ಅಥವಾ

ಒಟ್ಟು 11 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು ರುದ್ರನವತರಿಸದಂದು, ಈರೇಳುಭುವನ ನೆಲೆಗೊಳ್ಳದಂದು ಸಪ್ತಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು, ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ? ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ ಹಮ್ಮಿಲ್ಲದಿರ್ದನಂದು !
--------------
ಚನ್ನಬಸವಣ್ಣ
ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ; ಪಂಚಶತಕೋಟಿ ವಿಸ್ತೀರ್ಣ ಭೂಮಂಡಲವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಈರೇಳುಭುವನ ಹದಿನಾಲ್ಕು ಲೋಕವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಊರ ಮುಂದಳ ದಾರಿಯಲ್ಲಿ ಸರ್ಪನು ಬಾಲವ ಗಗನದಲ್ಲಿಟ್ಟು, ಶಿರವ ನಾಗಲೋಕದಲ್ಲಿಟ್ಟು, ಈರೇಳುಭುವನ ಹದಿನಾಲ್ಕು ಲೋಕಂಗಳ ನುಂಗಿಕೊಂಡಿರ್ಪುದು ನೋಡಾ. ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು, ನಾಗಸ್ವರದ ನಾದವ ಮಾಡಲು ಆ ನಾಗಸ್ವರವ ಕೇಳಿ ನಾಗಲೋಕದಿಂದ ಎದ್ದ ಸರ್ಪನು ಆ ಗಾರುಡಿಗನ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶರಣನಿರ್ದಲ್ಲಿ ಸಕಲರ್ತಿರ್ಥಕ್ಷೇತ್ರಂಗಳಿರ್ಪವು. ಶರಣನಿರ್ದಲ್ಲಿ ಕೈಲಾಸ ಮೇರು ಮಂದರ ಕುಲಶೈಲಂಗಳಿರ್ಪವು. ಶರಣನಿರ್ದಲ್ಲಿ ಈರೇಳುಭುವನ ಹದಿನಾಲ್ಕು ಲೋಕಂಗಳಿರ್ಪವು. ನಮ್ಮ ಅಖಂಡೇಶ್ವರನ ಶರಣನಿರ್ದಲ್ಲಿ ಅನಂತಕೋಟಿ ಬ್ರಹ್ಮಾಂಡಗಳಿರ್ಪವು ನೋಡಾ.
--------------
ಷಣ್ಮುಖಸ್ವಾಮಿ
ನೊಸಲಕಣ್ಣು, ಪಂಚಮುಖ, ದಶಭುಜ, ತನುವೇಕ, ದ್ವೀಪಾದ, ಸ್ಫುಟಿಕವರ್ಣ, ಈರೇಳುಭುವನ ಹದಿನಾಲ್ಕುಲೋಕಂಗಳ ಹೊತ್ತವನಯ್ಯ. ರವಿ ಶಶಿಯ ಬೆಳಗನೊಳಕೊಂಡು ಆಕಾಶ ನಿರಾಕಾಶವೆಂಬ ನಿರ್ವಯಲಲ್ಲಿ ನಿಂದು ತೊಳಗಿಬೆಳಗುತಿಪ್ಪನು ನೋಡಾ ! ಆತಂಗೆ ಅತಳಾಧಾರವಿಲ್ಲ, ವಿತಳಾಧಾರವಿಲ್ಲ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಲಿಂಗದ ಸಂಗದಿಂದ ಒಬ್ಬ ಭಾಮಿನಿಯು ಹುಟ್ಟಿದಳು ನೋಡಾ! ಆಕೆಯ ಒಡಲಲ್ಲಿ ಸ್ವರ್ಗ ಮತ್ರ್ಯ ಪಾತಾಳವ ಕಂಡೆನಯ್ಯ. ಈರೇಳುಭುವನ ಹದಿನಾಲ್ಕು ಲೋಕಂಗಳ ಕಂಡೆನಯ್ಯ. ಅಷ್ಟಕುಲಪರ್ವತವ ಕಂಡೆನಯ್ಯ. ಸಪ್ತೇಳು ಸಾಗರವ ಕಂಡೆನಯ್ಯ. ಹತ್ತು ಮೇರುವೆಯ ಮೀರಿ, ಕಡೆಯ ಬಾಗಿಲ ಮುಂದೆ ನಿಂದಿರುವುದ ಕಂಡೆನಯ್ಯ. ಅಲ್ಲಿಂದತ್ತತ್ತ ತನ್ನ ಗಮನವ ತಾನೇ ನುಂಗಿ, ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗ ಭಿನ್ನವಾಗಲೊಡನೆ ತೆತ್ತಿಗರ ಕಂಡಲ್ಲಿ ವಸ್ತುವ ಬಿಡುವುದು. ತೆತ್ತಿಗರ ಕಾಣದಿರ್ದಡೆ ನೀರು ನೇಣು ವಿಷ ಔಷಧಂಗಳಲ್ಲಿ ವಸ್ತುವಿನೊಡನೆ ವಸ್ತುವ ಬಿಡಬೇಕು, ಇದಕ್ಕೆ ಸಂದೇಹವಿಲ್ಲ. ಆವಾವ ಪ್ರಕಾರದಲ್ಲಿ ಹೋದಡೂ ಸಂದೇಹವಿಲ್ಲ ಲಿಂಗೈಕ್ಯಂಗೆ. ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಈರೇಳುಭುವನ ಹದಿನಾಲ್ಕುಲೋಕದಲ್ಲಿ ಲಿಂಗಸಹಿತ ಒಪ್ಪುವರು.
