕೆಯಿ ತೋಟ ಹಿಂದೆಸೆ ಮುಂದೆಸೆ ನಿಳಯಶೀಲವಂತರುಂಟು. ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ ಛತ್ರ ಚಾಮರ ಅಂದಳ ಕರಿ ತುರಗಂಗಳು ಮುಂತಾದವೆಲ್ಲಕ್ಕೂ ಶೀಲವಂತರುಂಟು. ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ, ಲಿಂಗ ಬಾಹ್ಯವಾದಲ್ಲಿ, ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ. ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ ಗುರುದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಲಿಂಗವ ಕಂಡು ಲಿಂಗದಲ್ಲಿ ಅನುಸರಣೆಯ ಮಾಡಿದರೆ ಲಿಂಗದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಜಂಗಮವ ಕಂಡು ಜಂಗಮದಲ್ಲಿ ಅನುಸರಣೆಯ ಮಾಡಿದರೆ ಜಂಗಮದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಪ್ರಸಾದವ ಕಂಡು ಪ್ರಸಾದದಲ್ಲಿ ಅನುಸರಣೆಯ ಮಾಡಿದರೆ ಪ್ರಸಾದದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಶರಣಭಕ್ತರ ಕಂಡು ಶರಣಭಕ್ತರಲ್ಲಿ ಅನುಸರಣೆಯ ಮಾಡಿದರೆ ಶರಣ ಭಕ್ತದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ ಗುರುನಿರಂಜನ ಚೆನ್ನಬಸವಲಿಂಗ ಸಾಕ್ಷಿಯಾಗಿ ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ. ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು. ಅರಿದು ಮಾಡಿ ಮರೆದಿರು ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ, ಒಳಗಿಟ್ಟುಕೊಂಡು ಸಂದುಸಂಶಯವಿಲ್ಲದಿದ್ದಡೆ, ಗುರುಲಿಂಗಜಂಗಮಕ್ಕೆ ಉದಾಸೀನವ ಮಾಡಿದಡೆ, ತಪ್ಪನೊಪ್ಪಬಹುದು. ಅಲ್ಲಿಗೆ ದ್ವೇಷ, ಇಲ್ಲಿಗೆ ಶಾಂತಿಯೇ? ಇದು ಭಕ್ತಿಯ ಬಲ್ಲವರ ಮತವಲ್ಲ. ಸತಿಸುತ ಬಂಧುಗಳು ತಪ್ಪಿದಲ್ಲಿ, ಭಕ್ತಿಗೆ ಅನುಸರಣೆಯ ಮಾಡಿದಡೆ, ಲಿಂಗಕ್ಕೆ ಮಜ್ಜನಕ್ಕೆರೆದಡೆ, ಜಂಗಮ ಪ್ರಸಾದವ ಕೊಂಡಡೆ, ಆ ಅಂಗ ಧರೆಯಲ್ಲಿ ನಿಂದಿತ್ತಾದಡೆ, ನಾ ನಿಂದ ಕಾಯಕಕ್ಕೆ ಭಂಗ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವೆಂದು ಅನುಸರಣೆಯ ಮಾಡಿದಲ್ಲಿ ಲಿಂಗವಿಲ್ಲ, ಲಿಂಗವೆಂದು ಅನುಸರಣೆಯ ಮಾಡಿದಲ್ಲಿ ಜಂಗಮವಿಲ್ಲ, ಜಂಗಮವೆಂದು ಅನುಸರಣೆಯ ಮಾಡಿದಲ್ಲಿ ಪಂಚಾಚಾರಶುದ್ಧಕ್ಕೆ ಹೊರಗು. ತಾ ಮಾಡುವ ಭಕ್ತಿ ತನಗೆ ಹಾನಿಯಾದ ಕಾರಣ, ತ್ರಿವಿಧಕ್ಕೆ ಅನುಸರಣೆಯ ಮಾಡಲಿಲ್ಲ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ, ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ, ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ ಮಲಿನ ಅಮಲಿನವೆಂಬುದ ಕಾಣದೆ ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ, ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು ರಸವನೀಂಟಿದ ಘಟದಂತೆ ಅಸಿಯ ಮೊನೆಗೆ ಬಂದು ನಿಲುವಂತೆ, ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ, ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ ಭ್ರಮರ ಅನುಭವಿಸಿದ ಗಂಧದಂತೆ ಭೂಸ್ಥಾಪಿತದಂತೆ, ಅನಲಕಾಷ*ಪಾಷಾಣದಂತೆ ದೃಷ್ಟವ ಕಾಬನ್ನಕ್ಕ ಷಟ್‍ಸ್ಥಲಸಂಬಂಧ. ಇಂತೀ ಸ್ಥಲಂಗಳನಾರೋಪಿಸಿದಲ್ಲಿ ಸದ್ಯೋಜಾತಲಿಂಗವು ಸಂಬಂಧನಪ್ಪನು.
