ಅಥವಾ

ಒಟ್ಟು 30 ಕಡೆಗಳಲ್ಲಿ , 6 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಲೋಕದ ಗಂಡರ ಮಹಾತ್ಮೆಯ ಹೆಂಡರರಿವರೆ? ಹಾ ಹಾ! ಅಯ್ಯಾ! ಶರೀರದೊಳಗೆ ಸಂದು ನಿಮ್ಮನಂತುಗಾಣಲಾರದಾದನು ಬೇಟಗೊಂಡು ನಿಮ್ಮನೆ ಬೇಡುವೆನಯ್ಯ. ಅಯ್ಯಾ ಎನ್ನನೆನಿಸು ಭವ ಬರಿಸಿದಡೆ ನೀನೆ ಗಂಡ ನಾನೆ ಹೆಂಡತಿ, ಕಪಿಲಸಿದ್ಧಮಲ್ಲೇಶ್ವರ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ನಟ್ಟಡವಿಯೊಳಗೆ ಇರುಳು-ಹಗಲೆನ್ನದೆ ಅಪ್ಪಾ! ಅಯ್ಯಾ! ಎಂದು ನಾನರಸುತ್ತ ಹೋದಡೆ, `ನಾನಿದ್ದೇನೆ ಬಾ ಮಗನೆ' ಎಂದು ಕರೆದು, ಎನ್ನ ಕಂಬನಿದೊಡೆದು, ತನ್ನ ನಿಜವ ತೋರಿದ ಪಾದವಿಂದೆನ್ನಲ್ಲಿಗೆ ನಡೆದುಬಂದಡೆ ನಾನರಿಯದೆ ಮರುಳುಗೊಂಡೆಹೆನೆಂದು ಎನ್ನ ಮನದೊಳಗೆಚ್ಚರ ಮಾಡಿದೆ. ಆತನನರಸಿಕೊಂಡು ಬಂದೆನ್ನ ಹೃದಯದಲಿಂಬಿಟ್ಟುಕೊಂಬೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ.
--------------
ಸಿದ್ಧರಾಮೇಶ್ವರ
ಆನೆ ಮದಸೊಕ್ಕಿ ಮಾವತಿಗನನರಿಯದು ಕೇಳಿರಣ್ಣಾ. ಮದವುಡುಗಿ ಬೆದರಿ ಇನ್ನೇವೆನಿನ್ನೇವೆನೆಂಬುದಯ್ಯಾ. ಇದಕಂಕುಶ ಹಿಡಿದಿದ್ದನಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ಹಾ! ಅಯ್ಯಾ!
--------------
ಸಿದ್ಧರಾಮೇಶ್ವರ
ಅಯ್ಯ! ನೀ ಬಾರಯ್ಯ! ಬಂದು ಎನ್ನ ಹೃದಯ ಮನ ಶಾಸನವ ಮಾಡಿ ನಿಲ್ಲಯ್ಯ. ಹಾ! ಅಯ್ಯಾ! ಅಯ್ಯಾ! ನೀ ಬಾರ! ನಿನ್ನ ಧರ್ಮ! ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಇಹತ್ರ ಪರತ್ರದಲ್ಲಿ ಎರಡರಲ್ಲಿ ಇಪ್ಪುದು ಗೀತವು ನೋಡಯ್ಯಾ. ಇತ್ತ ಬಾರಾ, ಸಾರಾ ಎಂಬುದು ಗೀತವು ನೋಡಯ್ಯಾ. ಗೀತವನೂ ಗಿರಿಜೆಯನೂ ಬಾಯೆಂದು ಕೈವೀಸುವನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಓ! ಅಯ್ಯಾ!
--------------
ಸಿದ್ಧರಾಮೇಶ್ವರ
ಅತ್ಯಾಶೆಯೆಂಬುದೆ ಪಾಪ, ಬೇರೆ ಪಾಪೆಂಬುದಿಲ್ಲ, ಕಂಡಿರೆ ಅಯ್ಯಾ! ಪರಿಣಾಮವೆಂಬುದೆ ಪರಮಾನಂದ, ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ! ಇಹಪರದಾಶೆಯಿಲ್ಲದಿಹುದೆ ಶಿವಯೋಗ. ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧರಾಮನ ಪರಿಯ.
--------------
ಹಾವಿನಹಾಳ ಕಲ್ಲಯ್ಯ
ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ! ನೆನಹಿಂಗೆ ಬಾರದುದ ಕಾಬುದು ಹುಸಿ. ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಅಡವಿಯಲ್ಲಿ ತಡೆಗಡಿದ ಪಶುವಿನಂತಾದೆವಾವೆಲ್ಲ ಅಯ್ಯಾ! ಅಕ್ಕಟಾ, ಒಡೆಯರಿಲ್ಲದ ಅನಾಥರಾದೆವಾವೆಲ್ಲ ಅಯ್ಯಾ! ಅಕ್ಕಟಾ, ನಮಗಿನ್ನು ದಿಕ್ಕಾರು, ದೆಸೆಯಾರು? ಅಕ್ಕಟಾ, ನಮಗಿನ್ನು ಒಡೆಯರಾರು? ಹೇಳಾ ತಂದೆ! ಅಯ್ಯಾ, ಶ್ರೀಮಲ್ಲಿನಾಥಂಗಾ, ಅವಧರಿಸು ಎನ್ನ ಬಿನ್ನಹವ ಗಣಾಚಾರಕ್ಕೆ ಬುಧ್ಧಿಗಲಿಸುವುದೆನ್ನ ತಂದೆ!
