ಅಥವಾ

ಒಟ್ಟು 43 ಕಡೆಗಳಲ್ಲಿ , 23 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ, ಆಚಾರಕ್ಕೆ ಅರಿವೆ ಲಿಂಗವಾಗಿ, ಅರಿವೇ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು .
--------------
ಶಿವಲೆಂಕ ಮಂಚಣ್ಣ
ಅಂಗವಿಸದಿರು ಇನ್ನು ಹಿಂಗಿಹೋಗೆಂದೆನುತ ಮಂಗಳಾತ್ಮಕ ನುಡಿದ ಗುರುಕರುಣದಾ ಅಂಗವಿಸದಿರು ಎಂದನಂಗಹರ ಪ್ರಭುರಾಯ ಬಂದು ನೂಕಿದನೆನ್ನನೇಡಿಸುವ ಮಾಯೆಯನು. ಮಂಗಳಾತ್ಮಕ ಕಪಿಲಸಿದ್ಧಮಲ್ಲೇಶ್ವರನೆ ಲಿಂಗ, ನಿಮ್ಮನು ಅರಿವೆ; ಮಾಯೆಯ ಗೆಲುವೆ ಪ್ರಭುವಿನಂದದಲಿ.
--------------
ಸಿದ್ಧರಾಮೇಶ್ವರ
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ? ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ ಶಿಶು ತಾಯ ಉಭಯನಾಮವಡಗಿತ್ತು. ಕ್ರೀಯೆ ತಾಯಿ, ಅರಿವೆ ಶಿಶುವಾಗಿ ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ ಆ ಮರವೆಗೆ ತೆರನ ಹೇಳಾ, ಕಾಲಾಂತಕ ಬ್ಥೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ, ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ. ಆ ಕುರುಹಿಂಗೆ ಅರಿವೆ ಆಶ್ರಯವಾಗಿ, ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ, ಬೇರೊಂದೆಡೆಯಿಲ್ಲ, ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ಪರಬ್ರಹ್ಮವ ನುಡಿವರೆಲ್ಲಾ ಬ್ರಹ್ಮನ ಬಾಯಾಟ, ಹಿಂಗಿದಲ್ಲಿ ಹೋಯಿತ್ತು. ಬೊಮ್ಮ ಬಾಯೆಂಬ ಬಾಗಿಲಮುಂದೆ ಸುಳಿಯದಿರೆ, ಅನ್ನ ಆತ್ಮಂಗೆ ಅರಿವೆ ಪ್ರಾಣ ವಿರಕ್ತಂಗೆ. ಇಂತೀ ಗುಣಕ್ಕೆ ಇದಿರ ಕೇಳಲಿಲ್ಲ, ತನ್ನ ಮರೆಯಲಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು, ಹಲವು ಸ್ತ್ರೀಯರ ಅಂದಚಂದಗಳು, ಹಲವು ತೇರು ಜಾತ್ರೆಗಳು, ಹಲವು ಆಟಪಾಟಗಳು, ಹಲವು ಅರಿವೆ ಆಭರಣಗಳು, ಹಲವು ಆನೆ ಕುದುರೆ ಅಂದಳಗಳು, ಹಲವು ಚಿತ್ರವಿಚಿತ್ರ ಛತ್ರ ಚಾಮರಗಳು, ಹಲವು ಹಣ್ಣು ಫಲಾದಿಗಳು, ಹಲವು ಪತ್ರೆ ಪುಷ್ಪಂಗಳು, ಹಲವು ಮೆಟ್ಟುವ ಚರವಾಹನ ಮೊದಲಾಗಿ ನೋಡಿದಾಕ್ಷಣವೇ ದೀಪಕ್ಕೆ ಪತಂಗ ಎರಗುವಂತೆ, ಹಲವು ಪ್ರಾಣಿಗಳಿಗೆ ತಿಗಳ ಎರಗುವಂತೆ, ಮೀನಿಗೆ ಗುಂಡುಮುಳುಗನಪಕ್ಷಿ ಎರಗುವಂತೆ, ಹಲವ ಹಂಬಲಿಸಿ, ಕಂಡುದ ಬಿಡದ ಮುಂಡೆ ಪಿಶಾಚಿಯಂತೆ, ಜನ್ಮಾಂತರವೆತ್ತಿ ತೊಳಲಿತಯ್ಯ ಎನ್ನ ನೇತ್ರೇಂದ್ರಿಯವು. ಇಂಥ ಕರ್ಮಜಡ ಜೀವರ ಸಂಗದಿಂದ ಕೆಟ್ಟೆ ಕೆಟ್ಟೆ. ಶಿವಧೊ ಶಿವಧೊ ಎಂದು ಮೊರೆಯಿಟ್ಟೆನಯ್ಯ. ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕನೀಲಾಂಬಿಕೆ ತಾಯಿಗಳ ತೊತ್ತಿನ ತೊತ್ತು ಸೇವೆಯ ಮಾಡುವ ಗೌಡಿಯ ಚರಣವ ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ. ಎನ್ನಾಳ್ದ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಅಸ್ತಿ ಭಾತಿ[ಪ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ. ಅಪ್ರಮಾಣ ಅಗೋಚರ ಆತ್ಯತಿಷ್ಠದ್ದಶಾಂಗುಲ ಅಭೇದ್ಯದಿಂ ನಾಮರೂಪುಗಳುಂಟಾದುದಲ್ಲ. ಇದು ಕಾರಣ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಮೂರ್ತನಲ್ಲ ಭಾವಿಯಲ್ಲ ಪ್ರಾಣಿಯಲ್ಲ ಇದಕ್ಕೆ ಶ್ರುತಿ: ನೈವಂಚೋವಾಚಾಸ್ತ್ರೀಯಾನ್ ಭೂಮಾನಚನಸ್ತ್ರೀ ಪುಮಾನ್ನಪುಮಾನ್ ಪ್ರಮಾನ್ನಪ್ರಮಾನ್ ಭವಾನ್ ಯೇನೇದಂ ವದತಿ ಶತ್ವನಃ ಇತಿ ಬ್ರಹ್ಮಾ ಎಂಬ ಉಪನಿಷದುಕ್ತಿಯನರಿದು ಅರಿವೆ ತಾನಾಗಿ ಲಿಂಗದಲ್ಲಿ ಸಂದುಭೇದವಿಲ್ಲದೆ ಇಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ತನ್ನ ತಾನರಿದವಂಗೆ ಅರಿವೆ ಗುರು. ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು. ದೃಷ್ಟನಷ್ಟವೆ ಗುರು ತಾನಾದಲ್ಲಿ, ಮುಟ್ಟಿ ತೋರಿದವರಿಲ್ಲದಡೇನು ? ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ. ಗುರು ತಾನಾದಡೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ.
--------------
ಮುಕ್ತಾಯಕ್ಕ
ಕೆಂಡ ಕೆಟ್ಟು ಕೆಂಡವಾಗಬಲ್ಲುದಲ್ಲದೆ, ಬೂದಿಯಾಗಿ ಬೂದಿ ಹೊತ್ತಬಲ್ಲುದೆ ? ಸೂತಕ ಸೂತಕಕ್ಕೊಳಗಪ್ಪುದಲ್ಲದೆ, ಭಸ್ಮ ಮೇಲೆ, ಕೆಂಡ ಒಳಗಡಗಿದುದುಂಟೆ ? ಅರಿದ ಅರಿವು ಮರವಿಂಗಪ್ಪುದೆ ? ಅರಿವೆ ಶೂನ್ಯವಾಗಿ ಸುಖದುಃಖಕ್ಕೆ ಹೊರಗಾಗಬೇಕು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಉಭಯವನರಿವ ಚಿತ್ತಕ್ಕೆ ಅರಿವೆ ಇಷ್ಟಲಿಂಗಕ್ಕೆ ಗೊತ್ತು. ಉಭಯದಂಗ ಏಕೀಕರವಾದಲ್ಲಿ ಜಲ ಬಲಿದು ಶುಕ್ತಿಯಾದಂತೆ, ಕರಂಡಗರ್ಭದಲ್ಲಿ ಬಲಿದು ಕರಂಡವನೊ[ಡೆ]ದರಿದಂತೆ, ಅಂಗದಲ್ಲಿದ್ದರಿದು, ಘನಲಿಂಗವನರಿಯಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ ಕುರುಹಾಯಿತ್ತು.
