ಅಥವಾ

ಒಟ್ಟು 16 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾಮದವಂ ಕೊಂಡು, ಅಹಂಕಾರವೆಂಬ ಮದ, ಸರ್ವಾಂಗ ವೇದ್ಥಿಸಿ ತಲೆಗೇರಿದಲ್ಲಿ, ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ, ಆನಂದವೆಂಬ ಆಶ್ರಯವ ಭಾವಿಸಿ ನೋಡದೆ, ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ, ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ, ದಿಂಡೆಯತನದಿಂದ ಕಂಡೆನೆಂದಡೆ, ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ, ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.
--------------
ಹೆಂಡದ ಮಾರಯ್ಯ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಪ್ರಸಾದವ ಬಯಸಿ ಪರವನರಿದೆನೆಂಬವಂಗೆ, ಬೇರೆ ಮತ್ತೆ ಸಾಧಿಸಿ ಅರಿದೆನೆಂಬ ಬಳಲಿಕೆಯದೇಕೇ? ಜಂಗಮವೆ ಲಿಂಗವೆಂದು ನಂಬಿ ಪೂಜೆಯ ಮಾಡಲು, ಅದು ತಾನೆ, ಲಿಂಗಪೂಜೆ ನೋಡಾ. ಆ ಜಂಗಮ ಭಕ್ತಿಯಿಂದ ಪ್ರಸಾದ ಸಾಧ್ಯವಹುದು. ಮುಂದೆ ಪರವನರಿವ. ಇದು ಕಾರಣ, ಜಂಗಮಭಕ್ತಿಯೇ ವಿಶೇಷ, ಇದು ತಪ್ಪದು, ನಿಜಗುರು ಸ್ವತಂತ್ರಲಿಂಗೇಶ್ವರನ ನಂಬಿ ನಿಜವನೈದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
>ಅರಿವಿನೆಡೆಯನರಿದೆಹೆನೆಂದರೆ ಅರಿವು ಮರಹಿಂಗೊಳಗಾಯಿತ್ತಾಗಿ, ಆ ಅರಿವಿಂದ ಅರಿದೆವೆಂಬ ಬರಿಜ್ಞಾನಿಯ ಮಾತ ಕೇಳಲಾಗದು. ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು. ಜ್ಞಾನದಿಂದ ಅರಿದೆನೆಂದರೆ ಜ್ಞಾನ ಅಜ್ಞಾನಕ್ಕೊಳಗಾಯಿತ್ತಾಗಿ ಜ್ಞಾನದಿಂದ ಅರಿದೆನೆಂಬ ಅಜ್ಞಾನಿಯ ಮಾತ ಕೇಳಲಾಗದು, ಸುಜ್ಞಾನಭರಿತ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ ಅರಿದಿಹೆನೆಂಬ ಉಪಮೆಯಳಿದು, ಸ್ವಾನುಭವಸಿದ್ಧಿಯಿಂದ ತನ್ನ ಸ್ವರೂಪವ ತಾನರಿದು ಅರಿದೆನೆಂಬ ಅರಿವಿನ ಮರವೆಯ ಕಳೆದು, ವರ್ಣಾಶ್ರಮಂಗಳಾಚಾರಂಗಳ ಮೀರಿದ ಶಿವಯೋಗಿಯೇ ವೇದವಿತ್ತಮನು, ವೇದವಿತ್ತಮನು. ಆತನೆಲ್ಲರ ಅಜ್ಞಾನವ ತೊಳೆದು ನಿಜಮುಕ್ತರ ಮಾಡುವ ಕರುಣಾಕರನು. ಆ ಮಹಾತ್ಮನೇ ಸರ್ವಪ್ರಪಂಚಿನ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕಾರಣನಾದಾತನು. ಆ ಯೋಗಿ ಶರಣನೇ ಸಚ್ಚಿದಾನಂದ ಪರಮ ಸಾಯುಜ್ಯರೂಪನು. ಆ ಮಹಾಪುರುಷನೇ ಸಾಲೋಕ್ಯಾದಿ ಸಮಸ್ತ ಮುಕ್ತಿಯ ಕೊಡುವಾತನೂ ಆಗಿ, ಪರಿಪೂರ್ಣ ಭಾವದಿಂದ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಾಗಿ ತೋರುತ್ತಿಹನು.
--------------
ಸ್ವತಂತ್ರ ಸಿದ್ಧಲಿಂಗ
ಸುಳಿವ ಸುಳುಹು ಅಡಗಿತ್ತೆನಗೆ. ಎನ್ನ ಕಂಗಳ ಕಾಮ ಕಳೆಯಿತ್ತು. ಅರಿದೆನೆಂಬ ಮನ ಅಡಗಿದುದ ಕಂಡು ನನ್ನ ನಾನೆ ತಿಳಿದು ನೋಡಿ, ಕಟ್ಟಿದೆನು ಕಾಮನ ಮೇಲೆ ಬಿರಿದ. ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ, ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ ? ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ ಸರಿಯಲ್ಲವೆಂದು ಕಟ್ಟಿದೆ ಕೈದುವ. ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ. ಅಮುಗೇಶ್ವರಲಿಂಗಕ್ಕೆ ಅಧಿಕನಾದನಯ್ಯಾ ಪ್ರಭುದೇವರು.
--------------
ಅಮುಗೆ ರಾಯಮ್ಮ
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ. ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ. ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ ಅಫ್ಸೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. ವಚನದ ರಚನೆಯ ಅರಿದೆನೆಂಬ ಅಹಂಕಾರವ ಮುಂದುಗೊಂಡು ತಿರುಗುವ ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ. ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ ; ವಾಯು ಬೀಸದ ಉದಕದಂತಿರಬೇಕು; ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು; ದರಿದ್ರಗೆ ನಿಧಾನಸೇರಿದಂತಿರಬೇಕು; ರೂಹಿಲ್ಲದ ಮರುತನಂತಿರಬೇಕು; ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು. ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.
--------------
ಅಮುಗೆ ರಾಯಮ್ಮ
ಅರಿವಿಂದ ಕಂಡೆಹೆನೆಂದಡೆ, ಅರಿವಿಂಗೆ ಮರಹು ಹಿಡಿಯಬೇಕು. ಕುರುಹಿನಿಂದ ಕಂಡೆಹೆನೆಂದಡೆ, ಆ ಕುರುಹಿನಲ್ಲಿ ಅರಿವು ಕರಿಗೊಳ್ಳಬೇಕು. ಉಭಯವನರಿದ ಮತ್ತೆ ಅರಿವಿನಿಂದ ಅರಿದೆಹೆನಂದಡೆ ಆ ಅರಿವು ನಾನಾ ಯೋನಿಯಲ್ಲಿ ಒಳಗಾಯಿತ್ತು. ಕುರುಹಿನಿಂದ ಅರಿದೆಹೆನೆಂದಡೆ, ಆ ಕುರುಹು ಪುನರಪಿಗೊಳಗಾಯಿತ್ತು. [ಆ] ಅರಿವನರಿ [ವ] ಅರಿವೇನೋ? ಕುರುಹನರಿವ ಅರಿವದೇನೋ? ಅರಿವನರಿದಲ್ಲಿಯೂ ಕುರುಹನರಿದಲ್ಲಿಯೂ ಅರಿವಿಂಗೆ ತೆರಹಿಲ್ಲ. ಬರಿದೆ ಅರಿದೆನೆಂಬ ಬರುಬರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಕಳ್ಳೆಯ ಸಂಗವ ಮಾಡಿ, ಕಾಯವಿಕಾರವ ಮುಂದುಗೊಂಡು ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ ! ಘಟಹರಿದವನಂತೆ ಸಟೆದಿಟವನಾಡುವಿರಿ, ಪಶುಪತಿಯ ಅರಿವೆನೆಂಬ ಪಾಷಂಡಿಗಳ ಮೆಚ್ಚುವನೆ ಅಮುಗೇಶ್ವರ ?
