ಅಥವಾ

ಒಟ್ಟು 31 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ. ಅರ್ಪಿತ ಅನರ್ಪಿತ ನೀನೆ ಎಂಬೆ, ಕೂಡಲಸಂಗಮದೇವಾ.
--------------
ಬಸವಣ್ಣ
ಅವಸರ, ಆರೋಗಣೆ, ಆಪ್ಯಾಯನ-ತ್ರಿವಿಧವೂ, ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು. ಅವಸರ ಅನವಸರ ಆತ್ಮ(ಅಂಗ?)ದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ ಆತನನೆಂತು ಪ್ರಸಾದಿಯೆಂಬೆನು? ಅವಸರ ಅನವಸರವರಿದು ವೇಧಿಸಬಲ್ಲರೆ ಆತನ ಪ್ರಸಾದಿಯೆಂಬೆನು- ``ಲಿಂಗಸ್ಯಾವಸರೇ ಯಸ್ತು ಅಚ್ರ್ಯಂ ದದ್ಯಾತ್ ಸುಖಂ ಭವೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಅವಸರವರಿದು ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಅರ್ಪಿಸೇನೆಂದೆಂಬೆ? ಅರ್ಪಿತವೇತಕ್ಕೆ? ಅರ್ಪಿತವಾರಿಗೆ? ಅರ್ಪಿತದ ಪರಿಯೆಂತುಟಯ್ಯ? ಅರ್ಪಿತದ ಮುಖವ ಬಲ್ಲವರಾರು? ಚೆನ್ನಬಸವಣ್ಣನಲ್ಲದೆ. ಅರ್ಪಿತವುಳ್ಳಡೆ ಕಲ್ಪಿತವೇಕಯ್ಯ ಕಾಡಿ[ಹ]ವು? ಅರ್ಪಿಸುವ ಭೇದವ ಚೆನ್ನಬಸವಣ್ಣ ಬಲ್ಲ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅರ್ಪಿಸಿ ಸುಖಿ ಚೆನ್ನಬಸವಣ್ಣ, ಸಾವಧಾನಿ ನಿರಂತರಂ
--------------
ಸಿದ್ಧರಾಮೇಶ್ವರ
ಪ್ರಾಣಲಿಂಗಿಗಳೆಂದು ನುಡಿವ ನಾಚಿಕೆಯಿಲ್ಲದ ಅಣ್ಣಗಳು ಭಾವಿಸಿರಯ್ಯಾ. ತನು ಸೋಂಕುವುದಕ್ಕೆ ಮೊದಲೆ, ಮನ ಸೋಂಕಿತ್ತಲ್ಲಾ. ತನು ಹಿಂಗಿ ಅರ್ಪಿಸುವ ಠಾವಿನ್ನೆಲ್ಲಿಯದೊ? ಅಂಗವರಿದು ಮನವರಿದುದಿಲ್ಲ. ಅಂಗಲಿಂಗ ಅರ್ಪಿತವೆಂತಾಯಿತ್ತೊ? ಇಂತೀ ಭಂಗಿತರ ಕಂಡು ಹಿಂಗಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತ್ರಾಸಿನ ತೂಕದಂತೆ, ಅಂಗ ಲಿಂಗ ಸಮವಾಗಿ, ಬಿಲುಗಾರನೆಸುಗೆಯ ಬಾಣದ ಕೂಡೆ ಕಾಣಿಸುವ ಘಾಯದಂತೆ, ಹೂಣಿಸಿದರ್ಪಿತಸಂಧಾನವೆಸವುತ್ತ, ಅಕ್ಷರದೊಡನೆ ತೋರುವ ಶಬ್ದದಂತೆ, ಅಂಗ ಲಿಂಗೈಕ್ಯವನರಿದಾಂತಗೆ ಅನರ್ಪಿತವೆಂಬುದುಂಟೇ? ಇಲ್ಲ. ಆತ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗೆ, ಅಡಗಿ ಅರ್ಪಿಸುವ ಸುಯಿಧಾನಿ ತಾನು.
