ಅಥವಾ

ಒಟ್ಟು 16 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಮಧುರದ ಗುಣ ಬದರಿಯಿಂದಳಿಯಿತ್ತು, ಶರಧಿಯ ಗುಣ ಸಾಗಲಾಗಿ ಅಳಿಯಿತ್ತು, ಬೇಟದ ಗುಣ ಕೂಟದಿಂದಳಿಯಿತ್ತು, ಸಾರದ ಗುಣ ಕಠಿನದಿಂದಳಿಯಿತ್ತು, ಕಠಿನದ ಗುಣ ಪಾಕದಿಂದಳಿಯಿತ್ತು, ಕಾಯದ ಗುಣ ಪ್ರಾರಬ್ಧದಿಂದಳಿಯಿತ್ತು, ವಿಷದ ಗುಣ ನಿರ್ವಿಷದಿಂದಳಿಯಿತ್ತೆಂಬುದಜನ ಸಿದ್ಧಾಂತವಾಗಿ ನುಡಿವುತ್ತಿದೆ. ಎನ್ನ ಗುಣ ನಿನ್ನಿಂದಲ್ಲದೆ ಅಳಿಯದಯ್ಯಾ. ಕಾಲಕ್ಕಂಜಿ, ಕರ್ಮಕಂಜಿ, ವಿಧಿವಿಧಾಂತನಿಗಂಜಿ, ಹಿರಿಯರೆನಿಸಿಕೊಂಬ ಗ್ರಾಸವಾಸಿಗಳು ನೀವು ಕೇಳಿರಯ್ಯಾ. ರುದ್ರನ ಪಸರವ ಹೊತ್ತು, ಆಶೆಯೆಂಬ ಕಂಥೆಯಂ ತೊಟ್ಟು, ಜಗದಾಟವೆಂಬ ವೇಷವ ಧರಿಸಿ, ಈಶನ ಶರಣರೆಂದು ಭವಪಾಶದಲ್ಲಿ ತಿರುಗುವ ದೇಶಿಗರ ಕಂಡು ನಾಚಿದೆ. ಭಾಷೆಗೆ ತಪ್ಪದ ನಿರ್ಗುಣ ನಿರಾಶಕ, ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲ, ನಿಲ್ಲು ಮಾಣಿರೊ.
--------------
ಮೋಳಿಗೆ ಮಾರಯ್ಯ
ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ. ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ ಕರ್ಮವೆಡೆವೋಗಲೆಡೆಯಿಲ್ಲ. ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು. ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು, ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು. ``ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್‍ಕುರುತೇ ಮಮಱಱ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ನಿಃಕರ್ಮಿಗಳಾಗಿ ಲಿಂಗಸುಖಿಗಳು.
--------------
ಆದಯ್ಯ
ಐದು ಬಹಲ್ಲಿ ಒಂದಾಗಿ ಬಂದ ಮಾಯೆಯ, ಮೂರು ಬಹಾಗ ಮುಂದೆ ಬಂದ ಮಾಯೆಯ, ಆರೂ ಹಿಂಗಬಾರದು. ಒಂದು ಎಂಬನ್ನಕ್ಕ ಸಂದೇಹದ ಮಾಯೆ ಕೊಂದು ಕೂಗುತ್ತಿದೆ. ಇನ್ನೆಂದಿಂಗೆ ನೀನಳಿವೆ? ಇನ್ನೆಂದಿಂಗೆ ನಾನುಳಿವೆ? ಎಂಬ ಸಂದೇಹ ಸದಾಶಿವಮೂರ್ತಿಲಿಂಗದಲ್ಲಿಯೆ ಅಳಿಯಿತ್ತು.
--------------
ಅರಿವಿನ ಮಾರಿತಂದೆ
ರುದ್ರದೇವ ಮಹಾದೇವ ಇವರಿಬ್ಬರೂ ಬೀಗರಯ್ಯಾ. ಒಬ್ಬರು ಹೆಣ್ಣಿನವರು, ಒಬ್ಬರು ಗಂಡಿನವರು. ಹಂದರವಿಕ್ಕಿತ್ತು, ಮದುವೆ ನೆರೆಯಿತ್ತು, ಶೋಬನವೆಂದಲ್ಲಿಯೇ ಅಳಿಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ತನುವಿನ ಮಹಾಮನೆಯಲ್ಲಿ ಮಾಡುವ ಮಾಟ, ಘನಕ್ಕೆ ಘನವೆಂದು ಎದ್ದಿತ್ತು ಉಪ್ಪರಗುಡಿ ಲೀಲೋಲ್ಲಾಸವೆಂಬ ಕಳೆ ನೆಟ್ಟಿತ್ತು , ಭವವಿರಹಿತನೆಂಬ ಗುಡಿಗಟ್ಟಿತ್ತು , ಮಾಡುವ ದಾಸೋಹಕ್ಕೆ ಕೇಡಿಲ್ಲಾ ಎಂದು. ಕಾಯ ಸವೆದು ಮನಮುಟ್ಟಿ, ಭಾವನಿಶ್ಚಯವಾಗಿ ಮಾಟಕೂಟಸಂದಿತ್ತು , ಮಹಾಮನೆ ಮಹವನೊಡಗೂಡಿತ್ತು , ಕಾಯದ ಕಣೆ ಹಿಂಗಿತ್ತು, ಭಾವಗೂಡಿ ಅಳಿಯಿತ್ತು ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನಾದಲ್ಲಿ ,
--------------
ಸಗರದ ಬೊಮ್ಮಣ್ಣ