--------------
ಅವಸರದ ರೇಕಣ್ಣ
ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ. ಅದು ಜಗದ ಹುದುಗು. ತಾನರಿದು ಅಲ್ಲ ಅಹುದೆಂದು ಎಲ್ಲರಿಗೆ ಹೇಳಿ ಪರಧನದಲ್ಲಿ ಪರಸತಿಯಲ್ಲಿ ಅನ್ಯರ ನಿಂದೆಯಲ್ಲಿ ವ್ರತಾಚಾರಭಂಗಿತರಲ್ಲಿ ಇದನರಿದು ಅನುಸರಣೆಯ ಮಾಡಿದಡೆ ಕುಂಭೀನರಕದಲ್ಲಿ ಹಿಂಗದಿರ್ಪನು. ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು.
--------------
ಡಕ್ಕೆಯ ಬೊಮ್ಮಣ್ಣ
ಕಾಯಕಕೃತ್ಯ, ನೇಮಕೃತ್ಯ, ಆಚರಣೆಕೃತ್ಯ, ದಾಸೋಹಕೃತ್ಯ, ಭಾವಕೃತ್ಯ, ಸೀಮೆಕೃತ್ಯ, ಯಾಚಕಕೃತ್ಯ, ಗಮನಕೃತ್ಯ, ಲಿಂಗಕೃತ್ಯ, ಜಂಗಮಕೃತ್ಯ, ಪಾದೋದಕಕೃತ್ವ, ಪ್ರಸಾದಕೃತ್ಯ, ಕೊಡೆಕೊಳ್ಳೆನೆಂಬ ಉಭಯಕೃತ್ಯ, ಮರೆದರಿಯೆ ಅರಿದು ಮರೆಯೆನೆಂಬ ಅರಿವುಕೃತ್ಯ ತನ್ನ ಕೃತ್ಯಕ್ಕೆ ಆವುದು ನಿಷೇಧವೆಂದು ಬಿಟ್ಟಲ್ಲಿ, ರಾಜ ಹೇಳಿದನೆಂದು, ಗುರುವಾಜ್ಞೆಯ ಮೀರಿದಿರೆಂದು, ಶರಣರ ಸಮೂಹ ಹೇಳಿದರೆಂದು ಮಿಕ್ಕಾದ ತನ್ನ ಪರಿಸ್ಪಂದಿಗಳರಿದರೆಂದು ಇಂತೀ ಗುಣಕ್ಕೆ ಅನುಸರಣೆಯ ಮಾಡಿದೆನಾದಡೆ ಎನಗದೆ ಭಂಗ. ಇದಕ್ಕೆ ನೀ ಒಪ್ಪಿದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀ ತಪ್ಪಿದೆಯಾದಡೆ ನಿನಗೆ ಎಕ್ಕಲನರಕ.
--------------
ಅಕ್ಕಮ್ಮ
ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ: ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು. ಅನ್ಯದೈವದ ಪೂಜೆಯ ಮಾಡಲಾಗದು. ಸ್ಥಾವರಲಿಂಗಕ್ಕೆರಗಲಾಗದು. ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು. ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು. ಇವರೊಳಗೆ ಅನುಸರಣೆಯ ಮಾಡಿಕೊಂಡು ನಡೆದನಾದೊಡೆ ಅವಂಗೆ ಕುಂಭೀಪಾತಕ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
-->