--------------
ಸ್ವತಂತ್ರ ಸಿದ್ಧಲಿಂಗ
ಪಂಚೇಂದ್ರಿಯಂಗಳ ಮುಖಂಗಳಲ್ಲಿ ಅಲ್ಲಲ್ಲಿ ತಾಗಿದ ಸುಖವ ಸುಖಿಸಿ ಲಿಂಗಾರ್ಪಿತವೆಂಬರು. ಅದು ಲಿಂಗಾರ್ಪಿತವೆ ? ಅಲ್ಲಲ್ಲ. ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ ಅರ್ಪಿಸಬೇಕು. ಅರ್ಪಿಸುವ ಈ ಭೇದವುಳ್ಳನ್ನಕ್ಕ ಶರಣನೆನಿಸಬಾರದು. ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಪ್ರಸಾದವೆಂದು ಪ್ರಸಾದಿಗಳೆಂದು, ಪ್ರಸಾದವ ಕೊಂಡೆನೆಂದು ನುಡಿವುತ್ತಿರ್ಪರು. ಇನ್ನೆಂತಯ್ಯಾ ಶಿವಶಿವಾ ! ಅರ್ಪಿತವಿಲ್ಲದೆ ಪ್ರಸಾದವಾದ ಪರಿಯೆಂತಯ್ಯಾ ? ಆವಾವ ಪದಾರ್ಥಂಗಳನು ಆವಾವ ದ್ರವ್ಯಂಗಳನು ಎಹಗೆಹಗರ್ಪಿಸಿದಿರಿ, ಹೇಳಿರಣ್ಣಾ ? ಪ್ರಸಾದವೇ ಹೇಂಗಾದುದು ಹೇಳಿರೆ ? ಶಬ್ದ ಸ್ಪರ್ಶ ರೂಪು ರಸ ಗಂಧಂಗಳನು ಎಹಗೆಹಗೆ ಅರ್ಪಿಸುವಿರಿ ಹೇಳಿರೆ ? ಅದು ಹೇಂಗರ್ಪಿಸಬಹುದು ? ಪ್ರಸಾದವಲ್ಲದೆ ಕೊಳ್ಳೆನೆಂಬವರಿಗೆ ಅರ್ಪಿಸುವದಂತಿರಲಿ, ಮುನ್ನಿನ ಪ್ರಸಾದಿಗೆ ಅನರ್ಪಿತವ ನೆನೆವ ಪರಿಯೆಂತೊ ? ಅನರ್ಪಿತವ ನೋಡುವ ಪರಿಯೆಂತೋ ? ಅನರ್ಪಿತವ ಕೇಳುವ ಪರಿಯೆಂತೊ ? ಅನರ್ಪಿತವ ವಾಸಿಸುವ ಪರಿಯೆಂತೊ ? ಅನರ್ಪಿತವ ರುಚಿಸುವ ಪರಿಯೆಂತೊ ? ಅನರ್ಪಿತವ ಸ್ಪರ್ಶಿಸುವ ಪರಿಯೆಂತೊ ? ನೆನೆಯಬಾರದು, ನೋಡಬಾರದು, ಕೇಳಬಾರದು, ವಾಸಿಸಬಾರದು, ರುಚಿಸಬಾರದು, ಮುಟ್ಟಬಾರದು, ಶಿವಶಿವಾ, ತೊಡಕು ಬಂದಿತ್ತಲ್ಲಾ ! ಅನರ್ಪಿತವ ಕೊಳಬಾರದು. ಸರ್ವಂ ಚ ತೃಣಕಾಷ*ಂ ಚ ಭಕ್ಷ್ಯಂ ಭೋಜ್ಯಾನುಲೇಪನಂ ಶಿವಾರ್ಪಿತಂ ವಿನಾ ಭುಂಜೇ ಭುಕ್ತಂ ಸದ್ಯೋ[s]ಪಿ ಕಿಲ್ಬಿಷಂ _ಎಂದುದಾಗಿ, ಅರ್ಪಿಸಿದ ಪ್ರಸಾದವ ಕೊಳ್ಳಲೇ ಬೇಕು. ಇನ್ನೆಂತಯ್ಯಾ? ಆವನಾನೊಬ್ಬ ಪ್ರಸಾದಿಗೆ ಅನರ್ಪಿತವ ನೆನೆಯಬಾರದು. ಅರ್ಪಿಸುವ ಪರಿ ಇನ್ನೆಂತಯ್ಯಾ, ವರ್ಮ ಜ್ಞಾನಗದನ್ನಕ್ಕ ? ಭಾವಶುದ್ಧವಾಗದನ್ನಕ್ಕ ? ಆ ಲಿಂಗವಂತನು