ಅಥವಾ

ಒಟ್ಟು 21 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವಶುದ್ಧವಾಗಿರಬೇಕು. ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ ಬಾಹ್ಯದ ಬಳಕೆ ಅಂತರಂಗದ ನಿರಿಗೆ ಉಭಯ ಶುದ್ಧವಾಗಿಪ್ಪ ಭಕ್ತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
--------------
ಅಕ್ಕಮ್ಮ
ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ ನೀನೇ ನಾನಾದುದೇ ಇದೇ ಆದಿಯಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇರಿವ ಅಸಿ, ನೋವ ಬಲ್ಲುದೆ? ಬೇಡುವಾತ ರುಜವ ಬಲ್ಲನೆ? ಕಾಡುವ ಕಾಳುಮೂಳರ ವಿದ್ಥಿ ಎನಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ ಷಟ್‍ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ. ಆ ಜಂಗಮದ ಪಾದೋದಕ ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಂತೆ, ಕುಂಬ್ಥಿನಿಪಾತಕ. ಅವರನು ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ ಪಂಚಾಚಾರಕ್ಕೆ ಹೊರಗು. ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ತತ್ ಪದ ಲಿಂಗವೆಂದರುಹಿ ತ್ವಂ ಪದ ಅಂಗವೆಂದರುಹಿ ಅಸಿ ಪದ ಪ್ರಾಣವೆಂದರುಹಿ ಅಂಗವೇ ಲಿಂಗ, ಲಿಂಗವೇ ಪ್ರಾಣವೆಂದು ಶ್ರೀಗುರು ಇಷ್ಟಲಿಂಗವ ಕೊಟ್ಟು, ದೃಷ್ಟಲಿಂಗವ ತೋರಿದ ಬಳಿಕ ``ತತ್ತ್ವಮಸಿ ಪದ ನಿಮ್ಮ ಶರಣರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪುತ್ರೇಷಣ ವಿತ್ತೇಷಣ ದಾರೇಷಣಂಗಳೆಂಬ ಈಷಣತ್ರಯವನುಳಿದು ಅಸಿ ಮಸಿ ಕೃಷಿ ವಾಣಿಜ್ಯಗಳೆಂಬ ವ್ಯಾಪಾರ ಪಾರಂಗತನಾಗಿ ಸಂಸಾರ ಸ್ಪೃಹೆಯನುಳಿದು ನಿಸ್ಪೃಹನಾಗಿ, ರಕ್ತ ಅನುರಕ್ತ ಅತಿರಕ್ತವೆಂಬ ರಕ್ತತ್ರಯಗೆಟ್ಟು ವಿರಕ್ತನಾಗಿ ಸಗುಣದಲ್ಲಿ ಸಲ್ಲದೆ ನಿರ್ಗುಣದಲ್ಲಿ ನಿಲ್ಲದೆ ಸಗುಣ ನಿರ್ಗುಣಕ್ಕುಪಮಾತೀತವಾದ ಶಿವಲಿಂಗಾಂಗಿ ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ.
--------------
ಆದಯ್ಯ
ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ ಮಾಡುವುದು ಲೇಸು. ಹುಸಿ ವೇಷವ ತೊಟ್ಟು ಅಸುವ ಹೊರೆವವನ ಘಟ ಪಿಸಿತದ ತಿತ್ತಿಯಂತೆ ಅಘಟಿತ, ಅವನನೊಲ್ಲ ಅರ್ಕೇಶ್ವರಲಿಂಗ.
--------------
ಮಧುವಯ್ಯ
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವು ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ. ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ. ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು, ಲಿಂಗವಂತ ಲಿಂಗಮುಂತಾಗಿ ನಡೆವ ಶೀಲವೆಂತುಟೆಂದಡೆ ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರವನರಿತು ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟು, ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ, ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ ನಿರ್ಧಾರವಾಗಿ ಕರಿಗೊಂಡುದೆ ವ್ರತ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ.
--------------
ಅಕ್ಕಮ್ಮ
ಬಿಂದುಮಾಯಿಕವಿಲ್ಲದಂದು ಮೂವತ್ತಾರುತತ್ವಂಗಳುತ್ಪತ್ತಿಯಾಗದಂದು, ತತ್ ಪದ ತ್ವಂ ಪದ ಅಸಿ ಪದವೆಂಬ ಪದತ್ರಯಂಗಳಿಲ್ಲದಂದು, ತತ್ ಪದವೆ ಲಿಂಗ, ತ್ವಂ ಪದವೆ ಅಂಗ, ಅಸಿ ಪದವೆ ಲಿಂಗಾಂಗಸಂಯೋಗ. ಈ ಅಂಗ ಲಿಂಗ ಸಂಬಂಧವೆಂದು, ಈ ತತ್ವಮಸ್ಯಾದಿ ವಾಕ್ಯಾರ್ಥವಿಲ್ಲದಂದು, ಅಲ್ಲಿಂದತ್ತತ್ತ ನೀನು ಪರಾತ್ಪರನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ. ಇದಿರ ಕಂಡು ತಾ ಕಾಣದಂತೆ ಇರಲಿಲ್ಲ, ಗತಿಜಿಹ್ವೆಯ ಚತುಃಪಾದಿಯಂತೆ. ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ, ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ, ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ, ಅಸುವಿನ ನಿಸಿತವ ಕೊಳದೆ ? ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ. ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ, ಹೊರಹೊಮ್ಮದ ದಿನಕರನಂತೆ, ಮಧುಋತು ಅರತ ಮಧುಕರನಂತೆ, ವಾಯು ಅಡಗಿದ ವಾರಿಧಿಯಂತೆ, ಅಸು ಅಡಗಿದ ಘಟಚಿಹ್ನದಂತೆ, ದಿಟಕರಿಸು, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು.
--------------
ಮನುಮುನಿ ಗುಮ್ಮಟದೇವ
ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮನಾಯಿತ್ತು. ಆ ಪರಮಾತ್ಮನೆ ಲಿಂಗ, ಜೀವಾತ್ಮನೆ ಅಂಗ, ಸಂಗವೆ ಏಕಾತ್ಮ. ತತ್‍ಪದವೆ ಪರಮಾತ್ಮ, ತ್ವಂ ಪದವೆ ಜೀವಾತ್ಮ, ಅಸಿ ಪದವೆ ತಾದಾತ್ಮ್ಯವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಬಿಟ್ಟು, ತನ್ನ ಸ್ವಕಾಯಕದಿಂದ ಬಂದು ಒದಗಿದ ದ್ರವ್ಯವ ಒಡೆಯನ ಮುಂದಿಟ್ಟು, ತಾನೊಡಗೂಡಿ ಕೊಂಡ ಪ್ರಸಾದಿಯ ಪ್ರಸಾದವ ಎನ್ನೊಡೆಯನ ಮುಂದಿಟ್ಟು ಏಲೇಶ್ವರಲಿಂಗಕ್ಕೆ ಕೊಡುವೆನು.
--------------
ಏಲೇಶ್ವರ ಕೇತಯ್ಯ
ಇನ್ನಷ್ಟು ... -->