ಅಥವಾ

ಒಟ್ಟು 13 ಕಡೆಗಳಲ್ಲಿ , 11 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ? ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ ಶಿಶು ತಾಯ ಉಭಯನಾಮವಡಗಿತ್ತು. ಕ್ರೀಯೆ ತಾಯಿ, ಅರಿವೆ ಶಿಶುವಾಗಿ ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ ಆ ಮರವೆಗೆ ತೆರನ ಹೇಳಾ, ಕಾಲಾಂತಕ ಬ್ಥೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ? ಶಿಲ್ಪನ ಶಿಲೆ ಲೋಹ ಮೊದಲಾಗಿ ಕುರುಹುಗೊಂಡವ ದೇವತಾಕಳೆಯ ತುಂಬುವನೆ ? ಶಿಲೆ ಲೋಹ ಲಕ್ಷಣವ ನೆಲೆ ಶುದ್ಧವ ಮಾಡುವನಲ್ಲದೆ. ತಾ ಕಟ್ಟುವ ಇಷ್ಟಕ್ಕೆ ಕಟ್ಟಿಲ್ಲ, ಮೇಲೆ ರೊಕ್ಕವ ತಾಯೆಂಬವಳಂತೆ ಕಟ್ಟಿಹೋದ ಮನವ ಇಷ್ಟದಲ್ಲಿ ನೆಮ್ಮಿಸದೆ. ಇನ್ನಾರ ಕೇಳುವೆ ? ನೀ ಅಲೇಖಮಯ ಶೂನ್ಯ ಕಲ್ಲಿನ ಮರೆಯಾದೆ
--------------
ವಚನಭಂಡಾರಿ ಶಾಂತರಸ
ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ ಮಾಡುವುದು ಲೇಸು. ಹುಸಿ ವೇಷವ ತೊಟ್ಟು ಅಸುವ ಹೊರೆವವನ ಘಟ ಪಿಸಿತದ ತಿತ್ತಿಯಂತೆ ಅಘಟಿತ, ಅವನನೊಲ್ಲ ಅರ್ಕೇಶ್ವರಲಿಂಗ.
--------------
ಮಧುವಯ್ಯ
ತನುವಿನ ಮೇಲಿಪ್ಪುದು ಇಷ್ಟಲಿಂಗವೆಂದೆಂಬರು. ಆತ್ಮನ ನೆನಹಿನಲ್ಲಿಪ್ಪುದು ಪ್ರಾಣಲಿಂಗವೆಂದೆಂಬರು. ಇಂತೀ ಘಟಕ್ಕೂ ಆತ್ಮಕ್ಕೂ ಉಭಯ ಲಿಂಗವುಂಟೆ ? ಹೊರಗಳ ಅಸ್ಥಿ ಚರ್ಮಕ್ಕೆ ಬೇರೊಂದು ಅಸುವ ಕಲ್ಪಿಸಬಹುದೆ ? ಒಳಗಳ ಕರುಳು, ಮಜ್ಜೆ, ಮಾಂಸಕ್ಕೆ ಬೇರೊಂದು ಅಸುವಿನ ಕಲೆಯುಂಟೆ ? ಇದಕ್ಕೆ ದೃಷ್ಟವ ಕಂಡಡೆ ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ಟುಂಟು. ಅದು ಅಚೇತನವಪ್ಪ ನಿರವಯಕ್ಕೆ ಅಚೇತನವಪ್ಪುದೊಂದು ದೃಷ್ಟ; ನಿರವಯ ಸಾವಯವದಲ್ಲಿ ಸಂಬಂಧಿಸಿ ಕುರುಹಾದ ಭೇದ. ಆ ಕಾಯದ ಒಳ ಹೊರಗಿನ ನೋವಿನ ಭೇದದಂತೆ, ಆ ಉಭಯವನರಿವ ಆತ್ಮ ಒಂದೆಯಾಗಿ, ಇಂತೀ ಕಾಯದ ಇಷ್ಟವೆಂದು, ಆತ್ಮನ ಅರಿವೆಂದು, ಎರಡೆನಿಸುವ ಲಿಂಗವೆಂಬುದೊಂದು ಕುರುಹಿಲ್ಲ. ಅದು ಏಕ ಏವ ಸ್ವರೂಪು; ಅದು ಚಿದ್ಘನ ಸ್ವರೂಪು; ಅದು ಘಟಮಠದ ಬಯಲಿನ ಗರ್ಭದಂತೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಅತ್ಯತಿಷ್ಠದ್ದಶಾಂಗುಲನಾಗಿಪ್ಪನು.