ಲಿಂಗಪ್ರಾಣವಾಗದನ್ನಕ್ಕ ? ಮಹಾನುಭಾವರ ಸಂಗವಿಲ್ಲದನ್ನಕ್ಕ ? ಇದು ಕಾರಣವಾಗಿ, ವರ್ಮಜ್ಞನಾಗಿ, ಭಾವಶುದ್ಧವಾಗಿ, ಲಿಂಗಪ್ರಾಣವಾಗಿ, ಮಹಾನುಭಾವರ ಸಂಗದಿಂದರಿದು ಅರ್ಪಿಸಿದ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನಯನಾಗ್ರದ ನೋಟದ ಸುಖವ ಲಿಂಗಾರ್ಪಿತವೆಂಬರು, ನಾಸಿಕಾಗ್ರ ಪರಿಮಳದ ಸುಖವ ಲಿಂಗಾರ್ಪಿತವೆಂಬರು, ಶ್ರೋತ್ರಾಗ್ರದ ಕೇಳುವ ಸುಖವ ಲಿಂಗಾರ್ಪಿತವೆಂಬರು, ಜಿಹ್ವಾಗ್ರದ ರುಚಿಯ ಸುಖವ ಲಿಂಗಾರ್ಪಿತವೆಂಬರು, ಮುಟ್ಟುವ ತ್ವಕ್ಕಿನ ಸುಖವ ಲಿಂಗಾರ್ಪಿತವೆಂಬರು. ಇದು ಲಿಂಗಾರ್ಪಿತವೆ? ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ, ಅರ್ಪಿಸಬೇಕು, ಅರ್ಪಿಸುವ ಭಾವನೆವುಳ್ಳನ್ನಕ್ಕ ಶರಣೆನಿಸಬಾರದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನುವಿನ ಇಷ್ಟವ ಬಿಟ್ಟಾಗ ಅರಿದು, ಕಟ್ಟಿದಾಗ ಮರೆದು ಮತ್ತೆ ಸೋಂಕಿದ ಸುಖವ ಅರ್ಪಿಸುವ ಪರಿಯಿನ್ನೆಂತೊ ? ಒರೆಯ ಮರೆಯ ಕೈದಿನಲ್ಲಿ ಕಡಿದಡೆ ಹರಿದುದುಂಟೆ ? ಕುರುಹಿನ ಮರೆಯಲ್ಲಿದ್ದಾತನ, ಎರಡಳಿದು ಅವಧಿಯಿಲ್ಲದಿರಬೇಕು ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಅಂಗಭಾವ ಹಿಂಗದೆ ಮಜ್ಜನಕ್ಕೆರೆವಿರಿ, ಅರ್ಪಿತವನರಿಯದೆ ಅರ್ಪಿಸುವಿರಿ. ಅರ್ಪಿತ ಸವೆಯಿತ್ತೆ ? ಲಿಂಗ ಸವೆಯಿತ್ತೆ ? ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತಿವತ್ಸಲ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ಇಂತೆಂದುದಾಗಿ, ತನುವರ್ಪಿತ ಗುರುವಿಂಗೆ, ಮನವರ್ಪಿತ ಲಿಂಗಕ್ಕೆ, ಧನವರ್ಪಿತ ಜಂಗಮಕ್ಕೆ. ಇಂತೀ ತ್ರಿವಿಧಕ್ಕೆ ಅರಿದರ್ಪಿಸಬಲ್ಲಡೆ ಅರ್ಪಿತ. ಈ ತ್ರಿವಿಧ ಸವೆಯದೆ ಅರ್ಪಿಸುವ ಅರ್ಪಿತವೆಂತೊ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ?
