ಅಥವಾ

ಒಟ್ಟು 22 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋದ್ಥಿಸಲಾಗದು. ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ, ಅವರು ಕಲ್ಲೆದೆಯವನೆಂಬರು. ಒಳ್ಳಿತು ಹೊಲ್ಲವೆನಬೇಡ ಆರಿಗೂ. ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶಿವಸಂಸ್ಕಾರಿಯಾಗಿ ಲಿಂಗವೆ ಪ್ರಾಣವಾಗಿದ್ದ ಬಳಿಕ ಅಲ್ಲಲ್ಲಿಗೆ ಹರಿಯಲಾಗದು. ಪ್ರಾಣಲಿಂಗಸಂಬಂಧಿಗೆ ಅದು ಪಥವಲ್ಲ. ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ನ ಅನರ್ಪಿತಂ ತು ಭುಂಜೀಯಾತ್ ಪ್ರಸಾದೋ ನಿಷ್ಫಲೋ ಭವೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯ ನಾಯಕನರಕದಲಿಕ್ಕುವನಾಗಿ.
--------------
ಚನ್ನಬಸವಣ್ಣ
ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತ್ತೆಂದು ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ? ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು ಅಲಗಿನ ಕ್ರೂರ ಸುಲಲಿತವೆನ್ನಬಹುದೆ? ಆ ಗುಣ ಅಲ್ಲಲ್ಲಿಗೆ ದೃಷ್ಟ. ಇದು ನಿಶ್ಚಯ ನಿಜ ಲಿಂಗಾಂಗಿಗೆ ಅರಿವಿನ ಭೇದ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.
--------------
ಶಂಕರದಾಸಿಮಯ್ಯ
ಕರಸ್ಥಲದಲ್ಲಿ ಲಿಂಗವಿರಲು ಆ ಹಸ್ತವೇ ಕೈಲಾಸ, ಈ ಲಿಂಗವೇ ಶಿವನು. ಇದು ಕಾರಣ ಇಲ್ಲಿಯೇ ಕೈಲಾಸ. ಇದಲ್ಲದೆ ಬೇರೆ ಬೆಳ್ಳಿಯ ಬೆಟ್ಟವೇ ಕೈಲಾಸವೆಂದು ಅಲ್ಲಿಪ್ಪ ರುದ್ರನೇ ಶಿವನೆಂದು ಕೈಲಾಸಕ್ಕೆ ಹೋದಹೆ ಬಂದಹೆನೆಂಬ ಭ್ರಾಂತು ಬೇಡ ಕೇಳಿರಣ್ಣಾ. ಕಾಯದ ಅನುಗ್ರಹ ಲಿಂಗದಲ್ಲಿ ಶ್ರದ್ಧೆ ಇಲ್ಲದೆ ಇರಲು ಇನ್ನೆಲ್ಲಿಯ ನಂಬುಗೆಯಯ್ಯಾ? ಅಲ್ಲಲ್ಲಿಗೆ ಹರಿಹಂಚಾಗಿ ಕೆಡಬೇಡ ಕೇಳಿರಣ್ಣಾ. ಅಂಗದೊಳಗೆ ಲಿಂಗಾಂಗ ಸಂಗವನರಿತು ಒಳಹೊರಗು ಒಂದೇಯಾಗಿ ಶಿಖಿಕರ್ಪುರ ಸಂಗದಲ್ಲಿ ಕರ್ಪುರ ಉರಿಯಾಗಿಪ್ಪಂತೆ, ಸರ್ವಾಂಗದಲ್ಲಿ ಲಿಂಗಸೋಂಕಿ ಅಂಗಭಾವವಳಿದು, ಲಿಂಗಭಾವ ತನ್ಮಯವಾಗಿಪ್ಪ ತದ್ಗತಸುಖ ಉಪಮಾತೀತವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅರ್ಥ ಪ್ರಾಣ ಅಭಿಮಾನ ನಾಸ್ತಿಯಾದಲ್ಲಿ ಕಿಚ್ಚುಗೊಂಡು ಮುಗ್ಧರಾದರು ಅನಂತರು. ಪರಧನ ಪರಸ್ತ್ರೀ ಪರಹಿಂಸೆಗೆಳಸಿ ಬಾಧೆಗೆ ಸಿಲ್ಕಿ ಮುಗ್ಧರಾದರಖಿಳರು. ಅನಿಷ್ಟವೆರಸಿ ಅಧಿಕರೋಗವೆಡೆಗೊಂಡಲ್ಲಿ ಮುಗ್ಧರು. ಆಯಾಯ ಕಾಲಕ್ಕೆ ಅಲ್ಲಲ್ಲಿಗೆ ಮುಗ್ಧರಲ್ಲದೆ ನಿತ್ಯಮುಗ್ಧರಲ್ಲ. ಇದು ಕಾರಣ, ಲಿಂಗಶರಣನಿಂತಲ್ಲ. ಕಾಯದಲ್ಲಿ ಮುಗ್ಧ, ಕರಣದಲ್ಲಿ ಮುಗ್ಧ, ಪ್ರಾಣದಲ್ಲಿ ಮುಗ್ಧ, ಭಾವದಲ್ಲಿ ಮುಗ್ಧ, ಗುರುನಿರಂಜನ ಚನ್ನಬಸವಲಿಂಗ ಸಮರಸವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಾರ್ಚನೆಯ ಮಾಡಿ ಪ್ರಸಾದವ ಪಡೆದು, ಪ್ರಸಾದವ ಭೋಗಿಸುವುದು. ಅಲ್ಲಲ್ಲಿಗೆ ಹೋಗಿ ತೋಳಲಿ, ಬಳಲಿ, ಕಲ್ಲು ತಾಗಿದ ಮಿಟ್ಟೆಯ[ವೊ]ಲಾಗದೆ ಎಲೆ ಎಲೆ ಜಡಜೀವನೆ ಮತ್ತೆಲ್ಲಿಯೂ ಅರಸ[ದಿರು]. ದೇವರೆಂಬ ಬಲ್ಲಹನ ಬಿಟ್ಟು ಕಟಕವಿಹುದೆ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶ್ರಿಪಾದದಲ್ಲರಸಿಕೊ ದೇವರೆಂಬವರನು.
--------------
ಉರಿಲಿಂಗಪೆದ್ದಿ
ಎಲ್ಲಿಯೂ ಇಲ್ಲೆಂಬುದ ಹುಸಿ ಮಾಡಿ, ಶಿಲಾಲಿಖಿತವು ಗುರುವಿನ ವಶವಾಗಿ, ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ, ಮಾಡಿದನು ಶಿಷ್ಯ_ತಾನು ಬಲ್ಲಿದ ! ಷಡುವಿಧದ ಜವನಿಕೆಯ ಮರೆಯಲ್ಲಿಯೆ ಗುಹೇಶ್ವರಲಿಂಗದ ಅರಿವು !
--------------
ಅಲ್ಲಮಪ್ರಭುದೇವರು
ಹೋಹ ಬಟ್ಟೆಯಲೊಂದು, ಮಾಯ ಇದ್ದುದ ಕಂಡೆ. ಠ್ಞಣಾಂತರ ಹೇಳಿತ್ತು ಠಾಣಾಂತರ ಹೇಳಿತ್ತು, ಅಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ. ಗುಹೇಶ್ವರನ ಕರಣಂಗಳು ಕುತಾಪಿಗಳು.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗಕ್ಕೆ ಮಜ್ಜನ, ಪ್ರಾಣಲಿಂಗಕ್ಕೆ ಭೋಜನ, ತೃಪ್ತಿಲಿಂಗದ ಮುಖದಲೆ ಪರಿಣಾಮ ನೋಡಯ್ಯಾ. ಕಾಮಿತ ಕಲ್ಪಿತ ಭಾವಿತ ಅರ್ಪಿತ ತಾನಲ್ಲ. ಅಲ್ಲಲ್ಲಿಗೆ ಅವಧಾನದಾಯತವ ನೋಡಯ್ಯಾ. ಅವಧಾನದ ಕೊನೆಯಲಿಹ ಸುಯಿಧಾನದ ಲಿಂಗವನು ನಿಮ್ಮ ಶರಣನ ಸರ್ವಾಂಗದಲ್ಲಿ ಕಾಣಬಹುದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗೆಲ್ಲಾಳೆಲ್ಲರು ಬಿಲ್ಲನೂರಿ ನಿಂದಿರಲಾಗಿ ಬಿಲ್ಲಿನ ಹೆದೆ [ಹರಿದು] ಬಿಲ್ಲಿನ ಹೆದೆಯ ಕೊಪ್ಪು ಅಲ್ಲಲ್ಲಿಗೆ ತೊಡಕು, ಮೆಲ್ಲಗೆ ಏರಿಸಿದಡೆ ಹೆದೆ ಅಲ್ಲಿಯೆ ಸಿಕ್ಕಿತ್ತು. ಆ ಹೆದೆಯನಿಳುಹುವರ ಕಾಣೆ. ಬಲ್ಲತನದಿಂದ ಬಿಲ್ಲು ಬೆರಗಾಯಿತ್ತು. ಬಿಲ್ಲ ಹಿಡಿದಾತ ಮರೆದೊರಗಿದ. ಮರೆದೊರಗಿದಾತನ ಕರೆಯಲಾಗಿ, ಬಿಲ್ಲಿನ ಹೆದೆ ಇಳಿಯಿತ್ತು, ಸೈವೆರಗು ಬಿಟ್ಟಿತ್ತು. ಅಂಬಿನ ಕಣೆ ಎಲ್ಲಿ ಹೋಯಿತ್ತೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭವಿ ಮಣ್ಣಲಿ ಮಾಡಿದ ಮಡಕೆಯ ಕಳೆವುದು ಶೀಲವೆ ? ಅಲ್ಲಲ್ಲಿ ಮೆಟ್ಟಿದ ಭೂಮಿಯ ಕಳೆವುದು ಶೀಲವೆ? ಕೆರೆ ಬಾವಿ ತೊರೆಯ ತೊರೆವುದು ಶೀಲವೆ ? ಅಲ್ಲಲ್ಲಿಗೆ ಒಸರುವ ಉದಕವ ತೊರೆವುದು ಶೀಲವೆ ? ಲಿಂಗಾರ್ಪಿತ ಮಾಡಿದ ಪ್ರಸಾದವ ಭವಿ ನೋಡಲಿಕ್ಕೆ ಕೊಂಡರೆ ಭಾಷೆಗೆ ವ್ರತಗೇಡಿ, ಕೊಳ್ಳದಿದ್ದರೆ ಪ್ರಸಾದದ್ರೋಹಿ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸಂಕಲ್ಪ ವಿಕಲ್ಪದಿಂದ ಕೆಟ್ಟಿತ್ತು ಶೀಲ.
--------------
ಚನ್ನಬಸವಣ್ಣ
ಬ್ರಹ್ಮಂಗಂಟುದಾರ, ವಿಷ್ಣುವಿಂಗೆ ಉಭಯದ ಹೊಲಿಗೆ, ರುದ್ರಂಗೆ ಟಿಬ್ಬಿ, ಮಿಕ್ಕಾದ ದೇವಕುಲಕ್ಕೆಲ್ಲಕ್ಕೂ ಅಲ್ಲಲ್ಲಿಗೆ ಕಲ್ಲಿಯ ಹೊಲಿಗೆ. ಈ ಗುಣವ ಬಲ್ಲವರೆಲ್ಲರೂ ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವರಹರು.
--------------
ಸೂಜಿಕಾಯಕದ ಕಾಮಿತಂದೆ
ಸಾಕಾರ ಹದಿನೆಂಟುಕುಳವನಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತ, ಅಲ್ಲಲ್ಲಿಗೆ ಮಾಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವನೇನೆಂದುಪಮಿಸುವೆ ! ನಿರಾಕಾರ ಹದಿನೆಂಟುಕುಳವನಾತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿಪ್ಪ ಆ ನಿರಾಕಾರವನೇನೆಂದುಪಮಿಸುವೆ ! ಇಂತು ಉಭಯಸ್ಥಲ ಒಂದಾಗಿ ನಿಂದ ನಿಜದ ಘನದಲ್ಲಿ ಕುಳವಡಗಿತ್ತು, ಕೂಡಲಚೆನ್ನಸಂಗಾ
--------------
ಚನ್ನಬಸವಣ್ಣ
-->