--------------
ಮೋಳಿಗೆ ಮಹಾದೇವಿ
ಕುಂಭದಲ್ಲಿ ಕುದಿವ ರೂಪು ಮುಚ್ಚಳ ಅಂಗವ ತೆಗೆದಲ್ಲದೆ ಪಾತಕ ಸಂಗವನರಿಯಬಾರದು. ಶರೀರದ ಕುಂಭದಲ್ಲಿ ಕುದಿವ ಜೀವನ ಇಂದ್ರಿಯಂಗಳ ಹಿಂಗಿಯಲ್ಲದೆ ಲಿಂಗಸಂಗಿಯಲ್ಲ, ಪ್ರಾಣಲಿಂಗಿಯಲ್ಲ, ಆಸು ಭೇದವನರಿವುದಕ್ಕೆ ಸುಸಂಗಿಯಲ್ಲ, ಇಂತಿವನರಿವುದಕ್ಕೆ ಪಶುಪತಿಯ ಶರಣರಲ್ಲಿ ಒಸೆದು ಸಂಗವ ಮಾಡಿ ಅರಿ, ಅಸುವ ಅರಿ, ತೂತ ತರಿ, ಸಂದೇಹದ ಭವವನರಿ, ಘನಲಿಂಗದಲ್ಲಿ ಅರಿದೊರಗು, ಕರಿಗೊಂಡಿರು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಶರಣರಲ್ಲದವರನಾಸೆಗೈದಡೆ ಕಕ್ಕುಲತೆಯಪ್ಪುದಲ್ಲದೆ ಕಾರ್ಯವಿಲ್ಲ, ಆಸೆಗೈದಡೆ ನಿರಾಸೆಯಪ್ಪುದು. ಶರಣರನಾಸೆಗೈದು ಬಂದ ಶಿವಶರಣಂಗೆ ಸತಿಯ ಕೊಟ್ಟರು ಸುತನ ಕೊಟ್ಟರು ಧನವ ಕೊಟ್ಟರು ಅಸುವ ಕೊಟ್ಟರು ಮನವ ಕೊಟ್ಟರು ಶರಣರ ಪರಿ ಆವ ಲೋಕದೊಳಗಿಲ್ಲ. ಶರಣಭರಿತಲಿಂಗವಾಗಿ ಬೇಡಿತ್ತ ಕೊಡುವರಯ್ಯಾ ಶರಣರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಳವಿನಲ್ಲಿ ಬಂದಿರಿದಾತ ಕಳ್ಳನಲ್ಲದೆ ಧೀರನಲ್ಲ. ಆಲಗಿನ ಮೊನೆ ಹಳಚಿನಲ್ಲಿ ಗತಿ ತಪ್ಪಿ ಬಿದ್ದಡೆ, ಕೈದು ಸಹಿತ ಕೋಯೆಂದು ಇದಿರಾಗು ಎನಬೇಕಲ್ಲದೆ, ಬಸವಳಿದು ಬಿದ್ದವನ ಅಸುವ ಕೊಂಬ ಸುಗಡಿಗಳನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಭಕ್ತರಲ್ಲದವರನಾಸೆಗೈದಡೆ ಕಕ್ಕುಲತೆಯಲ್ಲದೆ ಕಾರ್ಯವಲ್ಲ. ಆಸೆಗೈದಡೆ, ಆಸೆಗೈವುದು ಭಕ್ತರನು. ಆಸೆಗೈದು ಬಂದ ಶಿವಂಗೆ ಸುತನ ಕೊಟ್ಟರು, ಧನವ ಕೊಟ್ಟರು, ಮನವ ಕೊಟ್ಟರು, ಅಸುವ ಕೊಟ್ಟರು. ಶರಣನ ಪರಿ ಯಾವ ಲೋಕದೊಳಗೂ ಇಲ್ಲ. ಶರಣಭರಿತಲಿಂಗವಾಗಿ ಬೇಡಿದ್ದ ಕೊಡುವರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ, ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು. ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ, ಊಧ್ರ್ವಮುಖವಾಗಿ ತಿರುಗಾಡುತ್ತಿಹುದು. ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ, ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು. ಮೇಲಣ ಮೂರು ಬಾಗಿಲು ಊಧ್ರ್ವದ ತ್ರಿಗುಣದ ಸರ್ಪ ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ, ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು, ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು, ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು. ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು, ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು. ಕರ್ಮದ ಒಳಗಾದ ಜ್ಞಾನ ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ.