--------------
ಅಮುಗೆ ರಾಯಮ್ಮ
ಉಂಬಡೆ ಬಂದು ಬಾಯ ಮರದೆನೆಂದು ಮೊರೆಯಿಡುತಿಪ್ಪ ಅರಿಕೆಹೀನನ ತೆರನಂತಾಯಿತ್ತು. ಅರಿಕೆಯವರಿ ಎಂದು ಕುರುಹ ಕೊಟ್ಟ, ಆ ಕುರುಹ ಮರದು ಅರಿದೆನೆಂಬ ಕುರುಬರ ನೋಡಾ, ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ
ಅರಿದೆನೆಂಬ ಅರಿವಿಂಗೆ ಅರಿಯಬಾರದ ಅವಿರಳ ಲಿಂಗವ ಕರ ಕಕ್ಷ ಉರ ಸಜ್ಜೆ ಉತ್ತುಮಾಂಗ ಮುಖಪೀಠವಮಳೋಕ್ಯವೆಂಬಾರಂಗ ಸಂಗಸಮರಸದಲ್ಲಿಪ್ಪ ಪರಮ ಶರಣಂಗೆ ನರನೆಂಬ ನಾಯಮನುಜರನೇನೆಂಬೆನಯ್ಯಾ. ನಿರವಯಗಮಿತರಂತಿರಲಿ ; ಪರಶಿವನಂಗದಲ್ಲುದಯವಾದ ಶರಣಂಗೆ ಪರಶಿವನೆನ್ನ ಬೇಕಲ್ಲದೆ ಅಂತಿತೆನ್ನಬಾರದು ಕಾಣಾ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನಸ್ಥಂ ಮನಮಧ್ಯಸ್ಥಂ ಮನಸಾ ಮನವರ್ಜಿತಂ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾಂತಯೋಗಿನಃ ಅರಿದೆನೆಂಬ ಅರಿವು ಅರಿವನೆ ಗುಂಗಿತ್ತು, ಮರೆದೆನೆಂಬ ಮರಹು ಮರಹನೆ ನುಂಗಿತ್ತು. ನೆನಹೆ ಅವಧಾನಗೆಟ್ಟಿತ್ತು ಕೂಡಲಚೆನ್ನಸಂಗನೆಂಬ ಲಿಂಗ ಅವಧಾನವಿಲ್ಲಾಗಿ.
--------------
ಚನ್ನಬಸವಣ್ಣ
ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು. ನಿತ್ಯವ ಮಾಡುವರೆಲ್ಲರು ವಿಷ್ಣುಪಾಶಕ್ಕೊಳಗಾದರು. ಜಪವ ಮಾಡುವರೆಲ್ಲರು ರುದ್ರಪಾಶಕ್ಕೊಳಗಾದರು. ತಪವ ಮಾಡುವರೆಲ್ಲರು ರತಿಪಾಶಕ್ಕೊಳಗಾದರು. ಇಂತಿವು ಮೊದಲಾದ ನಾನಾ ಕೃತ್ಯವ ಮಾಡುವ ಸಂಕಲ್ಪಜೀವಿಗಳೆಲ್ಲರು ನಾನಾ ಯೋನಿಸಂಭವದಲ್ಲಿ ಬರ್ಪುದಕ್ಕೆ ತಮ್ಮ ತಾವೇ ಲಕ್ಷವಿಟ್ಟುಕೊಂಡರು. ಅಲಕ್ಷ ಅತೀತ ಅನಾಮಯ ಅಮಲ ಅದ್ವಂದ್ವ ಕಾಲಭೇದಚ್ಫೇದನಕುಠಾರ ನಾನಾ ಶಾಸ್ತ್ರ ನಿರ್ಲೇಪ ಸಕಲ ಕೃತ್ಯ ಹೇತುದಾವಾನಲ ನಿಃಕಾರಣಮೂರ್ತಿ ಸಹಜಭರಿತಂಗೆ ಹಿಡಿಯಲ್ಲಿಲ್ಲಾಗಿ ಬಿಡಲಿಲ್ಲ, ಅರಿಯಲಿಲ್ಲಾಗಿ ಅರಿದೆನೆಂಬ ತೆರನಿಲ್ಲ. ಮತ್ತೆ ಕುರುಹಿನಿಂದ ಕಂಡ ಅರಿಕೆ ಇನ್ನೇಕೆ ? ಸಿಪ್ಪೆಯ ಕಳೆದು, ಸುಭಿಕ್ಷವ ಸೇವಿಸಿ, ಬಿತ್ತನುಳಿದೆ, ನಿತ್ಯವ ಪರಿದು, ಅನಿತ್ಯವ ಕಳೆದು, ಮತ್ತೇನು ಎನ್ನದಿರ್ಪುದೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು. ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ. ಅಗ್ನಿ ಜಲವ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು. ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು. ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ_ ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ !
--------------
ಅಲ್ಲಮಪ್ರಭುದೇವರು
-->