--------------
ಸಿದ್ಧರಾಮೇಶ್ವರ
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ? ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ ಅಸು ಘಟಿಸಿದುದುಂಟೆ, ಅಯ್ಯಾ? ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ? ಸೂಜಿಕಲ್ಲು ಸೂಜಿಯನರಸುವಂತೆ, ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ! ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ? ಅದರ ಮರೆಯ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ದೇವರು ಕೈವೀಸಕೆ ಅವರಿವರೆನ್ನೆ ಕಂಡಯ್ಯಾ! ನೆಲೆಗೊಳ್ಳಲೀಯದು ಮೊಲೆಗಳಲೆಸೆವೆ ನೀ ಅಯ್ಯಾ! ಭಾಷೆಯಾಳು ಕಾಮನು. ಕಪಿಲಸಿದ್ಧಮಲ್ಲಿನಾಥನೆಸರ ಹೇಳಿದವರನೆಸುವನಯ್ಯಾ.
--------------
ಸಿದ್ಧರಾಮೇಶ್ವರ
ಮುನ್ನಿನ ಭವದವರನರಸಿ ಹರಿವುದೆ ಹಾ! ಅಯ್ಯಾ! ಸುಡು! ನಿನ್ನ ಭಾಷೆ ಹೋಗಲಿ. ಕೊಟ್ಟ ಕರ್ತುವ ಬಿಟ್ಟು ಹರಿವುದೆ ಜಗವೈದ್ಯನಾಥ ಕಪಿಲಸಿದ್ಧಮಲ್ಲಿನಾಥನ.
--------------
ಸಿದ್ಧರಾಮೇಶ್ವರ
ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು, ಅಟ್ಟುಂಡೆಹೆನೆಂದು ಒಲೆಯ ಬೂದಿಯ ತೋಡುವನ್ನಕ್ಕ ಒಳಗೊಂದು ಕಿಡಿಯಿದ್ದು ಕೈಬೆಂದು ಮರಗುವಂತಾಯಿತ್ತಲ್ಲಾ ಎನಗೆ! ನಿಸ್ಸಂಸಾರಿಯ ಒಡಲೊಲೆಯ ಬೂದಿಯ ಕೆಣಕುವನ್ನಕ್ಕ ಒಳಗೊಂದು ಸುಜ್ಞಾನವೆಂಬ ಕಿಡಿಯಿದ್ದು ಎನ್ನ ಮನದ ಕೈ ಬೆಂದು ಹೃದಯ ಮರಗುತ್ತಿದ್ದೇನೆ. ಇದಕ್ಕೆ ಶೀತಾಳಮಂತ್ರವುಂಟೆ ಅಯ್ಯಾ! ಎನ್ನ ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ನಿಜಗುಣ ಶರಣೆಂಬುದೆ ಇದಕ್ಕೆ ಶೀತಾಳಮಂತ್ರ
--------------
ಚಂದಿಮರಸ
ತಿಳಿಯದೆ ಪೂಜಿಸಿದಡಾಗುವುದೇನೊ ಅಯ್ಯಾ! ತಿಳಿದು ತಿಳಿದು ಮಾಡಬೇಕು ಲಿಂಗಪೂಜೆಯ; ತಿಳಿದು ತಿಳಿದು ಮಾಡಬೇಕು ಜಂಗಮಾರ್ಚನೆಯ. ತಿಳಿದು ಮಾಡಬೇಕು; ತಿಳಿಯದೆ ಮಾಡಲು ನಿನ್ನ ಸಿದ್ಧಿಗೆ ಸಿದ್ಧರಾದರಲ್ಲದೆ, ನಿನ್ನಂಗ ದೊರೆಕೊಂಬ ಪರಿಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೇವಿ ದೇವನಾ ನಂಬಿದಾ ನಂಬಿದವೈವರ ನಿಲವ ಕೇಳಿರೊ ಅಯ್ಯಾ! ಹರಿವ ನದಿಗಳಂತೆ ಪರಹಿತಾರ್ಥವಾಗಿಪ್ಪರಯ್ಯಾ, ತಾವು ಮಾಡುವರಲ್ಲದೆ ಮೂಲದೊಳಗಿರರು, ಕಪಿಲಸಿದ್ಧಮಲ್ಲಿನಾಥನ ಕೂಡಿಪ್ಪರಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->