--------------
ಅರಿವಿನ ಮಾರಿತಂದೆ
ಎಚ್ಚ ಗುರಿಯ ಮನ ನಿಶ್ಚೈಸಿದಂತೆ, ಇಷ್ಟ ಮಚ್ಚಿದ ಲಲನೆಯ ಬೆಚ್ಚಂತಿಪ್ಪ ಚಿತ್ತದಂತೆ, ಕಡೆಯಾಣೆಯ ಒಡಗೂಡಿ ಲೇಪಿಸಿದಂತೆ, ಇಷ್ಟದ ಮರೆಯಲ್ಲಿ ತೋರುವ ನಿಶ್ಚಿಂತನಂಗದ ಕೂಟ. ಭಕ್ತಿಯ ಮೂಲ, ಸತ್ಯದ ಸುಧೆ, ವಿರಕ್ತಿಯ ಬೆಳೆ. ಇಷ್ಟನರಿತಡೆ ಉಭಯದಿರವು ತನು ಮನ ವಸ್ತು ಲೇಪ. ಇದರ ಅಸುವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ.
--------------
ವಚನಭಂಡಾರಿ ಶಾಂತರಸ
ಮುಟ್ಟದಿರು ಮೂರುವನು ಮುಟ್ಟಿಸದಿರಾರುವನು ಬಟ್ಟ ಬಯಲಾಗು ಗುರುಹಸ್ತದಿಂದ ಮುಟ್ಟು ಮೂರರ ಅಸುವ ಬಿಟ್ಟು ಕಳೆ ಆರಲಿ ತತ್ವಕೆ ತವಕಿಸದೆ ಗುರುವಾಗು ಕಪಿಲಸಿದ್ಧ ಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ನಾ ವಿಶ್ವಾಸಿಯಾದಡೆ ಗುಪ್ತ ಭಕ್ತಿಯ ಮಾಡಬೇಕೆ? ನಾ ವಿಶ್ವಾಸಿಯಾದಡೆ ಹರಿವೇಷವಂ ಇದಿರಿಗೆ ತೊಟ್ಟು ಹರನ ಹರಣದಲ್ಲಿ ಇರಿಸಿಹೆನೆಂಬ ಸಂದೇಹವೇತಕ್ಕೆ? ನನ್ನ ವಿಶ್ವಾಸಕ್ಕೆ ಇದಿರ ಅರಿತಡೆ ಅಸುವ ಹೊಸೆದೆಹೆನೆಂಬ ಹುಸಿಮಾತಿನ ಗಸಣಿಯೇತಕ್ಕೆ? ಎನ್ನ ವೇಷವು ಹುಸಿ, ನಿಮ್ಮ ಭಕ್ತಿಯ ದಾಸೋಹದ ದಾಸನೆಂಬುದು ಹುಸಿಯಯ್ಯಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
-->