ಅಥವಾ

ಒಟ್ಟು 14 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ತೊಳೆದು, ಹೊರಗೆ ಮೆರೆದ ಪ್ರಸಾದಿ. ಕಳೆಮೊಳೆಯನೊಂದು ಮಾಡಿದ ಪ್ರಸಾದಿ. ಅಳಿಯ ಬಣ್ಣದ ಮೇಲಿದ ಅಮೃತವನುಂಡ ಪ್ರಸಾದಿ. ಕಳೆಯ ಬೆಳಗಿನ ಸುಳುಹಿನ ಸೂಕ್ಷ್ಮದಲ್ಲಿ ನಿಂದ ಪ್ರಸಾದಿ. ಇಂತಪ್ಪ ಪ್ರಸಾದಿಯ ಒಕ್ಕುಮಿಕ್ಕಿದ ಕೊಂಡ ಕಾರಣದಿಂದ ನಾನೆತ್ತ ಹೋದೆನೆಂದರಿಯೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಗಜ ಗಮನ, ಅಹಿತ ಶರಸಂಧಾನ, ಮಯೂರನ ಶಯನ, ಮಾರ್ಜಾಲನ ಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ, ಅಳಿಯ ಗಂಧ ಭುಂಜನೆ, ಮಧು ಮಕ್ಷಿಕದ ಘೃತಗೊಡ ವಾಸ, ಮೂಷಕದ ದ್ವಾರಭೇದ, ಮರೆವಾಸವೈದುವ ಸಂಚ, ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ, ಸಂಗೀತರ ಸಂಚು, ತಾಳಧಾರಿಯ ಕಳವು, ವಾದ್ಯಭೇದಕನ ಮುಟ್ಟು, ಘ್ರಾಣನ ಹರಿತ, ಭಾವಜ್ಞನ ಚಿತ್ತ . ಇಂತೀ ನಾನಾ ಗಣಂಗಳ ಲಕ್ಷಾಲಕ್ಷಿತವ ತಿಳಿದು, ಶ್ರುತ ದೃಷ್ಟ ಅನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು, ನಾನಾರೆಂಬುದದೇನೆಂದು ತಿಳಿದು, ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ, ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ ಅಂಗವೆಲ್ಲ ಹೋಗಿ ನಿರಂಗವಾದಂತೆ. ಅಂಗವಾತ್ಮನ ಸಂಗ, ಈ ಅಂಗವೆಂದು ತಿಳಿದು, ಆವ ಸ್ಥಲವನಂಗೀಕರಿಸಿದಲ್ಲಿಯೂ ಪರಿಪೂರ್ಣವಾಗಿ ಏನ ಹಿಡಿದಲ್ಲಿಯೂ ತಲೆವಿಡಿಯಿಲ್ಲದೆ ಏನ ಬಿಟ್ಟಲ್ಲಿಯೂ ಕುಳವಿಡಿಯಿಲ್ಲದೆ ಕರ್ಪುರ ಮಹಾಗಿರಿಯ ಸುಟ್ಟಡೆ ಒಕ್ಕುಡಿತೆ ಬೂದಿ ಇಲ್ಲದಂತೆ, ಚಿತ್ತನಿಶ್ಚಯವಾದ ಸದ್ಭಕ್ತ ಪರಮ ವಿರಕ್ತನ ಇರವು ಇದು. ಎನ್ನೊಡೆಯ ಚೆನ್ನಬಸವಣ್ಣನ ಹರವರಿಯ ತೆರನಿದು. ಸಾಧ್ಯ ಮೂವರಿಗಾಯಿತ್ತು , ಅಸಾಧ್ಯವಸಂಗತ. ನಿಃಕಳಂಕ ಕೂಡಲಚೆನ್ನ ಸಂಗಮದೇವರೆಂದರಿದವಂಗೆ ಅಸಾಧ್ಯ ಸಾಧ್ಯವಾಯಿತ್ತು ?
--------------
ಹಡಪದ ರೇಚಣ್ಣ
ಕೋಣನನೂ ಕುದುರೆಯನೂ; ಹಾವನೂ ಹದ್ದನೂ; ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ, ಹುಲಿಯನೂ ಹುಲ್ಲೆಯನೂ_ಮೇಳೈಸುವಂತೆ ಮೇಳವಿಲ್ಲದವನ ಒಕ್ಕತನ, ಅಳಿಯ ಬಾಳುವೆ, ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !_ಕೇಳು ಗುಹೇಶ್ವರಾ ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ
--------------
ಅಲ್ಲಮಪ್ರಭುದೇವರು
ಅಳಿಯ ಬಂದಾನೆಂಬರಯ್ಯ, ಎಲ್ಲವ ನೀನೀಗಳೀವೆಯಾಗಿ. ಅಳಿಯನಿದ್ದಹರೆಂಬರಯ್ಯ, ಅಳಿಯದಂತೆ ನೀನಿಪ್ಪೆಯಯ್ಯಾ. ಇದೆಲ್ಲವನಳಿದು ನೀನುಳಿದೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ನೀನೊಬ್ಬನಯ್ಯಾ.
