ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು, ಪಿಸುಣತ್ವದಿಂದ ಗಸಣಿಗೊಂಡು, ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ, ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ, ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.
--------------
ಏಕಾಂತರಾಮಿತಂದೆ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ. ಲಿಂಗದ ನೆನವು ಉಳ್ಳನ್ನಕ್ಕ ಲಿಂಗವಿಲ್ಲ. ಲಿಂಗವ ಕೂಡಬೇಕು, ಲಿಂಗವನರಿಯಬೇಕೆಂಬನ್ನಕ್ಕ ಲಿಂಗವಿಲ್ಲ. ಲಿಂಗವನರಿಯದಿರ್ದು, ಲಿಂಗವನರಿದು, ಲಿಂಗದಲ್ಲಿ ಬೆರೆದು, ಸುಖಿಯಾದೆನೆಂಬನ್ನಕ್ಕ ಲಿಂಗವಿಲ್ಲ. ನಾ ನನ್ನ ನಿಜವನರಿದು ಪರಿಣಾಮಿಯಾದೆನೆಂಬನ್ನಕ್ಕ ಲಿಂಗವಿಲ್ಲ. ಲಿಂಗೈಕ್ಯನಾದೆನೆಂದು ಪರರ ಮುಂದೆ ಬೀರುವನ್ನಕ್ಕ ಎಂದೆಂದಿಗೂ ಮುನ್ನವೆ ಲಿಂಗವಿಲ್ಲ. ಮತ್ತಂ, ಲಿಂಗವನರಿಯಬೇಕು, ಲಿಂಗವ ಕೊಡಬೇಕು, ಭವಬಂಧವ ಕಡಿಯಬೇಕೆಂದು ದೇಶದೇಶವ ತಿರುಗಿದರಿಲ್ಲ. ಊರಬಿಟ್ಟು ಅರಣ್ಯವ ಸೇರಿದರಿಲ್ಲ, ಹೊನ್ನು ಹೆಣ್ಣು ಮಣ್ಣು ಮೊದಲಾದ ಮನೆಮಾರು ತೊರೆದು ಸನ್ಯಾಸಿಯಾಗಿ ವೈರಾಗ್ಯತೊಟ್ಟು ವನವಾಸಗೈದರಿಲ್ಲ. ಅಶನ ವ್ಯಸನವ ಬಿಟ್ಟು, ಹಸಿವು ತೃಷೆಗಳ ತೊರೆದು, ಪರ್ಣಾಹಾರ ಕಂದಮೂಲ ತಿಂದು, ತನುಮನಧನವನೊಣಗಿಸಿದರಿಲ್ಲ. ಮಾತನಾಡಿದರಿಲ್ಲ, ಮಾತುಬಿಟ್ಟು ಮೌನದಿಂದಿದ್ದರೂ ಇಲ್ಲ. ಕ್ರೀಯ ಬಿಟ್ಟರಿಲ್ಲ, ಕ್ರೀಯ ಮಾಡಿದರಿಲ್ಲ. ಏನು ಮಾಡಿದರೇನು ವ್ಯರ್ಥವಲ್ಲದೆ ಸ್ವಾರ್ಥವಲ್ಲ. ಅದೇನುಕಾರಣವೆಂದರೆ, ತಮ್ಮ ನಿಲವು ತಾವು ಅರಿಯದ ಕಾರಣ. ನಮ್ಮ ಗುಹೇಶ್ವರಲಿಂಗವ ಬೆರೆಸಬೇಕಾದರೆ ಸಕಲಸಂಶಯ ಬಿಟ್ಟು, ಉಪಾದ್ಥಿರಹಿತನಾಗಿ, ಎರಡಳಿದು ಕರಕಮಲದಲ್ಲಿ ಅಡಗಬಲ್ಲರೆ ಪರಶಿವಲಿಂಗದಲ್ಲಿ ಅಚ್ಚಶರಣ ತಾನೇ ಎಂದನಯ್ಯ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ ಶಾಸ್ತ್ರದ ಸದಗರು ನೀವು ಕೇಳಿರೋ. ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ, ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ, ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ. ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ. ಬೇರ್ಪಡಿಸಿ ನುಡಿಯಲುಂಟೆ ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ. ಅದೆಂತೆಂದಡೆ; ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ, ಶಯನ, ಸಂಯೋಗ, ಮಜ್ಜನ, ಭೋಜನ ಇಂತಿವನು ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ ನಾನು ನಮೋ ನಮೋ ಎಂಬೆನು. ಅದೆಂತೆಂದಡೆ; ಅರ್ಥಪ್ರಾಣಾಭಿಮಾನಂ ಚ ಗುgõ್ಞ ಲಿಂಗೇ ಚ ಜಂಗಮೇ± ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ, ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ, ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ, ಅದೇನು ಕಾರಣವೆಂದಡೆ; ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ ಇದನರಿದು ಬೇರೆ ಮಾಡಿ ನುಡಿಯಲಾಗದು. ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ ಭಕ್ತದೇಹಿಕ ದೇವನಾದ ಕಾರಣ. ಅದೆಂತೆಂದಡೆ; ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ ಇಂತೆಂಬ ಪುರಾಣವಾಕ್ಯವನರಿದು ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ ಇನ್ನೆಲ್ಲಿಯ ಸಂಕಲ್ಪವೊ, ಇನ್ನೆಲ್ಲಿಯ ಸೂತಕವೋ, ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ.