--------------
ಶಿವಲೆಂಕ ಮಂಚಣ್ಣ
ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು, ಈ ಪ್ರಸಾದದ ಭೇದವ ತಿಳಿದವರಾರು. ಪ್ರಸಾದವೆಂಬ ಮೂರಕ್ಷರದ ಭೇದವ ಬಲ್ಲವರಾರು. ಆಕಾರ ನಿರಾಕಾರ ಸಾಕಾರ ಈ ಮೂರು ಪ್ರಕಾರವಾಯಿತ್ತು. ಈ 'ಪ್ರ'ಕಾರದ ಭೇದವ ಬಲ್ಲವರಾರು. ಸಕಲ ನಿಃಕಲ ನಿರಂಜನನಾದ ಭೇದವ ಬಲ್ಲರೆ 'ಸಾ'ಕಾರದ ಭೇದವ ಬಲ್ಲವರೆ, 'ದ'ಕಾರದ ಭೇದವನರಿದವರೆ, ಆದಿ ಆಧಾರ ಅನಾದಿ ಈ ತ್ರಿವಿಧವ ಬಲ್ಲವರು. ಇಂತೀ ಪ್ರಸಾದವೆಂಬ ಸದ್ಭಾವದ ನಿರ್ಣಯವನರಿಯದೆ ಪ್ರಸಾದವ ಕೊಟ್ಟಾತನು ಕೊಂಡಾತನು ಇವರಿಬ್ಬರ ಭೇದವೆಂತೆಂದರೆ: ಹುಟ್ಟುಗುರಡನ ಕೈಯ ತೊಟ್ಟಿಗುರುಡ ಹಿಡದಂತಾಯಿತು. ಈ ಭೇದವೆಂತೆಂದರೆ :ಇಷ್ಟ ಪ್ರಾಣ ಭಾವ 'ಪ್ರ'ಕಾರವಾಯಿತು. 'ಸಾ'ಕಾರವೆ ಜಂಗಮಲಿಂಗ ಪ್ರಸಾದಲಿಂಗ ಸೋಂಕಿ ನವಪೀಠಗಳಾಗಿ ನವಲಿಂಗ ಸೋಂಕಿ ನವಪೀಠ ಪ್ರಸಾದವಾಯಿತು. ನವಪ್ರಸಾದ ನವಪ್ರಣಮವೆ ನವಬೀಜವಾಯಿತು. ನವಹಸ್ತಗಳ ನೆಲೆಗೊಳಿಸಿ ಶಿವಲಿಂಗಧಾರಣಮಂ ಮಾಡಿ ನವಲಿಂಗಮುಖವನರಿದು ನವನೈವೇದ್ಯವಂ ಮಾಡಿ ನವಮುಖಕ್ಕಿತ್ತ ನವಪ್ರಸಾದಿಯಾದ ಶರಣನು ನವಚಕ್ರಗಳೆಲ್ಲ ನವಜಪ ಪ್ರಸಾದವೆ ತಾನೆ ಆಗಿ ನವರತ್ನಪ್ರಭೆ ಏಕರವಿರಶ್ಮಿಯಾದಂತೆ, ನವಕೋಟಿ ಸೋಮಸೂರ್ಯರ ಪ್ರಭೆ ಒಂದಾಗಿ ದಿವ್ಯಜ್ಯೋತಿರ್ಲಿಂಗ ತಾನಾದ ಶರಣನು. ಅರಿವೆ ಶಿವಲಿಂಗ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ತಾನೆ ಆಯಿತು. ನವ ಅಸ್ಥಿಗಳಡಗಿ ನವಲಿಂಗ ಒಂದೆ ಅಂಗವಾಗಿ ಬೆಳಗುತಿಹ ಶರಣಂಗೆ ಇಹಲೋಕವೇನು, ಪರಾತ್ಪರಲೋಕವೇನು ? ಸಗುಣವೇನು ನಿರ್ಗುಣವೇನು ? ನಿರಂಜನವೇನು, ನಿಷ್ಕಳವೇನು, ನಿರ್ಮಾಯವೇನು ? ಆತಂಗೆ ಭಕ್ಷವಿಲ್ಲ ಅಭ್ಯಕ್ಷವಿಲ್ಲ ಅರ್ಪಿತವಿಲ್ಲ ಅನರ್ಪಿತವಿಲ್ಲ. ಆತ ರುಚಿಸಿದ್ದೆಲ್ಲ ಪ್ರಸಾದ, ಅತ ಸೋಂಕಿದ್ದೇ ಪಾವನ. ಆತ ಮೆಟ್ಟಿದ ಭೂಮಿಯೆಲ್ಲ ಪುಣ್ಯಕ್ಷೇತ್ರಂಗಳಾದವು. ಆತ ಜಲಮಲವ ಬಿಟ್ಟು ಬಂದ, ಸಂಚಮನವ ಮಾಡಿದ ಸ್ಥಾನಾದಿಗಳೆಲ್ಲ ಪುಣ್ಯತೀರ್ಥಂಗಳಾದವು. ಇಂತೀ ನಿಮ್ಮ ಶರಣನ ಸರ್ವಾಂಗವೆಲ್ಲ ಶಿವಮಂದಿರವು ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು, ಈ ಎರಡರ ಸಂಗವೆ ತಾನೆಂದರಿದನು ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ, ಮರವೆ ಬಿಡಾಡಿ, ಮರೆಯದೆ ಬಿಡಾಡಿ, ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
--------------
ಬೊಂತಾದೇವಿ
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ, ನಾನವರ ರೂಹಿಸಿ ಬಲ್ಲೆನೆ ಅಯ್ಯಾ ? ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಭಾವಿಸಿ ಬಲ್ಲೆನೆ ಅಯ್ಯಾ ? ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಅರಿದು ಬಲ್ಲೆನೆ ಅಯ್ಯಾ ? ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ, ತನ್ನ ಇರವೆಂದರಿದ ನಿಜಲಿಂಗೈಕ್ಯನ_ಉಪಮಿಸಲಿಲ್ಲ, ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ, ಭಾವಿಸಲಿಲ್ಲಾಗಿ ಅರಿಯಲಿಲ್ಲ ! ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->