ಅಥವಾ

ಒಟ್ಟು 39 ಕಡೆಗಳಲ್ಲಿ , 11 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ. ಅರಿದರಿದು, ಬಿಲುಗಾರನಹೆಯೊ ! ಎಸೆದಿಬ್ಬರು ಒಂ[ದಾ]ಹರು ಗಡ. ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ ! ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು. ನಾವಿಬ್ಬರೊಂದಾಗೆ ಬಿಲ್ಲಾಳಹೆ, ಎಸೆಯೆಲೋ ಕಾಮಾ.
--------------
ಉರಿಲಿಂಗದೇವ
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ. ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು, ಮತ್ತೊಂದ ಮತ್ತೊಂದ ನೆನೆವರೆ ? ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ.
--------------
ಸಂಗಮೇಶ್ವರದ ಅಪ್ಪಣ್ಣ
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಈಡಾ ಪಿಂಗಳ ಮಧ್ಯದಲ್ಲಿ ಅನಿಲ ತುಂಬಿ, ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು ! ಅರಿವಡೆ ತಲೆಯಿಲ್ಲ, ಹಿಡಿವಡೆ ಮುಡಿಯಿಲ್ಲ ! ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನ ಪರಿಯಿಂತುಟು; ಅರಿದರಿದು !
--------------
ಚನ್ನಬಸವಣ್ಣ
ಅರಿದರಿದು ಅರಿವು ಬಂಜೆಯಾಯಿತ್ತು. ಮರೆ ಮರೆದು ಮರಹು ಬಂಜೆಯಾಯಿತ್ತು. ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.
--------------
ಅಲ್ಲಮಪ್ರಭುದೇವರು
ಇದ್ದ ಪರಿ ಇಂತುಟಿದೆ ನೋಡಯ್ಯಾ; ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ, ಭೂತಳದೊಳಗೆ ಕಂಡುದಿಲ್ಲ. ಇಂತಪ್ಪ ಅನಿಯಮದ ಸುಳುಹು, ಅಹುದಹುದು, ಅರಿದರಿದು ಜಂಗಮಸ್ಥಲ ಇಂತುಟಲ್ಲದೆ, ಎಂತುಟು ಹೇಳಾ ಆಪ್ಯಾಯನದ ಅರಿಕೆಯ ಹೊಲಬ ಕಾಣಬಾರದು, ಊಡಿಸಿದಡೆ ಉಂಬನೊ ಉಣ್ಣನೊ ಉಂಬಂಥವರಾದಡೆ ನೀಡುವೆ ಕೂಡಲಸಂಗಮದೇವರಿಗೆ ಚೆನ್ನಬಸವಣ್ಣಾ, ನೀನಹುದಹುದೆನಲಿಕೆ.
--------------
ಬಸವಣ್ಣ
ಪರುಷವಿದ್ದುದ ಕಂಡು ಪರಿಣಾಮಬಡುವರು, ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು. ಅರಿದರಿದು ಗುರುಶಿಷ್ಯಸಂಬಂಧವು, ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು. ಕುರುಹು ಘನವೋ ? ಲಿಂಗ ಘನವೋ ? ಅರಿವುಳ್ಳವರು ಹೇಳಿರೆ. ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ ಅವನಂದೇ ದೂರ.
--------------
ಚನ್ನಬಸವಣ್ಣ
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಇಡಾಪಿಂಗಳ ಮಧ್ಯದಲ್ಲಿ ಅನಿಲ ತುಂಬಿ, ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು. ಅರಿವಡೆ ತಲೆಯಿಲ್ಲ, ಹಿಡಿವಡೆ ಒಡಲಿಲ್ಲ, ಕೂಡಲಸಂಗಮದೇವಾ, ನಿಮ್ಮ ಶರಣನ ಪರಿ ಇಂತುಟು, ಅರಿದರಿದು.