--------------
ಬಸವಣ್ಣ
ಅಶನ ಕುಂದದು, ವ್ಯಸನ ಮಾಣದು, ಆರತವಡಗದು, ಬೆವಹಾರ ಮಾಣದು. ಮಜ್ಜನಕ್ಕೆರೆವೆನಯ್ಯಾ:ಕಾಯವಿಕಾರಿಯಾನು. ಮಜ್ಜನಕ್ಕೆರೆವೆನಯ್ಯಾ:ಜೀವವಿಕಾರಿಯಾನು. ಮಜ್ಜನಕ್ಕೆರೆವೆನಯ್ಯಾ:ಶರಣನಲ್ಲ, ಲಿಂಗೈಕ್ಯನಲ್ಲ. ಕೂಡಲಸಂಗಮದೇವರಲ್ಲಿ ಅಂತರಬೆಂತರ ನಾನಯ್ಯಾ. 259
--------------
ಬಸವಣ್ಣ
ಲಿಂಗಮುಖವು ಜಂಗಮವೆಂದುದಾಗಿ, ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತು ತತ್‍ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆ ಅದು ಅಶನವೆಂಬೆ, ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ, `ಸಾಶನಾನಶನೇ ಭಿ' ಎಂದುದಾಗಿ. ಇಂತೀ ಅಶನ ಅನಶನಗಳ ಭೇದವನರಿಯದೆ ತನುವ ದಂಡಿಸದೆ ಮನವ ಖಂಡಿಸದೆ ತನಗಾಗಿ ಜನವ ಮೋಸಂಗೈದು ತಂದು ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು, ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ. ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನು ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?
--------------
ಚನ್ನಬಸವಣ್ಣ
ತನು ಕಾಮಿಯಾಗದೆ ಮನ ಕಾಮಿಯಾಗದೆ ಧನ ಕಾಮಿಯಾಗದೆ ಅಶನ ವಸನ ಕಾಮಿಯಾಗದೆ ಲಿಂಗ ಕಾಮಿಯಾದರೆ ಕೂಡಲಚೆನ್ನಸಂಗಯ್ಯನೆಂಬೆ.
--------------
ಚನ್ನಬಸವಣ್ಣ
ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು. ಅಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ ! ಅನಂತ ಮೇಳಾಪದಚ್ಚಗೋಷಿ*ಯ ಭಂಡರೆಲ್ಲ ಇನ್ನು ಬಲ್ಲರೆ, ಹೇಳಿರೆ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಚ್ಛೆಗೆ ಹರಿದಾಡುವ ಹಂದಿಗಳೆಲ್ಲ ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ, ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ, ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ, ಎಂದು ಹೇಳಿದ ಮಾತಿಗೆ ನೊಂದ ನೋವು, ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು. ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ, ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು.
--------------
ಅರಿವಿನ ಮಾರಿತಂದೆ
ಹಗಲು ಹಸಿವಿಂಗೆ ಕುದಿದು ಇರುಳು ನಿದ್ರೆಗೆ ಕುದಿದು ಉಳಿದಾದ ಹೊತ್ತೆಲ್ಲಾ ಅಶನ ವ್ಯಸನಕ್ಕೆ ಕುದಿದು ಅಯ್ಯಾ, ನಿಮ್ಮನರಿಯದ ಪಾಪಿ ನಾನಯ್ಯಾ. ಅಯ್ಯಾ, ನಿಮ್ಮನರಿಯದ ಕರ್ಮಿ ನಾನಯ್ಯಾ. ಮಹಾಲಿಂಗ ಗಜೇಶ್ವರದೇವಾ, ಅಸಗ ನೀರಡಸಿದಂತಾಯಿತ್ತೆನ್ನ ಸಂಸಾರ.
