ಅಥವಾ

ಒಟ್ಟು 13 ಕಡೆಗಳಲ್ಲಿ , 8 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳೇಕೆ `ನೋಡಬೇಡಾ' ಎಂದರೆ ಮಾಣವು ? ಶ್ರೋತ್ರಂಗಳೇಕೆ `ಆಲಿಸಬೇಡಾ' ಎಂದರೆ ಮಾಣವು ? ಜಿಹ್ವೆ ಏಕೆ `ರುಚಿಸಬೇಡಾ' ಎಂದರೆ ಮಾಣವು (ದು ?) ನಾಸಿಕವೇಕೆ `ವಾಸಿಸಬೇಡಾ' ಎಂದರೆ ಮಾಣವು ? (ದು ?) ತ್ವಕ್ಕು ಏಕೆ `ಸೋಂಕಬೇಡಾ' ಎಂದರೆ ಮಾಣವು ? (ದು ?)_ ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು! ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಿಗೆ ಪದಾರ್ಥಪ್ರೇಮವುಂಟೆ ? ಪ್ರಾಣಲಿಂಗಿಗೆ ಪ್ರಪಂಚದ ಮೋಹವುಂಟೆ ? ಪ್ರಾಣಲಿಂಗಿಗೆ ಸ್ಥಲಕುಲದ ಅಭಿಮಾನ, ಕುಲಗೋತ್ರದ ಹಂಗು ಉಂಟೆ ? ಪ್ರಾಣಲಿಂಗಿಗೆ ಮಾತಾ-ಪಿತಾ, ಸತಿ-ಸುತ ಬಂಧುಗಳ ಸ್ನೇಹಿತರ ಮೋಹವುಂಟೆ ? ಇಂತೀ ಸರ್ವರಲ್ಲಿ ಮಮಕಾರ ಉಳ್ಳಾತ ಅಂಗಪ್ರಾಣಿಯಲ್ಲದೆ ಲಿಂಗಪ್ರಾಣಿ ಆಗಲರಿಯನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ ಕಾಮನ ಕಾಟವು ಕಡೆಗಾಣದಯ್ಯಾ. ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ ಕಾಲದೂತರ ಭೀತಿಯು ತಪ್ಪದಯ್ಯಾ. ತನುತ್ರಯದ ಅಭಿಮಾನ ಇಹನ್ನಬರ ಸಂಸಾರಸಂತಾಪ ಓರೆಯಾಗದಯ್ಯಾ. ಕೂಡಲಚೆನ್ನಸಂಗಮದೇವಾ,_ ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ ನಿನ್ನ ಮಾಯದ ಮಾಟವೆಂದರಿದೆನಯ್ಯಾ.
--------------
ಚನ್ನಬಸವಣ್ಣ
ಅಂಗವಿರೋಧಿ ಶರಣ, ಲಿಂಗಪ್ರಾಣಪ್ರತಿಗ್ರಾಹಕ. ಅರ್ಥ ಪ್ರಾಣ ಅಭಿಮಾನ ವಿರೋಧಿಶರಣ, ಜಂಗಮಪ್ರಾಣಪ್ರತಿಗ್ರಾಹಕ. ರುಚಿ ವಿರೋಧಿ ಶರಣ, ಪ್ರಸಾದಪ್ರಾಣಪ್ರತಿಗ್ರಾಹಕ. ಈ ತ್ರಿವಿಧವ ಮೀರಿ ನಿಮ್ಮಲ್ಲಿ ನಿಂದ, ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಅರ್ಥ ಪ್ರಾಣ ಅಭಿಮಾನ ನಾಸ್ತಿಯಾದಲ್ಲಿ ಕಿಚ್ಚುಗೊಂಡು ಮುಗ್ಧರಾದರು ಅನಂತರು. ಪರಧನ ಪರಸ್ತ್ರೀ ಪರಹಿಂಸೆಗೆಳಸಿ ಬಾಧೆಗೆ ಸಿಲ್ಕಿ ಮುಗ್ಧರಾದರಖಿಳರು. ಅನಿಷ್ಟವೆರಸಿ ಅಧಿಕರೋಗವೆಡೆಗೊಂಡಲ್ಲಿ ಮುಗ್ಧರು. ಆಯಾಯ ಕಾಲಕ್ಕೆ ಅಲ್ಲಲ್ಲಿಗೆ ಮುಗ್ಧರಲ್ಲದೆ ನಿತ್ಯಮುಗ್ಧರಲ್ಲ. ಇದು ಕಾರಣ, ಲಿಂಗಶರಣನಿಂತಲ್ಲ. ಕಾಯದಲ್ಲಿ ಮುಗ್ಧ, ಕರಣದಲ್ಲಿ ಮುಗ್ಧ, ಪ್ರಾಣದಲ್ಲಿ ಮುಗ್ಧ, ಭಾವದಲ್ಲಿ ಮುಗ್ಧ, ಗುರುನಿರಂಜನ ಚನ್ನಬಸವಲಿಂಗ ಸಮರಸವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರ್ಪಿತ ಭುಂಜಕನ, ಪ್ರಸಾದ ಭುಂಜಕನ ಪರಿ ಬೇರೆ, ಅರ್ಪಿತವೆಂದು ಸ್ಥೂಲ ಸೂಕ್ಷ್ಮವೆಂದೆನ್ನದೆ ಘನಕ್ಕೆ ಘನ ಮಹಾಘನ ಕಾಯ ಜೀವವೊಂದಯ್ಯಾ. ಅರ್ಥ ಪ್ರಾಣ ಅಭಿಮಾನ ಸವೆದಡೆ ಸಮಭೋಗರುಚಿಪ್ರಸಾದಿ. ಈ ಉಭಯಲಿಂಗದ ಮಹಿಮೆಯನು ಇನ್ನುಪಮಿಸಬಾರದು. ರೂಹಿಸಿ ಭಾವಿಸಿ ಗುಣಪ್ರಪಂಚವನತಿಗಳೆದು ನಿರ್ವಿಕಲ್ಪಿತನಾದಾತ ಆನೆಂಬ ಶಬ್ದವಳಿದುಳಿದ ಪ್ರಸಾದಗ್ರಾಹಕ ನಿಂದ ನಿಲುವು, ಪರತಂತ್ರ ಪರಿಭಾವ ಪ್ರಪಂಚುವ ಬಿಟ್ಟು ಘನರವಿಲೋಚನನಾಗಿ, ಅರ್ಪಿತ ಭುಂಜಕನಲ್ಲ, ಆದಿವಿಡಿದಾಗಮನಲ್ಲ. ಅರ್ಪಿತ ಅನರ್ಪಿತರಹಿತ ಕೂಡಲಚೆನ್ನಸಂಗನಲ್ಲಿ ಆತ ದಿಟಪ್ರಸಾದಿ.
--------------
ಚನ್ನಬಸವಣ್ಣ
ವ್ರತ ನೇಮ ಶೀಲಮಂ ಮಾಡಿಕೊಂಡು, ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ ; ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು. ಅವಾವೆಂದಡೆ ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ತ್ರ ರತ್ನಾಭರಣ ತಾಂಬೂಲ ಮೆಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ, ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು ಎಲ್ಲ ವ್ರತಂಗಳಿಗೆಯೂ ಜಂಗಮಪ್ರಸಾದವೆ ಪ್ರಾಣ; ಎಲ್ಲ ನೇಮಕ್ಕೆಯೂ ಜಂಗಮದರ್ಶನವೆ ನೇಮ; ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ; ಎಲ್ಲ ವ್ರತ ನೇಮ ಶೀಲಂಗಳೆಲ್ಲವು ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ, ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ. ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು ; ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ. ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ ಎನಗೆ ಕುಂಭೀಪಾತಕ ನಾಯಕನರಕ ತಪ್ಪದು. ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು.
--------------
ಅಕ್ಕಮ್ಮ
ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು. ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು, ನೆನಹಿನ ವ್ಯಾಪ್ತಿ ಬಿಡದು. ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು. ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು. ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು. ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ.