--------------
ಉರಿಲಿಂಗಪೆದ್ದಿ
ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು. ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು. ಭವಿ ಮಾಡುವ ಬೋನವ, ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು, ಪ್ರಸಾದದ ಪೂರ್ವಾಶ್ರಯವ ಕಳೆದು, ರೂಪಿಸಬಲ್ಲೆವೆಂದಡೆ ಹರಿಯದು. ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು_ ಇಂತೀ ಒಂದಕ್ಕೊಂದು ಇಲ್ಲದೆ ಗುಹೇಶ್ವರಲಿಂಗದಲ್ಲಿ ಸಹಜದುದಯವಾದ ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಕಾಲೋಚಿತವಾಗಿ ಅರ್ಪಿತಕ್ಕೆ ಬಂದ ಭೂತಜಾತಪದಾರ್ಥಂಗಳನು, ಕಾಯದ ಕರದಲ್ಲಿ ಮುಟ್ಟಿ, ಅರ್ಪಿಸುವ ಅರ್ಪಣವನರಿದು, ಇಂದ್ರಿಯಂಗಳ ಮುಖದಲ್ಲಿ ಮುಟ್ಟದೆ, ಅರ್ಪಿಸುವ ಅರ್ಪಣವರಿದು, ಇಷ್ಟಲಿಂಗಕ್ಕೆ ರೂಪು, ಪ್ರಾಣಲಿಂಗಕ್ಕೆ ರುಚಿಯನಿತ್ತು ಕೊಂಬ, ಅನುಪಮ ಪ್ರಸಾದಿಯನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
--------------
ಸ್ವತಂತ್ರ ಸಿದ್ಧಲಿಂಗ
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ : ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ ; ನಿಂತಿರ್ದುದು ಇಷ್ಟಲಿಂಗಕ್ಕೆ ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು ; ನುಡಿವುದು ಪ್ರಾಣಲಿಂಗವು ; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ; ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ : 'ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||' ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ.
--------------
ಗಣದಾಸಿ ವೀರಣ್ಣ
ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ ಕೊಳಲಾಗದು. ಅಂಗೈಯಲ್ಲಿ ಹಿಡಿದು ಅರ್ಪಿಸಿಹೆನೆಂದಡೆ ಅರ್ಪಿತವಾಗದು. ಇನ್ನು ಅರ್ಪಿಸುವ ಪರಿ ಎಂತೆಂದಡೆ : ನಾಸಿಕದಲ್ಲಿ ಗಂಧ ಅರ್ಪಿತ, ಜಿಹ್ವೆಯಲ್ಲಿ ರುಚಿ ಅರ್ಪಿತ, ನೇತ್ರದಲ್ಲಿ ರೂಪು ಅರ್ಪಿತ, ತ್ವಕ್ಕಿನಲ್ಲಿ ಸ್ಪರ್ಶನ ಅರ್ಪಿತ, ಶೋತ್ರದಲ್ಲಿ ಶಬ್ದ ಅರ್ಪಿತ, ಹೃದಯದಲ್ಲಿ ಪರಿಣಾಮ ಅರ್ಪಿತ. ಇದನರಿದು ಭೋಗಿಸಬಲ್ಲಡೆ ಪ್ರಸಾದ. ಈ ಕ್ರಮವನರಿಯದೆ ಕೊಂಡ ಪ್ರಸಾದವೆಲ್ಲವು ಅನರ್ಪಿತ. ನುಂಗಿದ ಉಗುಳೆಲ್ಲವು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವೆ ಬೋನ, ಶಿಷ್ಯನೆ ಮೇಲೋಗರ. ಲಿಂಗಕ್ಕೆ ಪದಾರ್ಥವರ್ಪಿತವಯ್ಯಾ ! ಘನಕ್ಕೆ ಮನವೆ ಅರ್ಪಿತ, ಮನಕ್ಕೆ ಮಹವೆ ಅರ್ಪಿತ ! ಘನದೊಳಗೆ ಮನವು ತಲ್ಲೀಯವಾದ ಬಳಿಕ ಅರ್ಪಿಸುವ ಭಕ್ತನಾರು ? ಆರೋಗಿಸುವ ದೇವನಾರು ? ನಿತ್ಯತೃಪ್ತ ಉಣಕಲಿತನೆಂದಡೆ ಅರ್ಪಿಸಲುಂಟೆ ದೇವಾ ಮತ್ತೊಂದನು ? ಕೂಡಲಚೆನ್ನಸಂಗಮದೇವಾ, ಬಸವಣ್ಣನೆ ಬೋನ, ನಾನೆ ಪದಾರ್ಥ; ಸುಚಿತ್ತದಿಂದ ಆರೋಗಿಸಯ್ಯಾ ಪ್ರಭುವೆ
--------------
ಚನ್ನಬಸವಣ್ಣ
ಇನ್ನಷ್ಟು ... -->