--------------
ಸಿದ್ಧರಾಮೇಶ್ವರ
ಅಳಿಯ, ಬಳಿಯೆ ಸುಳಿವನಲ್ಲ ಪ್ರಳಯವಿಲ್ಲದ ವಿಜಯನು. ಕುಳಾಕುಳದ ಆತ್ಮನ ಅಂಗದ ಸಂಗಿಯಲ್ಲ. ಸುಳುಹಿನೊಳಗಣ ಸೂಕ್ಷ್ಮವ ತಿಳಿದು ನೋಡುವಡೆ ಅಣಿಮಾದಿ ಗುಣರಹಿತನು, ಅಕಲ್ಪಿತಮಹಿಮನನೇನೆಂಬೆ ? ನೆಳಲ ಕಳವಳದ ಬಳಿಯ ಭಾವರೂಪನಲ್ಲ ! ಬೆಳಗಿನೊಳಗಣ ಬೆಳಗು, ಗುಹೇಶ್ವರಾ ನಿಮ್ಮ ಶರಣನ ನಿಲವು !
--------------
ಅಲ್ಲಮಪ್ರಭುದೇವರು
ಗುರುವಿದ್ದಂತೆ ಪರರಿಗೆ ನೀಡಬಹುದೆ ? ಮನೆಯ ಆಕಳು ಉಪವಾಸ ಇರಲಾಗಿ ಪರ್ವತಕ್ಕೆ ಸೊಪ್ಪೆಯ ಹೊರಬಹುದೆ ? ಎಂಬ ಪರವಾದಿ ನೀಕೇಳು. ಗುರುವು ಶಿಷ್ಯಂಗೆ ಲಿಂಗವಕೊಟ್ಟು ತಾನು ವ್ರತಗೇಡಿಯಾಗಿ ಹೋಗುವಲ್ಲಿ ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದಕಾರಣ, ್'ಪರರ ಕಂಡರೆ ತನ್ನಂತೆ ಕಾಣು' ಎಂದು ಗುರುವು ಹೇಳಿದ ವಾಕ್ಯವ ಮರೆದಿರಲ್ಲ ! ಅಳಿಯ ಒಡೆಯರು, ಮಗಳು ಮುತ್ತೈದೆ, ಮನೆದೇವರಿಗೆ ಶರಣೆಂದರೆ ಸಾಲದೆ ? ಎಂಬ ಅನಾಚಾರಿಗಳ ಮಾತು ಅದಂತಿರಲಿ. ಜಂಗಮದೇವರ ಪ್ರಾಣವೆಂಬ ಭಕ್ತರು ಲಿಂಗಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ, ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ. ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ. ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
--------------
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು, ಬೇಡ ಬದುಕೆಂದಡೆ ಆರೆನೆಂದ. ಅದೇತಕ್ಕೆ ಆಕೆಯ ದೂರೆಂದಡೆ ಅವ ಬಾತಿಗೇಡಿ. ಅವಳ ತಾಯ ಕೊಟ್ಟಡೆ ಇರ್ಪೆನೆಂದು ಕೂಡಿಕೊಂಡ. ಅಜಾತರೊಂದಿಗೆ ಹೇಳೆ, ನೀತಿ ಲೇಸಾಯಿತ್ತು ಅತ್ತೆ ಅಳಿಯಂಗೆ. ಅತ್ತೆ ಅಳಿಯನ ಒಲ್ಲೆನೆಂದು ಹೊತ್ತುಹೋರುತ್ತಿರಲಾಗಿ, ಅಳಿಯ ಅತ್ತೆಯ ಹಿಡಿದು ಅಳಿದನುಟ್ಟ ಸೀರೆಯ. ಮೊತ್ತದ ಭಗವ ಕಂಡು ಒತ್ತಿಹಿಡಿಯಲಾಗಿ, ಸತ್ತಳು ಅತ್ತೆ ಅಳಿಯನ ಕೈಯಲ್ಲಿ. ಅತ್ತೆಯ ಕಾಲುದೆಸೆಯಲ್ಲಿ ಕುಳಿತು, ಎತ್ತಿ ನೋಡಲಾಗಿ, ನಿಶ್ಚಯವಾಯಿತ್ತು ಅತ್ತೆಯ ಭಗ. ಹುಟ್ಟಿದರು ಮೂವರಲ್ಲಿ, ಕೆಲದಲ್ಲಿ ಇಬ್ಬರು, ನಡುವೆ ಒಬ್ಬನಾಗಿ. ಇಬ್ಬರ ಬಿಟ್ಟು, ಒಬ್ಬನ ಹಿಡಿದು ಅಬ್ಬರಿಸಲಾಗಿ, ಅವನೆದ್ದು ಬೊಬ್ಬೆಯ ಹೊಯ್ದ. ಹೊಯ್ದ ಹೊಯ್ಗಳಿನಲ್ಲಿ ಅತ್ತೆಯ ತಂದ ಅಳಿಯ, ನಾಮನಷ್ಟವಾದ. ಇಂತಿದನೆತ್ತಲೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂಬತ್ತು ಬಾಗಿಲ ಪಟ್ಟಣದೊಳಗೆ ಇಂಬುಗೊಂಡಿಪ್ಪ ತಳವಾರನ ಕಂಡೆನಯ್ಯ. ಆ ತಳವಾರನ ಅತ್ತೆ ಅಳಿಯ ಮಾವ ಮೂವರೂ ಕೂಡಿಕೊಂಡು ಬತ್ತಲೆಯಾದ ಭಾಮಿನಿಯ ಸಂಗವ ಮಾಡಲು ಅತ್ತೆ ಅಳಿಯ ಮಾವ ಮೂವರೂ ಬಯಲಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅತ್ತೆ ಅಳಿಯನ ಸಂಗವ ಮಾಡಿ ಒಳ ಒಳಗಿನ ಗೆಳೆಯರ ಬಳಿವಿಡಿಯನಾರು ಬಲ್ಲರಯ್ಯಾ! ಅಳಿಯ ನೆಂಟರ ಕೂಟವಂದಾದಲ್ಲಿ ನಿಂದಿತ್ತು ಪ್ರಾಣಲಿಂಗಸಂಬಂಧ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಗನ ಕೊಂದು ತಿಂದ ತಾಯ ಕಂಡೆ. ಬಂಧುಗಳ ಕೊಂದು ನಂಟರಲ್ಲಿ ಕೂಪನ ಕಂಡೆ. ಅತ್ತೆ ಅಳಿಯನ ಒತ್ತಿನಲ್ಲಿ ಮಲಗಿ ಕೂಸು ಹುಟ್ಟಿತ್ತು. ಅಳಿಯ ಅತ್ತೆಯ ನೋಡಿ, ಅತ್ತೆ ಅಳಿಯನ ನೋಡಿ, ಹೋಯಿತ್ತು ಹೋಗದಿದೆಯೆಂದು ನಗುವರ ಕಂಡೆ. ಅವರಿಬ್ಬರ ನೋಡಿ ಹೆತ್ತ ಕೂಸು, ನಾನಿವರ ಅಳಿಯನೆಂದು ಹೋಯಿತ್ತು. ಇದ ಕೇಳಿಹರೆಂದು ಹೇಳಲಂಜಿ, ಅಲೇಖನಾದ ಶೂನ್ಯ ಕಲ್ಲಿನ ಒಳಹೊಕ್ಕ.
--------------
ವಚನಭಂಡಾರಿ ಶಾಂತರಸ
ಸತ್ತಾತನೊಬ್ಬ ಹೊತ್ತಾತನೊಬ್ಬ,_ ಈ ಇಬ್ಬರನೂ ಒಯ್ದು ಸುಟ್ಟಾತನೊಬ್ಬ. ಮದವಣಿಗನಾರೊ? ಮದವಳಿಗೆ ಯಾರೊ? ಮದುವೆಯ ನಡುವೆ ಮರಣವಡ್ಡಬಿದ್ದಿತ್ತು. ಹಸೆಯಳಿಯದ ಮುನ್ನ ಮದವಣಿಗನಳಿದ. ಗುಹೇಶ್ವರಾ_ನಿಮ್ಮ ಶರಣನೆಂದೂ ಅಳಿಯ.
--------------
ಅಲ್ಲಮಪ್ರಭುದೇವರು
ಅತ್ತೆಯ ಬಸುರಲಿ ಮಗಳು ಹುಟ್ಟಿ, ಅಳಿಯಂಗೆ ಮದುವೆಯ ಮಾಡಲೊಡನೆ, ಅಳಿಯ ಅತ್ತೆಯನಪ್ಪಿ, ಸೊಸೆ ಮಾವನನಪ್ಪಿ, ಈ ನಾಲ್ವರು ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->