--------------
ಅಕ್ಕಮಹಾದೇವಿ
ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರವ ಮಾಡದಿರಯ್ಯಾ, ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ. ನೀವಲ್ಲದೆ ಮತ್ತೇನನೂ ಅರಿಯೆನು. ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು. ಮನ್ನಿಸು ಕಂಡಾ, ಮಹಾಲಿಂಗವೆ. ಸತಿಯಾನು, ಪತಿ ನೀನಯ್ಯಾ. ಮನೆಯೊಡೆಯ ಮನೆಯ ಕಾ್ದುಪ್ಪಂತೆ ನೀವೆನ್ನ ಮನವ ಕಾ್ದುಪ್ಪ ಗಂಡನು. ನಿಮಗೋತ ಮನವನನ್ಯಕ್ಕೆ ಹರಿಸಿದಡೆ ನಿಮ್ಮ ಅಭಿಮಾನ ಹಾನಿ, ಕೂಡಲಸಂಗಮದೇವಾ. 505
--------------
ಬಸವಣ್ಣ
ಕಾಯಪ್ರಸಾದ ಒಂದೆಡೆಯಲ್ಲಿ, ಜೀವಪ್ರಸಾದ ಒಂದೆಡೆಯಲ್ಲಿ, ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ನಿತ್ಯಪ್ರಸಾದ ಒಂದೆಡೆಯಲ್ಲಿ, ವಚನಪ್ರಸಾದ ಒಂದೆಡೆಯಲ್ಲಿ, ಅರ್ಥ ಪ್ರಾಣ ಅಭಿಮಾನ ಒಂದೆಡೆಯಲ್ಲಿ, ಅಖಂಡಿತವೆನಿಸಿ ತಾ ಲಿಂಗಪ್ರಸಾದ ಒಂದೆಡೆಯಲ್ಲಿ. ಇಂತಿವೆಲ್ಲವೂ ಏಕವಾದ ಪ್ರಸಾದಿಯ ಪ್ರಸಾದದಿಂದ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯಾದೆನಯ್ಯಾ.
--------------
ಚನ್ನಬಸವಣ್ಣ
ಮಾಡುವ ದಾಸೋಹ ಕಿಂಕುರ್ವಾಣದಿಂದಾದರೆ ಭಕ್ತನ ಆವ ಅವಗುಣಂಗಳು ಮುಟ್ಟಲಮ್ಮವಯ್ಯಾ. ಅರ್ಥ ಪ್ರಾಣ ಅಭಿಮಾನ ತ್ರಿಸ್ಥಾನ ಶುದ್ಧವ ಮಾಡುವಲ್ಲಿ ನಿರಾಭಾರಿ ಮಹೇಶ್ವರನ ಕೂಡಿಕೊಂಡಿಪ್ಪ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅರ್ಥ ಪ್ರಾಣ ಅಭಿಮಾನ ಭಕ್ತಂಗೆ ಹೊಲ್ಲದೆಂಬರು, ತಮ್ಮ ಹೊದ್ದಿದ ಮಲಿನವನರಿಯರು. ಕರುಳು ಕೊಳ್ಳದ ಉದಾನವ ಮರಳಿ ಅರ್ಪಿತವೆಂದು ಕೊಳಬಹುದೆ ? ಬೇಡುವಾತ ಜಂಗಮವಲ್ಲ, ಮಾಡುವಾತ ಭಕ್ತನಲ್ಲ. ಬೇಡದ ಮುನ್ನವೆ ಮಾಡಬಲ್ಲರೆ ಭಕ್ತ. ಬೇಡಿ ಮಾಡಿಸಿಕೊಂಬನ್ನಬರ ಜಂಗಮವಲ್ಲ. ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ. ಇದು ಕಾರಣ, ಕೂಡಲ ಚೆನ್ನಸಂಗಯ್ಯನಲ್ಲಿ ಮಾಡುವ ಭಕ್ತ, ಬೇಡದ ಜಂಗಮವಪೂರ್ವ.
--------------
ಚನ್ನಬಸವಣ್ಣ
ಅರ್ಥ ಗುರುವಿನಲ್ಲಿ ಸವೆದು, ಪ್ರಾಣ ಲಿಂಗದಲ್ಲಿ ಸವೆದು, ಅಭಿಮಾನ ಜಂಗಮದಲ್ಲಿ ಸವೆದು, ಆ ಗುರುಲಿಂಗಜಂಗಮವೇ ತನ್ನ ಪ್ರಾಣವೆಂದು ತಿಳಿಯಬಲ್ಲಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->