--------------
ಗಜೇಶ ಮಸಣಯ್ಯ
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು ಆ ಭಕ್ತಿಯಾಚಾರದ ನೆಲೆಯನರಿಯದೆ ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ. ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ: ಅದು ಶೈವದೈವೋಚ್ಛಿಷ್ಟವಾದ ಕಾರಣ. ಅದರಿಂಲೂ ಭವಿಯ ಮನೆಯ ಅಶನ ಉತ್ತಮ. ಅದೆಂತೆಂದೊಡೆ:ಅದು ಅನ್ನವಾದ ಕಾರಣ. ಆ ಅನ್ನದ ಪೂರ್ವಾಶ್ರಯ ಕಳೆಯಬಹುದಾಗಿ ಆ ಉಚ್ಛಿಷ್ಟದ ಪೂರ್ವಾಶ್ರಯ ಹೋಗದಾಗಿ. ಅದೆಂತೆಂದೊಡೆ: ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ ಶಿವಭಕ್ತ ಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ_ ಎಂದುದಾಗಿ ಭಕ್ತಂಗೆ ಭವಿಯ ಮನೆಯ ಅಶನ ನಾಯಡಗು ನರಮಾಂಸ ಕ್ರಿಮಿ ಮಲಕ್ಕೆ ಸಮವೆಂದರಿದು ಶಿವಭಕ್ತರಾದವರು ಮುಟ್ಟರು; ಅದಕಿಂದಲೂ ಕರಕಷ್ಟ ಕರಕಷ್ಟ ನೋಡಾ. ಅರೆಭಕ್ತರು ತಮ್ಮ ಕುಲದೈವವ ಕೂರ್ತು ಮಾಡಿದ ಆ ಭವಿ ಶೈವದೈವೋಚ್ಛಿಷ್ಟವ ತಾ ನೆರೆಭಕ್ತನಾಗಿ ಆಚಾರವನನುಸರಣೆಯ ಮಾಡಿಕೊಂಡು ಆ ಅರೆಭಕ್ತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವದಕ್ಕಿಂತಲೂ ಹೊರಗಣ ಹೊಲೆಯರ ಮನೆಯ ಅನ್ನವೇ ಮಿಗೆ ಮಿಗೆ ಉತ್ತಮ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಆಚಾರವುಳ್ಳಡೆ ಗುರು ಆಚಾರವುಳ್ಳಡೆ ಲಿಂಗ ಆಚಾರವುಳ್ಳಡೆ ಜಂಗಮ ಆಚಾರವುಳ್ಳಡೆ ಪಾದೋದಕ ಆಚಾರವುಳ್ಳಡೆ ಪ್ರಸಾದ ಆಚಾರವುಳ್ಳಡೆ ಸದ್ಭಕ್ತ ಆಚಾರವುಳ್ಳಡೆ ದಾಸೋಹ. ಆಚಾರವಿಲ್ಲದಿದ್ದಡೆ ಗುರುವಲ್ಲ ನರನು ಆಚಾರವಿಲ್ಲದಿದ್ದಡೆ ಲಿಂಗವಲ್ಲಾ ಶಿಲೆ ಆಚಾರವಿಲ್ಲದಿದ್ದಡೆ ಜಂಗಮನಲ್ಲ ವೇಷಧಾರಿ ಆಚಾರವಿಲ್ಲದಿದ್ದಡೆ ಪಾದೋದಕವಲ್ಲ ನೀರು ಆಚಾರವಿಲ್ಲದಿದ್ದಡೆ ಪ್ರಸಾದವಲ್ಲ ಅಶನ ಆಚಾರವಿಲ್ಲದಿದ್ದಡೆ ಭಕ್ತನಲ್ಲ ಭೂತಪ್ರಾಣಿ ಆಚಾರವಿಲ್ಲದಿದ್ದಡೆ ದಾಸೋಹದ ಮನೆಯಲ್ಲ ವೇಶಿಯ ಗುಡಿಸಲು. ಇದು ಕಾರಣ ಕೂಡಲಚೆನ್ನಸಂಗಯ್ಯಾ ಆಚಾರವಿಲ್ಲದವರಿಗೆ ನಾಯಕನರಕ ತಪ್ಪದು
--------------
ಚನ್ನಬಸವಣ್ಣ
ಅನ್ನ ವಿಕಾರವಳಿದು ಸತಿಸಂಗವರಿಯ ನೋಡಾ. ದೇಹ ಗುಣಂಗಳಳಿದು ನಿರ್ದೇಹಪ್ರಸಾದಿ ನೋಡಯ್ಯಾ. ಅಶನ ವ್ಯಸನಾದಿಗಳು ಇರಲಂಜಿ ಹೋದವು ನೋಡಾ ! ಇವೆಲ್ಲ ಗುಣಂಗಳಳಿದು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೊಬ್ಬನೆ ಸಾವಧಾನಪ್ರಸಾದಿ ನೋಡಾ
--------------
ಚನ್ನಬಸವಣ್ಣ
ಅಶನ ವ್ಯಸನಾದಿಗಳನಂತನಂತ. ಕಾಶಾಂಬರಧಾರಿಗಳನಂತನಂತ. ಸಕಳೇಶ್ವರದೇವಾ, ನೀನಲ್ಲದೆ ಪೆರತನರಿಯದವರು ಎತ್ತಾನು ಒಬ್ಬರು
--------------
ಸಕಳೇಶ ಮಾದರಸ
ಪಂಚಾಮೃತವನುಂಡಡೇನು ? ಮಲಮೂತ್ರ ವಿಷಯ ಘನವಕ್ಕು. ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ. ಆಸೆ ಆಮಿಷ ಅಶನ ವ್ಯಸನದಲ್ಲಿ ಹಿರಿಯರು ಗರುವರುಂಟೆ ? ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ. ಈ ಭೇದವ ಭೇದಿಸ ಬಲ್ಲಡೆ ಕೂಡಲಚೆನ್ನಸಂಗನ ಶರಣ ಸಾಣೆಯಲ್ಲಿ ಸವೆದ ಶ್ರೀಗಂಧದಂತಿರಬೇಕು.
--------------
ಚನ್ನಬಸವಣ್ಣ
ಇನ್ನಷ್ಟು ... -->