--------------
ಅಮುಗೆ ರಾಯಮ್ಮ
ಮೂರು ಕೊಂಬೆಯ ಮೇಲೆ, ಕೋಗಿಲೆ ಕುಳಿತು ಕೂಗುತಿದೆ ನೋಡಾ. ಆ ಕೋಗಿಲೆ ಕೂಗಿದ ನಾದಕ್ಕೆ ಸಪ್ತೇಳುಸಾಗರಂಗಳು ಅರತಿದ್ದವು ನೋಡಾ. ಸ್ವರ್ಗ ಮತ್ರ್ಯ ಪಾತಾಳಂಗಳು ಅಡಗಿರ್ದವು ನೋಡಾ. ಅಷ್ಟಕುಲಪರ್ವತಂಗಳು ಕರಗಿದವು ನೋಡಾ. ಈರೇಳುಭುವನ ಹದಿನಾಲ್ಕುಲೋಕಂಗಳೆಲ್ಲಾ ಬಯಲಾದವು ನೋಡಾ. ಮೂರು ಕೊಂಬೆಗಳು ಅಳಿದುಹೋದವು ನೋಡಾ. ನಿಶ್ಚಿಂತ ನಿರಾಕುಳನೆಂಬ ಗುಡಿಗೆ ಆ ಕೋಗಿಲೆ ಹಾರಿಹೋಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೊಂದು ಮನೆಯ ಕಂಡೆನಯ್ಯ. ಆ ಮನೆಯೊಳಗೊಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದೊಳಗೆ ಸಪ್ತೇಳುಸಾಗರಂಗಳು ಅಷ್ಟಕುಲಪರ್ವತಂಗಳು, ಸ್ವರ್ಗ ಮತ್ರ್ಯ ಪಾತಾಳ, ಈರೇಳುಭುವನ ಹದಿನಾಲ್ಕು ಲೋಕಂಗಳು ಆ ಮಾಣಿಕ್ಯದ ಬೆಳಗಿನೊಳಗೆ ಇಪ್ಪವು ನೋಡಾ. ಗಗನದ ತುಟ್ಟ ತುದಿಯ ಮೇಲೆ ಇರುವ ಹಂಸನು ಆ ಮಾಣಿಕ್ಯವ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ. ಅದನೇನ ಹೇಳುವೆ? ಕಣ್ಣಿಂಗೆ ರೂಪಿಲ್ಲ. ಕೈಗೆ ಹಿಡಿಯಿಲ್ಲ. ನೆನೆವುದಕ್ಕೆ ಗೋಚರವಾಗಿ ನಿಂದು ಸುಳಿಯಿತ್ತು ನೋಡಾ. ಆ ಸುಳುಹಿನ ಮರೆಯಲ್ಲಿ ಬಂದು ಹಿಡಿಯಲಾಗಿ, ಕೂಸು ಸತ್ತು, ಅತ್ತ ನೀರಿನಲ್ಲಿ ಮುಕ್ತಿಯೆಂಬವಳು ಹುಟ್ಟಿದಳು. ಮುಕ್ತಿಯ ಬಸುರಲ್ಲಿ ಸತ್ತವರೆಲ್ಲ ಐದಾರೆ. ಹೊತ್ತುಹೋರಿ ಕರೆಯಲಾಗಿ, ನಿಚ್ಚಟದ ಅಲಗ ಹಿಡಿದು ಕುತ್ತಿದರಯ್ಯಾ, ಹೊಟ್ಟೆಯ ಹುರಿಯ. ಕುತ್ತಿದ ಬಾಯಲ್ಲಿ ಕೂಳ ಸುರಿದು, ಅವರೆಲ್ಲ ಉಂಟಾದರು. ಅವರಿಗಿನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಗುರುವಾದುದು ತಪ್ಪು, ಲಿಂಗವಾದುದು ತಪ್ಪು, ಜಂಗಮವಾದುದು ತಪ್ಪು. ಈ ತ್ರಿವಿಧ ಭೇದದ ಸಂಬಂಧದ ಸಕೀಲವ, ಸಂಚದ ನಿಕ್ಷೇಪವ ಅರಿತರೆ ಈ ಲೋಕವೇನು ? ಆ ಲೋಕವೇನು ? ಈರೇಳುಭುವನ ಹದಿನಲ್ಕುಲೋಕದ ನಿಸ್ಸಾರಾಯವ ಬಿಟ್ಟು, ತನ್ನೊಳಗೆ ಇದ್ದ ಲಿಂಗಸಾರಾಯದ ಯೋಗಿಯಾದರೆ ಸರ್ವಾಂಗವೆಲ್ಲವೂ ಲಿಂಗ, ಇದ್ದುದೆ ಕೈಲಾಸ, ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
-->