ಆನೆಯು ಕೋಣನೂ ಕೂಡಿ ಅಡವಿಯಲ್ಲಿ ಆಡುತ್ತಿರಲು ಕೇಸರಿ ಬಂದು ಬೆದರಿಸಿತ್ತು. ಕೇಸರಿಯ ಕಂಡು ಆನೆ ಅಳಿಯಿತ್ತು. ಕೋಣ ಕೇಸರಿಯ ನುಂಗಿ ಕೇಸರಿಯಾಯಿತ್ತು. ಉಡು ಸರ್ಪನ ಹಿಡಿದು ನುಂಗಲು ಉಡುವಿಂಗೆ ಹೆಡೆಯಾಯಿತ್ತು. ಆ ಉಡುವಿನ ಹೆಡೆದು ಮಾಣಿಕವ ಕಂಡು ಅಡಗಿದ್ದ ಹದ್ದು ಹಾಯ್ದು ಆಕಾಶಕ್ಕೊಯ್ಯಿತ್ತು. ಆ ಆಕಾಶದಲ್ಲಿ ಮಾಣಿಕದ ಬೆಳಗು ತುಂಬಲು ಆ ಬೆಳಗ ಕಂಡು ಹಿರಿದೊಂದು ನರಿ ಕೂಗಿತ್ತು. ಆ ಮಾಣಿಕ ನರಿಯ ನುಂಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿರವಯಲಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ಕರಣಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮೂಷಕ ಮಾರ್ಜಾಲ ಕೂಡಿ ಭೇಕನ ಕಂಡು ನೀತಿಯ ಕೇಳಿ, ಮೂಷಕನ ನೆರೆದಲ್ಲಿ ಅಳಿಯಿತ್ತು, ಮಾರ್ಜಾಲ ಮನೆಗೆ ಹೋಯಿತ್ತು. ನಾನೀನೆಂಬುದು ನಿಂದಿತ್ತು, ಸದಾಶಿವಮೂರ್ತಿಲಿಂಗವರಿತಲ್ಲಿ.
--------------
ಅರಿವಿನ ಮಾರಿತಂದೆ
ಹೋಗುತಿದ್ದ ಎರಳೆಯನೆಚ್ಚಡೆ ಮೂರು ಕಾಲು ಹರಿದು ಒಂದರಲ್ಲಿ ಆಧರಿಸಿ ನಿಂದಿತ್ತು. ನಿಂದ ಹೆಜ್ಜೆಯ ಕೀಳಲಾರದೆ ಅಂಗ ಬಿದ್ದಿತ್ತು; ಎರಳೆ ಅಳಿಯಿತ್ತು. ಗೊಹೇಶ್ವರನ ಶರಣ ಅಲ್ಲಮನಲ್ಲಿ ಬೇಂಟೆಯ ಹಪ್ಪು ಕೆಟ್ಟಿತ್ತು.
--------------
ಗಾಣದ ಕಣ್ಣಪ್ಪ
ಕಾಯದ ಕಳವಳ ಕಾಣೆನೆಂದಲ್ಲಿ ಹೋಯಿತ್ತು. ಜೀವದ ದುಷ್ಕೃತ ದೂರವೆಂದಲ್ಲಿ ತಪ್ಪಿತ್ತು. ಕಾಯ ಜೀವವೆಂಬ ಸೂತಕ, ಮನ ನಿರ್ಮಲವಾದಲ್ಲಿಯೆ ಅಳಿಯಿತ್ತು. ಗುಹೇಶ್ವರನೆಂಬ ಲಿಂಗವನರಿಯ ಬೇಕಾದಡೆ, ನಿನ್ನ ಒಳಗ ತೊಳೆದು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಕರೆವ ಕಾಮಧೇನು ಒಂದು ಕರುವನೀದು, ಕರೆಯದೆ ಹೋಯಿತ್ತು. ಆ ಕರು ಅರಿದು, ತನ್ನ ತಾಯನೀದು, ಕರುವಿಂಗೆ ತಾಯಿ ಕರುವಾಗಿ, ಎಡೆಬಿಡುವಿಲ್ಲದೆ ಕರೆವುತ್ತಿದೆ. ಹಾಲಿನ ಮಧುರ ತಲೆಗೇರಿ ಅಳಿಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವ ವೇದಿಸಿದ ಕಾರಣ.
--------------
ಸಗರದ ಬೊಮ್ಮಣ್ಣ
ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು. ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ. ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು. ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ. ಮಹವನೊಡಗೂಡು ಮಡಿವಾಳಯ್ಯ. ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ. ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ ! ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು. ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು. ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ. ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ.
--------------
ಅಲ್ಲಮಪ್ರಭುದೇವರು
ಆಹಾ ಮನವೆ, ಮರೆದೆಯಲ್ಲಾ ನಿನ್ನ ಪೂರ್ವಾಪರವ, ಘನ ಮನದೊಳಡಗಿ, ಆ ಮನ ಲಿಂಗದೊಳಡಗಿ, ಆ ಲಿಂಗವೆನ್ನ ಕರಸ್ಥಲಕ್ಕೆ ಬಂದ ಬಳಿಕ ಅಳಿಯಿತ್ತು ಅಗಲಿತ್ತು ಎಂಬ ಭಾವಭ್ರಾಂತಿ ಇದೇನೊ ? ಜನನವಿಲ್ಲದ ಘನಕ್ಕೆ ಮರಣವುಂಟೆ ? ತೆರಹಿಲ್ಲದ ನಿಜವು ತನ್ನಲ್ಲಿ ತಾನು ವೇದ್ಯವಾಗಿಪ್ಪುದಲ್ಲದೆ ಇದಿರಿಟ್ಟು ತೋರದೆಂಬ ಅಜ್ಞಾನವಿದೇನೊ ? `ನೀ' `ನಾ' ಎಂಬುದು ಮಾದು. `ತಾನೆ' ಆಗೆ ಸಾಧ್ಯವಾಯಿತ್ತು ! ಇದೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->