ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ ನಿಮ್ಮಿಂದವೆ ಕಂಡೆನಯ್ಯಾ. ಅದೇನು ಕಾರಣವೆಂದಡೆ; ತನುವ ತೋರಿದಿರಿ, ಮನವ ತೋರಿದಿರಿ, ಘನವ ತೋರಿದಿರಿ. ತನುವ ಗುರುವಿಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು, ಇವೆಲ್ಲವು ನಿಮ್ಮೊಡನೆ ಎಂದು ನಿಮಗಿತ್ತು. ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೆ ನೆಲೆಗೊಂಡ ಕಾರಣ, ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು, ಮಹಾಶರಣರು ಎನಗೆ ಕುರುಹ ತೋರಿದರು. ಗುರುವೆಂಬುದನರುಹಿದರು; ಜಂಗಮವೆ ಜಗದ ಕರ್ತುವೆಂದರುಹಿದರು. ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ, ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ. ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ, ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಈ ಮಹಾಘನವ ಕಾಂಬುದಕ್ಕೆ ಹಸಿವು ಕೆಡಬೇಕು; ತೃಷೆಯಡಗಬೇಕು; ವ್ಯಸನ ನಿಲ್ಲಬೇಕು; ನಿದ್ರೆ ಹರಿಯಬೇಕು; ಜೀವನ ಬುದ್ಧಿ ಹಿಂಗಬೇಕು; ಮನ ಪವನ ಬಿಂದು ಒಡಗೂಡಬೇಕು; ಚಿತ್ತ ಒತ್ತಟ್ಟಿಗೆ ಹೋಗದಿರಬೇಕು. ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ, ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು, ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು. ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ, ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅದೇನು ಕಾರಣವೆಂದಡೆ, ಘನಕ್ಕೆ ಘನವಾದರು; ಮನಕ್ಕೆ ಮನವಾದರು; ತನುವಿಂಗೆ ತನುವಾದರು; ನಡೆನುಡಿಗೆ ಚೈತನ್ಯವಾದರು ನೋಡುವುದಕ್ಕೆ ನೋಟವಾದರು; ಕೂಡುವುದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ, ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಂಗವೆಂದಡೆ ಲಿಂಗದೊಳಡಗಿತ್ತು ಲಿಂಗವೆಂದಡೆ ಅಂಗದೊಳಡಗಿತ್ತು. ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಮಂಗಳದ ಮಹಾಬೆಳಗು ಕಾಣಿಸಿತ್ತು. ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣರಂಘ್ರಿಗೆರಗಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಿಮ್ಮ ಚರಣವಿಡಿದು ಮನವ ನಿಲಿಸಿದೆ, ತನುವ ಮರೆದೆ; ಮಹಾಘನವ ಕಂಡೆ; ಲಿಂಗದನೆಲೆವಿಡಿದೆ. ಅಂಗವ ಲಿಂಗವೆಂದು ನೋಡಲು ಕಂಗಳ ಮುಂದಣ ಬೆಳಗೇ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು ಸಂಗಸುಖವ ಮರೆದು, ಆ ಮಂಗಳದ ಮಹಾಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಅದೇನು ಕಾರಣವೆಂದಡೆ, ಕಂಗಳ ಕತ್ತಲೆಯನೆ ಹರಿದಿರಿ ಮನದ ಕಾಳಿಕೆಯನೆ ಹಿಂಗಿಸಿದಿರಿ ಮಾತಿನ ಮೊದಲನೆ ಹರಿದಿರಿ ಜ್ಯೋತಿಯ ಬೆಳಗನೆ ತೋರಿದಿರಿ ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ, ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ ನಾನು ಬಂದ ಬಂದ ಭವಾಂತರದಲ್ಲಿ ನೀವು ಕಡೆಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದಡೂ ನಿಮ್ಮ ಕಾಣದೆ ಇದ್ದೆನಯ್ಯಾ. ಅದು ಕಾರಣದಿಂದ, ಮನಕ್ಕೆ ಪ್ರಾಣವಾಗಿ ಬಂದು ನಿಂದಿರಿ, ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ, ಎನ್ನ ತನು ಕರಗಿ, ಮನ ಮಗ್ನವಾಯಿತ್ತು. ಎನ್ನ ಮರಣಭಯ ಹಿಂಗಿತ್ತು; ಎನ್ನ ಕಾಯಗುಣ ಕೆಟ್ಟಿತ್ತು ಕರಣಗುಣ ಸುಟ್ಟಿತ್ತು; ಭಾವವಳಿಯಿತ್ತು; ಬಯಕೆ ಸವೆಯಿತ್ತು. ಮಹಾದೇವನಾದ ಶರಣ ಚೆನ್ನಮಲ್ಲೇಶ್ವರನ ಪಾದವಿಡಿದು ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ಕರಣಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಕಿಚ್ಚಿನೊಳಗೆ ಬೆಂದ ಕಾಯಕ್ಕೆ ಅಚ್ಚುಗವುಂಟೆ ? ತಾನು ತಾನಾದ ಬಳಿಕ ಮಾನವರ ಹಂಗುಂಟೆ ? ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೆ ? ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ ? ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ ? ಇವೆಲ್ಲವನು ಹಿಂಗಿ ಮಹಾಘನದಲ್ಲಿ ಬೆರೆದ ಶರಣಂಗೆ ನಮೋ ನಮೋ ಎಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು; ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು; ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು; ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು; ಅಂಗಲಿಂಗವೆಂಬ ಉಭಯವಳಿಯಿತ್ತು; ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಂಗವ ಮರೆದವಂಗೆ ಲಿಂಗದ ಹಂಗೇಕೊ ? ಅರಿವ ಕಂಡವಂಗೆ ಕುರುಹಿನ ಹಂಗೇಕೊ ? ತಾನು ತಾನಾದವಂಗೆ ಧ್ಯಾನದ ಹಂಗೇಕೊ ? ಮನ ಮುಗ್ಧವಾದವಂಗೆ ಮಾನವರ ಹಂಗೇಕೊ ? ಆಸೆಯನಳಿದವಂಗೆ ರೋಷದ ಹಂಗೇಕೊ ? ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ ? ನಡೆಗೆಟ್ಟವಂಗೆ ನುಡಿಯ ಹಂಗೇಕೊ ? ನಿಶ್ಚಿಂತವಾದವಂಗೆ ಉಚ್ಚರಣೆಯ ಹಂಗೇಕೊ ? ಬಯಲು ಬಯಲಾದವಂಗೆ ಭಾವದ ಹಂಗೇಕೊ ? ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೆ ಐಕ್ಯ ಕಂಡೆಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಂತರಂಗ ಬಹಿರಂಗ ಶುದ್ಭವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ. ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ. ಅಂತರಂಗವೆಲ್ಲ ಅರುಹಾಯಿತ್ತು; ಬಹಿರಂಗದಲ್ಲಿ ಲಿಂಗವಾಯಿತ್ತು, ಆ ಲಿಂಗದಲ್ಲೆ ನುಡಿದು, ಲಿಂಗದಲ್ಲೆ ನಡೆದು, ಲಿಂಗದಲ್ಲೆ ಮುಟ್ಟಿ, ಲಿಂಗದಲ್ಲೆ ವಾಸಿಸಿ, ಲಿಂಗದಲ್ಲೆ ಕೇಳಿ, ಲಿಂಗವಾಗಿ ನೋಡಿ, ಸರ್ವಾಂಗವು ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲೆ ಐಕ್ಯ. ಕಂಡೆಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