ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ ತಿರುಗಾಡುವದ ಕಂಡೆನಯ್ಯ. ಆ ಉಡುವಿನ ಬಾಯೊಳಗೆ ಮೂರುಲೋಕವೆಲ್ಲ ಏಳುತ್ತ ಬೀಳುತ್ತ ಇರ್ಪುದ ಕಂಡೆ. ಆ ಕೋಡಗದಾಟವ ಕಂಡು ಈರೇಳುಲೋಕದ ಪ್ರಾಣಿಗಳು ಬೆರಗಾದುದ ಕಂಡೆ. ಅದಾರಿಗೂ ಸಾಧ್ಯವಲ್ಲ. ಅಷ್ಟರಲ್ಲಿಯೇ ಅರಸನ ಮನೆಯಲ್ಲಿ ಒಂದು ಎಳೆ ಶಿಶು ಹುಟ್ಟಿ, ಕಸ ನೀರು ಹೊರುವ ಗಾಡಿಯ ಕೊಂದು, ಕೋತಿಯ ತಿಂದು, ಉಡವ ನುಂಗಿ, ತ್ರೈಲೋಕದ ಬಂಧನವ ಬಿಡಿಸಿ, ತಂಗಿಯನೊಡಗೂಡಿ, ಅಕ್ಕನ ಸಂಗವ ಮಾಡಿ, ಅರಸಿನ ಅರಮನೆಯಲ್ಲಿ ಆರು ಕಾಣದೆ ಅಡಗಿಹೋಯಿತ್ತು. ಇದರಂದಚಂದವ ನಿಮ್ಮ ಶರಣ ಬಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ ನುಂಗಿತ್ತು; ಈರೇಳು ಲೋಕ ನುಂಗಿ ಕಾಳಕೂಟವಿಷವನೆ ಉಗುಳುತ್ತಿದೆ ನೋಡ. ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು `ಪಶುಪತಿ ಪಶುಪತಿ' ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು, ಹೇಳಿಗೆ ಮುರಿಯಿತ್ತು; ಈರೇಳುಲೋಕದ ನುಂಗಿದ ಸರ್ಪ ತಾನು ಸತ್ತಿತ್ತು. ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನವಖಂಡ ಮಂಡಲದೊಳಗೊಂದು ಪುಂಡರೀಕವೆಂಬ ಹುತ್ತವಿರ್ಪುದು. ಆ ಹುತ್ತದೊಳಗೊಂದು ವಿಚಿತ್ರ ಸರ್ಪವಿರ್ಪುದು. ಆ ಸರ್ಪನ ಬಾಯೊಳಗೊಂದು ಬೆಲೆಯಿಲ್ಲದ ರತ್ನವಿರ್ಪುದು. ಈ ರತ್ನದ ಬೆಳಗಿನೊಳಗೆ ಈರೇಳುಲೋಕದ ಸುಳುಹಿರ್ಪುದನಾರೂ ಅರಿಯರಲ್ಲ ! ಆ ಹತ್ತುವ ಕೆಡಿಸದೆ ಸರ್ಪನ ಕೊಂದು ರತ್ನವ ಸಾಧ್ಯಮಾಡಿಕೊಂಡಾತನೆ ಮುಕ್ತಿರಾಜ್ಯಕ್ಕೆ ಅರಸನಪ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಟಮಟವೃಕ್ಷದ ಘಟದಲ್ಲಿ ಕಂಚುಮಿಂಚಿನ ಸೂಜಿಯ ಹಿನ್ನಿಯಲ್ಲಿ ಈರೇಳುಲೋಕದ ಎಡೆಯಾಟ. ಅಗ್ರದಲ್ಲಿ ಪರ್ವತ ಗಜ ತುರಂಗದ ತಂಡತಂಡಿನ ಒಡೆಯನ ಶಿರವೊಡೆದು ಕಮಲದಲ್ಲಿ ಬರಲು, ಸರ್ವ ನಷ್ಟವಾಗಿ, ತಂಡಿನೊಡೆಯ ಕಮಲವ ನುಂಗಿ ನಿರ್ವಯಲಾದ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->