--------------
ಬಸವಣ್ಣ
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ, ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ. ಸರ್ವಕಾರಣ ಲಿಂಗವಾಗಿ, ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ. ಸಂಗಸುಖದೊಳು ಓಲಾಡುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸ್ವಾಮಿ ಸ್ವಾಮಿ ಅಂಗ ಲಿಂಗ ಸಮರಸವ ಅರಿದರಿದು ಅರಿಯದಂತಿರ್ಪೆ ನಾನು; ಕರುಣಿಸಯ್ಯಾ, ಅಯ್ಯಾ ದಮ್ಮಯ್ಯಾ. ನೀ ಲಿಂಗಾಂಗ ಸಮರಸದ ವಿಚಾರನಿಮಿತ್ತೆನ್ನ ತಂದುದ ಬಲ್ಲೆ. ಂಗಾಂಗ ಸಮರಸ ನಿಮಿತ್ತ ತ್ರಿಕರಣಶುದ್ಧವಾಗಿ ನಾ ಬಂದುದ ಬಲ್ಲೆ. ಎನ್ನ ಬೋಧಿಸಿ ಭವಕ್ಕೆ ಬಾರದನ ಮಾಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಸಿವು ತೃಷೆ ವಿಷಯ ವ್ಯಸನ ಈ ನಾಲ್ಕು ಉಳ್ಳವರು ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ ? ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲ. ಅರಿದನಾದಡೆ ಹಸಿವ ವಿೂರಿ ಉಂಬ, ತೃಷೆಯ ವಿೂರಿ ಕೊಂಬ, ವಿಷಯವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ. ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು ಎನ್ನ ಮನ ನಾಚಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಸರಿನ ಭಕ್ತಜಡರುಗಳು ಬೇಸತ್ತು ಜಂಗಮಕ್ಕೆರಗಿ ಪಾದಪ್ರಕ್ಷಾಲನೆಯಂ ಮಾಡಿ ಪಾದೋದಕವ ಧರಿಸುತ್ತಿರ್ಪರು. ಆವುದು ಕ್ರಮವೆಂದರಿಯರು. ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರೆಂದರಿಯರು. ಅರಿದರಿದು ಬರುದೊರೆವೋದರು ಮಾನವರೆಲ್ಲ. ಅರಿವು ಸಾಮಾನ್ಯವೇ ? ಶಿವಾತ್ಮಕಪದದ್ವಂದ್ವಪ್ರಕ್ಷಾಲನೆ ಜಲಂ ನರಾಃ ಯೇ ಪಿಬಂತಿ ಪುನಸ್ತನ್ಯಂ ನ ಪಿಬಂತಿ ಕದಾಚನ ಇಂತೆಂಬ ವಚನವ ಕೇಳಿ ನಂಬುವುದು. ನಂಬದಿರ್ದಡೆ, ಮುಂದೆ ಭವಘೋರ ನರಕ ತಪ್ಪದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ, ನಿಮ್ಮ ಶರಣನ ಮತ್ರ್ಯಕ್ಕೆ ತಂದೆಯಾಗಿ ನೆನೆದು ಸುಖಿಯಾಗಿ ಆನು ಬದುಕಿದೆಯ್ಯಾ, ಅದೇನು ಕಾರಣ ತಂದೆಯೆಂದರಿದೆನಯ್ಯಾ, ಎನ್ನ ಕಾರಣ ತಂದೆಯೆಂದರಿದೆನಯ್ಯಾ, ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು ಕಣ್ದೆರೆದೆನಯ್ಯಾ, ಕೂಡಲಸಂಗಮದೇವಾ. 5
--------------
ಬಸವಣ್ಣ
ಒಂದು ಮನ; ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ [ಗೆ] ನೆನೆವ ಪರಿಯೆಂತೊ ? ಅರಿದರಿದು ಲಿಂಗಜಾಣಿಕೆ ! ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ. ಒಂದರೊಳಗೆ ಎರಡೆರಡಿಪ್ಪವೆಂದಡೆ, ಅದು ಭಾವಭ್ರಮೆಯಲ್ಲದೆ ಸಹಜವಲ್ಲ. ನಿರುಪಾಧಿಕಲಿಂಗವನುಪಾಧಿಗೆ ತರಬಹುದೆ ? ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ ? ಗುಹೇಶ್ವರಾ_ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ, ಎಂತಿರ್ದುದಂತೆ ಸಂತ !
--------------
ಅಲ್ಲಮಪ್ರಭುದೇವರು
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು ? `ನ ದೇವಃ ಕೇಶವಾತ್ಪರಂ' ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ ? ಹಿಡಿಯರೆ ಅಂದು ಆಕಾಶಗಣಂಗಳು ? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಹಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಹಂತಹ ಅಂಗವಾಗದೆ ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಹಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ ? ಕುಲ ವಿಶೇಷವೊ ? ಹೇಳಿರಣ್ಣಾ. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಕ್ರೂರಹೃದಯರ ಮಾತ ಕೇಳಲಾಗದು. ಹೋಹೋ ಶಿವನ ಮುಖದಿಂದ ಹುಟ್ಟಿ ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ ಜನಿಸಿದಂತಹ ವರ್ಣಿಗಳು ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ ? `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದಾಗಿ_ ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ ? ಅದಂತಿರಲಿ, ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ ? ಆಗದು ಅವದಿರ ಸಂಗ. ಅಧಮರ ವರ್ಣಾಶ್ರಮಹೀನರ ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ ಹೊರಸಿ[ನಡಿ]ಯಲಿ ನುಸುಳ ಹೇಳಿತ್ತೇ ಆ ವೇದ ? ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಅದಂತಿರಲಿ, ಹಲ ಕೆಲ ಕಾಲ ವಂದಿಸಿದ ಗೌತಮಂಗೆ ಬಾರದೆ ಅಂದು ಗೋವಧೆ ? ಅದಂತಿರಲಿ, ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ ಕರ್ಣನ ಶಿರಕವಚ ಹೋಗದೆ ಜಗವರಿಯೆ ? ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ ಮೂಜಗವರಿಯೆ ? ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ. ಅವಂಗೆ ಬಂದ ವಿಧಿಯ ಹೇಳಲಾಗದು. ಅದಂತಿರಲಿ, ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್ ಎಂದುದಾಗಿ, ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ ? ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು ಯಜುರ್ವೇದ ಸಾಕ್ಷಿಯಾಗಿ ಪೇಳುವೆ ಕಾಶಿಯ ಕಾಂಡದಲ್ಲಿ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->